ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯ: ಸಾಮಾಜಿಕ ಸಮಸ್ಯೆಗೆ ಸ್ಪಂದಿಸುವ ವೈದ್ಯ ದಂಪತಿ

ಮಂಡ್ಯ ದಸರಾ, ಪಡಸಾಲೆ ಮೂಲಕ ಜನರ ಜೊತೆಗಿರುವ ಡಾ.ಅನಿಲ್‌ ಆನಂದ್‌– ಡಾ. ಯಾಶಿಕಾ ಜೋಡಿ
Published 22 ಅಕ್ಟೋಬರ್ 2023, 4:53 IST
Last Updated 22 ಅಕ್ಟೋಬರ್ 2023, 4:53 IST
ಅಕ್ಷರ ಗಾತ್ರ

ಮಂಡ್ಯ: ಸಂಸ್ಕೃತಿ, ಸಾಮಾಜಿಕ ಸಾಮರಸ್ಯ, ಪರಿಸರ, ಕಲೆ, ಹೋರಾಟ, ಆರೋಗ್ಯ ವಲಯಕ್ಕೆ ತಮ್ಮದೇ ಆದ ಕೊಡುಗೆ ನೀಡುತ್ತಿರುವ ಯುವ ವೈದ್ಯ ದಂಪತಿ ಯುವ ಪೀಳಿಗೆಗೆ ಸ್ಫೂರ್ತಿಯಾಗಿದ್ದಾರೆ. ‘ಮಂಡ್ಯ ಯೂತ್‌ ಗ್ರೂಪ್‌’ ಸಂಸ್ಥೆಯಡಿ ದಶಕದಿಂದಲೂ ವೈವಿಧ್ಯಮಯ ಚಟುವಟಿಕೆ ನಡೆಸುತ್ತಿರುವ ಇವರು ನಿರಂತರ ಜನಜಾಗೃತಿ ಮೂಡಿಸುತ್ತಿದ್ದಾರೆ.

ನಗರದ ಆಸ್ಪತ್ರೆ ರಸ್ತೆಯಲ್ಲಿ ‘ನಿರಾಳ ಮನೋರೋಗ ಮತ್ತು ನರರೋಗ’ ಕ್ಲಿನಿಕ್‌ ನಡೆಸುತ್ತಿರುವ ತಜ್ಞವೈದ್ಯ ಡಾ.ಅನಿಲ್‌ ಆನಂದ್‌, ಮಿಮ್ಸ್‌ ಆಸ್ಪತ್ರೆಯಲ್ಲಿ ಸ್ತ್ರೀರೋಗ ಹಾಗೂ ಪ್ರಸೂತಿ ತಜ್ಞೆಯಾಗಿರುವ ಡಾ.ಎಸ್‌.ಯಾಶಿಕಾ ಅವರು ಜಿಲ್ಲೆಯ ಜನರಿಗೆ ಸೇವಾ ಕಾರ್ಯಕ್ರಮಗಳ ಮೂಲಕ ಚಿರಪರಿಚಿತರಾಗಿದ್ದಾರೆ. ತಮ್ಮ ದುಡಿಮೆಯ ಒಂದು ಭಾಗವನ್ನು ಸಾಮಾಜಿಕ ಚಟುವಟಿಕೆಗಳಿಗೆ ಬಳಸುತ್ತಿರುವ ಅವರು ತಮ್ಮ ವೈದ್ಯ ವೃತ್ತಿಯಾಚೆ ಸೇವೆಯಲ್ಲಿ ಸಂತಸ ಕಂಡಿದ್ದಾರೆ.

ಮೈಸೂರು, ಶ್ರೀರಂಗಪಟ್ಟಣ ದಸರಾ ಜೊತೆಜೊತೆಗೆ ‘ಮಂಡ್ಯ ದಸರಾ’ ಪರಂಪರೆ ಆರಂಭಿಸಿದ ಅನಿಲ್‌ ಆನಂದ್‌, ಸಕ್ಕರೆ ನಗರಿಯ ಜನರ ಮನಸೂರೆಗೊಂಡಿದ್ದಾರೆ. 25ಕ್ಕೂ ಹೆಚ್ಚು ಕಲಾ ತಂಡಗಳ ಮೆರವಣಿಗೆಯ ಮೂಲಕ ದಸರಾ ಆಚರಿಸುತ್ತಾ ಬಂದಿರುವ ಇವರು ಪ್ರತಿ ವರ್ಷ ಹಲವು ವಿಶೇಷಗಳೊಂದಿಗೆ ಗಮನ ಸೆಳೆದಿದ್ದಾರೆ.

‘ಯಾನ’ ಯುವಜನೋತ್ಸವದ ಆಚರಣೆಯ ಮೂಲಕ ಜಿಲ್ಲೆಯ ಯುವಜನರನ್ನು ಸಂಘಟನೆ ಮಾಡುವ ಕೆಲಸ ಮಾಡುತ್ತಾ ಬಂದಿದ್ದಾರೆ. ಹಿರಿಯ ರಾಜಕಾರಣಿಗಳು, ಖ್ಯಾತನಾಮ ಸಿನಿಮಾ ನಟ–ನಟಿಯರನ್ನು ಒಂದುಗೂಡಿಸಿ ಚಿಂತನ–ಮಂಥನ, ಸಾಂಸ್ಕೃತಿಕ ಸಂಭ್ರಮ ಆಚರಣೆ ಮಾಡುತ್ತಿದ್ದಾರೆ. ‘ಬಹುರುಚಿ ಮೇಳ’ ಕಾರ್ಯಕ್ರಮದ ಮೂಲಕ ವಿವಿಧ ಸಂಸ್ಕೃತಿಯ ಆಹಾರದ ರುಚಿಯನ್ನು ಮಂಡ್ಯ ಜನರಿಗೆ ಉಣಬಡಿಸಿದ್ದಾರೆ.

ಯುವಜನ ಸಂಘಟನೆಯ ಮೂಲಕ ಸಾಮಾಜಿಕ ಸಮಸ್ಯೆಗಳಿಗೆ ಸ್ಪಂದಿಸುತ್ತಿರುವ ಈ ದಂಪತಿ ಮಂಡ್ಯ ಯೂತ್‌ ಗ್ರೂಪ್‌ ಮೂಲಕ ಹೋರಾಟಗಾರರಾಗಿಯೂ ಗುರುತಿಸಿಕೊಂಡಿದ್ದಾರೆ. 2016ರಲ್ಲಿ ಕಾವೇರಿ ನ್ಯಾಯಾಧೀಕರಣದ ತೀರ್ಪು ಬಂದಾಗ ದೆಹಲಿಯ ದೆಹಲಿಯ ಜಂತರ್‌–ಮಂತರ್‌ನಲ್ಲಿ ಗ್ರೂಪ್‌ ಸದಸ್ಯರು ಪ್ರತಿಭಟನೆ ದಾಖಲು ಮಾಡಿದ್ದಾರೆ. ಮಹಿಳೆ, ಮಕ್ಕಳ ಮೇಲೆ ದೌರ್ಜನ್ಯ ನಡೆದಾಗ ಅವುಗಳನ್ನು ಖಂಡಿಸಿ ಬೀದಿಗಿಳಿದಿದ್ದಾರೆ. ಪಂಜು, ಮೋಂಬತ್ತಿ ಮೆರವಣಿಗೆ ನಡೆಸಿದ್ದಾರೆ.

ಆರೋಗ್ಯ ಜಾಗೃತಿ:

ಆರೋಗ್ಯ ಸೇವೆಯಲ್ಲಿಯೂ ನಿರಂತರವಾಗಿ ತೊಡಗಿಸಿಕೊಂಡು ಬಂದಿದ್ದಾರೆ. ಅವರು ನಡೆಸುವ ‘ಪಡಸಾಲೆ’ ಆರೋಗ್ಯ ಶಿಬಿರ ಜಿಲ್ಲೆಯಾದ್ಯಂತ ಹೆಸರುವಾಸಿಯಾಗಿದೆ. ವೈದ್ಯರ ತಂಡದೊಂದಿಗೆ ಹಳ್ಳಿಗಳಿಗೆ ತೆರಳುವ ಅವರು ಆರೋಗ್ಯ ತಪಾಸಣೆ ನಡೆಸಿ ಲಕ್ಷಾಂತರ ರೂಪಾಯಿ ಮೌಲ್ಯದ ಔಷಧಿಯನ್ನು ಉಚಿತವಾಗಿ ವಿತರಣೆ ಮಾಡಿದ್ದಾರೆ. ಇಲ್ಲಿಯವರೆಗೆ 110ಕ್ಕೂ ಹೆಚ್ಚು ಶಿಬಿರ ಆಯೋಜಿಸಿದ್ದಾರೆ.

ಡಾ.ರಾಜ್‌ ನೇತ್ರ ಸಂಗ್ರಹಣೆ ಘಟಕದ ಮೂಲಕ ನೇತ್ರದಾನ ಜಾಗೃತಿ ಮೂಡಿಸುತ್ತಿರುವ ಇವರು ಇಲ್ಲಿಯವರೆಗೆ 76 ಮಂದಿಗೆ ಬೆಳಕಾಗಿದ್ದಾರೆ. ದೇಹದಾನ ವಾಗ್ಧಾನ, ಮಾದಕ ವ್ಯಸನಗಳ ವಿರುದ್ಧ ಜಾಗೃತಿ ಜಾಥಾ ಮುಂತಾದ ಆರೋಗ್ಯ ಜಾಗೃತಿ ಕಾರ್ಯಕ್ರಮಗಳ ಮೂಲಕ ಜನರಿಗೆ ಹತ್ತಿರವಾಗಿದ್ದಾರೆ.

ಗಣೇಶೋತ್ಸವದ ವೇಳೆ ಮಣ್ಣಿನ ಗಣಪತಿ ಅರಿವು, ಕನ್ನಡ ರಾಜ್ಯೋತ್ಸವ ಆಚರಣೆ, ಸ್ವಾತಂತ್ರ್ಯೋತ್ಸವದ ವೇಳೆ 750 ಅಡಿ ಉದ್ದದ ರಾಷ್ಟ್ರಧ್ವಜ ಮೆರವಣಿಗೆ, ದೀಪಾವಳಿ ವೇಳೆ ‘ಪಟಾಕಿ ಬಿಟ್ಟಾಕಿ’ ಅಭಿಯಾನ ಕಾರ್ಯಕ್ರಮ ಆಯೋಜಿಸುತ್ತಿದ್ದಾರೆ.

ಪರಿಸರ ಜಾಗೃತಿ ಕುರಿತಂತೆ ಶಾಲಾ ಕಾಲೇಜುಗಳಲ್ಲಿ ಉಪನ್ಯಾಸ, ಓಜೋನ್‌ ದಿನದ ಕಾರ್ಯಕ್ರಮ ನಡೆಸಿದ್ದಾರೆ. ನಗರದ ವಿವಿಧೆಡೆ ನೂರಾರು ಸಸಿ ನೆಟ್ಟು ಪೋಷಣೆ ಮಾಡಿದ್ದಾರೆ, ಸಸಿಗಳಿಗೆ ಕವಿ, ರಾಷ್ಟ್ರನಾಯಕರ ನಾಮಕರಣ ಮಾಡಿದ್ದಾರೆ, ನೀರು ಮಿತಬಳಕೆಯ ಬಗ್ಗೆ ಜಾಗೃತಿಯಲ್ಲಿ ತೊಡಗಿದ್ದಾರೆ.

ಅನಿಲ್‌ ಆನಂದ್‌ ಅವರು ಮದ್ದೂರು ತಾಲ್ಲೂಕು ಆಲೂರುದೊಡ್ಡಿ ಮೂಲದವರು. ಲೋಕೋಪಯೋಗಿ ಇಲಾಖೆಯಲ್ಲಿ ಲೆಕ್ಕಪರಿಶೋಧಕರಾಗಿ ನಿವೃತ್ತರಾಗಿರುವ ಆನಂದ್‌, ನಿವೃತ್ತ ಶಿಕ್ಷಕಿ ಜಯಮ್ಮ ದಂಪತಿಯ ಪುತ್ರ. ಮಣಿಪಾಲ್‌ ವೈದ್ಯಕೀಯ ಆಸ್ಪತ್ರೆಯಲ್ಲಿ ಮನೋರೋಗ ವಿಜ್ಞಾನ ಕಲಿಯುವಾಗಲೇ ಸಾಮಾಜಿಕ ಸಮಸ್ಯೆಗಳಗೆ ಸ್ಪಂದಿಸುವ ಗುಣ ಬೆಳೆಸಿಕೊಂಡ ಅನಿಲ್‌ ಆನಂದ್‌ ತಮ್ಮ ಪತ್ನಿ ಹಾಗೂ ತಮ್ಮ ತಂಡದ ಜೊತೆಗೂಡಿ ಸೇವಾ ಕಾರ್ಯಗಳಲ್ಲಿ ಮುನ್ನಡೆಯುತ್ತಿದ್ದಾರೆ.

‘ಪ್ರತಿ ಸಾಮಾಜಿಕ ಸಮಸ್ಯೆಯೂ ರಾಜಕೀಯ ಸಂಬಂಧ ಹೊಂದಿರುತ್ತದೆ. ಅದನ್ನು ಮೀರಿ ಧ್ವನಿ ಎತ್ತುವುದು ಸಮಾಜದ ಪ್ರತಿಯೊಬ್ಬರ ಕರ್ತವ್ಯವಾಗಬೇಕು. ಮುಕ್ತ ನೋಟದೊಂದಿಗೆ ಎಲ್ಲರ ಜೊತೆಗೂಡಿ ಹೆಜ್ಜೆ ಇಡಬೇಕು. ಇದೇ ಮಂಡ್ಯ ಯೂತ್‌ ಗ್ರೂಪ್‌ ಉದ್ದೇಶವಾಗಿದೆ’ ಎಂದು ಡಾ.ಅನಿಲ್‌ ಆನಂದ್‌ ಹೇಳಿದರು. ಅವರ ಸಂಪರ್ಕ ಸಂಖ್ಯೆ; 98867731400.

ಡಾ.ಅನಿಲ್‌ ಆನಂದ್‌ ನೇತೃತ್ವದಲ್ಲಿ ನಡೆಯುತ್ತಿರುವ ಕಾವೇರಿ ಹೋರಾಟ
ಡಾ.ಅನಿಲ್‌ ಆನಂದ್‌ ನೇತೃತ್ವದಲ್ಲಿ ನಡೆಯುತ್ತಿರುವ ಕಾವೇರಿ ಹೋರಾಟ

ಕಾವೇರಿ ಹೋರಾಟಕ್ಕೆ ಶಕ್ತಿ

ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ಖಂಡಿಸಿ ಜಿಲ್ಲೆಯಲ್ಲಿ ನಡೆಯುತ್ತಿರುವ ಹೋರಾಟದಲ್ಲಿ ಮಂಡ್ಯ ಯೂತ್‌ ಗ್ರೂಪ್‌ ಕೂಡ ತೊಡಗಿಸಿಕೊಂಡಿದೆ. ಕಾವೇರಿ ಜನಾಂದೋಲನ ಖಂಡನೀಯ ನಡಿಗೆ  ಪಂಜಿನ ಮೆರವಣಿಗೆ ಮೂಲಕ ಜನಜಾಗೃತಿ ಮೂಡಿಸುತ್ತಿದೆ. ಯುವಕರ ತಂಡದೊಂದಿಗೆ ಹೋರಾಟ ನಡೆಸುತ್ತಿರುವ ಗ್ರೂಪ್‌ ಸದಸ್ಯರು ಬರ ಪರಿಸ್ಥಿತಿಯಲ್ಲಿ ರೈತರ ಹಿತ ಕಾಯುವಂತೆ ಒತ್ತಾಯಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT