ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕಿತ್ಸೆ ನೀಡದಿದ್ದರೆ ಖಾಸಗಿ ವೈದ್ಯರ ವಿರುದ್ಧ ಕ್ರಮ: ಡಾ.ಎಚ್‌.ಪಿ.ಮಂಚೇಗೌಡ

ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಚ್‌.ಪಿ.ಮಂಚೇಗೌಡ ಎಚ್ಚರಿಕೆ, ಕೋವಿಡ್‌ 19 ಆಸ್ಪತ್ರೆಗೆ ಸಹಕಾರ ನೀಡಲು ಮನವಿ
Last Updated 24 ಏಪ್ರಿಲ್ 2020, 5:28 IST
ಅಕ್ಷರ ಗಾತ್ರ

ಮಂಡ್ಯ: ‘ಜಿಲ್ಲಾಸ್ಪತ್ರೆಯನ್ನು ಕೋವಿಡ್‌– 19 ಆಸ್ಪತ್ರೆ ಎಂದು ಘೋಷಣೆ ಮಾಡಲಾಗಿದೆ. ಇತರ ಆರೋಗ್ಯ ಸಮಸ್ಯೆಗಳಿಂದ ಬಳಲುವ ರೋಗಿಗಳಿಗೆ ಖಾಸಗಿ ಆಸ್ಪತ್ರೆ ವೈದ್ಯರು ಚಿಕಿತ್ಸೆ ನೀಡಬೇಕು. ಇಲ್ಲದಿದ್ದರೆ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ನಿಯಂತ್ರಣ (ಕೆಪಿಎಂಇ) ಕಾಯ್ದೆಯಡಿ ಕ್ರಮ ಜರುಗಿಸಲಾಗುವುದು’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಚ್‌.ಪಿ.ಮಂಚೇಗೌಡ ಎಚ್ಚರಿಕೆ ನೀಡಿದರು.

ನಗರದ ‘ಪ್ರಜಾವಾಣಿ’ ಕಚೇರಿಯಲ್ಲಿ ಗುರುವಾರ ನಡೆದ ಫೋನ್‌ ಇನ್‌ ಕಾರ್ಯಕ್ರಮದ ವೇಳೆ ಶ್ರೀರಂಗಪಟ್ಟಣದ ನವೀನ್‌ ಪ್ರಶ್ನೆಗೆ ಅವರು ಉತ್ತರಿಸಿದರು.

ಶ್ರೀರಂಗಪಟ್ಟಣ, ಮಂಡ್ಯದ ಖಾಸಗಿ ಆಸ್ಪತ್ರೆಗಳಲ್ಲಿ ಸಮರ್ಪಕ ಚಿಕಿತ್ಸೆ ದೊರೆಯುತ್ತಿಲ್ಲ. ಮೈಸೂರಿಗೂ ತೆರಳಲು ಸಾಧ್ಯವಾಗುತ್ತಿಲ್ಲ ಎಂದು ಪ್ರಕಾಶ್‌ ಗಮನ ಸೆಳೆದರು.

ಇದಕ್ಕೆ ಉತ್ತರಿಸಿದ ಡಿಎಚ್‌ಒ, ಖಾಸಗಿ ಆಸ್ಪತ್ರೆ, ನರ್ಸಿಂಗ್‌ ಹೋಂ, ಇನ್ನಿತರ ಕ್ಲಿನಿಕ್‌ಗಳು ರೋಗಿಗಳಿಗೆ ಕಡ್ಡಾಯವಾಗಿ ಚಿಕಿತ್ಸೆ ನೀಡಬೇಕು ಎಂದು ಈಗಾಗಲೇ ರಾಜ್ಯ ಸರ್ಕಾರ ಸೂಚಿಸಿದೆ. ತಪ್ಪಿದರೆ ಕ್ರಮ ಜರುಗಿಸಲಾಗುವುದು. ರೋಗಿಗಳಲ್ಲಿ ಕೊರೊನಾ ಸೋಂಕಿನ ಲಕ್ಷಣಗಳು ಕಂಡು ಬಂದರೆ ಸಂಜೆ 4.30 ರೊಳಗೆ ಕೋವಿಡ್‌ ಆಸ್ಪತ್ರೆ ವೈದ್ಯರಿಗೆ ಮಾಹಿತಿ ನೀಡಬೇಕು. ಸರ್ಕಾರದ ಸೂಚನೆ ಧಿಕ್ಕರಿಸುವ ಖಾಸಗಿ ಆಸ್ಪತ್ರೆಗಳ ವಿರುದ್ಧ ಕೆಪಿಎಂಇ ಕಾಯ್ದೆ ಅಸ್ತ್ರ ಬಳಸಲು ಸರ್ಕಾರ ಸೂಚಿಸಿದೆ ಎಂದರು.

ಕೋವಿಡ್‌ 19 ಪರೀಕ್ಷೆ ಹೆಚ್ಚಿನ ಜನರಿಗೆ ಮಾಡುತ್ತಿಲ್ಲ ಎಂದು ಮಂಡ್ಯದ ಸಿದ್ದರಾಜು ಪ್ರಶ್ನಿಸಿದರು. ‘ಹೆಚ್ಚು ಅಪಾಯ ಇರುವ ಕಡೆಗಳಲ್ಲಿ ಸಾಮುದಾಯಿಕವಾಗಿ ಕೋವಿಡ್‌ ಪರೀಕ್ಷೆ ನಡೆಸಲಾಗುತ್ತಿದೆ. ಈಗಾಗಲೇ ಪರೀಕ್ಷೆಗೆ ಒಳಗಾದವರ ಸಂಖ್ಯೆ 1,200 ದಾಟಿದೆ. ಮಳವಳ್ಳಿಯಲ್ಲಿ ಹೆಚ್ಚಿನ ಜನರು ಪರೀಕ್ಷೆಗೆ ಒಳಪಡುತ್ತಿದ್ದಾರೆ. ಯಾವುದಾದರೂ ಗುಂಪಿನಲ್ಲಿ ಸೋಂಕು ಇರುವ ಶಂಕೆ ಕಂಡು ಬಂದರೆ ಅವರನ್ನು ಪರೀಕ್ಷಿಸಲಾಗುವುದು’ ಎಂದು ಉತ್ತರಿಸಿದರು.

ನಗರದ ಅರುಣಾ ಕೆಂಪರಾಜು ಕರೆ ಮಾಡಿ, ಆಶಾ ಕಾರ್ಯಕರ್ತೆಯರಿಗೆ ಸುರಕ್ಷತಾ ಕಿಟ್‌ ನೀಡಿಲ್ಲ ಎಂದು ಗಮನ ಸೆಳೆದರು. ‘ಆಶಾ ಕಾರ್ಯಕರ್ತೆಯರಿಗೆ ಮುಖಗವಸು, ಸ್ಯಾನಿಟೈಸರ್‌ಗಳನ್ನು ವಿತರಣೆ ಮಾಡಲಾಗಿದೆ. ಅವರು ಜನಸಮುದಾಯದಲ್ಲಿ ಕೋವಿಡ್‌ ವಿರುದ್ಧ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಅವರ ಸುರಕ್ಷತೆಗೆ ಜಿಲ್ಲಾಡಳಿತ ಎಲ್ಲಾ ರೀತಿಯ ಕ್ರಮ ಕೈಗೊಂಡಿದೆ’ ಎಂದು ಡಿಎಚ್‌ಒ ಹೇಳಿದರು.

ಕೆ.ಆರ್‌.ಪೇಟೆಯ ಸವಿತಾ ಕರೆ ಮಾಡಿ, ಹಾಲು ಮಾರಾಟ ಕೇಂದ್ರಗಳಲ್ಲಿ ಜನರು ಅಂತರ ಕಾಯ್ದುಕೊಳ್ಳುತ್ತಿಲ್ಲ. ಬೀಡಿ, ಸಿಗರೇಟು ಸೇದುತ್ತಾ, ಟೀ ಕುಡಿ ಯುತ್ತಾ ಗುಂಪು ಸೇರುತ್ತಾರೆ ಎಂದು ದೂರಿದರು.‘ಈ ಕುರಿತು ಪೊಲೀಸ್‌ ಸಿಬ್ಬಂದಿಗೆ ಮಾಹಿತಿ ನೀಡಲಾಗುವುದು’ ಎಂದು ಡಿಎಚ್‌ಒ ಹೇಳಿದರು.

ಸಾದೊಳಲು ಗ್ರಾಮದ ಅನು ಸತೀಶ್‌ ಕರೆ ಮಾಡಿ, ಜಿಲ್ಲಾಸ್ಪತ್ರೆಯಲ್ಲಿ ಇತರ ರೋಗಿಗಳಿಗೆ ಸಮರ್ಪಕ ಚಿಕಿತ್ಸೆ ದೊರೆಯುತ್ತಿಲ್ಲ ಎಂದು ದೂರಿದರು. ‘ಜಿಲ್ಲಾಸ್ಪತ್ರೆಯ ವಿವಿಧ ವಿಭಾಗಗಳನ್ನು ಶೀಘ್ರ ಖಾಸಗಿ ಆಸ್ಪತ್ರೆಗಳಿಗೆ ಸ್ಥಳಾಂತರ ಮಾಡಲಾಗುವುದು. ರೋಗಿಗಳು ಆಯುಷ್ಮಾನ್‌ ಆರೋಗ್ಯ ಕರ್ನಾಟಕ ಯೋಜನೆಯಡಿ ಚಿಕಿತ್ಸೆ ಪಡೆಯಲಾಗುವುದು’ ಎಂದು ಡಿಎಚ್‌ಒ ಉತ್ತರಿಸಿದರು.

ಪಾಂಡವಪುರದ ಎಂ.ರಾಜೀವ್‌, ಕ್ವಾರಂಟೈನ್‌ನಲ್ಲಿ ಇರುವವರ ಬಗ್ಗೆ ಭಯ ಕಾಡುತ್ತಿದೆ. ಅವರ ಒತ್ತಡ ಹೇಗೆ ನಿರ್ವಹಣೆ ಮಾಡಬೇಕು ಎಂದು ಪ್ರಶ್ನಿಸಿದರು. ‘14 ದಿನಗಳವರೆಗೆ ಕ್ವಾರಂಟೈನ್‌ನಲ್ಲಿ ಇರಬೇಕು. ಯಾವುದೇ ರೋಗ ಲಕ್ಷಣವಿಲ್ಲದೇ ಒಂದೇ ಕಡೆ ಇರುವುದೆಂದರೆ ಕಷ್ಟದ ವಿಷಯ, ಹೆಚ್ಚು ಒತ್ತಡ ಇರುತ್ತದೆ ನಿಜ. ಹೀಗಾಗಿ ಅವರಿಗೆ ಮನೋರೋಗ ತಜ್ಞರಿಂದ ಕೌನ್ಸೆಲಿಂಗ್‌ ಮಾಡಿಸಲಾಗುತ್ತಿದೆ. ಆರೋಗ್ಯದಿಂದ ಇರಲು ವೈದ್ಯರು ಸಲಹೆ, ಸೂಚನೆ ನೀಡುತ್ತಿದ್ದಾರೆ’ ಎಂದು ಡಿಎಚ್‌ಒ ಉತ್ತರಿಸಿದರು.

ಮದ್ದೂರಿನ ನ.ಲಿ.ಕೃಷ್ಣ, ಗ್ರಾಮ ಪಂಚಾಯಿತಿಗಳಲ್ಲಿ ಕಾರ್ಯಪಡೆ ರಚನೆ ಮಾಡಿದ್ದರೂ ಯಾವುದೇ ಕೆಲಸ ಮಾಡುತ್ತಿಲ್ಲ ಎಂದು ದೂರಿದರು. ‘ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಅರಿವು ಮೂಡಿ ಸುತ್ತಿದ್ದಾರೆ. ಕಾರ್ಯಪಡೆ ಕಾರ್ಯವೈಖರಿ ಬಗ್ಗೆ ಜಿಲ್ಲಾ ಪಂಚಾಯಿತಿ ಸಿಇಒ ಗಮನಕ್ಕೆ ತರಲಾಗುವುದು’ ಎಂದರು.

ಕಿಕ್ಕೇರಿ ಸಮೀಪ, ಮಾದಾಪುರ ಗ್ರಾಮದ ಸಿದ್ದಣ್ಣ ಕರೆ ಮಾಡಿ, ಕೆ.ಆರ್.ಪೇಟೆ ಭಾಗದಲ್ಲಿ ವಲಸೆ ಬಂದಿರುವವರು ರೋಗ ಭೀತಿ ಸೃಷ್ಟಿಸುತ್ತಿದ್ದಾರೆ. ಅವರಿಗೂ ಪರೀಕ್ಷೆ ಮಾಡಬೇಕು ಎಂದು ಒತ್ತಾಯಿಸಿದರು. ‘ರೋಗಿಗಳ ಜೊತೆ ಸಂಪರ್ಕಕ್ಕೆ ಬಂದವರನ್ನು ಈಗಾಗಲೇ ಕ್ವಾರಂಟೈನ್‌ ಮಾಡಲಾಗಿದೆ. ವಲಸೆ ತೆರಳಿದ ಎಲ್ಲರನ್ನೂ ಪರೀಕ್ಷೆ ಮಾಡಲು ತಾಲ್ಲೂಕು ಆಸ್ಪತ್ರೆಗಳ ವತಿಯಿಂದ ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದರು.

ಮಂಗಲ ಗ್ರಾಮದ ಯೋಗೀಶ್‌ ಕರೆ ಮಾಡಿ, ಕ್ವಾರಂಟೈನ್‌ ಕೇಂದ್ರಗಳಲ್ಲಿ ಎಲ್ಲರನ್ನೂ ಕೂಡಿ ಹಾಕುತ್ತಿದ್ದಾರೆ ಎಂದು ಆರೋಪಿಸಿದರು. ಡಿಎಚ್‌ಒ ಉತ್ತರಿಸಿ, ಹಾಸ್ಟೆಲ್‌ಗಳಲ್ಲಿ ಕೊಠಡಿ ವ್ಯವಸ್ಥೆ ಇದ್ದು ಪ್ರತ್ಯೇಕವಾಗಿ ಇರಿಸಲಾಗಿದೆ. ಸರ್ಕಾರದ ನಿರ್ದೇಶನದಂತೆಯೇ ಕ್ವಾರಂಟೈನ್‌ ಮಾಡಲಾಗಿದೆ. ಯಾರನ್ನೂ ಕೂಡಿ ಹಾಕುತ್ತಿಲ್ಲ ಎಂದರು.

ನಾಗಮಂಗಲ ತಾಲ್ಲೂಕು ಕಾಂತಾಪುರ ಗ್ರಾ.ಪಂ ಅಧ್ಯಕ್ಷೆ ನೀಲಾ ಶಿವಮೂರ್ತಿ, ಎಲ್ಲರೂ ಮುಖಗವಸು ಧರಿಸುವ ಅವಶ್ಯಕತೆ ಇದೆಯೇ ಎಂದು ಪ್ರಶ್ನಿಸಿದರು. ‘ಸೋಂಕಿನ ಲಕ್ಷಣ ಯಾರಿಗಿದೆ ಎಂಬ ಬಗ್ಗೆ ತಿಳಿಯುವುದು ಕಷ್ಟ. ಹೀಗಾಗಿ ಎಲ್ಲರೂ ಮಾಸ್ಕ್‌ ಧರಿಸುವುದು ಒಳ್ಳೆಯದು’ ಎಂದು ಉತ್ತರಿಸಿದರು.

ಮಂಡ್ಯ ತಾಲ್ಲೂಕು, ಸುಂಡಹಳ್ಳಿಯ ಗಂಗಾಧರ್‌, ಬೇಸಿಗೆಯಲ್ಲಿ ನಮ್ಮ ಹಳ್ಳಿ ಯಲ್ಲಿ ವಿಪರೀತ ಸೊಳ್ಳೆಗಳ ಕಾಟವಿದ್ದು ರೋಗ ಭೀತಿ ಇದೆ ಎಂದರು.

‘ಆರೋಗ್ಯ ಇಲಾಖೆ ವತಿಯಿಂದ ಸೋಂಕು ನಿವಾರಕ ಸಿಂಪಡಣೆ ಮಾಡಲಾಗುವುದು’ ಎಂದರು.

ಮಂಡ್ಯದ ಸೀಮಾ, ಕುಮಾರ್‌, ಮಳವಳ್ಳಿಯ ಶ್ರೀನಿವಾಸ್‌ ಮುಂತಾ ದವರು ಆರೋಗ್ಯ ಇಲಾಖೆ, ಜಿಲ್ಲಾಡಳಿತದ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಮಹಿಳೆಯ ಸಂಕಷ್ಟಕ್ಕೆ ಸ್ಪಂದನೆ

ಮಳವಳ್ಳಿ ತಾಲ್ಲೂಕು ದುಗ್ಗನಹಳ್ಳಿ ಗ್ರಾಮದ ಮಾಲಾ ಅವರು ತಮ್ಮ ಪತಿಯ ಆರೋಗ್ಯ ಸಮಸ್ಯೆ ಹೇಳಿಕೊಳ್ಳಲು ‘ಪ್ರಜಾವಾಣಿ’ ಕಚೇರಿಗೇ ಬಂದಿದ್ದರು.

‘ಮಾರ್ಚ್‌ 24ರಂದು ಲಾಕ್‌ಡೌನ್‌ ಘೋಷಣೆಯಾದ ನಂತರ ಪತಿ ಬೈಕ್‌ನಲ್ಲಿ ಬೆಂಗಳೂರಿನಿಂದ ಊರಿಗೆ ಬರುವಾಗ ಪಾರ್ಶ್ವವಾಯುಗೆ ತುತ್ತಾದರು. ಅವರನ್ನು ತಕ್ಷಣ ಮಿಮ್ಸ್‌ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ನರರೋಗ ತಜ್ಞರು ಇಲ್ಲ ಎಂಬ ಕಾರಣಕ್ಕೆ ಬೆಂಗಳೂರಿನ ನಿಮ್ಹಾನ್ಸ್‌ ಆಸ್ಪತ್ರೆಗೆ ಬರೆದುಕೊಟ್ಟರು. ಆದರೆ ಅಲ್ಲಿ ಬೆಡ್‌ ಇಲ್ಲ ಎಂಬ ನೆಪ ಹೇಳಿ ದಾಖಲು ಮಾಡಿಕೊಳ್ಳಲಿಲ್ಲ. ಅನಿವಾರ್ಯವಾಗಿ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿ ಆಪರೇಷನ್‌ ಮಾಡಿಸಬೇಕಾಯಿತು’ ಎಂದರು.

‘ಶಸ್ತ್ರಚಿಕಿತ್ಸೆಗೆ ₹ 2 ಲಕ್ಷ ಖರ್ಚಾಯಿತು. ಅಲ್ಲಿಯ ಬಿಲ್‌ ತಾಳಲಾಗದೇ ಮತ್ತೆ ಮಂಡ್ಯದ ಮಿಮ್ಸ್‌ಗೆ ಬಂದೆವು, ಕೋವಿಡ್‌ ಆಸ್ಪತ್ರೆಯಾಗಿದ್ದ ಕಾರಣ ದಾಖಲು ಮಾಡಿಕೊಳ್ಳಲಿಲ್ಲ. ಮತ್ತೆ ಖಾಸಗಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಮುಂದುವರಿಸುತ್ತಿದ್ದೇವೆ. ಪತಿಗೆ ಇನ್ನೂ ಪ್ರಜ್ಞೆ ಬಂದಿಲ್ಲ. ಆಸ್ಪತ್ರೆ ಬಿಲ್‌ ₹ 3 ಲಕ್ಷ ದಾಟಿದೆ. ಮನೆಯಲ್ಲಿ ಇಬ್ಬರು ಸಣ್ಣ ಮಕ್ಕಳಿದ್ದಾರೆ. ಮನೆಕೆಲಸ ಮಾಡಿಕೊಂಡಿದ್ದ ನಾನು ಅಷ್ಟು ಬಿಲ್‌ ಹೇಗೆ ಪಾವತಿಸಲಿ’ ಎಂದು ಕಣ್ಣೀರಿಟ್ಟರು.

ತಕ್ಷಣ ಅವರ ಮನವಿಗೆ ಸ್ಪಂದಿಸಿದ ಡಿಎಚ್‌ಒ, ಆಯುಷ್ಮಾನ್‌ ಆರೋಗ್ಯ ಕರ್ನಾಟಕ ಯೋಜನೆಯಡಿ ಆಸ್ಪತ್ರೆ ಬಿಲ್‌ ಭರಿಸಲಾಗುವುದು. ಸರ್ಕಾರದಿಂದ ದೊರೆಯುವ ಎಲ್ಲಾ ಸೌಲಭ್ಯ ನೀಡಲಾಗುವುದು ಎಂದು ಭರವಸೆ ನೀಡಿದರು.

ಯೋಜನೆಯ ನೋಡೆಲ್‌ ಅಧಿಕಾರಿ ಡಾ.ಅಶ್ವಥ್‌ ಅವರಿಗೆ ಕರೆ ಮಾಡಿ, ಆರೋಗ್ಯ ಕರ್ನಾಟಕ ಯೋಜನೆಯ ಸಕಲ ಸೌಲಭ್ಯ ನೀಡುವಂತೆ ಸೂಚನೆ ನೀಡಿದರು.

ಮಕ್ಕಳ ಆರೋಗ್ಯ: ಪೋಷಕರಿಗೆ ಪಂಚಸೂತ್ರ! ಮನೆಯಲ್ಲೇ ಬಂಧಿತರಾಗಿರುವ ಮಕ್ಕಳು ಒತ್ತಡಕ್ಕೊಳಗಾಗುತ್ತಿದ್ದಾರೆ. ಅವರ ಆರೋಗ್ಯ ಕಾಪಾಡುವ ಕ್ರಮಗಳ ಬಗ್ಗೆ ಮಾದಾಪುರ ಗ್ರಾಮದ ಶೋಭಾ ಪ್ರಶ್ನಿಸಿದರು. ಮನೋರೋಗ ತಜ್ಞ ಡಾ.ಎಚ್‌.ವಿ.ಶಶಾಂಕ್‌ ಪಂಚಸೂತ್ರಗಳನ್ನು ವಿವರಿಸಿದರು.

ಪೋಷಕರು ಮಕ್ಕಳೊಂದಿಗೆ ಹೆಚ್ಚು ಕಾಲ ಕಳೆಯಬೇಕು. ಅವರೊಂದಿಗೆ ಮಕ್ಕಳಾಗಿ ಆಟವಾಡಬೇಕು.

ಟಿ.ವಿ, ಮೊಬೈಲ್‌ಗಳಿಂದ ಮಕ್ಕಳನ್ನು ದೂರವಿರಿಸಿ ಮನಸ್ಸಿನ ಸಾಮರ್ಥ್ಯ ವೃದ್ಧಿಸುವ ಸಣ್ಣಪುಟ್ಟ ಆಟ, ಕೆಲಸಗಳನ್ನು ವಹಿಸಬೇಕು.

ಮಕ್ಕಳ ಮುಂದೆ ಪೋಷಕರು ಕೊರೊನಾ ಸೋಂಕಿನ ಬಗ್ಗೆ ಭಯದಿಂದ ಮಾತನಾಡಬಾರದು. ಇದು ಬಂದು ಹೋಗುವ ಸೋಂಕು ಎಂದು ಹೇಳಿ ಧೈರ್ಯ ಮೂಡಿಸಬೇಕು.

ಮಕ್ಕಳಿಗೆ ಕರಿದ ಪದಾರ್ಥ ತಿನ್ನಿಸ ಬಾರದು. ಬೇಯಿಸಿದ ಆಹಾರ ನೀಡಬೇಕು. ಕುದಿಸಿ ಆರಿಸಿದ ನೀರನ್ನೇ ಕುಡಿಸಬೇಕು.

ವಿಟಮಿನ್‌ – ಇ ವೃದ್ಧಿಸುವ ದ್ರಾಕ್ಷಿ, ಮೋಸಂಬಿ, ಕಿತ್ತಳೆ ಹಣ್ಣುಗಳನ್ನು ನೀಡಬೇಕು

ಅಂತರ ಕಾಯ್ದುಕೊಳ್ಳದ ಭಕ್ತರು

ಕಿಕ್ಕೇರಿಯ ನಾರಾಯಣ ಕರೆಮಾಡಿ, ನರಸಿಂಹ ಸ್ವಾಮಿ ದೇವಾಲಯದಲ್ಲಿ ಪೂಜೆ ಮಾಡಿ ಭಕ್ತರಿಗೆ ಪ್ರಸಾದ ವಿತರಿಸುತ್ತಾರೆ. ಅಂತರ ಕಾಯ್ದುಕೊಳ್ಳದೆ ಜನರು ಪ್ರಸಾದ ಪಡೆಯುತ್ತಾರೆ ಎಂದು ದೂರಿದರು. ಸಾಸಲು ಗ್ರಾಮದ ಸೋಮೇಶ್ವರ ದೇವಾಲಯದಲ್ಲೂ ಇದೇ ಪರಿಸ್ಥಿತಿ ಇರುವ ಬಗ್ಗೆ ಗುರುಮೂರ್ತಿ ಗಮನ ಸೆಳೆದರು. ‘ಈ ಬಗ್ಗೆ ಜಿಲ್ಲಾ ಪಂಚಾಯಿತಿ ಸಿಇಒ ಅವರ ಗಮನಕ್ಕೆ ತರಲಾಗುವುದು’ ಎಂದು ಡಿಎಚ್‌ಒ ಉತ್ತರಿಸಿದರು.

‘ಹಿಮೊಫೀಲಿಯಾ’: ಚಿಕಿತ್ಸೆಗೆ ಕ್ರಮ

ಹುಚ್ಚೇಗೌಡನಕೊಪ್ಪಲು ಗ್ರಾಮದ ಲಿಂಗರಾಜು ಕರೆಮಾಡಿ, 1ವರ್ಷದ ಮಗು ಹಿಮೊಫೀಲಿಯಾ ಕಾಯಿಲೆಯಿಂದ ಬಳಲುತ್ತಿದ್ದು, ಶ್ರೀರಂಗಪಟ್ಟಣದಲ್ಲಿ ಚಿಕಿತ್ಸೆ ದೊರೆಯುತ್ತಿಲ್ಲ ಎಂದು ದೂರಿದರು.

ಮಗುವಿನ ಮಾಹಿತಿ ಪಡೆದ ಡಿಎಚ್‌ಒ, ತಕ್ಷಣ ಮಗುವಿಗೆ ಅವಶ್ಯವಿರುವ ಚಿಕಿತ್ಸೆ ಕೊಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

***

ತಾಲ್ಲೂಕು ಅಸ್ಪತ್ರೆಯಲ್ಲಿ ‘ಕೋವಿಡ್‌ ಕಿಯೋಸ್ಕ್‌’ ಕಿರುಗಾವಲು ಪಟ್ಟಣದ ಸಂದೀಪ್‌, ಮಳವಳ್ಳಿಯಲ್ಲಿ ಸಮರ್ಪಕವಾಗಿ ಕೋವಿಡ್‌ ಪರೀಕ್ಷೆ ನಡೆಯುತ್ತಿಲ್ಲ ಎಂದು ದೂರಿದರು. ‘ನಾಗಮಂಗಲ, ಮಂಡ್ಯದಲ್ಲಿ ಕೋವಿಡ್‌ ಪರೀಕ್ಷೆಗಾಗಿ ಪ್ರತ್ಯೇಕ ಕಿಯೋಸ್ಕ್‌ ಮಾಡಲಾಗಿದೆ. ಇದೇ ಮಾದರಿಯಲ್ಲಿ ಎಲ್ಲಾ ತಾಲ್ಲೂಕು ಆಸ್ಪತ್ರೆಗಳಲ್ಲಿ ಕಿಯೋಸ್ಕ್‌ ಸ್ಥಾಪಿಸಲಾಗುವುದು. ನಂತರ ಹೆಚ್ಚೆಚ್ಚು ಪರೀಕ್ಷೆಗಳು ನಡೆಯಲಿವೆ’ ಎಂದು ಹೇಳಿದರು.

***

ಚುಚುಮದ್ದು ಪುನರಾರಂಭ

ಮದ್ದೂರಿನ ವಾಣಿಶ್ರೀ, ಜಿಲ್ಲಾಸ್ಪತ್ರೆ ಸೇರಿ ವಿವಿಧೆಡೆ ಮಕ್ಕಳ ಚುಚ್ಚುಮದ್ದು ದೊರೆಯುತ್ತಿಲ್ಲ ಎಂದು ಗಮನ ಸೆಳೆದರು. ‘ಕೋವಿಡ್‌ ಚಿಕಿತ್ಸೆ ಕಾರಣಕ್ಕೆ ಚುಚ್ಚುಮದ್ದು ನೀಡುವುದು ಸ್ಥಗಿತಗೊಂಡಿತ್ತು. ಈಗ ಪುನರಾರಂಭಗೊಂಡಿದ್ದು ಪ್ರತಿ ಗುರುವಾರ ಪೋಷಕರು ಮಕ್ಕಳಿಗೆ ಚುಚ್ಚುಮದ್ದು ಕೊಡಿಸಬಹುದು’

ಎಂದು ಡಿಎಚ್‌ಒ
ಡಾ.ಎಚ್‌.ಪಿ.ಮಂಚೇಗೌಡ
ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT