ಮಂಡ್ಯ: ಮೈಷುಗರ್ ಕಾರ್ಖಾನೆಯನ್ನು ಸರ್ಕಾರಿ ಸ್ವಾಮ್ಯದಲ್ಲಿಯೇ ಆರಂಭಿಸಬೇಕು ಎಂದು ಆಗ್ರಹಿಸಿ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ, ಪ್ರಗತಿಪರ ಸಂಘಟನೆ ಸದಸ್ಯರು ಹಾಗೂ ಜನಪ್ರತಿನಿಧಿಗಳ ನೇತೃತ್ವದಲ್ಲಿ ಸೋಮವಾರ ನಗರದ ಸರ್ ಎಂ.ವಿಶ್ವಶ್ವರಯ್ಯ ಪ್ರತಿಮೆ ಎದುರು ಅನಿರ್ದಿಷ್ಟಾವಧಿ ಧರಣಿ ಆರಂಭಗೊಂಡಿತು.
ಜಿಲ್ಲೆಯ ಐತಿಹಾಸಿಕ ಕಾರ್ಖಾನೆ ಸರ್ಕಾರಿ ಸ್ವಾಮ್ಯದಲ್ಲಿ ಪ್ರಾರಂಭಗೊಳಿಸುವ ಆದೇಶ ಹೊರಡಿಸಬೇಕು. ಕಬ್ಬು ಸಂಶೋಧನಾ ಕೇಂದ್ರವನ್ನು ಮಂಡ್ಯದಿಂದ ಹಾಗೂ ಸಕ್ಕರೆ ಆಯುಕ್ತ ಕಚೇರಿಯನ್ನು ಬೆಂಗಳೂರಿನಿಂದ ಬೆಳಗಾವಿಗೆ ಸ್ಥಳಾಂತರಿಸುವುದನ್ನು ನಿಲ್ಲಿಸಬೇಕು. ಮೈಷುಗರ್ ಕಾರ್ಖಾನೆಯನ್ನು ಯಾವುದೇ ಕಾರಣಕ್ಕೆ ಖಾಸಗೀಕರಣಗೊಳಿಸಬಾರದು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಜೆಡಿಎಸ್ ಮತ್ತು ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಕಾರ್ಖಾನೆ ಪ್ರಾರಂಭಿಸಲು ₹ 100 ಕೋಟಿ ಮೀಸಲಿಡಲಾಗಿತ್ತು. ಆಧುನಿಕ ಹೊಸ ಕಾರ್ಖಾನೆ ತೆರೆಯಲು ₹ 400 ಕೋಟಿ ಅನುದಾನವನ್ನು ಬಜೆಟ್‌ನಲ್ಲಿ ಅಂಗೀಕಾರ ಮಾಡಲಾಗಿತ್ತು. ನಂತರ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಇದನ್ನು ಕಾರ್ಯಗತ ಮಾಡದೇ ಕಾರ್ಖಾನೆಯನ್ನು 40 ವರ್ಷಕ್ಕೆ ಗುತ್ತಿಗೆ ನೀಡಲು ನಿರ್ಧರಿಸಿ ಟೆಂಡರ್ ಪ್ರಕ್ರಿಯೆ ಮಾಡಿದರು. ಇದನ್ನು ಜಿಲ್ಲೆಯ ರೈತರು ಮತ್ತು ರೈತ ಹಿತರಕ್ಷಣಾ ಸಮಿತಿ ವಿರೋಧಿಸುತ್ತಲೇ ಬಂದಿದ್ದರೂ ಸರ್ಕಾರ ಬೇಜವಾಬ್ದಾರಿತನದಿಂದ ವರ್ತಿಸುತ್ತಿದೆ. ಈವರೆಗೂ ಕಾರ್ಖಾನೆಯನ್ನು ಸರ್ಕಾರಿ ಸ್ವಾಮ್ಯದಲ್ಲಿ ಆರಂಭಿಸುವ ಬಗ್ಗೆ ಯಾವುದೇ ಮಾತುಗಳನ್ನಾಡಿಲ್ಲ ಎಂದು ಆರೋಪಿಸಿದರು.
ಮೈಷುಗರ್ ಕಾರ್ಖಾನೆಯನ್ನು ಬಿಳಿ ಆನೆ ಎಂದು ಬಿಂಬಿಸಿ ಅದನ್ನು ನಡೆಸಲು ಸಾಧ್ಯವಿಲ್ಲ ಎಂದು ಬಿಜೆಪಿ ಮುಖಂಡರು ಹೇಳುತ್ತಿದ್ದಾರೆ. ಸರ್ಕಾರಿ ಸ್ವಾಮ್ಯದ ಕಾರ್ಖಾನೆಯನ್ನು ಉಳಿಸಿಕೊಳ್ಳುವ ಇಚ್ಛಾಶಕ್ತಿ ಸಚಿವರುಗಳಿಗೆ ಇಲ್ಲವಾಗಿದೆ. ಆದರೆ, ಜಿಲ್ಲೆಯ ಜನರು ಸರ್ಕಾರಿ ಸ್ವಾಮ್ಯದಲ್ಲಿಯೇ ಪ್ರಾರಂಭಿಸಬೇಕು ಎಂಬ ಹೋರಾಟಕ್ಕೆ ಬೆಂಬಲಿಸಿದ್ದಾರೆ. ಸರ್ಕಾರ ಜನಾಭಿಪ್ರಾಯಕ್ಕೆ ಮನ್ನಣೆ ನೀಡಬೇಕು ಎಂದು ಒತ್ತಾಯಿಸಿದರು.
ಮಂಡ್ಯ ಸಕ್ಕರೆ ಕಾರ್ಖಾನೆ ಬಿಳಿ ಆನೆ ಅಲ್ಲ, ಹಲವು ದಶಕಗಳ ಕಾಲದ ತನ್ನ ಅಸ್ತಿತ್ವದಲ್ಲಿ ರೈತರಿಗೆ, ಸರ್ಕಾರಗಳಿಗೆ ಅನೇಕ ಸಹಾಯ ಮಾಡಿಕೊಟ್ಟಿದೆ. ಕಾರ್ಖಾನೆ ಈಗಲೂ ಸುಸ್ತಿತಿಯಲ್ಲಿದ್ದು, ಒಳ್ಳೆಯ ಅಧಿಕಾರಿಗಳನ್ನು ನಿಯೋಜನೆ ಮಾಡಿದರೆ ಕಾರ್ಖಾನೆಯನ್ನು ಈಗಲೂ ಆರಂಭಿಸಬಹುದು. ಬೆಲೆಬಾಳುವ ಸಾವಿರಾರು ಕೋಟಿ ಆಸ್ತಿಯನ್ನು ಉಳಿಸಲು ಸರ್ಕಾರಿ ಸ್ವಾಮ್ಯದಲ್ಲಿಯೇ ನಡೆಸಬೇಕು ಎಂದು ಆಗ್ರಹ ಪಡಿಸಿದರು.
ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯ ಸಂಘಟನಾ ಕಾರ್ಯದರ್ಶಿ ಸುನಂದಾ ಜಯರಾಮ್ ಮಾತನಾಡಿ ‘2015 ರಲ್ಲಿ ತಜ್ಞರ ಸಮಿತಿಯು ಮೈಷುಗರ್ ಕಾರ್ಖಾನೆಯ ಬಗ್ಗೆ ವರದಿ ನೀಡಿದೆ. ಆ ವರದಿಯ ಮೌಲ್ಯಮಾಪನವನ್ನು ಸರ್ಕಾರ ಪ್ರಕಟಿಸಬೇಕು. ರಾಜ್ಯದಲ್ಲಿ 66 ಸಕ್ಕರೆ ಕಾರ್ಖಾನೆಗಳಿವೆ. ಇದರಲ್ಲಿ ಏಕೈಕ ಸರ್ಕಾರಿ ಸ್ವಾಮ್ಯದ ಸಕ್ಕರೆ ಕಾರ್ಖಾನೆ ಎಂದರೆ ಮೈಷುಗರ್ ಕಾರ್ಖಾನೆ ಆಗಿದೆ. ಸಕ್ಕರೆ ಲಾಭಿಗೆ ಸರ್ಕಾರ ಮಣಿದಿದಿಯಾ ಎಂಬ ಅನುಮಾನ ದಟ್ಟವಾಗಿದೆ’ ಎಂದು ಆಕ್ರೊಶ ವ್ಯಕ್ತಪಡಿಸಿದರು.
ಶಾಸಕರಾದ ಎಂ.ಶ್ರೀನಿವಾಸ್, ಕೆ.ಟಿ.ಶ್ರೀಕಂಠೇಗೌಡ, ಅಪ್ಪಾಜಿಗೌಡ, ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ.ಬೋರಯ್ಯ, ಅಖಂಡ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಸುಧೀರ್ ಕುಮಾರ್, ಸಿಐಟಿಯು ಜಿಲ್ಲಾ ಘಟಕದ ಅಧ್ಯಕ್ಷ ಪುಟ್ಟಮಾದು, ಪ್ರಧಾನ ಕಾರ್ಯದರ್ಶಿ ಸಿ.ಕುಮಾರಿ, ಕಬ್ಬು ಬೆಳೆಗಾರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕೃಷ್ಣ ಇದ್ದರು.
*******
ಅನುದಾನಕ್ಕೆ ಲೆಕ್ಕವೇ ಇಲ್ಲ
ವಿವಿಧ ಸರ್ಕಾರಗಳು ₹ 522 ಕೋಟಿ ಹಣವನ್ನು ಕಾರ್ಖಾನೆ ಪುನಶ್ಚೇತನಕ್ಕೆ ನೀಡಿವೆ. ಅದರಲ್ಲಿ ಕೇವಲ ₹ 56 ಕೋಟಿಗೆ ಮಾತ್ರ ಲೆಕ್ಕವಿದ್ದು ಉಳಿದ ಹಣಕ್ಕೆ ಲೆಕ್ಕ ಇಲ್ಲವಾಗಿದೆ. ಉಳಿದ ಹಣ ಏನಾಯಿತು ಎಂಬ ಪ್ರಶ್ನೆಗೆ ಉತ್ತರ ಸಿಗದಾಗಿದೆ ಎಂದು ಪ್ರತಿಭಟನಾಕಾರರು ತಿಳಿಸಿದರು.
ಹಲವು ಪಕ್ಷಗಳ ಮುಖಂಡರು ನಾವು ಹಣಕೊಟ್ಟಿದ್ದೇವೆ ಎಂದು ಹೇಳುತ್ತಿದ್ದಾರೆ. ದಕ್ಷ ಅಧಿಕಾರಿಗಳನ್ನು ಕಾರ್ಖಾನೆಗೆ ನೇಮಿಸುವುದನ್ನೇ ಮರೆತಂತಿದೆ. ಇನ್ನಾದರೂ ಪ್ರಾಮಾಣಿಕ ಹಾಗೂ ದಕ್ಷ ಅಧಿಕಾರಿಗಳನ್ನ ಸರ್ಕಾರ ನೇಮಿಸಿ ಪಾರದರ್ಶಕವಾಗಿ ಕಾರ್ಖಾನೆ ಆರಂಭಿಸಲು ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಧರಣಿ ತೀವ್ರಗೊಳಿಲಾಗುವುದು ಎಂದು ಎಚ್ಚರಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.