ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯ: ಗುತ್ತಲು ಕೆರೆಯಲ್ಲಿ ಲಕ್ಷಾಂತರ ಮೀನುಗಳ ಮಾರಣಹೋಮ

Published 2 ಏಪ್ರಿಲ್ 2024, 23:51 IST
Last Updated 2 ಏಪ್ರಿಲ್ 2024, 23:51 IST
ಅಕ್ಷರ ಗಾತ್ರ

ಮಂಡ್ಯ: ನಗರದ ಹೊರವಲಯದಲ್ಲಿರುವ ಗುತ್ತಲು ಕೆರೆ ಗಬ್ಬೆದ್ದು ನಾರುತ್ತಿದ್ದು 3 ಕಿ.ಮೀ.ವರೆಗೂ ದುರ್ವಾಸನೆ ಬೀರುತ್ತಿದೆ. ಕೆರೆ ಕಲುಷಿತಗೊಂಡಿರುವ ಹಿನ್ನೆಲೆಯಲ್ಲಿ 3 ದಿನಗಳಿಂದೀಚೆಗೆ ಲಕ್ಷಾಂತರ ಮೀನುಗಳು ಮೃತಪಟ್ಟಿವೆ.

ಕಪ್ಪು ಬಣ್ಣಕ್ಕೆ ತಿರುಗಿರುವ ಕೆರೆಯ ನೀರಿನಲ್ಲಿ ಸತ್ತ ಮೀನುಗಳು ತೇಲಾಡುತ್ತಿವೆ. ಕೆರೆ ದಡದಲ್ಲೂ ಮೀನುಗಳು ಬಿದ್ದಿದ್ದು ಹದ್ದು, ನಾಯಿಗಳು ಮೀನು ತಿನ್ನುತ್ತಿರುವ ದೃಶ್ಯ ಮನಕಲಕುತ್ತದೆ. 5 ಲಕ್ಷಕ್ಕೂ ಹೆಚ್ಚು ಮೀನುಗಳು ಮೃತಪಟ್ಟಿವೆ ಎಂದು ಅಂದಾಜು ಮಾಡಲಾಗಿದೆ. ಸುತ್ತಮುತ್ತ ಸಹಿಸಲಸಾಧ್ಯವಾದ ಕೆಟ್ಟ ವಾಸನೆ ಹರಡಿದ್ದು ಜನರು ಮಾಸ್ಕ್‌ ಧರಿಸಿ, ಮುಖಕ್ಕೆ ಟವೆಲ್‌ ಕಟ್ಟಿಕೊಂಡು ಓಡಾಡುತ್ತಿದ್ದಾರೆ.

ನಗರದ ಗುತ್ತಲು ಬಡಾವಣೆ ಸೇರಿ ತಾವರಗೆರೆ, ಯತ್ತಗದಹಳ್ಳಿ, ಆಲಹಳ್ಳಿ ವ್ಯಾಪ್ತಿಯಲ್ಲಿರುವ ಗುತ್ತಲು ಕೆರೆ 242 ಎಕರೆ ವಿಸ್ತೀರ್ಣ ಹೊಂದಿದೆ. ಮಳೆ ಕೊರತೆ, ನಾಲೆ ನೀರು ಬಾರದೆ ನೀರಿನ ಪ್ರಮಾಣ ತಗ್ಗಿದೆ. ನಗರದ ಕೊಳಚೆ ನೀರು ಶುದ್ಧೀಕರಣಗೊಳ್ಳದೇ ಕೆರೆಗೆ ನೇರವಾಗಿ ಹರಿಯುತ್ತಿರುವ ಕಾರಣ ಕೆರೆ ಕಲುಷಿತಗೊಂಡಿದೆ ಎಂದು ಸ್ಥಳೀಯರು ಹೇಳುತ್ತಾರೆ.

ಕೆರೆ ಸಮೀಪದ ಮನೆಗಳ ಮಕ್ಕಳಿಗೆ ಜ್ವರ, ಶೀತ ಜ್ವರ, ತಲೆನೋವು ಕಾಣಿಸಿಕೊಂಡಿದೆ. ಹಲವರು ಚರ್ಮದ ತುರಿಕೆಯಿಂದ ಪರಿತಪಿಸುತ್ತಿದ್ದಾರೆ. ಯತ್ತಗದಹಳ್ಳಿ ಗ್ರಾಮದ ಭಾಗದಲ್ಲಿ ಹೆಚ್ಚು ನೀರಿನ ಸಂಗ್ರಹವಿದ್ದು ಗ್ರಾಮದ ಜನರು ದುರ್ವಾಸನೆಯಿಂದ ಕಂಗಾಲಾಗಿದ್ದಾರೆ. ಜೊತೆಗೆ ಆಲಹಳ್ಳಿ, ಗುತ್ತಲು ಬಡಾವಣೆಯ ಇಂದಿರಾ ಕಾಲೊನಿ, ಗೌತಮ ಬಡಾವಣೆಯ ಜನರೂ ದುರ್ವಾಸನೆಯಿಂದ ಕಂಗೆಟ್ಟಿದ್ದಾರೆ.

‘ಶಾಲೆಗೆ ಬೇಸಿಗೆ ರಜೆಯಿದ್ದು ಮಕ್ಕಳು ಮನೆಯಲ್ಲೇ ಇವೆ. ದುರ್ವಾಸನೆ ಸಹಿಸಲಾಗದೆ ಹಲವರು ಮಕ್ಕಳನ್ನು ಬೇರೆ ಊರುಗಳಿಗೆ ಕಳುಹಿಸಿದ್ದಾರೆ. ಚರ್ಮರೋಗ ಭೀತಿ ಕಾಡುತ್ತಿದ್ದು ಮನೆಯಿಂದ ಹೊರಗೆ ಬರಲು ಭಯವಾಗುತ್ತಿದೆ’ ಎಂದು ಯತ್ತಗದಹಳ್ಳಿಯ ಚೌಡೇಗೌಡ ಹೇಳಿದರು.

ಆಡು– ಕುರಿ ಸಾವು:  ಒಳಚರಂಡಿ ನೀರು ಶುದ್ಧೀಕರಿಸಲು ಕೆರೆ ಪಕ್ಕದಲ್ಲೇ ನಿರ್ಮಿಸಿರುವ ಶುದ್ಧೀಕರಣ ಘಟಕ ಹಾಳಾಗಿ ವರ್ಷವೇ ಕಳೆದಿದ್ದು, ತ್ಯಾಜ್ಯ ನೇರವಾಗಿ ಕೆರೆಯೊಡಲು ಸೇರುತ್ತಿದೆ. ಕೆರೆ ನೀರು ಕುಡಿದ ಸುತ್ತಮುತ್ತಲಿನ ಗ್ರಾಮಗಳ 10ಕ್ಕೂ ಹೆಚ್ಚು ಆಡು– ಕುರಿ ಸತ್ತಿವೆ. ಯತ್ತಗದಹಳ್ಳಿಯ ಚಿಕ್ಕಬೋರೇಗೌಡರ ನಾಲ್ಕು ಆಡುಗಳು ಭಾನುವಾರ ಮೃತಪಟ್ಟಿವೆ. ರೈತರು ಜಾನುವಾರುಗಳನ್ನು ಹೊರಗೆ ಬಿಡಲು ಭಯ ಪಡುತ್ತಿದ್ದಾರೆ.

‘ಕೆರೆ ಸುತ್ತಲೂ ರಾಸಾಯನಿಕ ಸಿಂಪಡಿಸಿ, ದುರ್ವಾಸನೆ ತಪ್ಪಿಸುವಂತೆ ನಗರಸಭೆ, ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ದುರ್ವಾಸನೆ ತಡೆಯಲಾಗದೆ ಮನೆ ಬಿಟ್ಟು ಬೆಂಗಳೂರಿಗೆ ಬಂದಿದ್ದೇನೆ’ ಎಂದು ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ, ಯತ್ತಗದಹಳ್ಳಿಯ ಸಿದ್ದರಾಮಯ್ಯ ಹೇಳಿದರು.

ಕೊಳಚೆ ನೀರು ಸೇರ್ಪಡೆಯಾಗುತ್ತಿರುವ ಕಾರಣ ಗುತ್ತಲು ಕೆರೆ ಕಲುಷಿತಗೊಂಡಿರುವುದು
ಕೊಳಚೆ ನೀರು ಸೇರ್ಪಡೆಯಾಗುತ್ತಿರುವ ಕಾರಣ ಗುತ್ತಲು ಕೆರೆ ಕಲುಷಿತಗೊಂಡಿರುವುದು
ಮೀನುಗಳ ಸಾವಿನ ಕಾರಣ ಪತ್ತೆ ಹಚ್ಚಲಾಗುತ್ತಿದೆ. ದುರ್ವಾಸನೆ ನಿವಾರಿಸಲು ಮಾಲಿನ್ಯ ನಿಯಂತ್ರಣ ಮಂಡಳಿ ನಗರಸಭೆ ಅಧಿಕಾರಿಗಳಿಗೆ ಸೂಚಿಸಲಾಗಿದೆ
–ಕುಮಾರ, ಜಿಲ್ಲಾಧಿಕಾರಿ

ಬೆಳೆ ಹಾನಿ ಭೀತಿ

ಗುತ್ತಲು ಕೆರೆ ಅಚ್ಚುಕಟ್ಟು ಪ್ರದೇಶದ ನೂರಾರು ಎಕರೆ ಪ್ರದೇಶದಲ್ಲಿ ರೈತರು ಕಬ್ಬು ಭತ್ತ ತರಕಾರಿ ಬೆಳೆದಿದ್ದಾರೆ. ಕಲುಷಿತ ನೀರು ಕೃಷಿ ಭೂಮಿಗೆ ಹರಿಯುತ್ತಿದ್ದು ಬೆಳೆ ಹಾನಿ ಭೀತಿಯೂ ಎದುರಾಗಿದೆ. ‘ವಿಷಯುಕ್ತ ನೀರು ಹರಿಯುತ್ತಿರುವುದರಿಂದ ಕಾಯಿ ಕಟ್ಟುವ ಹಂತಕ್ಕೆ ಬಂದಿರುವ ಭತ್ತ ಸುಟ್ಟು ಹೋಗುತ್ತಿದೆ. ಕೃಷಿ ಕೆಲಸ ಮಾಡುವ ರೈತರಿಗೂ ತುರಿಕೆ ಕಾಡುತ್ತಿದೆ’ ಎಂದು ರೈತ ಕಂಬೇಗೌಡ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT