ಶನಿವಾರ, ಜೂಲೈ 11, 2020
29 °C
ಪತ್ರಿಕಾಗೋಷ್ಠಿಯಲ್ಲಿ ಡಾ. ಕೆ.ಸುಧಾಕರ್‌ ವಿರುದ್ಧ ಶಾಸಕ ಸಿ.ಎಸ್‌.ಪುಟ್ಟರಾಜು ಆರೋಪ

ಕ್ವಾರಂಟೈನ್‌ನಲ್ಲಿದ್ದರೂ ಮಂಡ್ಯದಲ್ಲಿ ಸಚಿವ ಸುಧಾಕರ್‌ ಸಭೆ: ಪುಟ್ಟರಾಜು ಆಕ್ಷೇಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಡ್ಯ: ‘ಕೊರೊನಾ ಸೋಂಕಿತ ಕ್ಯಾಮೆರಾಮನ್‌ ಸಂಪರ್ಕದಲ್ಲಿದ್ದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಬುಧವಾರ ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸಭೆ ನಡೆಸಿದ್ದು, ಅಧಿಕಾರಿಗಳು, ಜನಪ್ರತಿನಿಧಿಗಳಲ್ಲಿ ಆತಂಕ ಮೂಡಿಸಿದೆ‌‌’ ಎಂದು ಶಾಸಕ ಸಿ.ಎಸ್‌.ಪುಟ್ಟರಾಜು ಹೇಳಿದರು.

ಗುರುವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬೆಂಗಳೂರಿನ ಖಾಸಗಿ ವಾಹಿನಿ ಕ್ಯಾಮೆರಾಮನ್‌ಗೆ ಕೋವಿಡ್‌ –19 ಪಾಸಿಟಿವ್‌ ಬಂದಿದ್ದು, ಅವರ ಸಂಪರ್ಕದಲ್ಲಿ ಇದ್ದ ಐವರು ಸಚಿವರನ್ನು ಕ್ವಾರಂಟೈನ್‌ ಮಾಡಲಾಗಿದೆ. ವಿಧಾನಸಭೆಗೆ ಬರಬಾರದು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರೂ ಹೇಳಿ ದ್ದಾರೆ. ಆದರೆ ಸಚಿವ ಸುಧಾಕರ್‌ ಸಭೆ ನಡೆಸಿದ್ದು ಭಯ ಹೆಚ್ಚಾಗುವಂತೆ ಮಾಡಿದೆ’ ಎಂದು ಹೇಳಿದರು.

‘ಕ್ವಾರಂಟೈನ್‌ನಲ್ಲಿ ಇದ್ದರೂ ಸುಧಾಕರ್‌ ಹೇಗೆ ಬಂದು ಸಭೆ ನಡೆಸಿದರು. ಸಭೆಯಲ್ಲಿ ಶಾಸಕರು, ಅಧಿಕಾರಿಗಳೂ ಪಾಲ್ಗೊಂಡಿದ್ದರು. ಅಂತರ ಕಾಯ್ದುಕೊಂಡು ಸಭೆ ನಡೆಸುವಲ್ಲಿ ಜಿಲ್ಲಾಡಳಿತ ಸಂಪೂರ್ಣ ವಿಫಲವಾಗಿದೆ ಎಂದು ದೂರಿದರು.

‘ವಿಡಿಯೊ ಕಾನ್ಫರೆನ್ಸ್‌ ಮೂಲಕವೂ ಸಭೆ ನಡೆಸಿ ಅಧಿಕಾರಿಗಳಿಗೆ ಸೂಚನೆ ನೀಡಬಹುದಿತ್ತು. ಆದರೆ ಅವರೇ ಖುದ್ದಾಗಿ ಸಭೆ ನಡೆಸಿ ಆತಂಕ ಸೃಷ್ಟಿಸಿದ್ದಾರೆ. ಕಾವೇರಿ ಸಭಾಂಗಣದಲ್ಲಿ 130 ಆಸನಗಳಿವೆ. 65–70 ಅಧಿಕಾರಿಗಳು ಪಾಲ್ಗೊಳ್ಳುವ ಸಭಾಂಗಣದಲ್ಲಿ ನೂರಕ್ಕೂ ಹೆಚ್ಚು ಅಧಿಕಾರಿಗಳು ಪಾಲ್ಗೊಂಡಿದ್ದರು. ಜನ ಸಾಮಾನ್ಯರು ತಪ್ಪು ಮಾಡಿದರೆ ಶಿಕ್ಷಿಸುವ ಅಧಿಕಾರಿಗಳೇ ಜನರನ್ನು ತಪ್ಪುದಾರಿಗೆ ಎಳೆಯುವ ಕೆಲಸ ಮಾಡಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಸಭೆ ಮಾಡುವುದರಿಂದ ಸಮಸ್ಯೆ ಬಗೆಹರಿಯುವುದಿಲ್ಲ. ಜಿಲ್ಲಾಡಳಿತ, ತಾಲ್ಲೂಕು ಆಡಳಿತ, ಶಾಸಕರು ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತಂದು ಬಗೆಹರಿಸಬೇಕು‌. ಸಭೆಯಿಂದ ಏನೂ ಸಮಸ್ಯೆ ಆಗದಿದ್ದರೆ ಅಷ್ಟೇ ಸಾಕು’ ಎಂದು ಹೇಳಿದರು.

‘ಕೆಆರ್‌ಎಸ್ ಅಣೆಕಟ್ಟೆಯಿಂದ ಬೆಳೆಗಳಿಗೆ ನೀರು ಹರಿಸಿ ರೈತರ ಹಿತ ಕಾಯಬೇಕು. ಜಿಲ್ಲೆಯಲ್ಲಿ ತರಕಾರಿ, ತೋಟಗಾರಿಕೆ ಬೆಳೆಗಳನ್ನು ಬೆಳೆದ ರೈತರು ಸಂಕಷ್ಟದಲ್ಲಿ ಇದ್ದಾರೆ. ಸೂಕ್ತ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಿ ನೆರವಾಗಬೇಕು. ಮಾರಾಟಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಪಾಸ್‌ಗಳನ್ನು ವಿತರಿಸಬೇಕು. ಕೆಟ್ಟು ನಿಂತಿರುವ ಟ್ರಾನ್ಸ್‌ಫಾರ್ಮರ್‌ಗಳನ್ನು ರಿಪೇರಿ ಮಾಡಿಸಿಕೊಡುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಆಶಾ ಕಾರ್ಯಕರ್ತೆಯರಿಗೆ ಮಾಸ್ಕ್‌, ಸ್ಯಾನಿಟೈಸರ್‌ ಸೇರಿದಂತೆ ಅಗತ್ಯ ಸಲಕರಣೆ ನೀಡಬೇಕು. ವೈದ್ಯರಿಗೆ ನೀಡಿರುವ ಪಿಪಿಇ ಕಿಟ್‌ಗಳು ಕಳಪೆ ಗುಣಮಟ್ಟ ಹೊಂದಿವೆ. ಇಂತಹ ಸಂದರ್ಭದಲ್ಲಿ ಉತ್ತಮ ಗುಣಮಟ್ಟದ ಪಿಪಿಇ ಕಿಟ್‌ಗಳನ್ನು ನೀಡುವ ಮೂಲಕ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು