ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್ ಸರ್ಕಾರದಿಂದ ದಲಿತರಿಗೆ ಮೋಸ: ನಿಖಿಲ್ ಕುಮಾರಸ್ವಾಮಿ ಆರೋಪ

Published 22 ಏಪ್ರಿಲ್ 2024, 13:38 IST
Last Updated 22 ಏಪ್ರಿಲ್ 2024, 13:38 IST
ಅಕ್ಷರ ಗಾತ್ರ

ಮಳವಳ್ಳಿ: ‘ಎಸ್‌ಸಿ, ಎಸ್‌ಟಿ ಅನುದಾನಕ್ಕೆ ಮೀಸಲಿಟ್ಟಿದ್ದ ₹11 ಸಾವಿರ ಕೋಟಿ ಅನುದಾನವನ್ನು ಇತರೆ ಯೋಜನೆಗಳಿಗೆ ವರ್ಗಾಯಿಸಿ ಕಾಂಗ್ರೆಸ್‌ ಸರ್ಕಾರವು ದಲಿತರಿಗೆ ವಂಚಿಸಿದೆ’ ಎಂದು ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಆರೋಪಿಸಿದರು.

ಪಟ್ಟಣದ ಪೇಟೆ ಒಕ್ಕಲಿಗರ ಬೀದಿಯ ರಾಮಮಂದಿರ, ಗಂಗಾ ಟಾಕೀಸ್, ಅಶೋಕ ನಗರದ ಗಣೇಶ ದೇವಸ್ಥಾನ, ಬದನಾಳೇಶ್ವರ ಸ್ವಾಮಿ ದೇವಸ್ಥಾನ, ಕೋಟೆ ಗಂಗಾಧೇಶ್ವರ ಸ್ವಾಮಿ ದೇವಸ್ಥಾನದ ಬಳಿ ಜೆಡಿಎಸ್- ಬಿಜೆಪಿ ಮೈತ್ರಿ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ ಪರ ಮತಯಾಚಿಸಿ ಮಾತನಾಡಿದರು.

‘ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆ ನೀಡಿ ಜನರ ದಿಕ್ಕು ತಪ್ಪಿಸಲು ಮುಂದಾಗಿದೆ. ಚುನಾವಣೆ ಮುಗಿದ ಮೇಲೆ ಎಲ್ಲಾ ಗ್ಯಾರಂಟಿಗಳನ್ನು ನಿಲ್ಲಿಸುತ್ತಾರೆ. ಅವನ್ನು ಮುಂದಿನ ದಿನಗಳಲ್ಲಿ ಕೆಲವು ಮಂದಿಗೆ ಸೀಮಿತಗೊಳಿಸಬಹುದು. ಡಾ.ಬಿ.ಆರ್.ಅಂಬೇಡ್ಕರ್ ಕೊಟ್ಟ ಸಂವಿಧಾನವನ್ನು ಶಾಶ್ವತವಾಗಿ ಉಳಿಸುವ ಕಾರ್ಯವನ್ನು ಪ್ರಧಾನಿ ನರೇಂದ್ರ ಮೋದಿ ಮಾಡುತ್ತಾರೆ. ಹೀಗಾಗಿ ಅವರನ್ನು ಮೂರನೇ ಬಾರಿ ಪ್ರಧಾನಿ ಮಾಡಬೇಕು’ ಎಂದು ಹೇಳಿದರು.

‘ಮೋದಿ 10 ವರ್ಷದಿಂದ ದೇಶವನ್ನು ಸುಭದ್ರವಾಗಿ ಕಟ್ಟಲು ಶ್ರಮಿಸುತ್ತಿದ್ದಾರೆ. ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ವೇಳೆ ಲಾಟರಿ ಮತ್ತು ಸಾರಾಯಿ ನಿಷೇಧ, ಜನತಾ ದರ್ಶನ, ಗ್ರಾಮ ವಾಸ್ತವ್ಯ ಸೇರಿದಂತೆ ಅನೇಕ ಜನಪರ ಕಾರ್ಯಕ್ರಮ ನೀಡಿದ್ದರು. ಮುಂದೆಯೂ ಜನಪರ ಕೆಲಸ ಮಾಡಲು ಎಚ್.ಡಿ.ಕುಮಾರಸ್ವಾಮಿ ಅವರನ್ನು ಬೆಂಬಲಿಸಬೇಕು’ ಎಂದು ಮನವಿ ಮಾಡಿದರು.
ಜೆಡಿಎಸ್ ಎಸ್‌ಸಿ ವಿಭಾಗದ ರಾಜ್ಯ ಘಟಕದ ಅಧ್ಯಕ್ಷ ಕೆ.ಅನ್ನದಾನಿ ಮಾತನಾಡಿ, ‘ನನ್ನ ಅವಧಿಯಲ್ಲಿ ತಾಲ್ಲೂಕಿನಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಕ್ರಮ ಮಾಡಿದ್ದೇನೆ. ಎಚ್.ಡಿ.ದೇವೇಗೌಡರು ಪ್ರಧಾನಿಯಾಗಿದ್ದಾಗ ಸ್ಥಳೀಯ ಮೀಸಲಾತಿ ನೀಡಿದ ಹಿನ್ನೆಲೆಯಲ್ಲಿ ಹಿಂದುಳಿದ ಸಮುದಾಯದ ಜನರು ಅಧಿಕಾರ ಪಡೆಯುವಂತಾಗಿದೆ. ಜಿಲ್ಲೆಯ ಅಭಿವೃದ್ಧಿಗಾಗಿ ಕಾವೇರಿ ನೀರಿನ ಸಮಸ್ಯೆಯನ್ನು ಶಾಶ್ವತವಾಗಿ ಬಗೆಹರಿಸಲು ಜೆಡಿಎಸ್ ಬಿಜೆಪಿ ಮೈತ್ರಿ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ ಗೆಲ್ಲಿಸಬೇಕು’ ಎಂದು ಮನವಿ ಮಾಡಿದರು.

ಜೆಡಿಎಸ್ ಜಿಲ್ಲಾ ಯುವ ಘಟಕದ ಅಧ್ಯಕ್ಷ ಬಿ.ರವಿಕಂಸಾಗರ, ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಎನ್.ಕೃಷ್ಣ, ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ವಿ.ಎಂ.ವಿಶ್ವನಾಥ್, ಬಿಜೆಪಿ ಮುಖಂಡರಾದ ಜಿ.ಮುನಿರಾಜು, ಯಮದೂರು ಸಿದ್ದಾರಾಜು, ಪುರಸಭೆ ಸದಸ್ಯರಾದ ಎಂ.ಟಿ.ಪ್ರಶಾಂತ್, ಟಿ.ನಂದಕುಮಾರ್, ಸಿದ್ದರಾಜು, ನೂರುಲ್ಲಾ, ಬಸವರಾಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT