ಭಾನುವಾರ, ಫೆಬ್ರವರಿ 28, 2021
31 °C
ಎಂ.ವಿ.ಧರಣೇಂದ್ರಯ್ಯ ಸಮ್ಮೇಳನಾಧ್ಯಕ್ಷ: ಸಂಕೀರ್ಣ ಗೋಷ್ಠಿ, ಸುಗಮ ಸಂಗೀತ ಕಾರ್ಯಕ್ರಮ, ಕವಿಗೋಷ್ಠಿ

ಮಂಡ್ಯ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ ನಾಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಡ್ಯ: ಕನ್ನಡ ಸಾಹಿತ್ಯ ಪರಿಷತ್‌ ತಾಲ್ಲೂಕು ಘಟಕದ ವತಿಯಿಂದ ಜ.17ರಂದು ಮಂಡ್ಯ ತಾಲ್ಲೂಕು 16ನೇ ಕನ್ನಡ ಸಾಹಿತ್ಯ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ. ಸಾಹಿತ್ಯಾಸಕ್ತರು, ಶಿಕ್ಷಕರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ಮೂಲಕ ಯಶಸ್ವಿಗೊಳಿಸಬೇಕು ಎಂದು ಸ್ವಾಗತ ಸಮಿತಿ ಅಧ್ಯಕ್ಷೆ ಅಂಜನಾ ಶ್ರೀಕಾಂತ್‌ ಹೇಳಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಿಗ್ಗೆ 10 ಗಂಟೆಗೆ ಜಿ.ಎಸ್‌.ಬೊಮ್ಮೇಗೌಡ ಮಹಾದ್ವಾರದಲ್ಲಿ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್‌ ಅವರು ರಾಷ್ಟ್ರಧ್ವಜವನ್ನು, ಹೆಚ್ಚುವರಿ ಜಿಲ್ಲಾಧಿಕಾರಿ ನಾಡ ಧ್ವಜವನ್ನು, ಜಿಲ್ಲಾ ಘಟಕದ ಅಧ್ಯಕ್ಷ ಸಿ.ಕೆ.ರವಿಕುಮಾರ್‌ ಅವರು ಪರಿಷತ್‌ ಧ್ವಜಾರೋಹಣ ಮಾಡಲಿದ್ದಾರೆ. ಲಕ್ಷ್ಮೀಜನಾರ್ದನ ಪ್ರೌಢಶಾಲೆ ವಿದ್ಯಾರ್ಥಿಗಳು ನಾಡಗೀತೆ ಮತ್ತು ರೈತ ಗೀತೆ ಹಾಡಲಿದ್ದಾರೆ ಎಂದು ಹೇಳಿದರು.

ಬೆಳಿಗ್ಗೆ 10.30ಕ್ಕೆ ನಗರದ ಕರ್ನಾಟಕ ಸಂಘದ ಬಯಲು ರಂಗಮಂದಿರದ ಲೀಲಮ್ಮ ಮತ್ತು ಎಂ.ಕೆ.ಶಿವನಂಜಪ್ಪ ಪ್ರಧಾನ ವೇದಿಕೆಯಲ್ಲಿ ಭಾಷಾ
ವಿಜ್ಞಾನಿ, ಸಂಶೋಧಕ ಹಂಪ ನಾಗರಾಜಯ್ಯ ಅವರು ಸಮ್ಮೇಳನ ಉದ್ಘಾಟಿಸಲಿದ್ದು, ಶಾಸಕ ಎಂ.ಶ್ರೀನಿವಾಸ್‌ ಅಧ್ಯಕ್ಷತೆ ವಹಿಸಲಿದ್ದಾರೆ. ಸಾಹಿತಿ ಎಂ.ವಿ.ಧರಣೇಂದ್ರಯ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಲಿದ್ದಾರೆ. ಕಸಾಪ ಜಿಲ್ಲಾ ಘಟಕದ ನಿಕಟಪೂರ್ವ ಅಧ್ಯಕ್ಷೆ ಮೀರಾ ಶಿವಲಿಂಗಯ್ಯ ಅವರು ಮಧುಸೂದನ ಅವರ ನೇಮ ಕಥಾ ಸಂಕಲನವನ್ನು ಬಿಡುಗಡೆ ಮಾಡಲಿದ್ದಾರೆ ಎಂದು ಹೇಳಿದರು.

ಸಾಹಿತಿ ಪ್ರದೀಪ್‌ಕುಮಾರ್‌ ಹೆಬ್ರಿ ಅವರು ಸಮ್ಮೇಳನಗಳ ಮಹತ್ವದ ಕುರಿತು ಮಾತನಾಡಲಿದ್ದಾರೆ. ನಿಕಟ ಪೂರ್ವ ಸಮ್ಮೇಳನಾಧ್ಯಕ್ಷ ಎಂ.ಬಿ.ಸುರೇಶ್, ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ರವಿಕುಮಾರ್‌ ಚಾಮಲಾಪುರ, ಕಾರ್ಯಾಧ್ಯಕ್ಷ ಎಚ್.ಎನ್.ಯೋಗೇಶ್, ನಗರಸಭೆ ಅಧ್ಯಕ್ಷ ಎಚ್‌.ಎಸ್‌.ಮಂಜು, ಉಪಾಧ್ಯಕ್ಷೆ ಇಸ್ರತ್‌ ಫಾತಿಮಾ ಭಾಗವಹಿಸಲಿದ್ದಾರೆ. ಕಸಾಪ
ತಾಲ್ಲೂಕು ಘಟಕದ ಅಧ್ಯಕ್ಷ ಮಹೇಶ್‌ ಸುಂಡಹಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಲಿದ್ದಾರೆ ಎಂದು ಅವರು ಹೇಳಿದರು.

ಮಧ್ಯಾಹ್ನ 12.30ಕ್ಕೆ ಕಸಾಪ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಜಿ.ಟಿ.ವೀರಪ್ಪ ಅಧ್ಯಕ್ಷತೆಯಲ್ಲಿ ಸಂಕೀರ್ಣ ಗೋಷ್ಠಿ ನಡೆಯಲಿದ್ದು, ಸಹಾಯಕ ಪ್ರಾಧ್ಯಾಪಕ ಸಬ್ಬನಹಳ್ಳಿ ನಾಗರಾಜು ಆಶಯ ನುಡಿಗಳನ್ನು ಆಡಲಿದ್ದಾರೆ. ‘ನವೋದಯ ಸಾಹಿತ್ಯಕ್ಕೆ ಮಂಡ್ಯ ತಾಲ್ಲೂಕಿನ ಸಾಹಿತಿಗಳ ಕೊಡುಗೆ’ ಕುರಿತು ಉಪನ್ಯಾಸಕ ಬೆಕ್ಕಳಲೆ ಲೋಕೇಶ್‌, ‘ಮೈಷುಗರ್‌ ಅಳಿವು–ಉಳಿವು’ ಕುರಿತು ಸಿಐಟಿಯು ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಸಿ.ಕುಮಾರಿ ವಿಷಯ ಮಂಡಿಸಲಿದ್ದಾರೆ. ಮದ್ದೂರು, ಮಳವಳ್ಳಿ, ಶ್ರೀರಂಗಪಟ್ಟಣ ಕಸಾಪ ಘಟಕದ ಅಧ್ಯಕ್ಷರಾದ ವಿ.ಹರ್ಷ ಪಣ್ಣೆದೊಡ್ಡಿ, ದೇವರಾಜು ಕೊದೇನಕೊಪ್ಪಲು, ಎಂ.ಸುರೇಂದ್ರ ಭಾಗವಹಿಸುವರು ಎಂದು ಅವರು ವಿವರಿಸಿದರು.

ಮಧ್ಯಾಹ್ನ 2ರಿಂದ2.30ರವರೆಗೆ ಶಂಕರ್‌ ಮಾರಗೌಡನಹಳ್ಳಿ ಮತ್ತು ತಂಡದವರು ಸುಗಮ ಸಂಗೀತ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಸಾಹಿತಿ ಶ್ರೀನಿವಾಸ ಶೆಟ್ಟಿ ಅಧ್ಯಕ್ಷತೆ ಯಲ್ಲಿ ಮಧ್ಯಾಹ್ನ 2.30ಕ್ಕೆ ಕವಿ ಗೋಷ್ಠಿ ನಡೆಯಲಿದ್ದು, ಕವಯತ್ರಿ ಎಚ್.ಆರ್.ಕನ್ನಿಕಾ ಕವಿಗೋಷ್ಠಿ ಉದ್ಘಾಟಿಸಲಿದ್ದಾರೆ. ಹಿರಿಯ ಕವಿ ಕೊತ್ತತ್ತಿ ರಾಜು, ಅಂಕಣಕಾರ ಹೊಳಲು ಶ್ರೀಧರ್, ಪ್ರೊ.ಕೆ.ಪರಮೇಶ, ಪಾಂಡವಪುರ, ಕೆ.ಆರ್.ಪೇಟೆ, ನಾಗಮಂಗಲ ತಾಲ್ಲೂಕು ಕಸಾಪ ಘಟಕದ ಅಧ್ಯಕ್ಷರಾದ ವೆಂಕಟರಾಮೇಗೌಡ, ಎಚ್.ಆರ್.ಪೂರ್ಣಚಂದ್ರ ತೇಜಸ್ವಿ, ಬಸವೇಗೌಡ ಖರಡ್ಯ ಭಾಗವಹಿಸುವರು.

ಡಾ.ಕಲಾಧರ್, ಗೀತಾಮಣಿ, ಎಸ್.ಸಿ.ಮಂಗಳ, ಗಿರೀಶ್ ಗಾಣದಾಳು, ಕೊ.ನಾ.ಪುರುಷೋತ್ತಮ್, ಸಬ್ಬನಹಳ್ಳಿ ಶಶಿಧರ, ತೈರೊಳ್ಳಿ ಮಂಜುನಾಥ ಉಡುಪ, ಎಸ್.ಶ್ರೀಧರಮೂರ್ತಿ, ಗೀತಾ ಅನಂತನಾಗ್, ರಾಣಿ ಚಂದ್ರಶೇಖರ್, ಕೆ.ವಿ.ರಮೇಶ್, ಕಟ್ಟೆ ಕೃಷ್ಣಸ್ವಾಮಿ, ಬಾಲಕೃಷ್ಣ ಆನಸೋಸಲು ಹಾಗೂ ಪುನೀತ್ ಭಾಸ್ಕರ್, ಗೀತಾಮಣಿ ಕವನ ವಾಚಿಸಲಿದ್ದಾರೆ.

ಸಂಜೆ 4ಕ್ಕೆ ಸನ್ಮಾನ ಮತ್ತು ಸಮಾರೋಪ ಸಮಾರಂಭ ನಡೆಯಲಿದ್ದು, ಮಾಜಿ ಸಚಿವ ಎಂ.ಎಸ್.ಆತ್ಮಾನಂದ ಅಧ್ಯಕ್ಷತೆ ವಹಿಸಲಿದ್ದಾರೆ. ಸಾಹಿತಿ ತೈಲೂರು ವೆಂಕಟಕೃಷ್ಣ ಸಮಾರೋಪ ಭಾಷಣ ಮಾಡಲಿದ್ದಾರೆ. ಕಸಾಪ ಗೌರವ ಕಾರ್ಯದರ್ಶಿ ಎಂ.ಬಿ.ರಮೇಶ್‌ ನಿರ್ಣಯಗಳನ್ನು ಮಂಡಿಸಲಿದ್ದಾರೆ. ಮಾಜಿ ಅಧ್ಯಕ್ಷ ಎಚ್‌.ವಿ.ಜಯರಾಮು ಸಮ್ಮೇಳನಾಧ್ಯಕ್ಷರನ್ನು ಸನ್ಮಾನಿಸಲಿದ್ದಾರೆ ಎಂದು ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್‌ ತಾಲ್ಲೂಕು ಘಟಕದ ಅಧ್ಯಕ್ಷ ಮಹೇಶ್ ಸುಂಡಹಳ್ಳಿ, ಜಿಲ್ಲಾ ಘಟಕದ ಅಧ್ಯಕ್ಷ ಸಿ.ಕೆ.ರವಿಕುಮಾರ್ ಚಾಮಲಾಪುರ, ಸಂಘ–ಸಂಸ್ಥೆ ಪ್ರತಿನಿಧಿ ಹೊಳಲು ಶ್ರೀಧರ್ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.