ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೂತನ ಶಿಕ್ಷಣ ನೀತಿಯಿಂದ ದೇಶದ ಅಭಿವೃದ್ಧಿ

ಸಾಯಿ ಛಾಯಾ ವಿದ್ಯಾರ್ಥಿ ನಿಲಯ ಉದ್ಘಾಟನೆ; ಸಚಿವ ಸಿ.ಎನ್‌.ಅಶ್ವತ್ಥನಾರಾಯಣ ಅಭಿಮತ
Last Updated 6 ಸೆಪ್ಟೆಂಬರ್ 2021, 13:13 IST
ಅಕ್ಷರ ಗಾತ್ರ

ಮಂಡ್ಯ: ‘ಹಳೆಯ ಶೈಕ್ಷಣಿಕ ವ್ಯವಸ್ಥೆಯಲ್ಲಿ ಹಲವು ನ್ಯೂನತೆಗಳಿದ್ದು ವಿದ್ಯಾರ್ಥಿಗಳು ಸ್ಪರ್ಧೆಯನ್ನು ಎದುರಿಸಲು ಸಾಧ್ಯವಾಗುತ್ತಿಲ್ಲ. ನೂತನ ಶಿಕ್ಷಣ ನೀತಿಯ (ಎನ್‌ಇಪಿ) ಪರಿಣಾಮಕಾರಿ ಅನುಷ್ಠಾನದಿಂದ ವಿದ್ಯಾರ್ಥಿಗಳ ಭವಿಷ್ಯ ಉತ್ತಮಗೊಳ್ಳಲಿದ್ದು ದೇಶ ಅಭಿವೃದ್ಧಿಯತ್ತ ಮುನ್ನಡೆಯಲಿದೆ’ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥ ನಾರಾಯಣ ಹೇಳಿದರು.

ಶ್ರೀ ಸತ್ಯ ಸಾಯಿ ಶಾಂತಿನಿಕೇತನ ಸಂಸ್ಥೆ ವತಿಯಿಂದ ತಾಲ್ಲೂಕಿನ ಮಾರದೇವರಹಳ್ಳಿ ಗ್ರಾಮದಲ್ಲಿ ನಿರ್ಮಿಸಿರುವ ಸಾಯಿ ಛಾಯ ವಿದ್ಯಾರ್ಥಿ ನಿಲಯ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

‘ಶಿಕ್ಷಣದಿಂದ ಮಾತ್ರ ದೇಶದಲ್ಲಿ ಸುಧಾರಣೆ ತರಲು ಸಾಧ್ಯ. ಹೀಗಾಗಿ ಶೈಕ್ಷಣಿಕ ವ್ಯವಸ್ಥೆಯನ್ನು ಪುನಶ್ಚೇತನಗೊಳಿಸಬೇಕು. ನಮ್ಮ ದೇಶ ಅಭಿವೃದ್ಧಿ ಹೊಂದುತ್ತಿರುವ ದೇಶವಾಗಿದ್ದು ಅಭಿವೃದ್ಧಿ ಹೊಂದಿದ ದೇಶ ಎಂದು ಪರಿಗಣಿಸಬೇಕಾದರೆ ಸದೃಢ ಶಿಕ್ಷಣ ನೀತಿ ಅನುಷ್ಠಾನ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಹೊಸ ಶಿಕ್ಷಣ ನೀತಿ ಜಾರಿಗೊಳಿಸಲಾಗಿದೆ, ಇಡೀ ದೇಶದಲ್ಲಿ ಮೊದಲ ಬಾರಿಗೆ ಕರ್ನಾಟಕದಲ್ಲಿ ಸಮಗ್ರವಾಗಿ ಅನುಷ್ಠಾನ ಮಾಡಲಾಗುತ್ತಿದೆ’ ಎಂದು ಹೇಳಿದರು.

‘ಸಮಾಜದ ಇಡೀ ಸಂಪತ್ತನ್ನು ಶಿಕ್ಷಣ ವ್ಯವಸ್ಥೆಯ ಸುಧಾರಣೆಗೆ ಮೀಸಲಿಡಬೇಕಾಗಿದೆ. ಆ ಮೂಲಕ ಸಮಾಜದ ಕಟ್ಟಕಡೆಯ ವಿದ್ಯಾರ್ಥಿಗೂ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯ. ಗುಣಮಟ್ಟದ ಶಿಕ್ಷಣ ಪಡೆದಾಗ ಮಾತ್ರ ಸಾರ್ಥಕ ಬದುಕನ್ನು ನಿರ್ಮಾಣಮಾಡಿಕೊಳ್ಳಬಹುದಾಗಿದೆ. ಜಾಗತೀಕರಣ, ಖಾಸಗೀಕರಣ ವ್ಯವಸ್ಥೆಯಲ್ಲಿ ನಮ್ಮ ಮಕ್ಕಳು ವಿಶ್ವಮಟ್ಟದಲ್ಲಿ ಸ್ಪರ್ಧೆ ಮಾಡಬೇಕಾಗಿದೆ. ಸ್ಪರ್ಧೆಗೆ ಯಾವುದೇ ದೇಶಗಳ ಗಡಿ ಇಲ್ಲ. ಮ್ಮ ಮಕ್ಕಳನ್ನು ಸ್ಪರ್ಧೆಗೆ ಅಣಿಗೊಳಿಸಬೇಕಾದ ಜವಾಬ್ದಾರಿ ಎಲ್ಲರ ಮೇಲಿದೆ’ ಎಂದರು.

‘ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಸಂದರ್ಭದಲ್ಲಿ ನೂತನ ಶಿಕ್ಷಣ ನೀತಿಯನ್ನು ಜಾರಿಗೊಳಿಸಲಾಗುತ್ತಿದೆ. ನೀತಿಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳಲಿದ್ದು ಸ್ವಾತಂತ್ರ್ಯೋತ್ಸವದ ಶತಮಾನೋತ್ಸವದ ವೇಳೆಗೆ ದೇಶ ಪರಿವರ್ತನೆಗೊಳ್ಳಲಿದ್ದು ಇಡೀ ಪ್ರಪಂಚದಲ್ಲಿ ವಿಶ್ವಗುರುವಿನ ಸ್ಥಾನ ಅಲಂಕಾರ ಮಾಡಲಿದೆ. ಇದರ ಲಾಭ ಮುಂದಿನ ಪೀಳಿಗೆಯ ಯುವಜನರಿಗೆ ದೊರಕಲಿದೆ’ ಎಂದು ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ ಮಾತನಾಡಿ ‘ಶಿಕ್ಷಣ ಹಾಗೂ ಆರೋಗ್ಯಕ್ಕಿಂತ ಮಿಗಿಲಾದ ಧರ್ಮ ಇನ್ನೊಂದಿಲ್ಲ. ನಮ್ಮ ರಾಜ್ಯದ ಮಠ ಮಾನ್ಯಗಳು ಹಲವು ವರ್ಷಗಳಿಂದ ಜನರಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಹಾಗೂ ಆರೋಗ್ಯ ಸೇವೆಯನ್ನು ಒದಗಿಸುತ್ತಿವೆ. ಸಾಯಿ ಶಿಕ್ಷಣ ಸಂಸ್ಥೆಯನ್ನು ನೋಡಿ ನನಗೆ ಬಹಳ ಸಂತೋಷವಾಗಿದೆ. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ, ಶಿಸ್ತು ಕಲಿಸುವ ಮೂಲಕ ಅವರನ್ನು ಸದೃಢ ಪ್ರಜೆಗಳನ್ನಾಗಿ ರೂಪಿಸುತ್ತಿದೆ’ ಎಂದರು.

ಆದಿಚುಂಚನಗಿರಿ ಮಠದ ಪೀಠಾಧಿಕಾರಿ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಆಶೀರ್ವಚನ ನೀಡಿ ‘ಶಿಕ್ಷಣ ಆತ್ಮದಷ್ಟೇ ಶಾಶ್ವತವಾದುದು. ಆತ್ಮ ನಮ್ಮ ದೇಹವನ್ನಷ್ಟೇ ಬದಲಾವಣೆ ಮಾಡುತ್ತದೆ, ಆತ್ಮಕ್ಕೆ ಎಂದಿಗೂ ಸಾವಿಲ್ಲ. ಅಂತೆಯೇ ಶಿಕ್ಷಣವೂ ಕೂಡ ಶಾಶ್ವತವಾಗಿ ಸಮಾಜದಲ್ಲಿ ಉಳಿಯುತ್ತದೆ, ಸಮಾಜದ ಸ್ವಸ್ಥವನ್ನು ಕಾಪಾಡುತ್ತದೆ’ ಎಂದರು.

ಸಮಾರಂಭದಲ್ಲಿ ಸದ್ಗುರು ಮಧುಸೂದನ ಸಾಯಿ ಸಾನ್ನಿಧ್ಯ ವಹಿಸಿದ್ದರು. ಅನುಗ್ರಹ ಚಾರಿಟಬಲ್‌ ಟ್ರಸ್ಟ್‌ನ ಡಾ.ಗಿರೀಶ್‌ ಮಲ್ಹೋತ್ರಾ, ದೀಪಕ್‌ ಮೆಹತಾ, ಸತ್ಯಸಾಯಿ ವಿ.ವಿ ಕುಲಪತಿ ಬಿ.ಎನ್‌ನರಸಿಂಹಮೂರ್ತಿ, ಉಪ ಕುಲಪತಿ ಪ್ರೊ.ಬಿ.ಎನ್‌.ನರಸಿಂಹಮೂರ್ತಿ ಹಾಜರಿದ್ದರು.

*****

ಸಾಯಿ ಸಂಸ್ಥೆಗೆ ಭೂಮಿ ನೀಡಲು ಸಿದ್ಧ

‘ಸತ್ಯ ಸಾಯಿ ಶಿಕ್ಷಣ ಸಂಸ್ಥೆ ವಿದ್ಯಾರ್ಥಿಗಳಲ್ಲಿ ಶಿಸ್ತು, ಸಂಯಮ ಬೆಳೆಸುತ್ತಿದೆ, ವ್ಯಕ್ತಿತ್ವ ನಿರ್ಮಾಣ ಮಾಡುತ್ತಿದೆ. ಇಂತಹ ಸಂಸ್ಥೆಗಳು ಎಲ್ಲಾ ಜಿಲ್ಲೆಗಳಲ್ಲೂ ನಿರ್ಮಾಗೊಳ್ಳಬೇಕು, ಸಂಸ್ಥೆ ವಿಸ್ತರಣೆಗೊಳ್ಳಬೇಕು. ಸಾಯಿ ಸಂಸ್ಥೆಗೆ ಭೂಮಿ ನೀಡಲು ಸರ್ಕಾರ ಸಿದ್ಧವಿದೆ’ ಎಂದು ಸಚಿವ ಸಿ.ಎನ್‌.ಅಶ್ವತ್ಥನಾರಾಯಣ ಹೇಳಿದರು.

‘ರಾಮನಗರ ಜಿಲ್ಲೆಯಲ್ಲಿ ಶೀಘ್ರ ಸಾಯಿ ಶಿಕ್ಷಣ ಸಂಸ್ಥೆ ನಿರ್ಮಾಣಗೊಳ್ಳಲಿದೆ. ಮಾಗಡಿ ಬಳಿ ಭೂಮಿ ಮಂಜೂರು ಮಾಡುವ ಪ್ರಕ್ರಿಯೆ ಪ್ರಗತಿಯಲ್ಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT