ಸೋಮವಾರ, 4 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2023 ಮರೆಯುವ ಮುನ್ನ | ಮಂಡ್ಯ: ರಾಜಕೀಯದ ರಂಗು, ಹೆದ್ದಾರಿ ಅನಾವರಣ..

Published 31 ಡಿಸೆಂಬರ್ 2023, 6:53 IST
Last Updated 31 ಡಿಸೆಂಬರ್ 2023, 6:53 IST
ಅಕ್ಷರ ಗಾತ್ರ

ಮಂಡ್ಯ: ರೋಚಕ ರಾಜಕಾರಣಕ್ಕೆ ಹೆಸರುವಾಸಿಯಾದ ಮಂಡ್ಯ ಜಿಲ್ಲೆಯು ಈ ವರ್ಷ ಹಲವು ಪ್ರಮುಖ ಘಟನಾವಳಿಗಳಿಗೆ ಸಾಕ್ಷಿ ಆಯಿತು. ವಿಧಾನಸಭೆ ಹೊಸ್ತಿಲಲ್ಲಿ ಖುದ್ದು ಪ್ರಧಾನಿ ನರೇಂದ್ರ ಮೋದಿ ರೋಡ್‌ ಶೋ ನಡೆಸಿದರು. ಆದರೆ ಚುನಾವಣೆಯಲ್ಲಿ ಮಾತ್ರ ಕಾಂಗ್ರೆಸ್ ಆರು ಕ್ಷೇತ್ರಗಳಲ್ಲಿ ಗೆದ್ದು ಬೀಗಿತು.

ಬೆಂಗಳೂರು–ಮೈಸೂರು ಹೆದ್ದಾರಿ ಲೋಕಾರ್ಪಣೆಗೊಂಡಿದ್ದು, ಅದರ ಕಾರ್ಯಕ್ರಮವು ಜಿಲ್ಲೆಯಲ್ಲೇ ನಡೆದದ್ದು ವಿಶೇಷ. ಮಾರ್ಚ್ 12ರಂದು ನಡೆದ ಹೆದ್ದಾರಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಸ್ವತಃ ಪ್ರಧಾನಿ ನವೀಕೃತ ಹೆದ್ದಾರಿಯಲ್ಲಿ ಹೆಜ್ಜೆ ಹಾಕಿ ಸಂಭ್ರಮಿಸಿದರು. ಅಂದು ಬೆಳಿಗ್ಗೆ 11.30ರ ಸುಮಾರಿಗೆ ಹೆಲಿಕಾಪ್ಟರ್ ಮೂಲಕ ಬಂದಿಳಿದ ಮೋದಿ ಬಳಿಕ ಮಂಡ್ಯ ನಗರದಲ್ಲಿ 1.8 ಕಿ.ಮೀ. ಉದ್ದಕ್ಕೆ ರೋಡ್ ಶೋ ನಡೆಸಿದರು. ನಂತರ ಅಮರಾವತಿ ಹೋಟೆಲ್‌ ಮುಂಭಾಗದಲ್ಲಿ ದಶಪಥ ಪ್ರವೇಶ ಮಾಡಿದ್ದು, ಅವರಿಗೆ ಕಲಾತಂಡಗಳು ಸ್ವಾಗತ ಕೋರಿದವು. ನಂತರ ಮದ್ದೂರಿನ ಗೆಜ್ಜಲಗೆರೆ ಮೈದಾನದಲ್ಲಿ ಬೃಹತ್ ಸಮಾವೇಶದಲ್ಲಿ ಪಾಲ್ಗೊಂಡರು. ಕಾರ್ಯಕ್ರಮದ ದಿನದಂದು ಇಡೀ ಮಂಡ್ಯ ನಗರಿ ಕೇಸರಿಮಯವಾಗಿ ಕಂಗೊಳಿಸಿತು.

ಚುನಾವಣೆ ಕಾವು– ಕಾಂಗ್ರೆಸ್ ಜಯಭೇರಿ: ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಮಂಡ್ಯ ಹಲವು ಅತಿರಥರ ಪ್ರಚಾರಕ್ಕೆ ಸಾಕ್ಷಿಯಾಯಿತು. ಪ್ರಧಾನಿ ಜೊತೆಗೆ ಗೃಹ ಸಚಿವ ಅಮಿತ್‌ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್‌ ವರಿಷ್ಠರಾದ ರಾಹುಲ್‌, ಪ್ರಿಯಾಂಕಾ ಗಾಂಧಿ, ಜೆಡಿಎಸ್‌ ವರಿಷ್ಠರಾದ ಎಚ್‌.ಡಿ.ದೇವೇಗೌಡ, ಎಚ್‌.ಡಿ. ಕುಮಾರಸ್ವಾಮಿ ಸೇರಿದಂತೆ ವಿವಿಧ ಪಕ್ಷಗಳ ಘಟನಾನುಘಟಿಗಳು ಅಬ್ಬರದ ಪ್ರಚಾರದಲ್ಲಿ ಪಾಲ್ಗೊಂಡರು. ಸಾಕಷ್ಟು ವಾಕ್‌ ಸಮರವು ನಡೆಯಿತು. ಪ್ರಧಾನಿ ಮೋದಿ ಆಗಮನದ ಮುನ್ನಾ ದಿನ ಸಂಸದೆ ಸುಮಲತಾ ಬಿಜೆಪಿ ಬೆಂಬಲಿಸುವುದಾಗಿ ಹೇಳಿದ್ದು, ಚುನಾವಣೆಯಲ್ಲಿ ಕಮಲ ಪಾಳಯದ ಅಭ್ಯರ್ಥಿಗಳ ಪರ ಪ್ರಚಾರವನ್ನೂ ಕೈಗೊಂಡರು.

ಅಂತಿಮವಾಗಿ ಜಿಲ್ಲೆಯಲ್ಲಿ ಕಳೆದ ಚುನಾವಣೆಗೆ ವ್ಯತಿರಿಕ್ತವಾದ ಫಲಿತಾಂಶ ಹೊರಬಿದ್ದಿದ್ದು, ಈ ಬಾರಿ ಇಲ್ಲಿನ ಜನರು ಕಾಂಗ್ರೆಸ್ ಅನ್ನು ಬೆಂಬಲಿಸಿದರು. ನಾಗಮಂಗಲದಿಂದ ಎನ್‌.ಚಲುವರಾಯಸ್ವಾಮಿ, ಮಳವಳ್ಳಿಯಿಂದ ಪಿ.ಎಂ.ನರೇಂದ್ರಸ್ವಾಮಿ, ಶ್ರೀರಂಗಪಟ್ಟಣದಿಂದ ಎ.ಬಿ. ರಮೇಶ ಬಂಡಿಸಿದ್ದೇಗೌಡ, ಮದ್ದೂರಿನಿಂದ ಕದಲೂರು ಉದಯ್‌, ಮಂಡ್ಯದಿಂದ ಗಣಿಗ ರವಿಕುಮಾರ್ ಗೆಲುವಿನ ನಗೆ ಬೀರಿದರು. ಮೇಲುಕೋಟೆ ಕ್ಷೇತ್ರದಲ್ಲಿ ದರ್ಶನ್‌ ಪುಟ್ಟಣ್ಣಯ್ಯ ಗೆಲವು ಸಾಧಿಸಿದ್ದು, ಅವರಿಗೆ ಕಾಂಗ್ರೆಸ್ ಬೆಂಬಲ ನೀಡಿತ್ತು. ಕೆ.ಆರ್. ಪೇಟೆಯಲ್ಲಿ ಮಾತ್ರ ಜೆಡಿಎಸ್‌ನ ಎಚ್‌.ಟಿ. ಮಂಜು ವಿಜಯದ ನಗೆ ಬೀರಿದರು. ಕಾಂಗ್ರೆಸ್‌ ಸರ್ಕಾರದಲ್ಲಿ ಚಲುವರಾಯಸ್ವಾಮಿ ಕೃಷಿ ಸಚಿವರಾಗುವ ಜೊತೆಗೆ ಜಿಲ್ಲೆ ಉಸ್ತುವಾರಿಯ ಹೊಣೆಯನ್ನೂ ಪಡೆದರು.

ನುಡಿಜಾತ್ರೆಯ ಸದ್ದು: ಮಂಡ್ಯದಲ್ಲಿ 2023ರಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಿಗದಿಯಾಗಿದ್ದು, ಸಕ್ಕರೆ ನಾಡಿನಲ್ಲಿ ಅದಕ್ಕಾಗಿ ಸಿದ್ಧತೆ ನಡೆದಿದ್ದವು. ಆದರೆ ಬರಗಾಲದ ಕಾರಣಕ್ಕೆ ಸಮ್ಮೇಳನವನ್ನು ಮುಂದೂಡುವ ನಿರ್ಧಾರವನ್ನು ಸಮಿತಿಯು ಕೈಗೊಂಡಿದ್ದು, ಇನ್ನೂ ದಿನಾಂಕ ನಿಗದಿ ಆಗಿಲ್ಲ.

ಹೆದ್ದಾರಿಯಲ್ಲಿ ಸಾವಿನ ಸರಣಿ: ಬೆಂಗಳೂರು–ಮೈಸೂರು ದಶಪಥ ಹೆದ್ದಾರಿಯು ಮಾರ್ಚ್‌ 12ರಂದು ಉದ್ಘಾಟನೆಗೊಂಡಿತು. ಗಣಂಗೂರು ಟೋಲ್‌ ಕೇಂದ್ರ ಜುಲೈ 1ರಿಂದ ಟೋಲ್ ಸಂಗ್ರಹವನ್ನೂ ಆರಂಭಿಸಿತು. ಅದರ ಬೆನ್ನಲ್ಲೇ ವಾಹನಗಳ ವೇಗವೂ ಹೆಚ್ಚಿದ್ದು, ಅಪಘಾತದಲ್ಲಿ ಹಲವು ಮಂದಿ ಪ್ರಾಣ ಕಳೆದುಕೊಂಡರು.

ಮದ್ದೂರು ಹೊರವಲಯದಲ್ಲಿ ಸಂಭವಿಸಿದ ಅಪಘಾತದಲ್ಲಿ ನಿಯಂತ್ರಣ ತಪ್ಪಿದ ಕ್ಯಾಂಟರ್ ಕಾರಿಗೆ ಡಿಕ್ಕಿಯಾಗಿ ಬೆಂಗಳೂರು ಮೂಲದ ರಘು ಎಂಬುವವರ ಮಗ ಸಾತ್ವಿಕ್ (9) ಹಾಗೂ ಅಕ್ಕನ ಮಗಳು ಸಮನ್ವಯ (9) ಪ್ರಾಣ ಕಳೆದುಕೊಂಡರು.

ಫೆ. 24ರಂದು ಮದ್ದೂರು ಸಮೀಪ ಹೆದ್ದಾರಿಯಲ್ಲಿ ಸಂಭವಿಸಿದ ಅಪಘಾತದಲ್ಲಿ ಕಾರಿನಲ್ಲಿದ್ದ ಕೊಡಗು ಜಿಲ್ಲೆ, ನಾಪೋಕ್ಲು ಬಲಮುರಿ ನಿವಾಸಿಗಳಾದ ಕವಿತಾ (47) ಅವರ ಪುತ್ರ ಆರ್ಯ ಅಯ್ಯಪ್ಪನ್ (14) ಪ್ರಾಣ ತೆತ್ತರು. ಫೆ. 20ರಂದು ಗೆಜ್ಜಲಗೆರೆ ಬಳಿ ಹೆದ್ದಾರಿಯಲ್ಲಿ ಸಂಭವಿಸಿದ ಅಪಘಾತದಲ್ಲಿ ಮಂಡ್ಯದ ಗುತ್ತಲು ಬಡಾವಣೆ ನಿವಾಸಿ, ‘ಪ್ರಜಾವಾಣಿ’ ವಿತರಕ ಫರ್ಹಾದ್‌ ಷರೀಫ್‌ (23) ಹಾಗೂ ಮೈಸೂರಿನ ಕೆಸರೆ ನಿವಾಸಿ ಸಾದಿಕ್‌ ಪಾಷಾ (25) ಮೃತರಾದರು. ಜೂನ್‌ 20ರಂದು ಗೆಜ್ಜಲಗೆರೆ ಬಳಿ ಮಾರುತಿ ಸ್ವಿಫ್ಟ್‌ ಹಾಗೂ ಟಾಟಾ ನೆಕ್ಸಾನ್‌ ಕಾರು ನಡುವೆ ನಡೆದ ಭೀಕರ ಅಪಘಾತದಲ್ಲಿ ಮಾರುತಿ ಸ್ವಿಫ್ಟ್‌ನಲ್ಲಿದ್ದ ಉತ್ತರ ಪ್ರದೇಶದ ನೀರಜ್‌ ಕುಮಾರ್‌ (55), ಅವರ ಪತ್ನಿ ಸೆಲ್ವಿ (50), ಮಂಡ್ಯದ ಕಾರು ಚಾಲಕ ನಿರಂಜನ್‌ (35) ಮೃತಪಟ್ಟರು.

ಮತ್ತೊಂದೆಡೆ, ಬೆಂಗಳೂರು‌–ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲೂ ಸಾವಿನ ಸರಣಿ ಮುಂದುವರಿಯಿತು. ನಾಗಮಂಗಲ ತಾಲ್ಲೂಕಿನ ಬೆಳ್ಳೂರು ಹೋಬಳಿಯ ತಿರುಮಲಾಪುರ ಗ್ರಾಮದ ಸಮೀಪ ಕಾರೊಂದು ಲಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದು ಕಾರಿನಲ್ಲಿದ್ದ ಮಾಗಡಿ ತಾಲ್ಲೂಕಿನ ಲಕ್ಕೇನಹಳ್ಳಿಯ ಹೇಮಂತ್ ಕುಮಾರ್(22), ಶಿವಮೊಗ್ಗದ ಎನ್.ಎಂ.ಧೀರಜ್ (22), ತುಮಕೂರು ಜಿಲ್ಲೆಯ ತುರುವೇಕೆರೆ ತಾಲ್ಲೂಕಿನ ಚಂಡೂರಪುರ ಗ್ರಾಮದ ಪಿ‌.ಯೋಗೇಶ್ ಗೌಡ(23) ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಕಂಪನಹಳ್ಳಿಯ ಕೆ.ಶರತ್ (22) ಸೇರಿದಂತೆ ನಾಲ್ವರು ಪ್ರಾಣ ಬಿಟ್ಟರು.

ಅಕ್ಟೋಬರ್ 14ರಂದು ಶ್ರೀರಂಗಪಟ್ಟಣ ತಾಲ್ಲೂಕಿನ ಗರುಡನ ಉಕ್ಕಡ ಬಳಿ ಶನಿವಾರ ಸರಣಿ ಅಪಘಾತ ಸಂಭವಿಸಿದ್ದು, ಲಾರಿ ಡಿಕ್ಕಿಯಿಂದ ಕಾರು ಹೊತ್ತಿ ಉರಿಯಿತು. ಕಾರಿನಲ್ಲಿದ್ದ ದಂಪತಿ ಗಾಯಗೊಂಡರು.

ನಾಲೆಯಲ್ಲಿ ಮುಂದುವರಿದ ಸಾವಿನ ಸರಣಿ

ಈ ವರ್ಷ ಹಲವು ಅವಘಡಗಳು ಅಪಘಾತಗಳು ಅಗ್ನಿ ದುರಂತಗಳು ಕಾಡಿದವು. ಅದರಲ್ಲೂ ನಾಲೆಗೆ ವಾಹನಗಳು ಉರುಳಿ ಜನರು ಸಾವನ್ನಪ್ಪುವ ದುರಂತಗಳ ಸರಣಿ ಈ ವರ್ಷವೂ ಮುಂದುವರಿಯಿತು. ಜುಲೈ 29ರಂದು ಶ್ರೀರಂಗಪಟ್ಟಣ ತಾಲ್ಲೂಕಿನ ಗಾಮನಹಳ್ಳಿಯಿಂದ ದೊಡ್ಡಮುಲಗೂಡು ಗ್ರಾಮಕ್ಕೆ ತೆರಳುವ ಮಾರ್ಗದ ನಾಲೆಗೆ ಕಾರು ಉರುಳಿ ನಾಲ್ವರು ಮಹಿಳೆಯರು ಮೃತಪಟ್ಟರು. . ನವೆಂಬರ್ 7ರಂದು ಪಾಂಡವಪುರ ಪಟ್ಟಣದ ಹೊರವಲಯದ ಶ್ರೀರಂಗಪಟ್ಟಣ–ಜೇವರ್ಗಿ ರಾಜ್ಯ ಹೆದ್ದಾರಿಯ ಬನಘಟ್ಟ ಗ್ರಾಮದ ಬಳಿ ಕಾರೊಂದು ವಿಶ್ವೇಶ್ವರಯ್ಯ ನಾಲೆಗೆ ಉರುಳಿ ತುಮಕೂರು ಜಿಲ್ಲೆಯ ತಿಪಟೂರು ತಾಲ್ಲೂಕಿನ ನೊಣವಿನಕೆರೆಯ ಐವರು ನಿವಾಸಿಗಳು ಪ್ರಾಣ ಬಿಟ್ಟರು. ಮೈಸೂರಿನ ಬಿಳಿಕೆರೆಯಲ್ಲಿ ನಡೆದ ಸಂಬಂಧಿಕರ ಬೀಗರೂಟ ಮುಗಿಸಿಕೊಂಡು ಇಂಡಿಕಾ ವಿಸ್ಟಾ ಕಾರಿನಲ್ಲಿ ತಿಪಟೂರಿಗೆ ತೆರಳುತ್ತಿದ್ದಾಗ ಈ ದುರಂತ ಸಂಭವಿಸಿತು.

ಮೇ 14ರಂದು ವಿಧಾನಸಭೆ ಚುನಾವಣೆ ಫಲಿತಾಂಶದ ದಿನ ಮಂಡ್ಯದ ಮತ ಎಣಿಕೆ ಕೇಂದ್ರದ ಸಮೀಪ ನೆರೆದ ಜನಸ್ತೋಮ
ಮೇ 14ರಂದು ವಿಧಾನಸಭೆ ಚುನಾವಣೆ ಫಲಿತಾಂಶದ ದಿನ ಮಂಡ್ಯದ ಮತ ಎಣಿಕೆ ಕೇಂದ್ರದ ಸಮೀಪ ನೆರೆದ ಜನಸ್ತೋಮ
ಪಾಂಡವಪುರ ಪಟ್ಟಣದ ಹೊರವಲಯದ ಬನಘಟ್ಟ ಗ್ರಾಮದ ಬಳಿ ವಿಶ್ವೇಶ್ವರಯ್ಯ ನಾಲೆಗೆ ಉರುಳಿದ ಕಾರ್‌ ಅನ್ನು ಮೇಲೆತ್ತುವ ಪ್ರಯತ್ನದಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿ
ಪಾಂಡವಪುರ ಪಟ್ಟಣದ ಹೊರವಲಯದ ಬನಘಟ್ಟ ಗ್ರಾಮದ ಬಳಿ ವಿಶ್ವೇಶ್ವರಯ್ಯ ನಾಲೆಗೆ ಉರುಳಿದ ಕಾರ್‌ ಅನ್ನು ಮೇಲೆತ್ತುವ ಪ್ರಯತ್ನದಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT