ಸೋಮವಾರ, ಸೆಪ್ಟೆಂಬರ್ 26, 2022
22 °C
ರಾಷ್ಟ್ರೀಯ ಹೆದ್ದಾರಿ ಕಮಿಷನ್‌; ಜೆಡಿಎಸ್‌ ಶಾಸಕರಿಗೆ ಸಂಸದೆ ಸುಮಲತಾ ಬಹಿರಂಗ ಸವಾಲು

ಆಣೆ, ಪ್ರಮಾಣ ಮಾಡಲು ಮೇಲುಕೋಟೆಗೆ ಬನ್ನಿ: ಜೆಡಿಎಸ್‌ ಶಾಸಕರಿಗೆ ಸುಮಲತಾ ಸವಾಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಡ್ಯ: ‘ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಕಮಿಷನ್‌ ಪಡೆದಿರುವುದಾಗಿ ಕೆಲ ಶಾಸಕರು ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ದಾಖಲೆಗಳನ್ನು ಇಟ್ಟುಕೊಂಡು ಮೇಲುಕೋಟೆಗೆ ಬನ್ನಿ, ಚೆಲುವನಾರಾಯಣಸ್ವಾಮಿ ಮುಂದೆ ಆಣೆ, ಪ್ರಮಾಣ ಮಾಡೋಣ’ ಎಂದು ಸಂಸದೆ ಸುಮಲತಾ ಮಂಗಳವಾರ ಜೆಡಿಎಸ್‌ ಶಾಸಕರಿಗೆ ಬಹಿರಂಗ ಸವಾಲು ಹಾಕಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ನಾನು ಎಂ.ಪಿ ಪ್ರಮಾಣ ಪತ್ರದೊಂದಿಗೆ ಮೇಲುಕೋಟೆಗೆ ಬರುತ್ತೇನೆ. ಶಾಸಕರು ಕೂಡ ಎಂ.ಎಲ್‌.ಎ ಪ್ರಮಾಣ ಪತ್ರದೊಂದಿಗೆ ಮೇಲುಕೋಟೆಗೆ ಬಂದು ಆಣೆ, ಪ್ರಮಾಣ ಮಾಡಲಿ. ಆಗ ಯಾರು ಕಮಿಷನ್‌ ಪಡೆದಿದ್ದಾರೆ ಎಂಬುದು ತಿಳಿಯುತ್ತದೆ. ಸುಮ್ಮನೇ ಮಾತನಾಡಬಾರದು, ದಾಖಲೆ ಸಮೇತ ಬಂದು ಆಣೆ ಮಾಡಬೇಕು’ ಎಂದರು.

‘ನಾನು ಬೇರೆಯವರ ರೀತಿಯಲ್ಲಿ ಕದ್ದು ಮುಚ್ಚಿ ವ್ಯವಹಾರ ಮಾಡುವುದಿಲ್ಲ, ಪಾರದರ್ಶಕವಾಗಿ ಕೆಲಸ ಮಾಡುತ್ತಿದ್ದೇನೆ. ಕೆಲವರು ಅಂಬರೀಷ್‌ ವಿರುದ್ಧ ಟೀಕೆ ಮಾಡುತ್ತಿರುವುದು ಅವರ ಅಭಿಮಾನಿಗಳಿಗೆ ನೋವು ತರಿಸಿದೆ. ನಮ್ಮ ನಡುವೆ ಇಲ್ಲದವರ ಬಗ್ಗೆ ಯಾರೂ ಕೆಟ್ಟದಾಗಿ ಮಾತನಾಡಬಾರದು. ಅಂಬರೀಷ್‌ ವಿರುದ್ಧ ನೀವು ಮಾತನಾಡಿದರೆ ಅದು ನಿಮ್ಮ ವ್ಯಕ್ತಿತ್ವ, ಸಂಸ್ಕೃತಿ ತೋರಿಸುತ್ತದೆ’ ಎಂದರು.

‘ನಾನು ಇದ್ದೇನೆ, ನನ್ನ ಬಗ್ಗೆ ಮಾತನಾಡಿ. ಅಂಬರೀಷ್‌ ನನಗೆ ಎಲ್ಲವನ್ನೂ ಕೊಟ್ಟಿದ್ದಾರೆ. ನಾನು ಜನಸೇವೆಗಾಗಿ ಇಲ್ಲಿಗೆ ಬಂದಿದ್ದೇನೆ. ನಾನು ಕಮೀಷನ್‌ ಪಡೆದು ಕೆಲಸ ಮಾಡಬೇಕಾದ ಅವಶ್ಯಕತೆ ಇಲ್ಲ. ನಾನು ಸಂಸದೆಯಾಗಿ ನನ್ನ ಕೆಲಸ ಮಾಡುತ್ತಿದ್ದೇನೆ. ನನಗಿಂತಲೂ ಉತ್ತಮವಾಗಿ ಕೆಲಸ ಮಾಡಿದ್ದರೆ ದಾಖಲೆ ತೋರಿಸಿ’ ಎಂದು ಸವಾಲು ಹಾಕಿದರು.

‘ಹಲ್ಲು ಕೀಳಿಸಿಕೊಳ್ಳಲು ಲಂಡನ್‌ಗೆ ಹೋಗುತ್ತಿರುವುದಾಗಿ ಕೋರ್ಟ್‌ನಿಂದ ಅನುಮತಿ ಪಡೆದಿದ್ದಾರೆ. ಹಲ್ಲು ಕೀಳಿಸಿಕೊಳ್ಳಲು ಲಂಡನ್‌ಗೆ ಹೋಗಬೇಕಾ? ಅವರು ಬೇಲ್‌ ಮೇಲೆ ಹೊರಗಿದ್ದಾರೆ, ನನ್ನ ವಿರುದ್ಧ ಇಲ್ಲಸಲ್ಲದ ಟೀಕೆ ಮಾಡುತ್ತಾರೆ. ಕ್ರಿಮಿನಲ್‌ಗಳಿಂದ ನಾನು ಪಾಠ ಕಲಿಯಬೇಕಿಲ್ಲ’ ಎಂದು ಶಾಸಕ ಪುಟ್ಟರಾಜು ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.

‘ಮಾನ ಇದ್ದವರ ಮೇಲೆ ಮಾನನಷ್ಟ ಮೊಕದ್ದಮೆ ಹಾಕಬಹುದು. ಮಾನ ಇಲ್ಲದವರ ಮೇಲೆ ಏನು ಹಾಕೋದು? ಮೈಷುಗರ್ ಕಾರ್ಖಾನೆಯನ್ನು ನಿರ್ವಹಣೆ ಮತ್ತು ಕಾರ್ಯಾಚರಣೆ (ಒ ಅಂಡ್‌ ಎಂ) ಆಧಾರದ ಮೇಲೆ ಗುತ್ತಿಗೆ ನೀಡಲು ಜೆಡಿಎಸ್ ಸರ್ಕಾರದ ಅವಧಿಯಲ್ಲೇ ಮುಂದಾಗಿದ್ದರು. ರೈತರ ಹಿತದೃಷ್ಟಿಯಿಂದ ನಾನು ಯಾವ ಮಾದರಿಯಲ್ಲಾದರೂ ಕಾರ್ಖಾನೆ ಆರಂಭಿಸಿ ಎಂದಿದ್ದೆ. ಆಗ ಇವರೇ ಒ ಅಂಡ್ ಎಂಗೆ ಕೊಡಲು ನಿರ್ಧರಿಸಿದ್ದರು. ಇದಕ್ಕಾಗಿ ₹60 ಕೋಟಿ ಹಣ ಬಿಡುಗಡೆಗೊಳಿಸಿ ಟೆಂಡರ್ ಸಹ ಕರೆದಿದ್ದರು’ ಎಂದರು.

ಪಾರ್ಲಿಮೆಂಟ್‌ನಲ್ಲಿ ಪೂರ್ತಿ ಹಾಜರಾತಿ

‘ಪಾರ್ಲಿಮೆಂಟ್‌ನಲ್ಲಿ ನನಗೆ ಪೂರ್ತಿ ಹಾಜರಾತಿ ಇದೆ, ನಮ್ಮ ರಾಜ್ಯ, ನಮ್ಮ ಜಿಲ್ಲೆಯ ಬಗ್ಗೆ ಅಲ್ಲಿ ಮಾತನಾಡಿದ್ದೇನೆ. ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿದ್ದೇನೆ. ನನ್ನ ವಿರುದ್ಧ ಆರೋಪ ಮಾಡುವವರು ದಾಖಲೆ ಇದ್ದರೆ ತನ್ನಿ. ಚರ್ಚೆಗೆ ಬಂದರೆ ನಾನು 24X7 ಸಿದ್ಧಳಾಗಿದ್ದೇನೆ. ನಮ್ಮ ಕುಟುಂಬದ ಸದಸ್ಯರು ಈ ಜನ್ಮದಲ್ಲಿ ಭ್ರಷ್ಟಾಚಾರ ಮಾಡುವುದಿಲ್ಲ. ದೇವರು ನಮ್ಮನ್ನು ಚೆನ್ನಾಗಿ ಇಟ್ಟಿದ್ದಾನೆ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು