ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಜನರ ಅಲೆದಾಟ ಇನ್ನಿಲ್ಲ: ಶಾಸಕ ದರ್ಶನ್

ಸರ್ಕಾರಿ ಸೇವೆ ಮನೆ ಬಾಗಿಲಿಗೆ: ಗ್ರಾಮದಲ್ಲಿ 10ದಿನ 30 ಇಲಾಖೆಗಳ ಅಧಿಕಾರಿಗಳು
Published 13 ಜೂನ್ 2024, 16:37 IST
Last Updated 13 ಜೂನ್ 2024, 16:37 IST
ಅಕ್ಷರ ಗಾತ್ರ

ಪಾಂಡವಪುರ: ಜನರು ಸರ್ಕಾರಿ ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಲು ಅಧಿಕಾರಿಗಳು ಪಂಚಾಯಿತಿಲ್ಲಿಯೇ ಬೀಡುಬಿಟ್ಟು ಸರ್ಕಾರಿ ಸೇವೆಗಳನ್ನು ನಿಮ್ಮನೆ ಬಾಗಿಲಿಗೆ ತಲುಪಿಸಲಿದ್ದಾರೆ ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ಹೇಳಿದರು.

ತಾಲ್ಲೂಕಿನ ಕೆನ್ನಾಳು ಗ್ರಾಮ ಪಂಚಾಯಿತಿಯಲ್ಲಿ ಗುರುವಾರ ‘ಸರ್ಕಾರಿ ಸೇವೆಗಳು ನಿಮ್ಮನೆ ಬಾಗಿಲಿಗೆ’ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ತಾಲ್ಲೂಕು ಮಟ್ಟದ ಅಧಿಕಾರಿಗಳು, ಎಲ್ಲಾ ಇಲಾಖೆ ಅಧಿಕಾರಿಗಳು  10 ದಿನ  ಕೆನ್ನಾಳು ಗ್ರಾಮ ಪಂಚಾಯಿತಿಯಲ್ಲಿಯೇ ಬೀಡುಬಿಟ್ಟು ಜನರಿಗೆ ನೀಡಬೇಕಾದ ಎಲ್ಲ ಸೌಲಭ್ಯಗಳನ್ನುಜನರ ಮನೆ ಗೆ ತಲುಪಿಸಲಿದ್ದಾರೆ. ಸರ್ಕಾರಿ ಕಚೇರಿಗಳಿಗೆ ನೀವು ಬರಬೇಡಿ, ಕಚೇರಿಯೇ ನಿಮ್ಮನೆ ಬಾಗಿಲಿಗೆ ಬಂದಿದೆ, ಇದು ಸೇವೆಯಲ್ಲ, ನಮ್ಮ ಕರ್ತವ್ಯ ಎಂದರು.

ಪ್ರಾಯೋಗಿಕವಾಗಿ  ಕೆನ್ನಾಳು ಪಂಚಾಯಿತಿಯಲ್ಲಿ ಕಾರ್ಯಕ್ರಮ ರೂಪಿಸಿದ್ದೇವೆ.  ಹಂತಹಂತವಾಗಿ ಮೇಲುಕೋಟೆ ಕ್ಷೇತ್ರದ ಎಲ್ಲಾ 35 ಗ್ರಾಮ ಪಂಚಾಯಿತಿಗಳಲ್ಲೂ ನಡೆಯಲಿವೆ ಎಂದರು. 2 ವರ್ಷದೊಳಗೆ ಎಲ್ಲಾ ಪಂಚಾಯಿತಿಗಳಲ್ಲಿ ಕಾರ್ಯಕ್ರಮ ರೂಪಿಸಿ, ಜನರ ಸಮಸ್ಯೆಗಳಿಗೆ ಪರಿಹಾರ ದೊರಕಿಸಿಕೊಡಲಾಗುವುದು. 30ಕ್ಕೂ ಹೆಚ್ಚು ಇಲಾಖೆ ಅಧಿಕಾರಿಗಳು ಪಂಚಾಯಿತಿಯಲ್ಲಿಯೇ ಬೀಡುಬಿಟ್ಟು ಜನರ ಸಮಸ್ಯೆಗಳಿಗೆ ಸ್ಪಂದಿಸಲಿದ್ದಾರೆ. ನಾನೂ ಅಹವಾಲುಗಳನ್ನು ಸ್ವೀಕರಿಸಿ ಸಮಸ್ಯೆಗಳಿಗೆ ಪರಿಹಾರ ಹುಡುಕುತ್ತೇನೆ ಎಂದರು.

ಊರೊಟ್ಟಿನ ಕೆಲಸ: ಸರ್ಕಾರದ ಎಲ್ಲಾ ಇಲಾಖೆಗಳ ಸೇವೆಗಳನ್ನು ತಲುಪಿಸುವುದರ ಜೊತೆಗೆ ಗ್ರಾಮದಲ್ಲಿ ನನೆಗುದಿಗೆ ಬಿದ್ದಿರುವ ಸಮಸ್ಯೆಗಳನ್ನು ಬಗೆಹರಿಸುವ ಪ್ರಯತ್ನ ಮಾಡಲಾಗುವುದು. ಅಕ್ರಮ ಮದ್ಯ ನಿಯಂತ್ರಣ, ಜಮೀನು, ನೀರು, ರಸ್ತೆ, ಚರಂಡಿ, ಜಮೀನಿನ ಬದು ನಿರ್ವಹಣೆ ಸೇರಿದಂತೆ ಸಣ್ಣಪುಟ್ಟ ಸಮಸ್ಯೆಗಳಿಗಾಗಿ  ಕೋರ್ಟ್ ಅಲೆಯುವುದನ್ನು ತಪ್ಪಿಸಲು ಪ್ರಯತ್ನ ಮಾಡಲಾಗವುದು   ಎಂದರು.

ಮನೆಗೊಂದು ಮರ: ಈಗ ಮಳೆಗಾಲ ಪ್ರಾರಂಭವಾಗಿದ್ದು, ಊರಿನ ಜನರು ತಮ್ಮ ಶಾಲಾ ಮಕ್ಕಳೊಂದಿಗೆ ಒಂದೊಂದು ಸಸಿ ನೆಟ್ಟು ನೀರೆರೆದು ಪೋಷಿಸಿ ಊರಿಗೊಂದು ವನ ಮಾಡಬೇಕಿದೆ. ನಮ್ಮ ನಮ್ಮ ಮನೆಮುಂದಲ ಚರಂಡಿ, ಬೀದಿ ಸ್ವಚ್ಛ  ನಾವೇ ಮಾಡಿಕೊಳ್ಳುವ ನಿಟ್ಟಿನಲ್ಲಿ ಯೋಚಿಸಬೇಕಿದೆ ಎಂದು ಶಾಸಕ ಹೇಳಿದರು.

ಶಾಲೆಯಿಂದ ಹೊರಗುಳಿಯಬಾರದು: ಪ್ರತಿ ಗ್ರಾಮದಲ್ಲಿ ಜನರು ತಮ್ಮ ಮಕ್ಕಳನ್ನು ಕಡ್ಡಾಯವಾಗಿ ಶಾಲೆಗೆ ಕಳುಹಿಸಬೇಕು. ಯಾವ ಮಕ್ಕಳು ಶಾಲೆಯಿಂದ ಹೊರಗುಳಿಯಬಾರದು ಎಂದು ಮನವಿ ಮಾಡಿದರು.

ಭ್ರೂಣ ಹತ್ಯೆ, ಬಾಲ್ಯ ವಿವಾಹ ನಿಲ್ಲಲಿ: ಜಿಲ್ಲೆಯಲ್ಲಿ ನಡೆಯತ್ತಿರುವ ಹೆಣ್ಣು ಭ್ರೂಣ ಹತ್ಯೆ ಮತ್ತು ಬಾಲ್ಯ ವಿವಾಹ ಪದ್ದತಿಗಳನ್ನು ಸಂಪೂರ್ಣವಾಗಿ ನಿಲ್ಲಿಸಲು ಕಟ್ಟುನಿಟ್ಟಿನ ಕ್ರಮಕೈಗೊಳ್ಳುವ ಜತೆಗೆ ಜನರಿಗೆ ಅರಿವು ಮೂಡಿಸುವ ಕಾರ್ಯಕ್ರಮ ರೂಪಿಸಬೇಕಿದೆ ಎಂದರು.

ಉಪ ವಿಭಾಗಾಧಿಕಾರಿ ನಂದೀಶ್, ಗ್ರೇಡ್–2 ತಹಶೀಲ್ದಾರ್ ಸಂತೋಷ್, ತಾಲ್ಲೂಕು ಪಂಚಾಯಿತಿ ಆಡಳಿತಾಧಿಕಾರಿ ಹಾಗೂ ಕೃಷಿ ಜಂಟಿ ವಿ.ನಿರ್ದೇಶಕ ಅಶೋಕ್, ಇಒ ಲೋಕೇಶ್ ಮೂರ್ತಿ, ಕೆನ್ನಾಳು ಪಂಚಾಯಿತಿ ಅಧ್ಯಕ್ಷ ಪ್ರಕಾಶ್,  ಅಧಿಕಾರಿಗಳು ಇದ್ದರು.

‘ರಾಜ್ಯದಲ್ಲಿಯೇ ಪ್ರಥಮ’

ಮೇಲುಕೋಟೆ ವಿಧಾನ ಸಭಾ ಕ್ಷೇತ್ರದಲ್ಲಿ ನಾನು ರೂಪಿಸಿರುವ ‘ಸರ್ಕಾರಿ ಸೇವೆಗಳು ನಿಮ್ಮನೆ ಬಾಗಿಲಿಗೆ’ ಮತ್ತು ಊರೊಟ್ಟಿನ ಕೆಲಸ ಕಾರ್ಯಕ್ರಮವು ರಾಜ್ಯದಲ್ಲಿಯೇ ಪ್ರಥಮ.  ಕಂದಾಯ ಗ್ರಾಮೀಣಾಭಿವೃದ್ದಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಚರ್ಚೆ ನಡೆಸಲಾಗುವುದು. ನಮ್ಮ ತಾಲ್ಲೂಕು ಆಡಳಿತ ಜಿಲ್ಲಾಡಳಿತವು ನಮ್ಮೊಂದಿಗೆ ಕೈಜೋಡಿಸಿವೆ ಎಂದು ಶಾಸಕ ದರ್ಶನ್‌ ಪುಟ್ಟಣ್ಣಯ್ಯ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT