ಸೋಮವಾರ, ಆಗಸ್ಟ್ 8, 2022
22 °C
ಆಸರೆಯಾಗಿದ್ದ ತಾಯಿಯ ಸಾವಿನಿಂದ ಕಂಗಾಲಾದ ಮಕ್ಕಳು; ಕಾಡುತ್ತಿರುವ ಹಸಿವು

ಮೂವರು ಅಂಧರ ಬೆಳಕು ಕಸಿದ ಕೋವಿಡ್‌

ಟಿ.ಕೆ.ಲಿಂಗರಾಜು Updated:

ಅಕ್ಷರ ಗಾತ್ರ : | |

Prajavani

ಮಳವಳ್ಳಿ: ಅಂಧತ್ವದ ಜೊತೆ ಬದುಕುತ್ತಿದ್ದ ಮೂವರು ವ್ಯಕ್ತಿಗಳಿಗೆ, ಅವರ ವಯೋವೃದ್ಧ ತಾಯಿಯೇ ಬೆಳಕಾಗಿದ್ದರು. ಆ ತಾಯಿ ಜೀವವನ್ನು ಕೋವಿಡ್‌–19, ಕಸಿದುಕೊಂಡಿದ್ದು, ಅಂಧರ ಬೆಳಕು ಆರಿ ಹೋಗಿದೆ.

ತಾಲ್ಲೂಕಿನ ಬಿ.ಜಿ.ಪುರ ಹೋಬಳಿಯ ಕ್ಯಾತನಹಳ್ಳಿ ಗ್ರಾಮದ 55 ವರ್ಷದ ವಿಧವೆ ಶಾಂತಮ್ಮ, ಅವಿವಾಹಿತರಾದ ಸಿದ್ದಮ್ಮ (52), ಸಿದ್ದರಾಜು (44) ಅವರಿಗೆ ಶೇ 70ರಷ್ಟು ಅಂಧತ್ವವಿದೆ. ಇವರ ಬದುಕಿಗೆ ತಾಯಿ 70 ವರ್ಷದ ಜಾನಕಮ್ಮ ಆಸರೆಯಾಗಿದ್ದರು. ಕಳೆದ ತಿಂಗಳು ಜಾನಕಮ್ಮ ಕೋವಿಡ್‌ನಿಂದ ಮೃತಪಟ್ಟ ಮೇಲೆ,  ಅವರ ಮೂವರು ಅಂಧ ಮಕ್ಕಳ ಬದುಕು ಅತಂತ್ರವಾಗಿದೆ.

ಮೂವರೂ ತಮ್ಮ ಕೆಲಸವನ್ನು ತಾವು ಮಾಡಿಕೊಳ್ಳಲು ಅಸಮರ್ಥರಾಗಿದ್ದಾರೆ. ತಾಯಿ ಜಾನಕಮ್ಮಇಲ್ಲದೇ ದಿಕ್ಕು ತೋಚದಂತಾಗಿರುವ ಇವರಿಗೆ, ಊಟಕ್ಕೂ ತೊಂದರೆಯಾಗಿದೆ.

3 ವರ್ಷಗಳ ಹಿಂದೆ ಪತಿಯನ್ನು ಕಳೆದುಕೊಂಡ ಜಾನಕಮ್ಮ, ಹೂವು ಕಟ್ಟಿ, ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದರು. ಮಕ್ಕಳಿಗೆ ವಯಸ್ಸಾಗಿ ದ್ದರೂ ಸಣ್ಣ ಮಕ್ಕಳ ರೀತಿಯಲ್ಲಿ ನೋಡಿಕೊಳ್ಳುತ್ತಿದ್ದರು. ಸಣ್ಣದೊಂದು ಮನೆ ಹೊರತು ಪಡಿಸಿದರೆ ಜೀವನ ನಡೆಸಲು ಬೇರೆ ಆಧಾರ ಇಲ್ಲವಾಗಿದೆ.

‘ನಾವು ಬೆಳಿಗ್ಗೆ ಏಳುವಷ್ಟರಲ್ಲಿ ಅಮ್ಮ ಅಡುಗೆ ಮಾಡಿ ಹೂ ವ್ಯಾಪಾರಕ್ಕೆ ಹೋಗುತ್ತಿದ್ದರು. ಅವಳು ಮೃತಪಟ್ಟ ನಂತರ ನಮಗೆ ಯಾರೂ ಇಲ್ಲ. ಊಟಕ್ಕೂ ತೊಂದರೆಯಾಗಿದೆ. ಅಕ್ಕ ಶಾಂತಮ್ಮನಿಗೆ ನಾಲ್ಕು ತಿಂಗಳಿಂದ ವಿಧವಾ ವೇತನ ಬಂದಿಲ್ಲ. ನನ್ನೊಬ್ಬನಿಗೆ ಮಾಸಾಶನ ಬರುತ್ತಿದ್ದು, ಅದರಲ್ಲಿ ಮೂವರಿಗೂ ಜೀವನ ಸಾಗಿಸಲು ಆಗುತ್ತಿಲ್ಲ’ ಎಂದು ಅಂಧತ್ವದಿಂದ ಬಳಲುತ್ತಿರುವ ಸಿದ್ದರಾಜು ಹೇಳಿದರು.

‘ಸಿದ್ದಮ್ಮನಿಗೆ ಅಂಧತ್ವ ಇದ್ದರೂ ಆಕೆಗೆ ಮಾಸಾಶನ ಬರುತ್ತಿಲ್ಲ. ಆಕೆಗೆ ಆದಷ್ಟು ಬೇಗ ಮಾಸಾಶನ ಸಿಗುವಂತಾಗಬೇಕು. ಸರ್ಕಾರ ಇವರ ಜೀವನ ನಿರ್ವಹಣೆಗೆ ಸಹಾಯ ಮಾಡಬೇಕು’ ಎಂದು ಕ್ಯಾತನಹಳ್ಳಿ ಗ್ರಾಮಸ್ಥರು ಒತ್ತಾಯಿಸಿದರು. 

‘ಅಂಧತ್ವದಿಂದ ಬಳಲುತ್ತಿರುವ ಸಿದ್ದಮ್ಮ ಮಾಸಾಶನ ಕೋರಿ ಅರ್ಜಿ ಸಲ್ಲಿಸಿಲ್ಲ. ಆದರೂ ತಕ್ಷಣವೇ ಅವರ ಮನೆಗೆ ತೆರಳಿ ಮಾಹಿತಿ ಸಂಗ್ರಹಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾ ಗುವುದು. ಮುಂದಿನ ವಾರವೇ ಅವರಿಗೆ ಮಾಸಾಶನ ಆದೇಶ ಪತ್ರ ನೀಡ ಲಾಗುವುದು’ ಎಂದು ತಹಶೀಲ್ದಾರ್‌ ಎಂ.ವಿಜಯಣ್ಣ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು