ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರ ತಡೆಹಿಡಿದಿರುವ ₹9 ಸಾವಿರ ಕೋಟಿಯನ್ನು ಸುಮಲತಾ ಮಂಡ್ಯಕ್ಕೆ ತರಲಿ: ಸವಾಲು

ಸಂಸದೆ ಸುಮಲತಾಗೆ ಶಾಸಕ ರವೀಂದ್ರ ಶ್ರೀಕಂಠಯ್ಯ ಸವಾಲು
Last Updated 25 ಫೆಬ್ರುವರಿ 2021, 6:20 IST
ಅಕ್ಷರ ಗಾತ್ರ

ಶ್ರೀರಂಗಪಟ್ಟಣ: ‘ಕಲ್ಲು ಗಣಿಗಳಿಂದ ಬರುವ ರಾಜಧನದಿಂದ ಜಿಲ್ಲೆಯ ಅಭಿವೃದ್ಧಿ ಮಾಡಬಹುದು ಎಂದು ಹೇಳುವ ಸಂಸದೆ ಸುಮಲತಾ ಅವರಿಗೆ ಮಂಡ್ಯ ಜಿಲ್ಲೆಯ ಬಗ್ಗೆ ನಿಜವಾಗಿಯೂ ಕಾಳಜಿ ಇದ್ದರೆ ರಾಜ್ಯ ಸರ್ಕಾರ ತಡೆ ಹಿಡಿದಿರುವ ₹ 9 ಸಾವಿರ ಕೋಟಿ ಅನುದಾನವನ್ನು ಬಿಡುಗಡೆ ಮಾಡಿಸಲಿ’ ಎಂದು ಶಾಸಕ ರವೀಂದ್ರ ಶ್ರೀಕಂಠಯ್ಯ ಸವಾಲು ಹಾಕಿದರು.

ತಾಲ್ಲೂಕಿನ ಬೆಳಗೊಳ ಗ್ರಾಮದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಹೆಚ್ಚುವರಿ ಕೊಠಡಿ ಹಾಗೂ ಸ್ಮಶಾನ ರಸ್ತೆ ಅಭಿವೃದ್ಧಿಗೆ ಬುಧವಾರ ಚಾಲನೆ ನೀಡಿ ಅವರು ಮಾತನಾಡಿದರು.

‘ಗಣಿಗಾರಿಕೆ ವಿಷಯದಲ್ಲಿ ಹೋರಾಟ ಮಾಡುತ್ತಿರುವ ಸಂಸದರು ಕುಮಾರಸ್ವಾಮಿ ಅವರ ಸರ್ಕಾರ ಜಿಲ್ಲೆಗೆ ಮಂಜೂರು ಮಾಡಿದ್ದ ₹ 900 ಕೋಟಿ ಅನುದಾನವನ್ನು ರಾಜ್ಯದ ಬಿಜೆಪಿ ಸರ್ಕಾರ ತಡೆ ಹಿಡಿದಿರುವುದು ಗೊತ್ತಿಲ್ಲವೆ. ಅಕ್ರಮ ತಡೆಗೆ ಹೋರಾಟ ಮಾಡಿ ಜಿಲ್ಲೆಯನ್ನು ರಕ್ಷಿಸುತ್ತೇನೆ ಎಂದು ಹೇಳುವವರು ಸರ್ಕಾರದ ಮೇಲೆ ಒತ್ತಡ ತಂದು ತಡೆ ಹಿಡಿದಿರುವ ಅನುದಾನವನ್ನು ಜಿಲ್ಲೆಗೆ ತರುವ ವಿಷಯದಲ್ಲೂ ಹೋರಾಟ ಮಾಡಬೇಕು. ಈ ವಿಷಯದಲ್ಲಿ ಅವರು ಪ್ರಯತ್ನ ಮಾಡಿದ್ದಾರೆಯೆ?’ ಎಂದು ಪ್ರಶ್ನಿಸಿದರು.

ಅನಧಿಕೃತ ಗಣಿಗಾರಿಕೆ ರಾಜ್ಯದ ಎಲ್ಲೆಡೆಯೂ ನಡೆಯುತ್ತಿದೆ. ಸ್ಫೋಟಕ ವಸ್ತುಗಳ ಸಾಗಾಟ ಅದರ ಭಾಗವೇ ಆಗಿದೆ. ಇದಕ್ಕೆ ಸರ್ಕಾರದ ನೀತಿಯೇ ಕಾರಣ. ಅಭಿವೃದ್ಧಿ ಕಾರ್ಯಗಳಿಗೆ ಕಲ್ಲು ಗಣಿಗಾರಿಕೆ ಅನಿವಾರ್ಯವಾಗಿದ್ದು, ಸರ್ಕಾರ ಕಾನೂನು ಬದ್ಧಗೊಳಿಸಬೇಕು ಎಂದು ಒತ್ತಾಯಿಸಿದರು.

‘ಮೈಸೂರು ಮೇಯರ್‌ ಚುನಾವಣೆ ವಿಷಯದಲ್ಲಿ ಕಾಂಗ್ರೆಸ್‌ ಪಕ್ಷದ ಅಧ್ಯಕ್ಷರು ಅಥವಾ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಜೆಡಿಎಸ್‌ ನಾಯಕ ಎಚ್.ಡಿ. ಕುಮಾರಸ್ವಾಮಿ ಅವರ ಜತೆ ಚರ್ಚಿಸಿಲ್ಲ. ಹಾಗಾಗಿ ಜೆಡಿಎಸ್‌ ಪಕ್ಷಕ್ಕೆ ಸರಿ ಎನಿಸಿದ ತೀರ್ಮಾನವನ್ನು ಕುಮಾರಸ್ವಾಮಿ ಕೈಗೊಂಡಿದ್ದಾರೆ’ ಎಂದು ಪ್ರಶ್ನೆಯೊಂದಕ್ಕೆ ಅವರು ಪ್ರತಿಕ್ರಿಯಿಸಿದರು.

ಕುಸ್ತಿ ಅಖಾಡ

ಬೆಳಗೊಳ ಗ್ರಾಮದಲ್ಲಿ ₹ 1 ಕೋಟಿ ವೆಚ್ಚದಲ್ಲಿ ಕುಸ್ತಿ ಅಖಾಡಾ ನಿರ್ಮಾಣವಾಗಲಿದೆ ಎಂದು ರವೀಂದ್ರ ಶ್ರೀಕಂಠಯ್ಯ ತಿಳಿಸಿದರು. ಗರಡಿ ಮನೆಗಳ ಜೀರ್ಣೋದ್ಧಾರಕ್ಕೆ ₹ 10 ಲಕ್ಷ ಮಂಜೂರು ಮಾಡಿಸಿದ್ದೇನೆ. ಹಿರಿದೇವಿಯಮ್ಮ ದೇವಾಲಯ ಸಂಪರ್ಕ ರಸ್ತೆ ಅಭಿವೃದ್ಧಿಗೆ ₹ 1.5 ಕೋಟಿ ಮಂಜೂರಾಗಿದೆ. ಗ್ರಾಮದ ಒಳ ರಸ್ತೆಗಳು ಹಂತ ಹಂತವಾಗಿ ಅಭಿವೃದ್ಧಿ ಕಾಣಲಿವೆ ಎಂದು ತಿಳಿಸಿದರು.

ಜಿ.ಪಂ. ಸದಸ್ಯೆ ಸವಿತಾ ಲೋಕೇಶ್‌, ತಾ.ಪಂ. ಮಾಜಿ ಅಧ್ಯಕ್ಷ ಮಹದೇವಸ್ವಾಮಿ, ಗ್ರಾ.ಪಂ. ಅಧ್ಯಕ್ಷೆ ಶಿವಮ್ಮ, ಮಾಜಿ ಅಧ್ಯಕ್ಷ ಶ್ರೀನಿವಾಸ್‌, ಸದಸ್ಯ ರವಿ, ಎಪಿಎಂಸಿ ಮಾಜಿ ಅಧ್ಯಕ್ಷ ಬಿ.ಎಂ. ಸ್ವಾಮಿಗೌಡ, ಮುಖಂಡರಾದ ವಿಷಕಂಠೇಗೌಡ, ಪಿಕಾರ್ಡ್‌ ಬ್ಯಾಂಕ್‌ ನಿರ್ದೇಶಕ ನಾಗರಾಜು, ಪಿಎಸಿಎಸ್‌ ಅಧ್ಯಕ್ಷ ಪುಟ್ಟಸ್ವಾಮಿ, ಸಿಇಒ ಶಿವಕುಮಾರ್‌, ಪವನ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT