ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಯುಧಪೂಜೆ: ಬೂದುಗುಂಬಳಕ್ಕೆ ಬೇಡಿಕೆ

ಮುಂದುವರಿದ ಮಳೆ; ನಿಯಂತ್ರಣಕ್ಕೆ ಬಾರದ ಟೊಮೆಟೊ ಬೆಲೆ, ಗ್ರಾಹಕರ ಜೇಬಿಗೆ ಭಾರ
Last Updated 12 ಅಕ್ಟೋಬರ್ 2021, 12:44 IST
ಅಕ್ಷರ ಗಾತ್ರ

ಮಂಡ್ಯ: ಆಯುಧಪೂಜೆ ಅಂಗವಾಗಿ ನಗರದ ವಿವಿಧೆಡೆ ಬೂದುಗುಂಬಳ ಮಾರಾಟ ಭರ್ಜರಿಯಾಗಿ ನಡೆಯುತ್ತಿದೆ. ಪ್ರಮುಖ ವೃತ್ತಗಳಲ್ಲಿ, ರಸ್ತೆ ಬದಿಯಲ್ಲಿ ವ್ಯಾಪಾರಿಗಳು ಬೂದುಗುಂಬಳ ಮಾರಾಟ ಮಾಡುತ್ತಿರುವ ದೃಶ್ಯಗಳು ಸಾಮಾನ್ಯವಾಗಿವೆ.

ಆಯುಧಪೂಜೆ ದಿನ ಬೆಲೆ ಹೆಚ್ಚಾಗಬಹುದು ಎಂಬ ಉದ್ದೇಶದಿಂದ ಜನರು ಮಂಗಳವಾರವೇ ಖರೀದಿ ಮಾಡಿ ಇಟ್ಟುಕೊಳ್ಳುತ್ತಿದ್ದಾರೆ. ಸ್ಥಳೀಯ ಹಾಗೂ ಹೊರಜಿಲ್ಲೆಗಳಿಂದ ಬಂದಿರುವ ಅಪಾರ ಪ್ರಮಾಣದ ಬೂದುಗುಂಬಳ ಹೆಚ್ಚಾಗಿ ಮಾರಾಟವಾಗುತ್ತಿದೆ. ಮಳೆಯಾಶ್ರಿತ ಪ್ರದೇಶವಾಗಿರುವ ನಾಗಮಂಗಲ ಹಾಗೂ ಕೆ.ಆರ್‌.ಪೇಟೆ ತಾಲ್ಲೂಕುಗಳಲ್ಲಿ ಹೆಚ್ಚು ಬೂದುಗುಂಬಳ ಬೆಳೆದಿದ್ದು ಅಲ್ಲಿಂದ ತಂದು ವರ್ತಕರು ಮಾರಾಟ ಮಾಡುತ್ತಿದ್ದಾರೆ. ಮೈಸೂರು, ಬೆಂಗಳೂರಿನಿಂದ ಬಂದ ಕಾಯಿಯನ್ನೂ ಮಾರಾಟ ಮಾಡಲಾಗುತ್ತಿದೆ.

ಕೆಲವಡೆ ರೈತರೇ ನೇರವಾಗಿ ಆಟೊದಲ್ಲಿ ತಂದು ಮಾರಾಟ ಮಾಡುತ್ತಿದ್ದಾರೆ. ವರ್ತಕರು ಕೆ.ಜಿ ಬೂದುಗುಂಬಳಕ್ಕೆ ₹ 30ಕ್ಕೆ ಮಾರಾಟ ಮಾಡುತ್ತಿದ್ದಾರೆ. ಒಂದು ಕಾಯಿ 3–4 ಕೆ.ಜಿ ಬರುತ್ತಿದ್ದು ಉಂಡೆ ಕಾಯಿಯನ್ನು ₹ 100ಕ್ಕೆ ಮಾರಾಟ ಮಾಡುತ್ತಿದ್ದಾರೆ. ರೈತರೇ ನೇರವಾಗಿ ಮಾರಾಟ ಮಾಡುತ್ತಿರುವ ಕಡೆಯಲ್ಲಿ ₹ 60–80ಕ್ಕೆ ಮಾರಾಟ ಮಾಡಲಾಗುತ್ತಿದೆ. ಹೆಚ್ಚಿನವರು ಉಂಡೆ ಲೆಕ್ಕದಲ್ಲಿ ಬೂದುಗುಂಬಳ ಖರೀದಿ ಮಾಡುತ್ತಿದ್ದಾರೆ.

ಮನೆ, ಅಂಗಡಿ, ವಾಹನ ಪೂಜೆಗೆ ಜನರು ಮುಖ್ಯವಾಗಿ ಬೂದುಗುಂಬಳ ಬಳಸುತ್ತಾರೆ. ಧಾರ್ಮಿಕ ಹಿನ್ನಲೆ ಹೊಂದಿರುವ ಬೂದುಗುಂಬುಳವನ್ನು ಪೂಜೆಗೆ ಪವಿತ್ರ ಎಂದೇ ಪರಿಗಣಿಸಲಾಗುತ್ತದೆ. ವರ್ತಕರಿಗೆ ಇದು ಸರಿಯಾದ ಸಮಯವಾಗಿದ್ದು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ.

‘ಸಾಮಾನ್ಯವಾಗಿ ತರಕಾರಿ ವ್ಯಾಪಾರ ಮಾಡುವ ನಾನು ಆಯುಧಪೂಜೆ ವೇಳೆ ಬೂದುಗುಂಬಳವನ್ನು ಮಾತ್ರ ಮಾರುತ್ತೇನೆ. ನಾಗಮಂಗಲ ರೈತರಿಂದ ತಂದು ಮಾರಾಟ ಮಾಡುತ್ತಿದ್ದೇನೆ’ ಎಂದು ವರ್ತಕ ಸುರೇಶ್‌ ತಿಳಿಸಿದರು.

ಇಳಿಯದ ಟೊಮೆಟೊ ಬೆಲೆ: ಕಳೆದ ಮೂರು ದಿನಗಳಿಂದ ಧಾರಾಕಾರ ಮಳೆ ಸುರಿಯುತ್ತಿದ್ದು ಮಾರುಕಟ್ಟೆಗೆ ಟೊಮೆಟೊ ಬರುತ್ತಿಲ್ಲ. ವಿವಿಧೆಡೆ ಟೊಮೆಟೊ ಗದ್ದೆಯಲ್ಲೇ ಕೊಳೆತು ಹೋಗುತ್ತಿದ್ದು ರೈತರು ನಷ್ಟ ಅನುಭವಿಸುತ್ತಿದ್ದಾರೆ. ಇದರಿಂದಾಗಿ ಮಾರುಕಟ್ಟೆಯಲ್ಲಿ ಟೊಮೆಟೊ ಬೆಲೆ ಕೆ.ಜಿಗೆ ₹ 60ಕ್ಕೆ ತಲುಪಿದೆ. ಹೆಚ್ಚು ಹಣ ಕೊಟ್ಟರೂ ಉತ್ತಮ ಗುಣಮಟ್ಟದ ಟೊಮೆಟೊ ದೊರೆಯದಾಗಿದೆ. ಸಿಹಿ ಟೊಮೆಟೊ ಕೆ.ಜಿಗೆ ₹ 90ರವರೆಗೆ ಮಾರಾಟ ಮಾಡಲಾಗುತ್ತಿದೆ. ಟೊಮೆಟೊ ಬೆಲೆ ಕೇಳಿದ ಜನರು ಬೆಚ್ಚಿ ಬೀಳುತ್ತಿದ್ದಾರೆ.

ಮಳೆಯಿಂದಾಗಿ ಈರುಳಿ ಬೆಲೆ ಕೆ.ಜಿಗೆ ₹ 50ಕ್ಕೆ ಏರಿಕೆಯಾಗಿದೆ. ಕೆ.ಜಿ ನುಗ್ಗೆಕಾಯಿ ಬೆಲೆ ₹ 120ಕ್ಕೆ ತಲುಪಿದೆ. ಜೊತೆಗೆ ಬೀನ್ಸ್‌, ಕ್ಯಾರೆಟ್‌, ಬೀಟರೂಟ್‌, ದೊಣ ಮೆಣಸಿನಕಾಯಿ ಕೆ.ಜಿಗೆ ₹ 60ರಂತೆ ಮಾರಾಟ ಮಾಡಲಾಗುತ್ತಿದೆ. ಗೆಡ್ಡೆಕೋಸು, ಸುವರ್ಣಗಡ್ಡೆ ₹ 40ರಂತೆ ಮಾರಾಟ ಮಾಡಲಾಗುತ್ತಿದೆ. ಸೀಮೆ ಬದನೆ ₹ 30, ಮೂಲಂಗಿ ₹ 20, ಅವರೆಕಾಯಿ ₹ 50ಕ್ಕೆ ಮಾರಾಟ ಮಾಡಲಾಗುತ್ತಿದೆ.

ಸೊಪ್ಪಿನ ಬೆಲೆಯೂ ಕೊಂಚ ಏರಿಕೆಯಾಗಿದೆ ನಾಟಿ ಕೊತ್ತಂಬರಿ ಕಟ್ಟಿಗೆ ₹ 20, ನಾಟಿ ಕೊತ್ತಂಬರಿ, ಪಾಲಕ್‌, ಸಬ್ಬಸಿಗೆ ₹ 10, ಮೆಂತೆ ₹ 20, ಕೀರೆ, ದಂಟು, ₹ 10ರಂತೆ ಮಾರಾಟ ಮಾಡಲಾಗುತ್ತಿದೆ. ಹಬ್ಬಗಳ ಋತು ಆರಂಭವಾಗಿರುವ ಕಾರಣ ಹಣ್ಣಿನ ಬೆಲೆಯಲ್ಲೂ ಏರಿಕೆ ಕಂಡುಬಂದಿದೆ. ಕೆ.ಜಿ ಸೇಬು ₹ 140, ದಾಳಿಂಬೆ ₹ 180, ಮೋಸಂಬಿ ₹ 70, ಕಪ್ಪು ದ್ರಾಕ್ಷಿ ₹ 140, ಸಪೋಟ ₹ 60, ಏಲಕ್ಕಿ ಬಾಳೆ ₹ 50, ಪಚ್ಚಬಾಳೆ ₹ 30, ಕಿತ್ತಳೆ ₹ 80ರಂತೆ ಮಾರಾಟ ಮಾಡಲಾಗುತ್ತಿದೆ.

*******

ನಾಳೆಗೆ ಹೂವು ದುಬಾರಿ

ಮಂಗಳವಾರ ಹೂವಿನ ಬೆಲೆಯಲ್ಲಿ ಯಾವುದೇ ವ್ಯತ್ಯಾಸ ಇರಲಿಲ್ಲ. ಆದರೆ ಗುರುವಾರ ಆಯುಧ ಪೂಜೆ ಇದ್ದು ಹೂವಿನ ಬೆಲೆ ಹೆಚ್ಚಳವಾಗುವ ಸಾಧ್ಯತೆ ಇದೆ. ವಾಹನಗಳಿಗೆ ಹೂಗಳಿಂದ ಅಲಂಕಾರ ಮಾಡುವ ಕಾರಣ ಬೆಲೆ ಹೆಚ್ಚಳವಾಗುವ ಸಾಧ್ಯತೆ ಇದೆ. ಮಂಗಳವಾರ ಮಾರುಕಟ್ಟೆಯಲ್ಲಿ ಮಾರು ಮಲ್ಲಿಗೆ ₹ 100, ಕಾಕರ ₹ 80, ಕನಕಾಂಬರ ₹ 100, ಸೇವಂತಿಗೆ ₹ 50ರಂತೆ ಮಾರಾಟವಾಗುತ್ತಿದ್ದವು.

‘ಹಳ್ಳಿಗಳಲ್ಲಿ ಹೂವಿನ ಕಟಾವು ನಡೆಯುತ್ತಿದ್ದು ಮಾರುಕಟ್ಟೆಗೆ ಹರಿದು ಬರಲಿದೆ. ಮಾರು ಮಲ್ಲಿಗೆ ₹ 200ರವರೆಗೆ, ಸೇವಂತಿಗೆ ₹ 100ವರೆಗೆ ಹೆಚ್ಚಾಗುವ ಸಾಧ್ಯತೆ ಇದೆ’ ಎಂದು ಹೂವಿನ ವ್ಯಾಪಾರಿ ರಮೇಶ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT