ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಡಿಪಿ ಸಭೆ ನಡೆಸದ ಅಧಿಕಾರಿಗಳ ವಿರುದ್ಧ ಹರಿಹಾಯ್ದ ಶಾಸಕ

ನಾಗಮಂಗಲ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಎನ್.ಚಲುವರಾಯಸ್ವಾಮಿ
Published 23 ಮೇ 2023, 15:26 IST
Last Updated 23 ಮೇ 2023, 15:26 IST
ಅಕ್ಷರ ಗಾತ್ರ

ನಾಗಮಂಗಲ: ‘ತಾಲ್ಲೂಕು ಮಟ್ಟದಲ್ಲಿ ವರ್ಷಗಟ್ಟಲೆ ಕೆಡಿಪಿ ಸಭೆ ಮಾಡದಿರುವ ತಾಲ್ಲೂಕು ಯಾವುದಾದರೂ ಇದ್ದರೆ ಅದು ನಾಗಮಂಗಲ ಮಾತ್ರ ಎಂದು ನನಗೆ ಅನ್ನಿಸುತ್ತಿದೆ. ಬೇರೆ ಯಾವುದಾದರೂ ಇದ್ದರೆ ಗೊತ್ತಿಲ್ಲ. ಆದರೆ, ವರ್ಷಗಟ್ಟಲೆ ಸಭೆ ನಡೆಸದಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ದೊಡ್ಡ ದುರಂತ’ ಎಂದು ಶಾಸಕ ಎನ್.ಚಲುವರಾಯಸ್ವಾಮಿಗೌಡ ಬೇಸರ ವ್ಯಕ್ತಪಡಿಸಿದರು.

ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದ ಆವರಣದಲ್ಲಿ ಮಂಗಳವಾರ ಕರೆಯಲಾಗಿದ್ದ ತಾಲ್ಲೂಕು ಮಟ್ಟದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ತಾಲ್ಲೂಕಿನ ಆಡಳಿತದ ಹಿತದೃಷ್ಟಿಯಿಂದ ಕೆಡಿಪಿ ಸಭೆ ಬಹುಮುಖ್ಯವಾಗಿದ್ದು, ಸಭೆ ಕರೆಯದೇ 30ಕ್ಕೂ ಹೆಚ್ಚು ತಿಂಗಳು ಕಳೆದಿರುವುದನ್ನು ಗಮನಿಸಿದರೆ ಅಧಿಕಾರಿಗಳು ಎಷ್ಟರ ಮಟ್ಟಿಗೆ ನಿಮ್ಮ ಇಲಾಖೆಗಳಲ್ಲಿ ಕೆಲಸ ಮಾಡಿದ್ದೀರಾ ಎಂಬುದನ್ನು ನೋಡಬಹುದಾಗಿದೆ. ಜೊತೆಗೆ ನಿಮ್ಮಿಷ್ಟದಂತೆ ಇಲ್ಲಿಯವರೆಗೆ ಮಾಜಿ‌ ಶಾಸಕರು ಬಿಟ್ಟಿರಬಹುದು. ಆದರೆ ಅದು ಫಲಿತಾಂಶ ಬಂದ ಹಿಂದಿನ ದಿನಕ್ಕೆ ಮುಕ್ತಾಯವಾದ ಅಧ್ಯಾಯ’ ಎಂದು ಸಿಟ್ಟಾದರು.

‘ಕೆಲ ಅಧಿಕಾರಿಗಳಲ್ಲಿ ವರ್ಗಾವಣೆ ಆತಂಕ ಇರಬಹುದು. ಆದರೆ, ನಮ್ಮ ಸರ್ಕಾರ ಬಂದಿರುವುದು ವರ್ಗಾವಣೆ ಮಾಡಿಸಲು ಅಲ್ಲ. ಸಾರ್ವಜನಿಕರಿಂದ ಯಾವುದೇ ದೂರಗಳಿಲ್ಲದಂತೆ ಕೆಲಸ ಮಾಡಿದರೆ ಯಾವುದೇ ತೊಂದರೆಯಾಗಲೀ, ವರ್ಗಾವಣೆಯಾಗಲೀ, ಶಿಸ್ತು ಕ್ರಮಗಳನ್ನಾಗಲೀ ತೆಗೆದುಕೊಳ್ಳುವುದಿಲ್ಲ. ನಾನು ಹಿಂದೆಯೂ ಅಧಿಕಾರದಲ್ಲಿದ್ದಾಗ ಯಾರಿಗೂ ತೊಂದರೆ ಕೊಟ್ಟಿಲ್ಲ’ ಎಂದರು.

‘ಮೊದಲ ಸಭೆ ಆಗಿರುವುದರಿಂದ ಸಾರ್ವಜನಿಕರಿಂದ ದೂರು ಬಂದಿರುವ ಅಧಿಕಾರಿಗಳ ಹೆಸರನ್ನು ಹೇಳಿ ಮುಜುಗರ ಮಾಡುವುದಿಲ್ಲ. ಆದರೆ, ನೀವೇ ಅರ್ಥ ಮಾಡಿಕೊಂಡು ದೂರುಗಳು ಬರದಂತೆ ಕೆಲಸ ಮಾಡಿದರೆ ಎಂದೂ ನಿಮ್ಮ ಹೆಸರನ್ನು ಹೇಳುವುದಿಲ್ಲ. ದೂರು ಬಂದರೆ ಪರಿಣಾಮ ನೀವೇ ಎದುರಿಸಬೇಕಾಗುತ್ತದೆ. ಜೊತೆಗೆ ಇಂದಿನಿಂದ ಯಾವ ಇಲಾಖೆಗಳು ಕಾಮಗಾರಿಗಳಿಗೆ ಬಿಲ್ ಪಾವತಿಸದೇ, ಹೊಸ ಕಾಮಗಾರಿಗಳಿಗೆ ಅನುದಾನ ಬಿಡುಗಡೆ ಮಾಡುವುದನ್ನು ನಿಲ್ಲಿಸುವಂತೆ ಸರ್ಕಾರ ಆದೇಶ ಹೊರಡಿಸಿದ್ದು, ಅಧಿಕಾರಿಗಳು ಅದನ್ನು ತಪ್ಪದೇ ಪಾಲಿಸಬೇಕು’ ಎಂದು ಸೂಚಿಸಿದರು.

‘ಶಿಕ್ಷಣ, ಪಶು ಇಲಾಖೆ ಸೇರಿದಂತೆ ಯಾವ ಇಲಾಖೆಗಳಲ್ಲಿ ಸಿಬ್ಬಂದಿ ಕೊರತೆಯಿದೆ ಎಂಬುದನ್ನು ತಿಳಿಸಬೇಕು. ಜೊತೆಗೆ ಪ್ರತಿ ಇಲಾಖೆಗಳಲ್ಲೂ ಇರುವ ಹುದ್ದೆಗಳೆಷ್ಟು, ಕಾರ್ಯ ನಿರ್ವಹಿಸುತ್ತಿರುವವರು ಎಷ್ಟು ಸಿಬ್ಬಂದಿ ಎಂಬ ಮಾಹಿತಿಯನ್ನು ಪಟ್ಟಿ ಮಾಡಿ ನನಗೆ ನೀಡಬೇಕು’ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.

ನೀರಿನ ಸಮಸ್ಯೆ ಆಗದಿರಲಿ: ‘ತಾಲ್ಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆಯಿದ್ದು, ನಾನು ಇಂದೇ ತಹಶೀಲ್ದಾರ್ ಮತ್ತು ಜಿಲ್ಲಾಧಿಕಾರಿಗೆ ತಿಳಿಸುತ್ತೇನೆ. ನೀರು ಪೂರೈಸುವ ವಿಚಾರದಲ್ಲಿ ನಿಯಮಗಳೇನೇ ಇದ್ದರೂ ಅದನ್ನು ನಂತರ ನೋಡೋಣ. ಆದರೆ ಎಲ್ಲಿ ಕುಡಿಯುವ ನೀರಿನ ಸಮಸ್ಯೆ ಕಂಡು ಬರುತ್ತದೆಯೋ ಅಲ್ಲಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ಪಿಡಿಒಗಳಿಗೆ ಇಂದೇ ನೋಟಿಸ್ ನೀಡಿ. ಸಾರ್ವಜನಿಕರಿಂದ ಯಾವುದೇ ದೂರು ಬರದಂತೆ ಕ್ರಮ ವಹಿಸಿ’ ಎಂದು ಇಒ ಚಂದ್ರಮೌಳಿ ಅವರಿಗೆ ಸೂಚನೆ ನೀಡಿದರು.

ಸಭೆಯಲ್ಲಿ ತಹಶೀಲ್ದಾರ್ ನಹೀಂ ಉನ್ನೀಸಾ, ಇಒ ಚಂದ್ರಮೌಳಿ, ಸಿಪಿಐ ನಿರಂಜನ್, ಪೊಲೀಸ್ ಇನ್ಸ್‌ಪೆಕ್ಟರ್ ಅಶೋಕ್, ಅಗ್ನಿಶಾಮಕ ಠಾಣಾಧಿಕಾರಿ ತೋಪೇಗೌಡ, ಬಿಇಒ ಸುರೇಶ್, ತಾಲ್ಲೂಕು ಆಸ್ಪತ್ರೆ ವೈದ್ಯಾಧಿಕಾರಿ ಡಾ.ವೆಂಕಟೇಶ್, ಪಶು ಇಲಾಖೆಯ ಸಹಾಯಕ ನಿರ್ದೇಶಕ ಕೆ.ಕುಮಾರ್ ಸೇರಿದಂತೆ ವಿವಿಧ ಇಲಾಖೆಗಳ ತಾಲ್ಲೂಕು ಮಟ್ಟದ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT