ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಕ್ತರ ಸಮರ್ಪಣೆಯಿಂದ ಮಂದಿರ ನಿರ್ಮಾಣವಾಗಲಿ

ಸಂತ ಸಮಾವೇಶದಲ್ಲಿ ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಅಭಿಮತ
Last Updated 7 ಜನವರಿ 2021, 4:07 IST
ಅಕ್ಷರ ಗಾತ್ರ

ನಾಗಮಂಗಲ: ‘ಶ್ರೀರಾಮನ ಮಂದಿರ ಒಬ್ಬ ವ್ಯಕ್ತಿಯಿಂದ, ಸಮೂಹದಿಂದ ನಿರ್ಮಾಣವಾಗುವುದಲ್ಲ. ಅದು ಪ್ರತಿ ರಾಮನ ಭಕ್ತರ ಸಮರ್ಪಣೆಯಿಂದಲೇ ನಿರ್ಮಾಣವಾಗಬೇಕು’ ಎಂದು ಆದಿಚುಂಚನಗಿರಿ ಪೀಠಾಧ್ಯಕ್ಷ ನಿರ್ಮಲಾ ನಂದನಾಥ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಆದಿಚುಂಚನಗಿರಿ ಮಠದಲ್ಲಿ ಬುಧವಾರ ನಡೆದ ಶ್ರೀರಾಮ ಮಂದಿರ ನಿರ್ಮಾಣ ನಿಧಿ ಸಮರ್ಪಣಾ ಸಂತ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

‘ಆದಿಚುಂಚನಗಿರಿ ಮತ್ತು ಅಯೋಧ್ಯೆಗೂ ಸಂಬಂಧವಿದ್ದು, ಅಯೋಧ್ಯೆಯಿಂದ ಘೋರಕ್ಷನಾಥರು ಇಲ್ಲಿ ಬಂದು ತಪಸ್ಸು ಮಾಡದ್ದರಿಂದ ಚುಂಚನಗಿರಿ ಆದಿಚುಂಚನಗಿರಿಯಾಯಿತು. ನಮ್ಮ ಹಿರಿಯರು ಪ್ರತಿ ಗ್ರಾಮದಲ್ಲೂ ರಾಮ ಮಂದಿರ ನಿರ್ಮಿಸಿ ಮಕ್ಕಳಿಗೆ ಸಂಸ್ಕೃತಿ, ಸಂಪ್ರದಾಯವನ್ನು ಕಲಿಸುವ ಕೇಂದ್ರವಾಗಿ ಮಾಡಿಕೊಂಡಿದ್ದರು. ಆದ್ದರಿಂದ ಅಯೋಧ್ಯೆಯಲ್ಲಿ ರಾಮ ಮಂದಿರ ನಮ್ಮ ಕಾಲದಲ್ಲಿ ಮರು ಸ್ಥಾಪನೆಯಾಗುತ್ತಿದೆ ಎಂಬುದೇ ಹೆಮ್ಮಯ ವಿಷಯವಾಗಿದೆ’ ಎಂದರು.

‘ರಾಮನ ತತ್ವಗಳನ್ನು ಅನುಸರಿಸಿದಾಗ ನಿಜವಾದ ಭಕ್ತರಾಗುತ್ತೇವೆ. ರಾಮ ಮಂದಿರ ರಾಮನಿಗಾಗಿ ಅಲ್ಲ. ನಮ್ಮೆಲ್ಲರ ಮನಸ್ಸಿನಲ್ಲಿ ಸುಪ್ತವಾಗಿ ಬಿದ್ದಿರುವ ಭಕ್ತಿಯನ್ನು ಚೈತನ್ಯಗೊಳಿಸಲಿಕ್ಕಾಗಿ ನಿರ್ಮಾಣವಾಗಬೇಕು. ದೇಶದ ಜನರು ದುಡಿಯುತ್ತಿರುವುದು ಭೋಗಕ್ಕಾಗಿ ಅಲ್ಲ, ದೇಶದ ಜನರ ಕಲ್ಯಾಣಕ್ಕಾಗಿ. ಆದ್ದರಿಂದ ನಾವೆಲ್ಲರೂ ರಾಮ ಮಂದಿರ ನಿರ್ಮಾಣ ಕಾರ್ಯಕ್ರಮದಲ್ಲಿ ಸಮರ್ಪಣಾ ಭಾವದಿಂದ ಭಾಗಿಯಾ ಗಬೇಕು’ ಎಂದು ಕರೆ ನೀಡಿದರು.

ಆರ್‌ಎಸ್‌ಎಸ್‌ನ ಹಿರಿಯ ಸಂಚಾಲಕ ಸುಧೀರ್ ಜೀ ಮಾತನಾಡಿ, ಯಾವುದೇ ಭಕ್ತರ ಬಳಿ ಹಣ, ಸಾಮಗ್ರಿಗಳನ್ನು ಬಲವಂತವಾಗಿ ಪಡೆಯುವುದಿಲ್ಲ‌. ಪ್ರತಿ ಮಂಡಲ, ನಗರ, ಮಹಾನಗರಗಳಲ್ಲಿ ಮಂದಿರ ನಿರ್ಮಾಣಕ್ಕೆ ನಿರ್ಮಾಣ ನಿಧಿ ಸಂಗ್ರಹ ಅಭಿಯಾನ ಪ್ರಾರಂಭಿಸುತ್ತೇವೆ. ಈ ಅಭಿಯಾನದಲ್ಲಿ ಭಕ್ತರು ಭಾಗಿಯಾಗಬೇಕು ಎಂಬುದು ನಮ್ಮ ಆಶಯ ಎಂದರು.

ಮಂದಿರ ಲೋಕಾರ್ಪಣೆಯು ಒಂದು ದಿನಕ್ಕೆ ಸೀಮಿತವಾಗದೆ ಐತಿಹಾಸಿಕ ಕಾರ್ಯಕ್ರಮವಾಗಬೇಕು. ಭಕ್ತರು ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ಸ್ವಾಮೀಜಿ ಕರೆ ನೀಡಬೇಕು. ಜತೆಗೆ ಮಠದ ವತಿಯಿಂದ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಬೆಂಗಳೂರಿನ ಬೇಲಿಮಠದ ಶಿವರುದ್ರ ಸ್ವಾಮೀಜಿ ಮಾತನಾಡಿದರು.

ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ, ತೆಂಕಲಗೂಡು ಮಠದ ಚೆನ್ನಸಿದ್ಧರಾಯ ಶಿವಾಚಾರ್ಯ ಸ್ವಾಮೀಜಿ, ಷಭಾವರಹಿತೇಶ್ವರ ಶಿವಾಚಾರ್ಯ ಸ್ವಾಮೀಜಿ, ಮಲ್ಲಿಕಾರ್ಜುನ ಸ್ವಾಮೀಜಿ, ಸದಾಶಿವ ಶಿವಾಚಾರ್ಯ ಸ್ವಾಮೀಜಿ, ವೇದಾವತಿ ಮಾತಾಜಿ, ಶಂಭುನಾಥ ಸ್ವಾಮೀಜಿ, ಚೇತನ ದೇವರು, ಗಂಗಾಧರ ಶಿವಾಚಾರ್ಯ ಸ್ವಾಮೀಜಿ, ಆದಿಚುಂಚನಗಿರಿ ಶಾಖಾ ಮಠದ ಸ್ವಾಮೀಜಿಗಳು, ವಿಶ್ವ ಹಿಂದೂ ಪರಿಷತ್‌ನ ಕ್ಷೇತ್ರ ಸಂಚಾಲಕರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT