ಮಂಗಳವಾರ, ಮೇ 18, 2021
30 °C
ಕಂದಾಯ ಸಿಬ್ಬಂದಿ ವಿರುದ್ಧ ಶ್ರೀರಂಗಪಟ್ಟಣ ಶಾಸಕ ರವೀಂದ್ರ ಶ್ರೀಕಂಠಯ್ಯ ಗುಡುಗು

‘ಬಟ್ಟೆ ಬಿಚ್ಚಿಸಿ ಜೈಲಿಗೆ ಕಳುಹಿಸುತ್ತೇನೆ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶ್ರೀರಂಗಪಟ್ಟಣ: ‘ತಾಲ್ಲೂಕು ಕಚೇರಿಯಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ. ಜನರ ಕೆಲಸಗಳ ಒಂದೂ ಆಗುತ್ತಿಲ್ಲ. ನಡೆದಿರುವ ಕೆಲಸದಲ್ಲೂ ಲೋಪವಾಗಿದೆ. ಇದೇ ಪ್ರವೃತ್ತಿ ಮುಂದುವರಿದರೆ ಬಟ್ಟೆ ಬಿಚ್ಚಿಸುತ್ತೇನೆ; ಜೈಲಿಗೂ ಕಳುಹಿಸುತ್ತೇನೆ’ ಎಂದು ಶಾಸಕ ರವೀಂದ್ರ ಶ್ರೀಕಂಠಯ್ಯ ಕಂದಾಯ ಇಲಾಖೆ ಸಿಬ್ಬಂದಿ ವಿರುದ್ಧ ಹರಿಹಾಯ್ದರು.

ಪಟ್ಟಣದ ತಾಲ್ಲೂಕು ಕಚೇರಿಯಲ್ಲಿ ಸೋಮವಾರ ನಡೆದ ಜನ ಸ್ಪಂದನ ಸಭೆಯಲ್ಲಿ ಅವರು ಗ್ರಾಮ ಲೆಕ್ಕಿಗರು, ಕಂದಾಯ ನಿರೀಕ್ಷಕರನ್ನು ತರಾಟೆಗೆ ತೆಗೆದುಕೊಂಡರು.

ತಹಶೀಲ್ದಾರ್ ಎಂ.ವಿ.ರೂಪಾ ವಿರುದ್ಧವೂ ಅಸಹನೆ ವ್ಯಕ್ತಪಡಿಸಿದರು. ‘ನೀವು ಬಂದ ಬಳಿಕ ತಾಲ್ಲೂಕು ಕಚೇರಿ ಅಧ್ವಾನವಾಗಿದೆ. ಜನ ಬೇಸತ್ತಿದ್ದಾರೆ. ನಿಮ್ಮ ತಪ್ಪುಗಳಿಗೆ ಬೆಲೆ ತೆರಬೇಕಾಗುತ್ತದೆ’ ಎಂದು ಎಚ್ಚರಿಸಿದರು.

2015ರ ಈಚೆಗೆ ಮರಣ ಹೊಂದಿರುವವರ ಹೆಸರನ್ನು ಆಧಾರ್‌ ಮತ್ತು ಪಡಿತರ ಚೀಟಿಯಿಂದ ತೆಗೆಯುವ ಹಾಗೂ ಪಿಂಚಣಿ ಯೋಜನೆಯಿಂದ ಶಾಶ್ವತವಾಗಿ ಕೈ ಬಿಡುವ ಉದ್ದೇಶದಿಂದ ಜಾರಿಗೆ ಬಂದಿರುವ ‘ಈ ಜನ್ಮ’ ಆ್ಯಪ್‌ಗೆ ಮಾಹಿತಿ ತುಂಬುವಾಗ 411 ಮಂದಿ ಮೃತರಿಗೆ ಒಂದೇ ಆಧಾರ್‌ ಸಂಖ್ಯೆ ಕೊಡಲಾಗಿದೆ. ಇದರಲ್ಲಿ ತಹಶೀಲ್ದಾರ್‌, ಶಿರಸ್ತೇದಾರ್‌, ಕಂದಾಯ ನಿರೀಕ್ಷಕರು ಹಾಗೂ ಗ್ರಾಮಲೆಕ್ಕಿಗರು ಲೋಪ ಎಸಗಿದ್ದಾರೆ. ಜಿಲ್ಲೆಗೆ ಪೈಲಟ್‌ ಯೋಜನೆಯಾಗಿ ಬಂದಿರುವ ಈ ಯೋಜನೆಗೆ ಕೆಟ್ಟ ಹೆಸರು ತಂದಿದ್ದಾರೆ. ಗ್ರಾಮಲೆಕ್ಕಿಗರಾದ ಪುಟ್ಟಸ್ವಾಮಿ, ಮಂಜುನಾಥ್‌, ರಮೇಶ್‌, ಸಿದ್ದೇಶ್‌ ಇತರರು ತಪ್ಪು ಮಾಡಿರುವುದು ಸಾಬೀತಾಗಿದೆ. ತಪ್ಪು ಮಾಡಿರುವವರ ವಿರುದ್ಧ ಕಂದಾಯ ಇಲಾಖೆ ಕಾರ್ಯದರ್ಶಿಗೆ ದೂರು ನೀಡಿದ್ದೇನೆ ಎಂದು ರವೀಂದ್ರ ಶ್ರೀಕಂಠಯ್ಯ ಹೇಳಿದರು.

ಪೌತಿ ಖಾತೆ ಮಾಡಿಕೊಡಲು ರೈತರು ಅರ್ಜಿ ಕೊಟ್ಟು ಹತ್ತಾರು ತಿಂಗಳು ಕಳೆದರೂ ಖಾತೆ ಮಾಡಿಕೊಟ್ಟಿಲ್ಲ. ಲಂಚಕ್ಕೆ ಬೇಡಿಕೆ ಇಟ್ಟಿದ್ದು, ಅರ್ಜಿ ವಿಲೇ ಇಟ್ಟಿದ್ದಾರೆ ಎಂದು ಶಾಸಕರು ಅಸಮಾಧಾನ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ಟಿ.ಎಂ.ಮಹೇಶ್‌, ಹೊಸಉಂಡವಾಡಿ ಬೋರಮ್ಮ ಇತರರು ಕೂಡ ಕಂದಾಯ ಇಲಾಖೆ ಸಿಬ್ಬಂದಿಯ ವಿರುದ್ಧ ಲಂಚದ ಆರೋಪ ಮಾಡಿದರು.

ಜನ ಸ್ಪಂದನ ಸಭೆಯಲ್ಲಿ 150ಕ್ಕೂ ಹೆಚ್ಚು ಅರ್ಜಿಗಳು ಬಂದಿವೆ. ಎಲ್ಲ ಅರ್ಜಿಗಳು ವಿಲೇವಾರಿ ಆಗುವವರೆಗೆ ಸಭೆ ಮುಂದುವರಿಯಲಿದೆ ಎಂದು ರವೀಂದ್ರ ಶ್ರೀಕಂಠಯ್ಯ ತಿಳಿಸಿದರು.

ಜಿ.ಪಂ.ಸದಸ್ಯೆ ಸವಿತಾ ಲೋಕೇಶ್‌, ಪುರಸಭೆ ಅಧ್ಯಕ್ಷೆ ನಿರ್ಮಲಾ, ಉಪಾಧ್ಯಕ್ಷ ಎಸ್‌.ಪ್ರಕಾಶ್‌, ಸದಸ್ಯ ಗಂಜಾಂ ಕೃಷ್ಣಪ್ಪ ಹಾಗೂ ಕಂದಾಯ ಇಲಾಖೆ ಸಿಬ್ಬಂದಿ ಸಭೆಯಲ್ಲಿ ಭಾಗವಹಿಸಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು