ಹಲಗೂರು: ಸಮೀಪದ ಮುತ್ತತ್ತಿಯಲ್ಲಿ ಪುರಾಣ ಪ್ರಸಿದ್ಧ ಅಂಜನೇಯ ಸ್ವಾಮಿ ದೇವಾಲಯದಲ್ಲಿ ಶ್ರಾವಣ ಮಾಸದ ಪ್ರಯುಕ್ತ ವಿಶೇಷ ಪೂಜಾ ಕಾರ್ಯಕ್ರಮ ಮತ್ತು ಮುತ್ತೆತ್ತರಾಯ ಸ್ವಾಮಿ 6ನೇ ವರ್ಷದ ಬ್ರಹ್ಮ ರಥೋತ್ಸವ ವಿಜೃಂಭಣೆಯಿಂದ ನೆರವೇರಿತು.
ಶನಿವಾರ ಬೆಳಿಗ್ಗೆ 5ಕ್ಕೆ ಆಂಜನೇಯ ಸ್ವಾಮಿಗೆ ಅಭಿಷೇಕ ಸೇವೆ ನಂತರ ಗಣಹೋಮ ಮತ್ತು ನವಗ್ರಹ ಹೋಮ ನಡೆಯಿತು. ಬೆಳಿಗ್ಗೆ 8ರ ನಂತರ ಸ್ವಾಮಿಯ ಪಾದಪೂಜೆ ಮತ್ತು ಮಹಾ ಮಂಗಳಾರತಿ ಮತ್ತು ತೀರ್ಥ ಪ್ರಸಾದ ವಿನಿಯೋಗ ನಡೆಯಿತು.
ಕಾವೇರಿ ನದಿಯ ದಂಡೆಯಿಂದ ಗಂಗಾ ಪೂಜೆ ನಡೆಸಿದ ನಂತರ ಸ್ವಾಮಿಯವರ ಬ್ರಹ್ಮ ರಥೋತ್ಸವ ಸೇವಾ ಕಾರ್ಯಕ್ರಮ ನಡೆಯಿತು. ನದಿ ದಂಡೆಯಿಂದ ದೇವಾಲಯದ ಆವರಣಕ್ಕೆ ಬರುವವರೆಗೂ ನೂರಾರು ಭಕ್ತರು ದೇವರ ಹೆಸರಿನಲ್ಲಿ ಗೋವಿಂದ ಸಾರಿದರು.
ದೇವಾಲಯದ ಒಳಭಾಗವನ್ನು ವಿವಿಧ ಬಗೆಯ ಹೂವು ಮತ್ತು ಹಣ್ಣುಗಳಿಂದ ಅಲಂಕಾರ ಮಾಡಿದ್ದು, ನೋಡುಗರ ಕಣ್ಮನ ಸೆಳೆಯಿತು. ಭಕ್ತರು ಸರತಿ ಸಾಲಿನಲ್ಲಿ ನಿಂತು ಬೆಣ್ಣೆಯ ಅಲಂಕಾರದಲ್ಲಿ ಕಂಗೊಳಿಸುತ್ತಿದ್ದ ಅಂಜನೇಯ ಸ್ವಾಮಿ ದೇವರ ದರ್ಶನ ಪಡೆದರು.
ಶ್ರೀ ಕ್ಷೇತ್ರ ಕಬ್ಬಾಳಮ್ಮ ದೇವಿ ಮತ್ತು ಹಲಗೂರು ಭದ್ರಕಾಳಿ ಅಮ್ಮನವರ ಬಸಪ್ಪ ದೇವರ ಮೆರವಣಿಗೆ ನಡೆಯಿತು. ಪೂಜಾ ಕಾರ್ಯಕ್ರಮಕ್ಕೆ ಆಗಮಿಸಿದ್ದ ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.
ಮೈಸೂರು, ಚಾಮರಾಜನಗರ, ರಾಮನಗರ, ತುಮಕೂರು, ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳ ಸಾವಿರಾರು ಭಕ್ತರು ಪೂಜೆಗೆ ಆಗಮಿಸಿ ದರ್ಶನ ಪಡೆದರು.
ಹಲಗೂರು ಸಮೀಪದ ಮುತ್ತತ್ತಿಯಲ್ಲಿ ಅಂಜನೇಯ ಸ್ವಾಮಿ ದೇವರ ದರ್ಶನ ಪಡೆಯಲು ಭಕ್ತರು ಸಾಲುಗಟ್ಟಿ ನಿಂತಿದ್ದರು
ದೇವಾಲಯದಿಂದ ಆರು ವರ್ಷಗಳಿಂದ ಶ್ರಾವಣ ಮಾಸದ ಮೊದಲ ಶನಿವಾರ ಸ್ವಾಮಿಯ ಬ್ರಹ್ಮ ರಥೋತ್ಸವ ಆಯೋಜಿಸಲಾಗುತ್ತಿದೆ.