ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯ ಬಂದ್‌ ವಿಫಲ; ಬೈಕ್‌ ರ‍್ಯಾಲಿ, ಮೆರವಣಿಗೆಗೆ ಸೀಮಿತ

ಮಂಡ್ಯ ಬಂದ್‌ ವಿಫಲ; ಪ್ರತಿಭಟನೆಯಿಂದ ಬಿಜೆಪಿ, ಜೆಡಿಎಸ್‌ ದೂರ
Published 9 ಫೆಬ್ರುವರಿ 2024, 15:53 IST
Last Updated 9 ಫೆಬ್ರುವರಿ 2024, 15:53 IST
ಅಕ್ಷರ ಗಾತ್ರ

ಮಂಡ್ಯ: ತಾಲ್ಲೂಕಿನ ಕೆರಗೋಡು ಗ್ರಾಮದಲ್ಲಿ ಹನುಮ ಧ್ವಜ ತೆರವು ಖಂಡಿಸಿ ಸಂಘ ಪರಿವಾರ ಶುಕ್ರವಾರ ಕರೆ ನೀಡಿದ್ದ ಕೆರಗೋಡು ಗ್ರಾಮ ಹಾಗೂ ಮಂಡ್ಯ ನಗರ ಬಂದ್‌ ಸಂಪೂರ್ಣವಾಗಿ ವಿಫಲಗೊಂಡಿತು. ಬಂದ್‌ ಆಚರಣೆಯು ಬೈಕ್‌ ರ್‍ಯಾಲಿ, ಮೆರವಣಿಗೆಗಷ್ಟೇ ಸೀಮಿತವಾಯಿತು.

ಆರ್‌ಎಸ್‌ಎಸ್‌, ವಿಎಚ್‌ಪಿ, ಬಜರಂಗದಳ, ಬಜರಂಗ ಸೇನೆ, ಶ್ರೀರಾಮ ಭಜನಾಮಂಡಳಿಯ ನೂರಾರು ಕಾರ್ಯಕರ್ತರು ಬೆಳಿಗ್ಗೆ ಗ್ರಾಮದ ವೀರಾಂಜನೇಯ ದೇವಾಲಯದಲ್ಲಿ ಪೂಜೆ ಸಲ್ಲಿಸಿ ನಗರದವರೆಗೂ ಬೈಕ್‌ ರ‍್ಯಾಲಿ ನಡೆಸಿದರು. ಗ್ರಾಮದಲ್ಲಿ ಬೆಳಿಗ್ಗೆ ಮುಚ್ಚಿದ್ದ ಅಂಗಡಿಗಳು ಬೈಕ್‌ರ್‍ಯಾಲಿ ಹೊರಟ ನಂತರ ‌ಬಾಗಿಲು ತೆರೆದವು.

ಬೆಳಿಗ್ಗೆ 11 ಗಂಟೆಗೆ ರ್‍ಯಾಲಿಯು ನಗರದ ಆಂಜನೇಯ ದೇವಾಲಯ ತಲುಪಿತು. ಕಾರ್ಯಕರ್ತರು ದೇವಾಲಯದಿಂದ ಜಿಲ್ಲಾಧಿಕಾರಿ ಕಚೇರಿವರೆಗೂ ಮೆರವಣಿಗೆ ನಡೆಸಿದರು. ಬಂದ್‌ ಕರೆಯು ನಗರದಲ್ಲಿ ಯಾವುದೇ ಪರಿಣಾಮ ಬೀರಲಿಲ್ಲ. ಅಂಗಡಿಗಳು ತೆರೆದಿದ್ದವು. ಆಟೊ, ಬಸ್‌ ಸಂಚಾರ ಎಂದಿನಂತಿತ್ತು. ಅಂಗಡಿ ಮುಚ್ಚುವಂತೆ ಕಾರ್ಯಕರ್ತರು ಬಲವಂತ ಮಾಡಲಿಲ್ಲ.

ಮೆರವಣಿಗೆಯುದ್ದಕ್ಕೂ ಶಾಸಕ ಗಣಿಗ ರವಿಕುಮಾರ್‌, ಜಿಲ್ಲಾ ಉಸ್ತುವಾರಿ ಸಚಿವ ಎನ್‌.ಚಲುವರಾಯಸ್ವಾಮಿ, ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರತಿಭಟನಾಕಾರರು ಘೋಷಣೆ ಕೂಗಿದರು.

ಜಿಲ್ಲಾಧಿಕಾರಿ ಕಚೇರಿ ಎದುರು ನಡೆದ ಸಭೆಯಲ್ಲಿ ವಿಎಚ್‌ಪಿ ಮುಖಂಡ ಬಸವರಾಜ್‌ ಮಾತನಾಡಿ, ‘ನಾವೇನೂ ಪಾಕಿಸ್ತಾನದ ಧ್ವಜ ಹಾರಿಸಿಲ್ಲ, ನಮ್ಮ ಧರ್ಮದ ಧ್ವಜ ಹಾಕಿದ್ದೇವೆ. ಈಚೆಗೆ ನಡೆದ ಪ್ರತಿಭಟನೆ ವೇಳೆ ಕಾರ್ಯಕರ್ತರ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿರುವುದು ಖಂಡನೀಯ. ನಿಮಗೆ ತಾಕತ್ತಿದ್ದರೆ ಶ್ರೀರಂಗಪಟ್ಟಣದದಲ್ಲಿ ಮಸೀದಿ ತೆರವುಗೊಳಿಸಿ ಮೂಡಲಬಾಗಿಲು ಆಂಜನೇಯ ದೇವಾಲಯ ಉಳಿಸಿ’ ಎಂದು ಸವಾಲು ಹಾಕಿದರು.

ಭಜರಂಗದಳದ ಮುರಳಿಕೃಷ್ಣ ಮಾತನಾಡಿ, ‘ಜಗತ್ತಿನ ಯಾವುದೇ ರಾಷ್ಟ್ರದಲ್ಲಿ ಹನುಮ ಧ್ವಜ ಹಾರಿಸುವ ಶಕ್ತಿ ಭಾರತಕ್ಕಿದೆ. ಅಬುಧಾಬಿಯಲ್ಲೂ ಹನುಮ ಮಂದಿರ ನಿರ್ಮಾಣಗೊಂಡಿದೆ. ಕೆರಗೋಡು ಗ್ರಾಮದಲ್ಲಿ ಹನುಮ ಧ್ವಜ ಹಾರುವವರೆಗೂ ಹೋರಾಟ ನಿಲ್ಲುವುದಿಲ್ಲ’ ಎಂದರು.

ಜಿಲ್ಲಾಧಿಕಾರಿ ಕುಮಾರ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎನ್‌.ಯತೀಶ್‌ ಪ್ರತಿಭಟನಾ ಸ್ಥಳಕ್ಕೆ ಬಂದು ಮನವಿ ಪತ್ರ ಸ್ವೀಕರಿಸಿದರು.

ಕನಕದಾಸರಿಗೆ ಜೈಕಾರ

ಜ.29ರಂದು ನಡೆದ ಪಾದಯಾತ್ರೆ ವೇಳೆ ಪ್ರತಿಭಟನಾಕಾರರು ಬೆಂಗಳೂರು– ಮೈಸೂರು ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿರುವ ಕುರುಬರ ಸಂಘದ ವಿದ್ಯಾರ್ಥಿನಿಲಯಕ್ಕೆ ತಲ್ಲು ತೂರಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಕನಕದಾಸರ ಫ್ಲೆಕ್ಸ್‌ ಹರಿದಿದ್ದರು. ಆದರೆ ಶುಕ್ರವಾರ ನಡೆದ ಮೆರವಣಿಗೆಯಲ್ಲಿ ಪ್ರತಿಭಟನಾಕಾರರು ವಿದ್ಯಾರ್ಥಿನಿಲಯದ ಎದುರು ಬರುತ್ತಿದ್ದಂತೆ ಕನಕದಾಸರಿಗೆ ಜೈಕಾರ ಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT