ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಆರ್‌ಎಸ್‌ನಿಂದ ತಮಿಳುನಾಡಿಗೆ ನೀರು: ರೈತರಿಂದ ಉರುಳು ಸೇವೆ– ಆಕ್ರೋಶ

Published 21 ಆಗಸ್ಟ್ 2023, 14:12 IST
Last Updated 21 ಆಗಸ್ಟ್ 2023, 14:12 IST
ಅಕ್ಷರ ಗಾತ್ರ

ಶ್ರೀರಂಗಪಟ್ಟಣ: ಕೆಆರ್‌ಎಸ್‌ ಜಲಾಶಯದಿಂದ ತಮಿಳುನಾಡಿಗೆ ನೀರು ಹರಿಸುತ್ತಿರುವ ಕ್ರಮವನ್ನು ವಿರೋಧಿಸಿ ರೈತರಾದ ಮರಳಾಗಾಲ ಮಂಜುನಾಥ್‌ ಮತ್ತು ಪಾಲಹಳ್ಳಿಯ ಟಿ. ಗೋವಿಂದು ಪಟ್ಟಣದಲ್ಲಿ ಸೋಮವಾರ ಉರುಳು ಸೇವೆ ನಡೆಸಿದರು.

ಪಟ್ಟಣದ ಅಂಬೇಡ್ಕರ್‌ ವೃತ್ತದಿಂದ ಮಿನಿ ವಿಧಾನಸೌಧದವರೆಗೆ ಉರುಳು ಸೇವೆ ನಡೆಯಿತು. ಉರುಳು ಸೇವೆ ನಡೆಸುತ್ತಲೇ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಾಗೂ ಜಲ ಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್‌ ಅವರ ವಿರುದ್ಧ ಘೋಷಣೆ ಕೂಗಿದರು. ಮಿನಿ ವಿಧಾನಸೌಧದ ಎದುರು ಕೆಲ ಕಾಲ ಪ್ರತಿಭಟನಾ ಧರಣಿ ನಡೆಸಿದರು.

ಕೆಆರ್‌ಎಸ್‌ ಜಲಾಶಯದ ನೀರಿನ ಮಟ್ಟ 105 ಅಡಿಗೆ ಕುಸಿದಿದೆ. ಇನ್ನು ಮೂರು ದಿನ ಹೀಗೆ ನೀರು ಹರಿಸಿದರೆ 100 ಅಡಿಗೆ ಕುಸಿಯಲಿದೆ. ಮಳೆ ಬೀಳದೇ ಇದ್ದರೆ ಕುಡಿಯುವ ನೀರಿಗೂ ತೊಂದರೆಯಾಗಲಿದೆ. ಪರಿಸ್ಥಿತಿ ಹೀಗಿದ್ದರೂ ಜಲಾಶಯದಿಂದ ತಮಿಳುನಾಡಿಗೆ ನೀರು ಹರಿಸುವ ಮೂಲಕ ಸರ್ಕಾರಗಳು ಜನರಿಗೆ ದ್ರೋಹ ಮಾಡುತ್ತಿವೆ ಎಂದು ಮರಳಾಗಾಲ ಮಂಜುನಾಥ್‌ ಆಕ್ರೋಶ ವ್ಯಕ್ತಪಡಿಸಿದರು.

ನೀರು ಬೇಕಾದರೆ ನ್ಯಾಯಾಲಯಕ್ಕೆ ಹೋಗಿ ಎಂದು ಸಚಿವ ಡಿ ಕೆ. ಶಿವಕುಮಾರ್‌ ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ. ಅಂತಹವರು ಸಚಿವರಾಗಿರುವುದು ನಮ್ಮ ದುರ್ದೈವ. ಸರ್ಕಾರಕ್ಕೆ ರೈತರ ಬಗ್ಗೆ ನಿಜವಾದ ಕಾಳಜಿ ಇದ್ದರೆ ತಕ್ಷಣ ನೀರು ನಿಲ್ಲಿಸಬೇಕು. ಮಂಡ್ಯ ಜಿಲ್ಲೆಯನ್ನು ಬರ ಪೀಡಿತ ಜಿಲ್ಲೆ ಎಂದು ಘೋಷಿಸಬೇಕು ರೈತ ಸಂಘದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಮಂಜೇಶ್‌ಗೌಡ ಒತ್ತಾಯಿಸಿದರು.

ಕಾಂಗ್ರೆಸ್‌, ಜೆಡಿಎಸ್‌ ಮತ್ತು ಬಿಜೆಪಿ ಈ ಮೂರೂ ಪಕ್ಷಗಳು ರೈತರಿಗೆ ಅನ್ಯಾಯ ಮಾಡುತ್ತಿವೆ ಎಂದು ವಕೀಲ ಸಿ.ಎಸ್‌. ವೆಂಕಟೇಶ್‌ ದೂರಿದರು. ಕಬ್ಬು ಬೆಳೆಗೆ ಅಗತ್ಯ ಪ್ರಮಾಣದಲ್ಲಿ ನೀರು ಸಿಗದೆ ಕಬ್ಬಿನ ಇಳುವರಿಯಲ್ಲಿ ಕುಸಿತ ಉಂಟಾಗುತ್ತಿದೆ ಎಂದು ಕರವೇ ತಾಲ್ಲೂಕು ಘಟಕದ ಅಧ್ಯಕ್ಷ ಚಂದಗಾಲು ಶಂಕರ್‌ ಆತಂಕ ವ್ಯಕ್ತಪಡಿಸಿದರು. ತಹಶೀಲ್ದಾರ್‌ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಮರಳಾಗಾಲ ಕೃಷ್ಣೇಗೌಡ, ಮಜ್ಜಿಗೆಪುರ ಎಂ.ಎನ್‌. ಶ್ರೀನಿವಾಸ್‌, ಬೆಳಗೊಳ ಸುರೇಶ್‌, ಗಂಜಾಂ ಕುಮಾರಸ್ವಾಮಿ, ಪಾನಿಪೂರಿ ರವಿ, ಹೊನ್ನಯ್ಯ, ಎಂ. ಚಂದ್ರಶೇಖರ್‌, ಚಿಕ್ಕತಮ್ಮೇಗೌಡ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT