ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರದ ವಿರುದ್ಧ ಸ್ವಪಕ್ಷೀಯರಿಂದಲೇ ಆರೋಪ, ತನಿಖೆ ನಡೆಸದ ಸರ್ಕಾರ: ಸಿದ್ದರಾಮಯ್ಯ

Last Updated 24 ಜೂನ್ 2021, 6:28 IST
ಅಕ್ಷರ ಗಾತ್ರ

ಕೆ.ಆರ್.ಪೇಟೆ: ‘ನೀರಾವರಿ ಯೋಜನೆಯ ₹ 20 ಸಾವಿರ ಕೋಟಿ ಕಾಮಗಾರಿಯ ಟೆಂಡರ್‌ನಲ್ಲಿ ಸಿ.ಎಂ ಕುಟುಂಬಕ್ಕೆ ₹ 2 ಸಾವಿರ ಕೋಟಿ ಕಿಕ್‌ಬ್ಯಾಕ್ ಬಂದಿದೆ ಎಂದು ಸ್ವಪಕ್ಷೀಯರೇ ಆರೋಪ ಮಾಡಿದರೂ ಏನೂ ಆಗಿಲ್ಲವೆಂದು ತಿಪ್ಪೆ ಸಾರಿಸುತ್ತಿರಲ್ಲ. ನಿಮಗೇನಾದರೂ ನೈತಿಕತೆ ಇದ್ದರೆ ಅಧಿಕಾರದಿಂದ ಕೆಳಗಿಳಿಯಿರಿ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಗ್ರಹಿಸಿದರು.

ಪಟ್ಟಣದ ಪುರಸಭಾ ಮೈದಾನದಲ್ಲಿ ಕಾಂಗ್ರೆಸ್ ತಾಲ್ಲೂಕು ಘಟಕದ ವತಿಯಿಂದ ಬುಧವಾರ ಆಯೋಜಿಸಿದ್ದ ಕೊರೊನಾ ವಾರಿಯರ್‌ಗಳಿಗೆ ಆಹಾರ ಕಿಟ್ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ನಾನು ನಿಮ್ಮ ಮತ್ತು ನಿಮ್ಮ ಮಗನ ಕಿಕ್‌ಬ್ಯಾಕ್ ಬಗ್ಗೆ ಹೇಳುತ್ತಿಲ್ಲ. ನಿಮ್ಮ ಪಕ್ಷದವರೇ ಆದ ಎಚ್, ವಿಶ್ವನಾಥ, ಯತ್ನಾಳ್, ಬೆಲ್ಲದ, ಸಚಿವ ಸಿ.ಪಿ ಯೋಗೇಶ್ವರ ನಿಮ್ಮ ಮತ್ತು ನಿಮ್ಮ ಮಗ ವಿಜಯೇಂದ್ರನ ಭ್ರಷ್ಟಾಚಾರದ ಬಗ್ಗೆ ಗಂಭೀರ ಆರೋಪ ಮಾಡಿದ್ದಾರೆ. ಆದರೆ ನೀವು ಏಕೆ ತನಿಖೆ ನಡೆಸುತ್ತಿಲ್ಲ’ ಎಂದು ಪ್ರಶ್ನಿಸಿದರು.

‘ಯಡಿಯೂರಪ್ಪನವರೇ ನೀವು ಈ ತಾಲ್ಲೂಕಿನ ಹಳ್ಳಿಯ ಬಡ ರೈತ ಕುಟುಂಬದಿಂದ ಬಂದವರು. ನಿಂಬೆಹಣ್ಣು ಮಾರಿಕೊಂಡು ಬದುಕು ಕಟ್ಟಿಕೊಂಡವರು. ನಿಮಗೇ ರೈತರ ಸಂಕಷ್ಟ ಅರ್ಥವಾಗದಿರುವಾಗ ನಿಮ್ಮ ಮಂತ್ರಿಗಳಿಗೆ ಅರ್ಥವಾಗುವುದಾದರೂ ಹೇಗೆ’ ಎಂದರು.

‘ಪಕ್ಕದ ಕೇರಳ 20 ಸಾವಿರ ಕೋಟಿ ಲಾಕ್‌ಡೌನ್ ಪರಿಹಾರವನ್ನು ನೀಡಿದೆ, ಪಕ್ಕದ ತಮಿಳುನಾಡು ಪ್ರತಿ ಕುಟುಂಬಕ್ಕೆ ತಲಾ ₹ 4 ಸಾವಿರ ಸಹಾಯ ಮಾಡಿದೆ. ಆಂಧ್ರದಲ್ಲಿ ಉಚಿತವಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಇದೆ. ಆದರೆ. ತಾವು ಏನು ಮಾಡಿದಿರಿ, ನಿಮ್ಮ ಎಡವಟ್ಟು ಮತ್ತು ನಿಮ್ಮ ಮಂತ್ರಿ ಮಂಡಲದ ಸದಸ್ಯರ ಅತಿರೇಕದಿಂದ ರಾಜ್ಯದಲ್ಲಿ ಕೊರೊನಾ ಹೆಚ್ಚಿತು. ಅನ್ನಭಾಗ್ಯದ ಅಕ್ಕಿಯನ್ನು ಕಡಿತಗೊಳಿಸಿದಿರಿ. 10 ಕೆ.ಜಿ.ಅಕ್ಕಿ ಕೊಟ್ಟಿದ್ದರೆ ನಿಮ್ಮಪ್ಪನ ಮನೆಯ ಆಸ್ತಿ ಹೋಗುತ್ತಿತ್ತೇ’ ಎಂದು ಕಿಡಿ ಕಾರಿದರು.

‘ಲಂಚದ ಹಣವನ್ನು ಬಳಸಿಕೊಂಡು ವಿಜಯೇಂದ್ರನ ತಂತ್ರದ ಮೂಲಕ ಕೆ.ಆರ್.ಪೇಟೆ ಸೇರಿದಂತೆ ಹಲವು ಉಪಚುನಾವಣೆಗಳಲ್ಲಿ ಗೆಲುವು ಸಾಧಿಸಿಕೊಂಡಿರಿ. ಆದರೆ ನಿಮ್ಮ ಆಟ ಮಸ್ಕಿಯಲ್ಲಿ ನಡೆಯಲಿಲ್ಲ’ ಎಂದು ಹೇಳಿದರು.

56 ಇಂಚು ಎದೆ ಇರುವುದು ಮುಖ್ಯವಲ್ಲ, ಬಡವರಿಗೆ ಸ್ಪಂದಿಸುವ ಹೃದಯವಿರುವದು ಮುಖ್ಯ ಎಂದು ಪ್ರಧಾನಿ ನರೇಂದ್ರ ಮೋದಿಯನ್ನು ಛೇಡಿಸಿದ ಸಿದ್ದರಾಮಯ್ಯ, ಈಗಲಾ ದರೂ ನಿಜ ಹೇಳಿ ಎಂದು ಮನವಿ ಮಾಡಿದರು

ಮಾಜಿ ಸಚಿವ ಚಲುವರಾಯಸ್ವಾಮಿ ಮಾತನಾಡಿ, ‘ಕಾಂಗ್ರೆಸ್ ಮೊದಲಿನಿಂ ದಲೂ ಎಲ್ಲಾ ಜಾತಿಯ ಬಡವರ ಪಕ್ಷವಾಗಿದೆ. ನಾವೇನು ರಾಜಕೀಯ ಮಾಡಲು ಈ ಸಮಾರಂಭ ನಡೆಸುತ್ತಿಲ್ಲ. ಸಂಕಷ್ಟದಲ್ಲಿರುವವರಿಗೆ, ಸೋಂಕಿತರೊಂದಿಗೆ ಕೆಲಸ ಮಾಡುವವರಿಗೆ ಸ್ಪಂದಿಸಲು ಸಭೆ ಮಾಡುತ್ತಿದ್ದೇವೆ. ಶಾಸಕರ ಮಾತು ಕೇಳಿಕೊಂಡು ಪಾಂಡವಪುರ ಸೇರಿದಂತೆ ಹಲವೆಡೆ ಜಿಲ್ಲಾಧಿಕಾರಿ ಮತ್ತು ಪೊಲೀಸ್ ಅಧಿಕಾರಿಗಳು ಸಹಾಯ ಮಾಡುತ್ತಿರುವ ನಮ್ಮ ಪಕ್ಷದವರ ಮೇಲೆ ಕೇಸು ಹಾಕಿ ಕಿರಿಕಿರಿ ಮಾಡುತ್ತಿದ್ದಾರೆ. ಇದು ಹೀಗೆ ಮುಂದುವರಿದರೆ ನಾವು ಬೀದಿಗಿಳಿದು ಪ್ರತಿಭಟಿಸಬೇಕಾಗುತ್ತದೆ’ ಎಂದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಮಾರಂಭಕ್ಕೆ ಗೈರು ಹಾಜರಾಗಿದ್ದರು.

ರಾಜ್ಯಸಭೆಯ ಮಾಜಿ ಉಪಸಭಾಪತಿ ಕೆ.ರೆಹಮಾನ್ ಖಾನ್, ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ, ಮಾಜಿ ಶಾಸಕರಾದ ಕೆ.ಬಿ.ಚಂದ್ರಶೇಖರ್ , ಬಿ.ಪ್ರಕಾಶ್, ರಮೇಶ್ ಬಂಡಿಸಿದ್ದೇಗೌಡ, ಸಂಪಂಗಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಗಂಗಾಧರ್, ತಾಲ್ಲೂಕು ಘಟಕದ ಅಧ್ಯಕ್ಷರಾದ ಕಿಕ್ಕೇರಿ ಸುರೇಶ್, ನಾಗೇಂದ್ರ ಕುಮಾರ್, ಮುಖಂಡರಾದ ಎಂ.ಡಿ. ಕೃಷ್ಣಮೂರ್ತಿ, ಪಾಂಡವಪುರ ರೇವಣ್ಣ, ಚಿನಕುರಳಿ ರಮೇಶ್, ರವೀಂದ್ರ ಬಾಬು, ಪ್ರೇಮ್ ಕುಮಾರ್, ಚಟ್ಟಂಗೆರೆ ನಾಗೇಶ್, ಚೇತನಾ ಮಹೇಶ್, ರಾಜಯ್ಯ, ಚೇತನ್ ಕುಮಾರ್, ಬಸ್ತಿರಂಗಪ್ಪ ಸೇರಿದಂತೆ ಹಲವು ಮುಖಂಡರು ಇದ್ದರು.

ಆಹಾರ ಕಿಟ್ ವಿತರಣಾ ಸಮಾರಂಭದಲ್ಲಿ ಸಾವಿರಾರು ಮಂದಿ ಭಾಗವಹಿಸಿದ್ದರು. ಸಾಮಾಜಿಕ ಅಂತರ ಮಾಯವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT