ಮಂಗಳವಾರ, ಸೆಪ್ಟೆಂಬರ್ 21, 2021
21 °C
ಪರೀಕ್ಷೆ ಎದುರಿಸಿದ ಶೇ 99.59ರಷ್ಟು ವಿದ್ಯಾರ್ಥಿಗಳು, ಸುರಕ್ಷತೆಗೆ ಮೊದಲ ಆದ್ಯತೆ

ಮಂಡ್ಯ: ಎಸ್ಸೆಸ್ಸೆಲ್ಸಿ ಪರೀಕ್ಷೆ; ಹಾಜರಾತಿಯಲ್ಲಿ ಹೊಸ ದಾಖಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಡ್ಯ: ಕೋವಿಡ್‌ ಕರಿನೆರಳಿನಲ್ಲಿ ಸೋಮವಾರ ಆರಂಭಗೊಂಡ ಈ ವರ್ಷದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಜಿಲ್ಲೆಯಲ್ಲಿ ಅತ್ಯಂತ ಯಶಸ್ವಿಯಾಗಿ ನಡೆಯಿತು. ಶೇ 99.59ರಷ್ಟು ವಿದ್ಯಾರ್ಥಿಗಳು ಗಣಿತ, ಸಮಾಜ ವಿಜ್ಞಾನ ಹಾಗೂ ವಿಜ್ಞಾನ ಪರೀಕ್ಷೆ ಬರೆದರು.

ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ದಾಖಲೆ ಸಂಖ್ಯೆಯ ಪರೀಕ್ಷೆ ಎದುರಿಸಿದರು. ಪ್ರತಿ ಬಾರಿ ಶೇ 7–8ರಷ್ಟು ಮಕ್ಕಳು ಗೈರುಹಾಜರಾಗುತ್ತಿದ್ದರು. ಆದರೆ ಈ ಬಾರಿ 84 ವಿದ್ಯಾರ್ಥಿಗಳು ಮಾತ್ರ ಗೈರಾಗಿದ್ದರು. ಜಿಲ್ಲೆಯಿಂದ ಹೊರ ಜಿಲ್ಲೆಗಳಿಗೆ ತೆರಳಿ 159 ವಿದ್ಯಾರ್ಥಿಗಳು ಪರೀಕ್ಷೆ ಬರೆದರು. ಹೊರ ಜಿಲ್ಲೆಗಳಿಂದ ಬಂದ 225 ವಿದ್ಯಾರ್ಥಿಗಳು ಜಿಲ್ಲೆಯ ವಿವಿಧ ಕೇಂದ್ರಗಳಲ್ಲಿ ಪರೀಕ್ಷೆ ಬರೆದರು.

ಒಟ್ಟು 29,679 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿಯಾಗಿದ್ದರು. ಅವರಲ್ಲಿ 20,595 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾದರು. ‘ವಿದ್ಯಾರ್ಥಿಗಳು ಭಯ ತ್ಯಜಿಸಿ ಧೈರ್ಯದಿಂದ ಪರೀಕ್ಷೆ ಎದುರಿಸಿದ್ದಾರೆ. ನಮ್ಮ ಶಿಕ್ಷಕರು ಹಲವು ಅಣಕು ಪರೀಕ್ಷೆ ನಡೆಸಿದ ಪ್ರಯತ್ನ ಫಲ ಕೊಟ್ಟಿದೆ. ಜಿಲ್ಲೆಯಾದ್ಯಂತ ವಿದ್ಯಾರ್ಥಿಗಳು ಉತ್ಸಾಹದಿಂದ ಪರೀಕ್ಷೆ ಬರೆದರು’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಆರ್‌.ರಘುನಂದನ್‌ ತಿಳಿಸಿದರು.

ಸುರಕ್ಷಾ ಕೇಂದ್ರಗಳು: ಜಿಲ್ಲೆಯಲ್ಲಿ ಸ್ಥಾಪಿಸಲಾಗಿದ್ದ 157 ಪರೀಕ್ಷಾ ಕೇಂದ್ರಗಳಲ್ಲಿ ಮಕ್ಕಳ ಸುರಕ್ಷತೆಗೆ ಆದ್ಯತೆ ನೀಡಲಾಗಿತ್ತು. ಬೆಳಿಗ್ಗೆ 8 ಗಂಟೆಯಿಂದಲೇ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಬರುತ್ತಿದ್ದರು. ಪರೀಕ್ಷಾ ಕೊಠಡಿಯಲ್ಲೇ ಕುಳಿತು ಮಕ್ಕಳು ಅಧ್ಯಯನದಲ್ಲಿ ತೊಡಗಿದ್ದರು. ಪರೀಕ್ಷೆಗೆ ಅರ್ಧಗಂಟೆ ಇದ್ದಾಗ ಮಕ್ಕಳು ಪುಸ್ತಕಗಳನ್ನು ಹೊರಗಿಟ್ಟು ಪರೀಕ್ಷೆ ಬರೆಯಲು ಸಜ್ಜಾದರು.

ಅದಕ್ಕೂ ಮೊದಲು ಕೇಂದ್ರಗಳಿಗೆ ಬರುವುದಕ್ಕೂ ಮೊದಲು ಪ್ರತಿಯೊಬ್ಬ ವಿದ್ಯಾರ್ಥಿ ಆರೋಗ್ಯ ತಪಾಸಣೆ ನಡೆಸಲಾಯಿತು. ಥರ್ಮಲ್‌ ಸ್ಕ್ಯಾನಿಂಗ್‌ ಮೂಲಕ ಮಕ್ಕಳ ಆರೋಗ್ಯ ತಪಾಸಣೆ ನಡೆಸಲು ಆಶಾ ಕಾರ್ಯಕರ್ತೆಯರನ್ನು ನಿಯೋಜನೆ ಮಾಡಲಾಗಿತ್ತು. ಎನ್‌ಎಸ್ಎಸ್‌, ಎನ್‌ಸಿಸಿ ಸ್ವಯಂ ಸೇವಕರು ಮಕ್ಕಳ ಸಹಾಯಕ್ಕೆ ಬಂದರು. ಪರೀಕ್ಷಾ ಕೇಂದ್ರಕ್ಕೆ ಬರುವ ಮಕ್ಕಳಿಗೆ ಎನ್‌–95 ಮಾಸ್ಕ್‌ ವಿತರಣೆ ಮಾಡಲಾಯಿತು.

ಬಹುತೇಕ ಮಕ್ಕಳು ತಾವು ಓದಿದ್ದ ಶಾಲೆಯಲ್ಲೇ ಪರೀಕ್ಷೆ ಬರೆದರು. ಹೊರಗಿನಿಂದ ಬರುವ ಮಕ್ಕಳು ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ನೋಂದಣಿ ಪತ್ರ ತೋರಿಸಿ ಉಚಿತವಾಗಿ ಪ್ರಯಾಣ ಮಾಡಿದರು. ಪರೀಕ್ಷೆ ಬರೆಯಲು ತೆರಳುತ್ತಿದ್ದ ವಿದ್ಯಾರ್ಥಿಗಳ ಪರವಾಗಿ ಇಡೀ ಸಮಾಜ ನಿಂತಿತ್ತು. ಬಸ್‌ನಲ್ಲಿ ಮಕ್ಕಳಿಗೆ ಜನರು ಅಭಿನಂದನೆ ತಿಳಿಸಿದರು.

ಭಯ ತೊರೆದರು: ಪರೀಕ್ಷಾ ಕೇಂದ್ರಕ್ಕೆ ತೆರಳುವುದಕ್ಕೂ ಮೊದಲು ಮಕ್ಕಳ ಮೊಗದಲ್ಲಿ ಭಯದ ಛಾಯೆ ಇತ್ತು. ಆದರೆ ಪರೀಕ್ಷೆ ಬರೆದು ಹೊರಕ್ಕೆ ಬರುತ್ತಿದ್ದಂತೆ ಮಕ್ಕಳು ಸಂಭ್ರಮದಲ್ಲಿ ಇದ್ದರು.

‘ಒಎಂಆರ್‌ ಕಾಗದಲ್ಲಿ ಉತ್ತರ ಗುರುತು ಮಾಡುವ ಕುರಿತು ಭಯ ಇತ್ತು. ಪ್ರಶ್ನೆ ಪತ್ರಿಕೆ ನೋಡಿದ ಕೂಡಲೇ ಎಲ್ಲಾ ಭಯ ಮಾಯವಾಯಿತು. ಪ್ರಶ್ನೆಗಳು ತುಂಬಾ ಸರಳವಾಗಿದ್ದವು. ಮೂರೂ ವಿಷಯಗಳನ್ನು ನಿಗದಿತ ಸಮಯದಲ್ಲಿ ಪರೀಕ್ಷೆ ಬರೆದೆ. ಹೊಸ ಮಾದರಿಯ ಪರೀಕ್ಷೆಯಿಂದ ಯಾವುದೇ ತೊಂದರೆ ಉಂಟಾಗಲಿಲ್ಲ’ ಎಂದು ಕಾರ್ಮೆಲ್‌ ಕಾನ್ವೆಂಟ್‌ ವಿದ್ಯಾರ್ಥಿನಿ ಸಿಂಚನಾ ತಿಳಿಸಿದರು.

ಜಿಲ್ಲಾಧಿಕಾರಿ ಎಸ್‌.ಅಶ್ವತಿ, ಜಿಲ್ಲಾ ಪಂಚಾಯಿತಿ ಸಿಇಒ ದಿವ್ಯಾಪ್ರಭು ವಿವಿಧ ಪರೀಕ್ಷಾ ಕೇಂದ್ರಗಳಿಗೆ ತೆರಳಿ ಪರಿಶೀಲನೆ ನಡೆಸಿದರು.

ಕೋವಿಡ್‌ ಕೇಂದ್ರದಲ್ಲಿ ನಾಲ್ವರ ಪರೀಕ್ಷೆ
ಕೋವಿಡ್‌–19 ಪತ್ತೆಯಾಗಿದ್ದ ನಾಲ್ವರು ಮಕ್ಕಳು ಕೋವಿಡ್‌ ಕೇರ್‌ ಕೇಂದ್ರದಲ್ಲೇ ಪರೀಕ್ಷೆ ಎದುರಿಸಿದರು. ಮಂಡ್ಯ ತಾಲ್ಲೂಕಿನ ಇಬ್ಬರು, ಮದ್ದೂರು ಹಾಗೂ ಮಳವಳ್ಳಿಯ ತಲಾ ಒಬ್ಬ ವಿದ್ಯಾರ್ಥಿ ಪರೀಕ್ಷೆ ಬರೆದರು.

ಪ್ರತಿ ಪರೀಕ್ಷಾ ಕ್ರೇಂದ್ರಗಳಲ್ಲಿ ಪ್ರತ್ಯೇಕ ಕೊಠಡಿ ಕಾಯ್ದಿರಿಸಲಾಗಿತ್ತು. ಜಿಲ್ಲೆಯಲ್ಲಿ ಅನಾರೋಗ್ಯ ಕಾರಣದಿಂದ 6 ಮಂದಿ ವಿದ್ಯಾರ್ಥಿಗಳು ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ ಬರೆದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು