ಮಂಗಳವಾರ, 30 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಣನಹಳ್ಳಿ ತಿಟ್ಟು ನಿವೇಶನ ಹಗರಣ: ಸೈಬರ್‌ ಪೊಲೀಸರಿಂದ ತನಿಖೆ

ಕೋಣನಹಳ್ಳಿ ತಿಟ್ಟು ಬಳಿ ಲೇಔಟ್‌ ಅಭಿವೃದ್ಧಿ, ಸದಸ್ಯರಿಂದ ಮಾಹಿತಿ ಪಡೆಯುತ್ತಿರುವ ತನಿಖಾ ತಂಡ
Last Updated 25 ಜೂನ್ 2021, 14:25 IST
ಅಕ್ಷರ ಗಾತ್ರ

ಮಂಡ್ಯ: ತಾಲ್ಲೂಕಿನ ಕೋಣನಹಳ್ಳಿ ತಿಟ್ಟು ಬಳಿ ಲೇಔಟ್‌ ರೂಪಿಸಿ, ಸರ್ಕಾರಿ ನೌಕರರು ಹಾಗೂ ಸಾರ್ವಜನಿಕರಿಂದ ಹಣ ವಸೂಲಿ ಮಾಡಿ ವಂಚಿಸಿದ್ದ ಪ್ರಕರಣದ ತನಿಖೆ ಚುರುಕು ಪಡೆದುಕೊಂಡಿದೆ. ಪ್ರಕರಣದ ಮೊತ್ತ ಬಹುಕೋಟಿ ದಾಟಿರುವ ಹಿನ್ನೆಲೆಯಲ್ಲಿ ತನಿಖೆಯ ಜವಾಬ್ದಾರಿಯನ್ನು ಸೈಬರ್‌ ಪೊಲೀಸರಿಗೆ ವಹಿಸಲಾಗಿದೆ.

ಹಗರಣ ₹ 13 ಕೋಟಿ ಮೀರಿರುವ ಕಾರಣ ಪಶ್ಚಿಮ ಠಾಣೆಯಲ್ಲಿ ನಡೆಯುತ್ತಿದ್ದ ಪ್ರಕರಣವನ್ನು ಸೈಬರ್‌ ಠಾಣೆಗೆ ಹಸ್ತಾಂತರ ಮಾಡಲಾಗಿದೆ. ಸೈಬರ್‌ ಪೊಲೀಸರು ಸದಸ್ಯರಿಂದ ಮಾಹಿತಿ ಪಡೆಯುತ್ತಿದ್ದು ಶನಿವಾರ ಎಲ್ಲಾ ವಿವರ ತೆಗೆದುಕೊಂಡು ಠಾಣೆಗೆ ಬರುವಂತೆ ಸೂಚಿಸಿದ್ದಾರೆ. ಹೀಗಾಗಿ ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಪ್ರಕರಣದಕ್ಕೆ ಮತ್ತೆ ಮರುಜೀವ ಬಂದಿದೆ.

ಏನಿದು ಪ್ರಕರಣ: ಕೋಣನಹಳ್ಳಿ ತಿಟ್ಟು ಬಳಿ 17 ಎಕರೆ ಜಮೀನು ಖರೀದಿಸಿ ಲೇಔಟ್‌ ರೂಪಿಸಲಾಗಿತ್ತು. ಸರ್ಕಾರಿ ನೌಕರರ ಗೃಹನಿರ್ಮಾಣ ಸಮಿತಿ ರಚಿಸಿ 300 ನೌಕರರು ಹಾಗೂ ಸಾರ್ವಜನಿಕರಿಂದ ಪ್ರತಿ ನಿವೇಶನಕ್ಕೆ ₹ 7 ರಿಂದ ₹ 8 ಲಕ್ಷದವರೆಗೆ ಹಣ ವಸೂಲಿ ಮಾಡಲಾಗಿತ್ತು. ಇನ್ನೇನು ನಿವೇಶನ ಹಂಚಿಕೆಯಾಗಿ ನಿವೇಶ ನೋಂದಣಿ ಮಾಡಿಸಿಕೊಳ್ಳಬೇಕು ಎನ್ನುವಷ್ಟರಲ್ಲಿ ಆ ಲೇಔಟ್‌ಗೆ ಕೋಟ್ಯಂತರ ಬೆಲೆ ಬಂದಿತು. ನಿವೇಶನ ಹಂಚಿಕೆ ನೀಡಬೇಕಾದ ಆಡಳಿತ ಮಂಡಳಿ ಹಣ ದುರುಪಯೋಗ ಮಾಡಿಕೊಂಡಿತು.

ಆ ಲೇಔಟ್‌ನ ಆರ್ಧ ಭಾಗ ಬೆಂಗಳೂರು–ಮೈಸೂರು ದಶಪಥ ಕಾಮಗಾರಿಗೆ ಹರಿದು ಹೋದ ಕಾರಣ ಸಮಿತಿಗೆ ಪರಿಹಾರವಾಗಿ ₹ 13 ಕೋಟಿ ಹಣ ಬಂತು. ಸಮಿತಿಯ ಆಡಳಿತ ಮಂಡಳಿ, ಲೇಔಟ್‌ ಅಭಿವೃದ್ಧಿಗೊಳಿಸಿದ ಖಾಸಗಿ ಗುತ್ತಿಗೆದಾರರು ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಸೇರಿ ಹಣವನ್ನು ದುರುಪಯೋಗ ಮಾಡಿಕೊಂಡರು ಎಂದು ಪಶ್ಚಿಮ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿದ್ದ ಎಫ್‌ಐಆರ್‌ನಲ್ಲಿ ತಿಳಿಸಲಾಗಿದೆ.

ಪರಿಹಾರ ಹಂಚಿಕೆಯಾಗಲಿಲ್ಲ: ಬಂದ ಪರಿಹಾರದಲ್ಲಿ ಪ್ರತಿಯೊಬ್ಬ ಸದಸ್ಯರಿಗೂ ಹಂಚಿಕೆಯಾಗಬೇಕಾಗಿತ್ತು. ಆದರೆ ಆಡಳಿತ ಮಂಡಳಿ ಪದಾಧಿಕಾರಿಗಳು ಸದಸ್ಯರು ಕಟ್ಟಿರುವ ಹಣದ ಜೊತೆ ಹೆಚ್ಚುವರಿಯಾಗಿ ₹ 3 ಲಕ್ಷ ಸೇರಿಸಿ ಪೂರ್ತಿ ಹಣ ಹಿಂತಿರುಗಿ ನೀಡಲಾಗುವುದು ಎಂದು ತಿಳಿಸಿದರು. ಆದರೆ ಇದಕ್ಕೆ ಒಪ್ಪದ ಸದಸ್ಯರು ಪೂರ್ತಿ ಪರಿಹಾರವನ್ನು ಸದಸ್ಯರಿಗೆ ಹಂಚಿಕೆ ಮಾಡಬೇಕು ಎಂದು ಪಟ್ಟು ಮಾಡಿದರು.

‘ವಿವಾದ ಬಗೆಹರಿಯುವವರೆಗೂ ಭೂಸ್ವಾಧೀನಾಧಿಕಾರಿಗಳು ಸಮಿತಿಯ ಖಾತೆಗೆ ಹಣ ಜಮೆ ಮಾಡಬಾರದಿತ್ತು. ಆದರೆ ಪದಾಧಿಕಾರಿಗಳ ಜೊತೆ ಶಾಮೀಲಾದ ಅಧಿಕಾರಿಗಳು ಪೂರ್ತಿ ಹಣವನ್ನು ಸಮಿತಿಯ ಖಾತೆಗೆ ಜಮೆ ಮಾಡಿದರು. ಅದರಲ್ಲಿ ₹ 5 ಕೋಟಿ ಹಣವನ್ನು ಪದಾಧಿಕಾರಿಗಳು ತಮ್ಮ ವೈಯಕ್ತಿಕ ಖಾತೆಗೆ ವರ್ಗಾಯಿಸಿಕೊಂಡರು. ಹೀಗಾಗಿ ಅದು ಪೊಲೀಸ್‌ ಠಾಣೆಯ ಮಟ್ಟಿಲೇರಿತು’ ಎಂದು ₹ 8 ಲಕ್ಷ ಹಣ ಪಾವತಿ ಮಾಡಿರುವ ಸದಸ್ಯರೊಬ್ಬರು ತಿಳಿಸಿದರು.

ಪ್ರಕರಣದಲ್ಲಿ ಆಡಳಿತ ಮಂಡಳಿ ಪದಾಧಿಕಾರಿಗಳು, ಲೇಔಟ್‌ ಗುತ್ತಿಗೆದಾರರು ಹಾಗೂ ಭೂಸ್ವಾಧೀನಾಧಿಕಾರಿ ಮೇಲೆ ಎಫ್‌ಐಆರ್‌ ದಾಖಲಾಗಿದೆ. ಹಲವು ವರ್ಷಗಳ ಕಾಲ ವಿಚಾರಣೆ ನಡೆಸಿದ ಪಶ್ಚಿಮ ಠಾಣೆಯ ಪೊಲೀಸರು ಈಚೆಗೆ ಸೈಬರ್‌ ಪೊಲೀಸರಿಗೆ ಹಸ್ತಾಂತರ ಮಾಡಿದ್ದಾರೆ.

‘ಸೈಬರ್‌ ಪೊಲೀಸರು ಕರೆ ಮಾಡಿ ದಾಖಲಾತಿ ತರುವಂತೆ ತಿಳಿಸಿದ್ದಾರೆ. ನಾವು ಕಟ್ಟಿರುವ ಹಣ ಹಾಗೂ ಪರಿಹಾರ ಹಣ ಸಿಗುತ್ತದೆ ಎಂಬ ಭರವಸೆ ಇದೆ’ ಎಂದು ಸದಸ್ಯರೊಬ್ಬರು ತಿಳಿಸಿದರು.

ಶೀಘ್ರ ದೋಷಾರೋಪ ಪಟ್ಟಿ

‘₹ 9.5 ಕೋಟಿ ಜಮೆಯಾಗಿದ್ದ ಬ್ಯಾಂಕ್‌ ಖಾತೆಯನ್ನು ಜಪ್ತಿ ಮಾಡಲಾಗಿದೆ. ದುರುಪಯೋಗವಾಗಿದ್ದ ₹ 1.5 ಕೋಟಿ ಹಣವನ್ನು ವಶಕ್ಕೆ ಪಡೆಯಲಾಗಿದೆ. ಶೀಘ್ರ ತನಿಖೆ ಪೂರ್ಣಗೊಳ್ಳಲಿದ್ದು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಾಗುವುದು. ಪರಿಹಾರ ಹಂಚಿಕೆ, ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸುವ ಬಗ್ಗೆ ಕೋರ್ಟ್‌ ಕ್ರಮ ಕೈಗೊಳ್ಳಲಿದೆ’ ಎಂದು ಪೊಲೀಸರು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT