ಸೋಮವಾರ, 27 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದುಡಿಯುವ ವರ್ಗವ ದುರ್ಬಲಗೊಳಿಸುವ ಹುನ್ನಾರ: ನಾಗೇಶ್‌ ಆಕ್ರೋಶ

ಕಾರ್ಮಿಕ ದಿನಾಚರಣೆ: ವಿಮಾ ನೌಕರರ ಸಂಘದ ಮುಖಂಡ ನಾಗೇಶ್‌ ಆಕ್ರೋಶ
Last Updated 1 ಮೇ 2022, 11:38 IST
ಅಕ್ಷರ ಗಾತ್ರ

ಮಂಡ್ಯ: ‘ಕೇಂದ್ರ ಸರ್ಕಾರದ ಕಾರ್ಮಿಕ ನೀತಿಗಳಲ್ಲಿ ಬಂಡವಾಳಶಾಹಿಗಳಿಗೆ ಪ್ರಮುಖ ಆದ್ಯತೆ ನೀಡಿ ದುಡಿಯುವ ವರ್ಗವನ್ನು ದುರ್ಬಲಗೊಳಿಸಲಾಗುತ್ತಿದೆ. ಕಾರ್ಮಿಕರು ಒಗ್ಗಟ್ಟಿನಿಂದ ಕಾರ್ಮಿಕ ನೀತಿಗಳ ವಿರುದ್ಧ ಹೋರಾಟ ನಡೆಸಬೇಕು’ ಎಂದು ಅಖಿಲ ಭಾರತ ವಿಮಾ ನೌಕರರ ಸಂಘ, ಮೈಸೂರು ವಿಭಾಗದ ಪ್ರಧಾನ ಕಾರ್ಯದರ್ಶಿ ನಾಗೇಶ್‌ ಹೇಳಿದರು.

ಕಾರ್ಮಿಕ ದಿನಾಚರಣೆ ಅಂಗವಾಗಿ ಭಾನುವಾರ ಹೊಸಹಳ್ಳಿಯ ಗುರುಮಠದ ಸಿಐಟಿಯು ಕಚೇರಿಯಲ್ಲಿ ನಡೆದ ‘ಸೌಹಾರ್ದ ಮೇ ದಿನಾಚರಣೆ’ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.

‘ಹಲವು ಸಂಘಸಂಸ್ಥೆಗಳು ಬಿಡುಗಡೆ ಮಾಡಿರುವ ವರದಿ ಅನ್ವಯ ದೇಶದಲ್ಲಿ ಟಾಪ್‌–10 ಶ್ರೀಮಂತರು ಮಾತ್ರ ಮತ್ತಷ್ಟು ಶ್ರೀಮಂತರಾಗುತ್ತಿದ್ದಾರೆ. ಬಡವರು, ರೈತರು ಹಾಗೂ ಕಾರ್ಮಿಕರ ಮೇಲಿನ ಶೋಷಣೆ ಹೆಚ್ಚಾಗುತ್ತಿದೆ. ಕಾರ್ಮಿಕ ವಿರೋಧಿ ಕಾನೂನು ಹಾಗೂ ನೀತಿಗಳಿಂದಾಗಿ ದುಡಿಯುವ ವರ್ಗಕ್ಕೆ ಅನ್ಯಾಯ ಮಾಡಲಾಗುತ್ತಿದೆ’ ಎಂದು ಹೇಳಿದರು.

‘ಕೋವಿಡ್‌ ಬಿಕ್ಕಟ್ಟಿನ ನಂತರ ದೇಶವು 13 ವರ್ಷಗಳ ಹಿಂದಕ್ಕೆ ಸಾಗಿದೆ ಎಂದು ಅಧ್ಯಯನ ವರದಿಗಳು ಮಾಹಿತಿ ನೀಡಿವೆ. ಬಡತನ, ನಿರುದ್ಯೋಗ, ಬಡವರ ಮೇಲಿನ ಶೋಷಣೆ ತೀವ್ರವಾಗಿದೆ. ಸಾರ್ವಜನಿಕ ಉದ್ದಿಮೆಗಳನ್ನು ಮಾರಾಟ ಮಾಡುವ ಮೂಲಕ ಹಾಗೂ ಖಾಸಗೀಕರಣಗೊಳಿಸುವ ಮೂಲಕ ಕಾರ್ಮಿಕ ವರ್ಗವನ್ನು ಶೋಷಣೆ ಮಾಡಿ ಬಂಡವಾಳಶಾಹಿಗಳಿಗೆ ಮಣೆ ಹಾಕಲಾಗುತ್ತಿದೆ. ಕೇಂದ್ರ ಸರ್ಕಾರದ ಹುನ್ನಾರದ ವಿರುದ್ಧ ಕಾರ್ಮಿಕ ವರ್ಗ ಸಂಘಟಿತ ಹೋರಾಟಕ್ಕೆ ಸಜ್ಜಾಗಬೇಕು’ ಎಂದರು.

ಪ್ರಾಂತಕೃಷಿ ಕೂಲಿಕಾರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಪುಟ್ಟಮಾದು ಮಾತನಾಡಿ ‘ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಬಜೆಟ್‌ನಲ್ಲಿ ಬಡವರಿಗೆ, ರೈತರಿಗೆ, ಹಿಂದುಳಿದವರಿಗೆ, ದಲಿತರಿಗೆ, ಮಹಿಳೆಯರಿಗೆ ನೀಡಲಾಗುತ್ತಿದ್ದ ಅನುದಾನವನ್ನು ಗಣನೀಯವಾಗಿ ಕಡಿತಗೊಳಿಸಲಾಗಿದೆ. ಶ್ರೀಮಂತರಿಗೆ ಮಣೆ ಹಾಕುತ್ತಿರುವ ಸರ್ಕಾರಗಳು ಬಡವರ್ಗವನ್ನು ನಿರ್ಲಕ್ಷ್ಯ ಮಾಡುತ್ತಿವೆ. ಇಂತಹ ನೀತಿಗಳನ್ನು ಅರ್ಥಮಾಡಿಕೊಂಡು ಹೋರಾಟಕ್ಕೆ ಇಳಿಯಬೇಕಾದ ಅವಶ್ಯಕತೆ ಇದೆ’ ಎಂದು ಹೇಳಿದರು.

ಪ್ರಾಂತ ರೈತಸಂಘದ ಮುಖಂಡ ಟಿ.ಎಲ್‌.ಕೃಷ್ಣೇಗೌಡ ಮಾತನಾಡಿ ‘ಬಂಡವಾಳಶಾಹಿಗಳ ಲಾಭಕೋರತನದಿಂದಾಗಿ ದುಡಿಯುವ ವರ್ಗದ ಜನರು, ಶ್ರಮಿಕರು ಶೋಷಣೆಗೆ ಒಳಗಾಗುತ್ತಿದ್ದಾರೆ. ಸರ್ಕಾರಗಳು ಕೂಡ ಬಂಡವಾಳಶಾಹಿಗಳ ಪರವಾದ ನೀತಿಗಳನ್ನು ಜಾರಿಗೊಳಿಸುತ್ತಿವೆ. ದೇಶದ ಆದಾಯದ ಬಲು ದೊಡ್ಡ ಪಾಲು ದುಡಿಯುವ ವರ್ಗಕ್ಕೆ ಸಿಗಬೇಕು. ಆದರೆ ಅದು ಶ್ರೀಮಂತರ ಪಾಲಾಗುತ್ತಿದ್ದು ಶ್ರಮಿಕ ವರ್ಗ ಶೋಷಣೆ ಅನುಭವಿಸುತ್ತಿದೆ’ ಎಂದರು.

‘ಕೇಂದ್ರದ ನೀತಿಗಳ ವಿರುದ್ಧ ಕಾರ್ಮಿಕ ವರ್ಗ ಬಹಳ ತೀಕ್ಷ್ಣವಾಗಿ ಪ್ರತಿಕ್ರಿಯಿಸಬೇಕು. ಬಡವರ ಬೆವರು ಹಾಗೂ ಶ್ರಮಕ್ಕೆ ಹೆಚ್ಚಿನ ಫಲ ದೊರಕಬೇಕು. ಹಿರಿಯರ ಶ್ರಮ, ತ್ಯಾಗ, ಹೋರಾಟದ ಫಲವಾಗಿ ಇಂದು ಕಾರ್ಮಿಕರ ಕೆಲಸದ ಅವಧಿ 8 ಗಂಟೆಗಳಿಗೆ ಇಳಿದಿದೆ. ಸಮಸಮಾಜದ ನಿರ್ಮಾಣಕ್ಕಾಗಿ, ಸಂಪತ್ತಿನ ಸಮಾನ ಹಂಚಿಕೆಗಾಗಿ ನಿರಂತರವಾಗಿ ಹೋರಾಟ ಮುಂದುವರಿಯಬೇಕು’ ಎಂದರು.

ಕಾರ್ಮಿಕರು ಸಿಲ್ವರ್‌ ಜ್ಯೂಬಿಲಿ ಉದ್ಯಾನದಿಂದ ಸಿಐಟಿಯು ಕಚೇರಿವರೆಗೆ ಮೆರವಣಿಗೆ ನಡೆಸಿದರು. ಸಿಐಟಿಯು ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಸಿ.ಕುಮಾರಿ, ಅಂಚೆ ನೌಕರರ ಸಂಘದ ಕಾರ್ಯದರ್ಶಿ ಶಿವಣ್ಣ, ಅಖಿಲ ಭಾರತ ವಕೀಲರ ಸಂಘದ ಶ್ರೀನಿವಾಸ್‌ ಕುಮಾರ್‌, ಬಿಸಿಯೂಟ ನೌಕರರ ಸಂಘದ ಮಹಾದೇವಮ್ಮ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT