ಭಾನುವಾರ, 25 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಣ ದುರುಪಯೋಗ, ಕರ್ತವ್ಯಲೋಪ ಆರೋಪ; ಪಿಡಿಒ ಅಮಾನತು

Published 24 ನವೆಂಬರ್ 2023, 14:03 IST
Last Updated 24 ನವೆಂಬರ್ 2023, 14:03 IST
ಅಕ್ಷರ ಗಾತ್ರ

ಮಳವಳ್ಳಿ: ಹಣ ದುರುಪಯೋಗ ಆರೋಪದಲ್ಲಿ ತಾಲ್ಲೂಕಿನ ಬೆಂಡರವಾಡಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎ.ಬಿ.ಶಶಿಧರ್ ಅವರನ್ನು ಅಮಾನತುಗೊಳಿಸಿ ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣ ಅಧಿಕಾರಿ ಶೇಕ್ ತನ್ವೀರ್ ಆಶೀಫ್ ಆದೇಶ ಹೊರಡಿಸಿದ್ದಾರೆ.

‘ನರೇಗಾ ಯೋಜನೆಯಡಿ ಯಂತ್ರಗಳ ಮೂಲಕ ಹಾಗೂ ಅಕ್ರಮ ಕೃಷಿ ಹೊಂಡ ನಿರ್ಮಾಣ, ಸತ್ತವರ, ಖಾಸಗಿ ಸಂಸ್ಥೆಗಳು ಹಾಗೂ ಬೇರೆ ಸ್ಥಳಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ವ್ಯಕ್ತಿಗಳ ಹೆಸರಿಗೆ ನರೇಗಾ ಕೂಲಿಮೊತ್ತವನ್ನು ವರ್ಗಾಯಿಸಿ ಹಣದುರ್ಬಳಕೆ ಮಾಡಿಕೊಂಡಿರುವುದು. ಅರಣ್ಯ ಇಲಾಖೆಯ ಅನುಮತಿ ಇಲ್ಲದೆ ಕಡಿಮೆ ಬೆಲೆಗೆ ಮರಗಳನ್ನು ಮಾರಾಟ ಮಾಡಿರುವುದು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭಿವೃದ್ಧಿಗೆ ಮೀಸಲಿಡಬೇಕಾದ ಅನುದಾನದ ದುರ್ಬಳಕೆ, ಕೇಂದ್ರ ಸ್ಥಾನದಲ್ಲಿ ವಾಸವಿಲ್ಲದಿರುವುದು’ ಸೇರಿದಂತೆ  ಪಿಡಿಒ ಎ.ಬಿ.ಶಶಿಧರ್ ವಿರುದ್ಧ ಪಂಚಾಯಿತಿ ಸದಸ್ಯ ಬಿ.ಆರ್.ಅನಂತು ಕುಮಾರ್ ಸೇರಿದಂತೆಹಲವರು ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣ ಅಧಿಕಾರಿಗೆ ದೂರು ನೀಡಿದ್ದರು.

ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ, ಸಹಾಯಕ ಕಾರ್ಯದರ್ಶಿ ನೇತೃತ್ವದ ತಂಡ ತನಿಖೆಗಾಗಿ  ಬೆಂಡರವಾಡಿ ಪಂಚಾಯಿತಿಗೆ ಭೇಟಿ ನೀಡಿ ದಾಖಲೆಗಳನ್ನು ಪರಿಶೀಲನೆ ನಡೆಸಿದಾಗ ಅಭಿವೃದ್ಧಿ ಅಧಿಕಾರಿ ಎ.ಬಿ.ಶಶಿಧರ್ ತನಿಖಾ ತಂಡದ ಮುಂದೆ ಸಮರ್ಪಕ ಮಾಹಿತಿ ಮತ್ತು ದಾಖಲೆ ಪತ್ರಗಳನ್ನು ಹಾಜರುಪಡಿಸಿರಲಿಲ್ಲ.  ಅಕ್ರಮವಾಗಿ ಆಸ್ತಿಗಳ ಖಾತೆ ಮಾಡಿರುವುದು, ಎಲ್ಲ ಸದಸ್ಯರಿಗೆ ಮಾಹಿತಿ ನೀಡದೆ ಸಭೆ ನಡೆಸಿರುವುದು ಕಂಡು ಬಂದಿದೆ ಎಂದು ತನಿಖಾ ತಂಡದ ವರದಿ ಸಲ್ಲಿಸಿತ್ತು.

‘ಹಣ ದುರುಪಯೋಗ ಮತ್ತು ಕರ್ತವ್ಯಲೋಪ’ ಎಸಗಿರುವುದು ಗಂಭೀರ ಸ್ವರೂಪದ ಆರೋಪವಾಗಿರುವುದರಿಂದ ಕರ್ನಾಟಕ ನಾಗರಿಕ (ಸಿಸಿಎ) ನಿಯಮಗಳು 1957 ರನ್ವಯ ಶಿಸ್ತು ಕ್ರಮ ಕೈಗೊಳ್ಳಬಹುದು’ ಎಂಬಂತೆ ವರದಿಯ ಹಿನ್ನೆಲೆಯಲ್ಲಿ  ಎ.ಬಿ.ಶಶಿಧರ್ ಅವರನ್ನು ಅಮಾನತುಗೊಳಿಸಿ ಆದೇಶಿಸಲಾಗಿದೆ. ಕಿರುಗಾವಲು ಪಿಡಿಒ ಹರಿಶಂಕರ್ ಅವರನ್ನು ಪ್ರಭಾರ ನೇಮಿಸಲಾಗಿದೆ ಎಂದು ತಾಲ್ಲೂಕು ಪಂಚಾಯಿತಿ ಇಒ ಎಲ್.ಮಮತಾ ತಿಳಿಸಿದ್ದಾರೆ.

ದೂರುದಾರ  ಬಿ.ಆರ್.ಅನಂತು ಕುಮಾರ್ ‘ಪ್ರಜಾವಾಣಿ’ ಪ್ರತಿಕ್ರಿಯಿಸಿ, ‘14 ಮತ್ತು 15ನೇ ಹಣಕಾಸು ಅನುದಾನದಲ್ಲಿ ಕಾಮಗಾರಿ ನಡೆಸದೇ ಪಿಡಿಒ ಎ.ಬಿ.ಶಶಿಧರ್ ಲಕ್ಷಾಂತರ ಮೊತ್ತವನ್ನು ದುರುಪಯೋಗ ಪಡಿಸಿಕೊಂಡಿದ್ದರು. ಸಭೆ ನಡೆಸದೇ ಅಧ್ಯಕ್ಷರ ಸಂಬಂಧಿಕರ ಹೆಸರಿಗೆ ಸರ್ಕಾರಿ ಆಸ್ತಿಯನ್ನು ಇ-ಸ್ವತ್ತು ಮಾಡಿಕೊಟ್ಟಿದ್ದರು. ಇತರ ಸಾಕಷ್ಟು ಭ್ರಷ್ಟಾಚಾರ ನಡೆಸಿದ್ದು, ಮೂರು ವರ್ಷಗಳಿಂದ ನಡೆಸುತ್ತಿದ್ದ ಹೋರಾಟಕ್ಕೆ ಜಯ ಸಿಕ್ಕಂತಾಗಿದೆ’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT