ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯ– ಪಾಂಡವಪುರ ಮಾರ್ಗ; ಅಪಾಯದ ನಡುವೆ ಪ್ರಯಾಣ

ತೀವ್ರ ಹದಗೆಟ್ಟ ರಸ್ತೆ; ಜೀವ ಕೈಯಲ್ಲಿಡಿದು ಓಡಾಡುವ ವಾಹನ ಚಾಲಕರು, ಸಾರ್ವಜನಿಕರ ಆಕ್ರೋಶ
Last Updated 16 ಜನವರಿ 2023, 22:00 IST
ಅಕ್ಷರ ಗಾತ್ರ

ಪಾಂಡವಪುರ: ಮಂಡ್ಯ– ಪಾಂಡವಪುರ ಮುಖ್ಯರಸ್ತೆಯಲ್ಲಿ ಗುಂಡಿ, ಕಂದಕಗಳು ರಾರಾಜಿಸುತ್ತಿದ್ದು ಇಲ್ಲಿ ಓಡಾಡುವ ಜನರು ಜೀವ ಕೈಯಲ್ಲಿಡಿದು ಪ್ರಯಾಣ ಮಾಡುತ್ತಾರೆ.. ರಸ್ತೆ ದುರಸ್ತಿ ಮಾಡಿಸಲು ವಿಫಲವಾಗಿರುವ ಸ್ಥಳೀಯ ಜನಪ್ರತಿನಿಧಿಗಳ ವಿರುದ್ಧ ಜನರು ಹಿಡಿಶಾಪ ಹಾಕುತ್ತಿದ್ದಾರೆ.

ತಾಲ್ಲೂಕಿನ ದೊಡ್ಡಬ್ಯಾಡರಹಳ್ಳಿ ರೈಲ್ವೆ ನಿಲ್ದಾಣ ಸಮೀಪದ ಮುಖ್ಯ ರಸ್ತೆ ತೀವ್ರವಾಗಿ ಹಾಳಾಗಿದ್ದು ಅಪಾಯಕ್ಕೆ ಆಹ್ವಾನ ನೀಡುವಂತಿದೆ. ಮಂಡ್ಯದಿಂದ ಪಾಂಡವಪುರ ಮೂಲಕ ಕೆಆರ್‌ಎಸ್‌ ತೆರಳುವ ಪ್ರವಾಸಿಗರು ರಸ್ತೆಯ ದುಸ್ಥಿತಿ ಕಂಡು ಮರುಗುತ್ತಾರೆ. ರಸ್ತೆಯನ್ನೇ ನುಂಗಿ ಹಾಕಿರುವ ರೈಲ್ವೆ ಮೇಲುಸೇತುವೆಯ ಕೆಳ ರಸ್ತೆಯು ಕೆರೆಯಂತಾಗಿದ್ದು ವಾಹನ ಓಡಿಸುವುದೇ ಕಷ್ಟವಾಗಿದೆ.

ಕೆಳರಸ್ತೆಯಲ್ಲಿ ನಿತ್ಯ ಒಂದಲ್ಲಾ ಒಂದು ಅಪಘಾತ ಸಂಭವಿಸುತ್ತಿದ್ದು ಜನರು ಗಾಯಗೊಳ್ಳುತ್ತಿದ್ದಾರೆ. ಮೇಲ್ಸೇತುವೆ ಭಾಗದಿಂದ ದೊಡ್ಡಬ್ಯಾಡರಹಳ್ಳಿ ರೈಲ್ವೆ ನಿಲ್ದಾಣದವರೆಗೆ ರಸ್ತೆ ಅದ್ವಾನ ಎದ್ದು ಹೋಗಿದೆ. ದೊಡ್ಡಬ್ಯಾಡರಹಳ್ಳಿ ಬಳಿಯ ವಿ.ಸಿ.ಉಪ ನಾಲೆಯ ಸೇತುವೆಯಿಂದ ತಿಮ್ಮನಕೊಪ್ಪಲು ಗ್ರಾಮದ ತನಕವೂ ರಸ್ತೆ ಗುಂಡಿಗಳು ಹೆಚ್ಚಾಗಿವೆ.

ರಸ್ತೆ ದುರಸ್ತಿ ಮಾಡಿಸುವಂತೆ ಸ್ಥಳೀಯರು ಹಲವು ಬಾರಿ ಪ್ರತಿಭಟನೆ ನಡೆಸಿದ್ದಾರೆ. ತಾಲ್ಲೂಕು ಆಡಳಿತ, ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದಾರೆ. ಆದರೂ ಇಲ್ಲಿಯವರೆಗೆ ರಸ್ತೆ ದುರಸ್ತಿಯಾಗಿಲ್ಲ. ಜನರು ಪ್ರಶ್ನೆ ಮಾಡುತ್ತಾರೆ ಎಂಬ ಕಾರಣಕ್ಕೆ ಸ್ಥಳೀಯ ಜನಪ್ರತಿನಿಧಿಗಳು ಈ ರಸ್ತೆಯಲ್ಲಿ ಓಡಾಡುವುದನ್ನೇ ನಿಲ್ಲಿಸಿದ್ದಾರೆ ಎಂದು ಸ್ಥಳೀಯರು ಆರೋಪಿಸುತ್ತಾರೆ.

‘ ಇಲ್ಲಿನ ರಸ್ತೆಯಲ್ಲಿ ಸಂಚರಿಸುವುದೇ ಹರಸಾಹಸ, ಸ್ವಲ್ಪ ಆಯ ತಪ್ಪಿದರೂ ನಮ್ಮ ಜೀವಕ್ಕೆ ಕುತ್ತು. ನಿತ್ಯ ಬಿದ್ದು ತಲೆ, ಕೈಕಾಲುಗಳಿಗೆ ತೀವ್ರ ಪೆಟ್ಟು ಮಾಡಿಕೊಳ್ಳುವವರ ಸಂಖ್ಯೆ ಹೆಚ್ಚುತ್ತಿದೆ’ ಎಂದು ಬೈಕ್ ಸವಾರ ಬೋರೇಗೌಡ ಹೇಳಿದರು.

ಪೂರ್ಣಗೊಳ್ಳದ ಯೋಜನೆ: ಮಂಡ್ಯ ತಾಲ್ಲೂಕಿನ ತೂಬಿನಕೆರೆಯಿಂದ ಪಾಂಡವಪುರ ತಾಲ್ಲೂಕಿನ ಹೊಸಸಾಯಪನಹಳ್ಳಿವರೆಗಿನ ರಸ್ತೆಯ ಆಯ್ದ ಭಾಗಗಳು ರಾಜ್ಯ ಹೆದ್ದಾರಿ ಅಭಿವೃದ್ದಿ ಯೋಜನೆ (ಎಸ್‌ಎಚ್‌ಡಿಪಿ) ಯಡಿಯಲ್ಲಿ ಅಭಿವೃದ್ಧಿಪಡಿಸಲು ₹ 30ಕೋಟಿ ಮಂಜೂರಾಗಿತ್ತು.

2016–17ನೇ ಸಾಲಿನಲ್ಲಿ ರಸ್ತೆ ಅಭಿವೃದ್ದಿ ಕಾಮಗಾರಿಗೆ ಚಾಲನೆ ದೊರೆಯಿತು, ದೊಡ್ಡಬ್ಯಾಡರಹಳ್ಳಿ, ಬನ್ನಂಗಾಡಿ ಹಾಗೂ ಪಾಂಡವಪುರ ಪಟ್ಟಣದಿಂದ ಚಿಕ್ಕಮರಳಿ ಗೇಟ್ ವರೆಗೆ ಕಾಮಗಾರಿ ಪೂರ್ಣಗೊಂಡಿತು. ಆದರೆ ಇನ್ನುಳಿದ ಭಾಗಗಳ ರಸ್ತೆ ಅಭಿವೃದ್ದಿ ಇನ್ನೂ ಪೂರ್ಣಗೊಂಡಿಲ್ಲ.

ವಾಪಸ್‌ ಆದ ಹಣ: ದೊಡ್ಡಬ್ಯಾಡರಹಳ್ಳಿ ರೈಲ್ವೆ ಮೇಲುಸೇತುವೆ, ರೈಲ್ವೆ ನಿಲ್ದಾಣ ಸಮೀಪ ರಸ್ತೆ ಅಭಿವೃದ್ದಿಗಾಗಿ ರಾಷ್ಟ್ರೀಯ ಹೆದ್ದಾರಿ ಯೋಜನೆ ಸಿಆರ್‌ಎಫ್ ನಿಂದ 2017–18ರಲ್ಲಿ ₹ 12 ಕೋಟಿ ಬಿಡುಗಡೆಗೊಂಡಿತ್ತು. ಆದರೆ ರಸ್ತೆ ಅಭಿವೃದ್ದಿಯನ್ನು ನಿಗದಿತ ಅವಧಿಯಲ್ಲಿ ಪ್ರಾರಂಭಗೊಳ್ಳದ ಕಾರಣ ಹಣ ವಾಪಸ್‌ ಆಯಿತು. ಮತ್ತೆ ಹಣ ಬಿಡುಗಡೆ ಮಾಡುವಂತೆ ಹಲವು ಬಾರಿ ಒತ್ತಾಯ ಮಾಡಿದ ನಂತರ 2ನೇ ಬಾರಿಗೆ ಹಣ ಬಿಡುಗಡೆಯಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

‘ದೊಡ್ಡಬ್ಯಾಡರಹಳ್ಳಿಯಿಂದ ಚಿಕ್ಕಬ್ಯಾಡರಹಳ್ಳಿವರೆಗಿನ ಮಂಡ್ಯ–ಪಾಂಡವಪುರ ಮುಖ್ಯ ರಸ್ತೆಯ ಅಭಿವೃದ್ದಿ ಕಾಮಮಗಾರಿಯನ್ನು ಶೀಘ್ರದಲ್ಲಿಯೇ ಪ್ರಾರಂಭಿಸಲಾಗುವುದು’ ಎಂದು ರಾಷ್ಟ್ರೀಯ ಹೆದ್ದಾರಿ ಯೋಜನೆ ಎಂಜಿನಿಯರ್ ಮೃತ್ಯುಂಜಯ ಹೇಳಿದರು.

ದೊಡ್ಡಬ್ಯಾಡರಹಳ್ಳಿಯಿಂದ ಹೊಸಸಾಯಪನಹಳ್ಳಿವರೆಗಿನ ರಸ್ತೆ ಅಭಿವೃದ್ದಿ ಕಾರ್ಯ ಪ್ರಗತಿಯಲ್ಲಿದ್ದು, ಇಷ್ಟರಲ್ಲಿಯೇ ಪೂರ್ಣಗೊಳಿಸುತ್ತೇವೆ’ ಎಂದು ಲೋಕೋಪಯೋಗಿ ಇಲಾಖೆ ಎಂಜಿನಿಯರ ಚಿದಂಬರ್ ಹೇಳಿದರು.

***

ತೇಪೆ ಹಾಕುವ ಅಧಿಕಾರಿಗಳು

ಡಿ.24ರಂದು ಜೆಡಿಎಸ್‌ನ ಪಂಚರತ್ನ ಯಾತ್ರೆ ಪಾಂಡವಪುರಕ್ಕೆ ಬರುವುದಕ್ಕೂ ಮುಂಚಿನ ಎರಡು ದಿನಗಳ ಹಿಂದೆ ತರಾತುರಿಯಲ್ಲಿ ಪಾಂಡವಪುರ –ಮಂಡ್ಯ ಮುಖ್ಯರಸ್ತೆಯ ಗುಂಡಿಗಳನ್ನು ತೇಪೆ ಮಾಡಲಾಗಿದೆ. ಪ್ಯಾಚ್‌ ಮಾಡಲಾಗಿದೆ. ಪಟ್ಟಣದಿಂದ ಚಿಕ್ಕಾಡೆ, ಪಟ್ಟಸೋಮನಹಳ್ಳಿ ಗೇಟ್, ಚಿಕ್ಕಮರಳಿ ಗೇಟ್, ಲೋಕಪಾವನಿ ಸೇತುವೆ ರಸ್ತೆ ಹಾಗೂ ಕನಗನರಮಡಿ, ವದೇ ಸಮುದ್ರವರೆಗಿನ ಗುಂಡಿ ಬಿದ್ದಿದ್ದ ರಸ್ತೆಯನ್ನು ಮುಚ್ಚಲಾಗಿದೆ. ಈ ಮಾರ್ಗದಲ್ಲಿ ಪಂಚರತ್ನಯಾತ್ರೆ ಸಂಚಾರ ಮಾಡಿತ್ತು.
‘ಲೋಕೋಪಯೋಗಿ ಇಲಾಖೆಯ ₹ 3.5 ಲಕ್ಷ ಅಂದಾಜು ವೆಚ್ಚದಲ್ಲಿ ಗುಂಡಿಬಿದ್ದಿದ್ದ ಜಾಗವನ್ನು ದುರಸ್ತಿ ಮಾಡಲಾಗಿದೆ’ ಎಂದು ಇಲಾಖೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT