ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯ: ಶಿಕ್ಷಕ–ಮಕ್ಕಳ ಸಮಾಗಮಕ್ಕೆ ವಿದ್ಯಾಗಮ-ಟಿವಿ, ಸ್ಮಾರ್ಟ್ ಫೋನ್‌ ಅಗತ್ಯವಿಲ್ಲ

ಕೋವಿಡ್‌ ಅವಧಿಯಲ್ಲಿ ಹೊಸ ಕಲಿಕಾ ಕಾರ್ಯಕ್ರಮ
Last Updated 29 ಜುಲೈ 2020, 12:28 IST
ಅಕ್ಷರ ಗಾತ್ರ

ಮಂಡ್ಯ: ಕೋವಿಡ್‌ ಅವಧಿಯಲ್ಲಿ ಶಾಲಾ ಮಕ್ಕಳು ಹಾಗೂ ಶಿಕ್ಷಕರ ನಡುವೆ ಭೌತಿಕ ಭೇಟಿ ಕಲ್ಪಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ‘ವಿದ್ಯಾಗಮ’ ವೇದಿಕೆ ರೂಪಿಸಲು ಮುಂದಾಗಿದೆ.

ಶಾಲೆಗಳ ಆರಂಭವಾಗದ ಕಾರಣ ಈಗ ಎಲ್ಲೆಡ ಆನ್‌ಲೈನ್‌ ತರಗತಿಗಳು ನಡೆಯುತ್ತಿವೆ. ಚಂದನ ವಾಹಿನಿಯಲ್ಲಿ ಸೇತುಬಂಧ ಕಾರ್ಯಕ್ರಮದ ಮೂಲಕ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಪಾಠ ಬೋಧನೆ ಮಾಡಲಾಗುತ್ತಿದೆ. ಆದರೆ ಇವು ಏಕಮುಖ ಆಗಿರುವ ಹಿನ್ನೆಲೆಯಲ್ಲಿ ಶಿಕ್ಷಕರು ಮಕ್ಕಳನ್ನು ವಾರಕ್ಕೊಮ್ಮೆಯಾದರೂ ಭೇಟಿ ಮಾಡುವುದಕ್ಕಾಗಿ ವಿದ್ಯಾಗಮ ಕಲಿಕಾ ಕಾರ್ಯಕ್ರಮ ರೂಪಿಸಲಾಗಿದೆ.

ಸ್ಮಾರ್ಟ್‌ ಫೋನ್‌, ಟಿವಿ ಸೌಲಭ್ಯ ಇಲ್ಲದ ಮಕ್ಕಳು ಶಿಕ್ಷಣದಿಂದ ವಂಚಿತವಾಗಬಾರದು ಎಂಬ ಉದ್ದೇಶದಿಂದಲೂ ಈ ನೂತನ ಕಾರ್ಯಕ್ರಮ ರೂಪಿಸಲಾಗುತ್ತಿದೆ. ವಾಸಸ್ಥಳಕ್ಕೆ ಅನುಗುಣವಾಗಿ 1–5, 6–8, 8–10ನೇ ತರಗತಿ ವಿದ್ಯಾರ್ಥಿಗಳನ್ನು ಮೂರು ವಿಭಾಗಗಳಾಗಿ ವಿಂಗಡಿಸಲಾಗುತ್ತದೆ.

15 ವಿದ್ಯಾರ್ಥಿಗಳ ತಂಡ ರಚಿಸಿ ಮಕ್ಕಳ ಮನೆ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಮಕ್ಕಳ ಕಲಿಕಾ ಕೇಂದ್ರ ರೂಪಿಸಲಾಗುತ್ತದೆ. ಪ್ರತಿ ತಂಡಕ್ಕೆ ಒಬ್ಬ ಶಿಕ್ಷಕರನ್ನು ಮಾರ್ಗದರ್ಶಿಯನ್ನಾಗಿ ನೇಮಕ ಮಾಡಲಾಗುತ್ತದೆ. ಮಾರ್ಗದರ್ಶಿ ಶಿಕ್ಷಕರು ಮಕ್ಕಳನ್ನು ವಾರಕ್ಕೊಮ್ಮೆ ಭೇಟಿ ಮಾಡಿ ಪಾಠ ಬೊಧನೆ ಮಾಡುತ್ತಾರೆ. ಅಂತಹ ಸಂದರ್ಭದಲ್ಲಿ ಅಂತರ ಕಾಪಾಡಿಕೊಳ್ಳುವುದು ಕಡ್ಡಾಯವಾಗಿರುತ್ತದೆ.

ಶಿಕ್ಷಣ ಒಲಾಖೆ ಒದಗಿಸುವ ಪಠ್ಯಪುಸ್ತಕ, ಕಲಿಕಾ ಸಾಮಗ್ರಿ ವಿತರಣೆ ಮಾಡಿ ವಾರದವರೆಗೂ ಮಕ್ಕಳಿಗೆ ಚಟುವಟಿಕೆಗಳನ್ನು ನೀಡಲಾಗುತ್ತದೆ. ವಾರದ ನಂತರ ಮಾರ್ಗದರ್ಶಿ ಶಿಕ್ಷಕರು ಮತ್ತೆ ಮಕ್ಕಳನ್ನು ಭೇಟಿ ಮಾಡಿ ಕಲಿಕೆಯನ್ನು ಪರಿಶೀಲಿಸುತ್ತಾರೆ. ಕೊರೊನಾ ಹಾವಳಿ ಮುಗಿದು ಶಾಲೆಗಳು ಆರಂಭವಾಗುವವರೆಗೂ ಈ ಪ್ರಕ್ರಿಯೆ ಮುಂದುವರಿಯುತ್ತದೆ.

‘ಮಾರ್ಗದರ್ಶಿ ಶಿಕ್ಷಕರು ತಾವು ಕೈಗೊಂಡ ಪಾಠ ಪ್ರವಚನಗಳ ಬಗ್ಗೆ ದಾಖಲೆ ನಿರ್ವಹಣೆ ಮಾಡಬೇಕು. ಮನೆಕೆಲಸ‌, ವಿಜ್ಞಾನ ಮಾದರಿ ಪರಿಶೀಲಿಸಿ, ಅಂಕ ನೀಡಿ ಸ್ಯಾಟ್ಸ್‌ನಲ್ಲಿ (ಸ್ಟ್ಯೂಡೆಂಟ್ಸ್‌ ಅಚೀವ್‌ಮೆಂಟ್‌ ಟ್ರ್ಯಾಕಿಂಗ್‌ ಸಿಸ್ಟಂ) ದಾಖಲಿಸಬೇಕು. ಮಾರ್ಗದರ್ಶಿ ಶಿಕ್ಷಕರಿಗೆ ತರಬೇತಿ ನೀಡಿ ರಾಜ್ಯದಾದ್ಯಂತ ಕಾರ್ಯಕ್ರಮ ಜಾರಿಗೊಳಿಸುವ ಚಿಂತನೆ ನಡೆಯುತ್ತಿದೆ. ಇನ್ನೊಂದು ವಾರದಲ್ಲಿ ಸ್ಪಷ್ಟ ಚಿತ್ರಣ ದೊರೆಯಲಿದೆ’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಆರ್‌.ರಘುನಂದನ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT