ಭಾನುವಾರ, ಜೂನ್ 13, 2021
20 °C
ಡಾ. ಪ್ರದೀಪ್‌ ಕುಮಾರ್‌ ಹೆಬ್ರಿ ಅವರ 45 ಕೃತಿಗಳ ಬಿಡುಗಡೆ

ಮಂಡ್ಯ: ಸಕ್ಕರೆ ಜಿಲ್ಲೆಯ ಸಾಹಿತ್ಯ ಪರಂಪರೆ ದೊಡ್ಡದು; ಎಸ್‌.ಶ್ರೀನಿವಾಸ ಶೆಟ್ಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಡ್ಯ: ‘ಬಿಎಂಶ್ರೀ, ಕೆಎಸ್‌ನ, ಪುತಿನ ಅವರಂತಹ ಶ್ರೇಷ್ಠ ಸಾಹಿತಿಗಳನ್ನು ನಾಡಿಗೆ ಕೊಟ್ಟ ಸಕ್ಕರೆ ಜಿಲ್ಲೆ ಮಂಡ್ಯದ ಸಾಹಿತ್ಯ, ಸಾಂಸ್ಕೃತಿಕ ಪರಂಪರೆ ಬಲು ದೊಡ್ಡದು’ ಎಂದು ಕರಾವಳಿ ಸಾಂಸ್ಕೃತಿಕ ಒಕ್ಕೂಟದ ಅಧ್ಯಕ್ಷ ಎಸ್‌. ಶ್ರೀನಿವಾಸ ಶೆಟ್ಟಿ ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌, ಶರಣ ಸಾಹಿತ್ಯ ಪರಿಷತ್‌ ಹಾಗೂ ಕರಾವಳಿ ಸಾಂಸ್ಕೃತಿಕ ಒಕ್ಕೂಟದ ಆಶ್ರಯದಲ್ಲಿ ನಗರದ ಗಾಂಧಿಭವನದಲ್ಲಿ ಬುಧವಾರ ನಡೆದ ಡಾ.ಪ್ರದೀಪಕುಮಾರ್ ಹೆಬ್ರಿ ಅವರ 45 ಹೊಸ ಕೃತಿಗಳ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಕನ್ನಡ ಸಾಹಿತ್ಯ ಲೋಕಕ್ಕೆ ಗೋವಿನಹಾಡು ಶ್ರೇಷ್ಠ ಸಾಹಿತ್ಯ ಕೊಟ್ಟ ನೆಲವಿದು. ಇಂತಹ ನೆಲದಲ್ಲಿ ಡಾ.ಪ್ರದೀಪ್‌ ಕುಮಾರ್‌ ಹೆಬ್ರಿ ಅವರು ಉದಯಿಸಿದ್ದಾರೆ. ಸಾಹಿತ್ಯ, ಸಂಸ್ಕೃತಿಯನ್ನೇ ಉಸಿರಾಗಿಸಿಕೊಂಡಿರುವ ಅವರು ನೂರಾರು ಶ್ರೇಷ್ಠ ಕೃತಿ ರಚಿಸಿದ್ದಾರೆ. ಒಂದೇ ದಿನ ಅವರ 45 ಕೃತಿಗಳು ಬಿಡುಗಡೆಯಾಗುತ್ತಿರುವುದು ಅವರ ಸಾಹಿತ್ಯ ತಪಸ್ಸನ್ನು ಅನಾವರಣಗೊಳಿಸುತ್ತದೆ’ ಎಂದರು.

‘ಸಾಹಿತ್ಯ, ಉಪನ್ಯಾಸ, ಕಾವ್ಯ ವಾಚನ ಕ್ಷೇತ್ರದಲ್ಲಿ ಅವರ ಸಾಧನೆ ಅದ್ವಿತೀಯವಾದುದು. ಮಂಡ್ಯ ಜಿಲ್ಲೆಯ ಸಾಹಿತ್ಯ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುತ್ತಿರುವ ಅವರು ಮಹಾಕಾವ್ಯ ಸೇರಿ ಸಾಹಿತ್ಯದ ಹಲವು ಕ್ಷೇತ್ರಗಳಲ್ಲಿ ದೊಡ್ಡ ಕೊಡುಗೆ ನೀಡಿದ್ದಾರೆ. ಅವರ ಸಾಹಿತ್ಯ ಪ್ರೀತಿ, ಕ್ರಿಯಾಶೀಲತೆ ಜಿಲ್ಲೆಯ ಸಾಹಿತ್ಯಾಸಕ್ತರಿಗೆ ಮಾದರಿಯಾದುದು’ ಎಂದರು.

ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ರವಿಕುಮಾರ್ ಚಾಮಲಾಪುರ ಮಾತನಾಡಿ ‘ಡಾ.ಹೆಬ್ರಿ ಅವರು ಮಕ್ಕಳ ಸಾಹಿತ್ಯದಿಂದ ಹಿಡಿದು ಮಹಾಕಾವ್ಯದವರೆಗಿನ ಎಲ್ಲಾ ರೀತಿಯ ಸಾಹಿತ್ಯ ಕೃತಿಗಳನ್ನು ರಚಿಸಿ ಜಿಲ್ಲೆಯ ಸಾಹಿತ್ಯಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ. ವಚನ ಸಾಹಿತ್ಯದ ಬಗ್ಗೆ ಇವರು ರಚಿಸಿರುವ ಕೃತಿಗಳು ಉತ್ತರ ಕರ್ನಾಟಕ ಭಾಗದಲ್ಲಿ ಅಪಾರ ಜನಪ್ರಿಯತೆ ಗಳಿಸಿವೆ’ ಎಂದರು.

ಸುಪ್ರಭಾತದ 2 ಸಂಪುಟ, ಶ್ರೀರಾಮ ಯಾನ ಕೃತಿಯ 2 ಭಾಗ, ಮಕ್ಕಳ ಕವನಗಳು, ಆಹಾರ ಪದ್ಧತಿ, ಪಂಚೇಂದ್ರಿಯಗಳು, ಮಧುರಮಂಡ್ಯ, ಸಿದ್ದಗಂಗಾಶ್ರೀ, ವಚನ ಸಾಹಿತ್ಯ, ಕೌರವ ಪಾಂಡವ ಯುದ್ಧ, ಬಸವ ಬೆಳಕು, ಸಮಗ್ರ ಆಧುನಿಕ ವಚನ ಸೇರಿದಂತೆ 45 ಕೃತಿಗಳನ್ನು ಬಿಡುಗಡೆ ಮಾಡಲಾಯಿತು.

ಕೋವಿಡ್‌–19 ಕಾರಣದಿಂದ ಅಂತರ ಕಾಯ್ದುಕೊಂಡು ಸರಳವಾಗಿ ಸಮಾರಂಭ ಆಯೋಜಿಸಲಾಗಿತ್ತು. ರೈತ ಹಿತರಕ್ಷಣಾ ಸಮಿತಿ ಅಧ್ಯಕ್ಷ ಡಾ.ಜಿ.ಮಾದೇಗೌಡ ಸಮಾರಂಭ ಉದ್ಘಾಟಿಸಿದರು. ಜಾನಪದ ತಜ್ಞ ಕ್ಯಾತನಹಳ್ಳಿ ರಾಮಣ್ಣ, ಸಾಹಿತಿ ಎಲ್ಲೇಗೌಡ ಬೆಸಗರಹಳ್ಳಿ, ಕದಂಬ ಸೈನ್ಯ ಸಂಘಟನೆಯ ಅಧ್ಯಕ್ಷ ಬೇಕರಿ ರಮೇಶ್, ಲಿಂಗಣ್ಣ ಬಂಧೂಕಾರ್, ಜಿ.ಟಿ.ವೀರಪ್ಪ,ದ.ಕೊ.ಹಳ್ಳಿ ಚಂದ್ರಶೇಖರ್, ಕೊಕ್ಕಡ ವೆಂಕಟರಮಣಭಟ್, ರಮೇಶ್, ಹೊಳಲು ಶ್ರೀಧರ್, ಧನಂಜಯ ದರಸಗುಪ್ಪೆ ಇದ್ದರು.

ಗಿನ್ನಿಸ್‌ ದಾಖಲೆ ನಿರ್ಮಿಸಲಿ

ಜಿಲ್ಲಾ ಶರಣ ಸಾಹಿತ್ಯ ಪರಿಷತ್‌ ಅಧ್ಯಕ್ಷ ಶಿವಪ್ರಕಾಶ್‌ ಮಾತನಾಡಿ ‘ಒಂದೇ ಬಾರಿಗೆ 45 ಕೃತಿ ರಚಿಸಿರುವ ಅವರು ದೇಶದಲ್ಲಿ ಬಲುದೊಡ್ಡ ದಾಖಲೆ ನಿರ್ಂಇಸಿದ್ದಾರೆ. ಈಗಾಗಲೇ ನೂರಾರು ಕೃತಿಗಳನ್ನು ರಚಿಸಿರುವ ಅವರು ಗಿನ್ನೆಸ್ ದಾಖಲೆ ನಿರ್ಮಸಲಿ’ ಎಂದು ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು