ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕ್ರಿಕೆಟ್‌ ಬುಕ್ಕಿಗಳ ವಿರುದ್ಧ ಕಠಿಣ ಕ್ರಮ: ಶಾಸಕ ಗಣಿಗ ರವಿಕುಮಾರ್‌

ದಂಧೆಕೋರರಿಂದ ಯುವಜನರಿಗೆ ಕಿರುಕುಳ; ಶಾಸಕ ಗಣಿಗ ರವಿಕುಮಾರ್ ಎಚ್ಚರಿಕೆ
Published 20 ಜನವರಿ 2024, 14:26 IST
Last Updated 20 ಜನವರಿ 2024, 14:26 IST
ಅಕ್ಷರ ಗಾತ್ರ

ಮಂಡ್ಯ: ‘ಐಪಿಎಲ್‌ ಕ್ರಿಕೆಟ್‌ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಬೆಟ್ಟಿಂಗ್‌ ದಂಧೆ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ದೂರುಗಳು ಬರುತ್ತಿವೆ. ಮಕ್ಕಳು, ಯುವಕರು ದಂಧೆಯಲ್ಲಿ ಸಿಲುಕಿ ತಮ್ಮ ಬದುಕನ್ನೇ ಹಾಳುಮಾಡಿಕೊಳ್ಳುತ್ತಿದ್ದಾರೆ. ಈ ದಂಧೆ ನಡೆಸುತ್ತಿರುವ ಬುಕ್ಕಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಪೊಲೀಸರಿಗೆ ಸೂಚನೆ ನೀಡಿದ್ದೇನೆ’ ಎಂದು ಶಾಸಕ ಗಣಿಗ ರವಿಕುಮಾರ್‌ ಎಚ್ಚರಿಕೆ ನೀಡಿದರು.

‌ತಾಲ್ಲೂಕಿನ ಗೋಪಾಲಪುರ ಗ್ರಾಮದಲ್ಲಿ ಜಿಲ್ಲಾ ಪಂಚಾಯಿತಿ, ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆ ವತಿಯಿಂದ ನಡೆದ ‘ಮನೆ ಮನೆಗೆ ಗಂಗೆ’ ಕುಡಿಯುವ ನೀರಿನ ಯೋಜನೆಗೆ ಶನಿವಾರ ಚಾಲನೆ ನೀಡಿ ಅವರು ಮಾತನಾಡಿದರು.

‘ಗ್ರಾಮೀಣ ಭಾಗದಲ್ಲೂ ಯುವಜನರು ಕ್ರಿಕೆಟ್‌ ಬೆಟ್ಟಿಂಗ್‌ನಲ್ಲಿ ತೊಡಗಿ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ. ಯಾವುದೇ ಹಳ್ಳಿಗಳಲ್ಲಿ ಬೆಟ್ಟಿಂಗ್‌ ನಡೆಯುತ್ತಿದ್ದರೆ, ಬುಕ್ಕಿಗಳು ಇದ್ದರೆ ಅವರ ಬಗ್ಗೆ ಜನರೇ ಮಾಹಿತಿ ನೀಡಬೇಕು. ದಂಧೆಕೋರರನ್ನು ಮಟ್ಟ ಹಾಕುವಂತೆ ಪೊಲೀಸರಿಗೆ ನಾನು ಈಗಾಗಲೇ ಸೂಚನೆ ನೀಡಿದ್ದೇನೆ. ಯುವಜನರ ರಕ್ಷಣೆಗಾಗಿ ಬುಕ್ಕಿಗಳ ವಿರುದ್ಧ ಬಲೆ ಬೀಸಲಾಗಿದೆ’ ಎಂದರು.

‘ಕ್ರಿಕೆಟ್ ಬುಕ್ಕಿಗಳು ಯುವಜನರನ್ನು ಹಾಳು ಮಾಡುವುದರ ಜೊತೆಗೆ ಅವರ ಜಮೀನು, ಮನೆಯಲ್ಲಿನ ಚಿನ್ನಾಭರಣಗಳನ್ನೂ ಗಿರವಿ ಇಡುವಂತೆ ಒತ್ತಾಯ ಮಾಡುತ್ತಿದ್ದಾರೆ. ಕ್ರಿಕೆಟ್ ಬೆಟ್ಟಿಂಗ್‌ನಿಂದ ಎಷ್ಟೋ ಮಂದಿ ಯುವಕರು ಸಾಲಕ್ಕೆ ಶರಣಾಗಿ ಈಗಾಗಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮುಂದೆ ಬಾಳಿ ಬದುಕಬೇಕಾದ ಯುವಕರನ್ನು ರಕ್ಷಿಸುವುದೇ ನಮ್ಮ ಗುರಿಯಾಗಬೇಕು. ದಂಧೆಕೋರರನ್ನು ಬೇರು ಸಮೇತ ಕಿತ್ತು ಹಾಕಲು ಸಾರ್ವಜನಿಕರು ಸಹಕಾರ ನೀಡಬೇಕು’ ಎಂದರು.

‘ಕೆಲ ಕಿಡಿಗೇಡಿಗಳು ಮಾರಕಾಸ್ತ್ರ ಹಿಡಿದುಕೊಂಡು ಗ್ರಾಮಗಳಲ್ಲಿ ತಿರುಗಾಡುತ್ತಿದ್ದಾರೆ. ಇಂತಹವರನ್ನು ಪೊಲೀಸರು ಕರೆತಂದು ಕಾನೂನು ಕ್ರಮ ಕೈಗೊಳ್ಳುವ ಕಾರ್ಯಾಚರಣೆ ಆರಂಭಿಸಿದ್ದಾರೆ. ಈ ಕಿಡಿಗೇಡಿಗಳಿಗೂ ನಮಗೂ ಯಾವುದೇ ಸಂಬಂಧ ಇಲ್ಲ. ಈ ಬಗ್ಗೆ ಕೆಲ ಜೆಡಿಎಸ್‌ ಮುಖಂಡರು ಪ್ರಶ್ನಿಸಿದ್ದಾರೆ. ಬೆಂಗಳೂರಿನಿಂದ ರೌಡಿಗಳನ್ನು ಕರೆತಂದು ನಾವು ಇಲ್ಲಿ ರೌಡಿಸಂ ಮಾಡುತ್ತಿಲ್ಲ. ಕ್ರಿಕೆಟ್ ಬುಕ್ಕಿಗಳಿಗೆ, ರೌಡಿಗಳಿಗೆ ನಾವು ಬೆಂಬಲ ನೀಡುತ್ತಿಲ್ಲ’ ಎಂದು ಹೇಳದಿರು.

‘ಕ್ರಿಕೆಟ್ ಬುಕ್ಕಿಗಳಿಗೂ, ರೌಡಿಗಳಿಗೂ ನಮಗೂ ಸಂಬಂಧ ಇಲ್ಲ ಎಂದು ಜೆಡಿಎಸ್‌ ಮುಖಂಡರು ಬಹಿರಂಗವಾಗಿ ಹೇಳಲಿ. ಅದು ಬಿಟ್ಟು ಸುಖಾಸುಮ್ಮನೆ ನನ್ನ ಮೇಲೆ ಆರೋಪ ಮಾಡುವುದು ಸರಿಯಲ್ಲ. ಕಾನೂನು ಬಾಹಿರ ಕೃತ್ಯಗಳನ್ನು ಮಟ್ಟ ಹಾಕುವ ನಿಟ್ಟಿನಲ್ಲಿ ಎಲ್ಲರೂ ಸಹಕಾರ ನೀಡಬೇಕು. ಅಕ್ರಮ ಚಟವಟಿಕೆಗಳಿಗೆ ಸಹಕಾರ ನೀಡಿ ಸಮಾಜದ ಶಾಂತಿ ಹಾಳು ಮಾಡುವುದಕ್ಕೆ ನಾನು ಬಿಡುವುದಿಲ್ಲ’ ಎಂದರು.

ಕಾಮಗಾರಿಕೆ ಚಾಲನೆ; ‘₹3.20 ಕೋಟಿ ವೆಚ್ಚದ ಶುದ್ಧ ಕುಡಿಯುವ ನೀರಿನ ಯೋಜನೆಗೆ ಚಾಲನೆ ನೀಡಿದ್ದೇವೆ. ಇನ್ನು ಮೂರು ತಿಂಗಳಲ್ಲಿ ಶುದ್ಧ ಕುಡಿಯುವ ನೀರನ್ನು ಮನೆ ಮನೆಗೆ ಕೊಡುವ ಕೆಲಸ ಮಾಡುತ್ತೇವೆ. ಮಂಡ್ಯ, ಬಿಳಿದೇಗಲು ರಸ್ತೆ ಅಭಿವೃದ್ಧಿಗೆ ಚಾಲನೆ ನೀಡಲಾಗಿದೆ’ ಎಂದರು.

‘ಪ್ರತೀ ಕಿ.ಮೀ ಗೆ ₹3 ಕೋಟಿ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಮಾಡಲಾಗುವುದು. ಟೆಂಡರ್ ಕರೆಯುವ ಪ್ರಕ್ರಿಯೆ ನಡೆಯುತ್ತಿದ್ದು ಶೀಘ್ರ ಅಭಿವೃದ್ಧಿ ಮಾಡಲಾಗುವುದು.  ಮಂಡ್ಯ ವಿಧಾನಸಭಾ ಕ್ಷೇತ್ರವನ್ನು ಅಭಿವೃದ್ಧಿ ಮಾಡುವುದೇ ನಮ್ಮ ಗುರಿ ’ ಎಂದರು.

ಸಾತನೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಜುಳಾ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಚ್.ಪಿ.ಕೃಷ್ಣಮೂರ್ತಿ, ಯಜಮಾನ್ ಚಂದ್ರಶೇಖರ್, ಸದಸ್ಯರಾದ ಪ್ರಕಾಶ್, ಶಿವರಾಂ, ಮುಖಂಡರಾದ ಪ್ರಕಾಶ್, ಪಿಡಿಒ ಮಲ್ಲೇಶ್ ಭಾಗವಹಿಸಿದ್ದರು.

ಆತ್ಮಹತ್ಯೆಗೆ ಶರಣಾಗುತ್ತಿರುವ ಯುವಜನರು ಆಸ್ತಿ, ಆಭರಣ ಗಿರವಿ ಇಡುವಂತೆ ಒತ್ತಾಯ ಜೆಡಿಎಸ್‌ ಮುಖಂಡರು ಸತ್ಯ ಒಪ್ಪಿಕೊಳ್ಳಲಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT