ಮಂಗಳವಾರ, ಜೂಲೈ 7, 2020
28 °C
ವಿಚಾರ ಸಂಕಿರಣ, ಪುಸ್ತಕ ಬಿಡುಗಡೆ; ನಿವೃತ್ತ ನ್ಯಾಯಮೂರ್ತಿ ವಿ.ಗೋಪಾಲಗೌಡ ಅಭಿಮತ

ಮೈಷುಗರ್‌ ಒ ಅಂಡ್‌ ಎಂ ಸಂವಿಧಾನ ವಿರೋಧಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಡ್ಯ: ‘ಯಾವುದೇ ಕಾರ್ಖಾನೆಯಲ್ಲಿ ಸರ್ಕಾರ ಶೇ 51ಕ್ಕಿಂತ ಹೆಚ್ಚು ಷೇರು ಹೊಂದಿದ್ದರೆ ಆ ಕಾರ್ಖಾನೆಯನ್ನು ಖಾಸಗೀಕರಣ ಮಾಡುವಂತಿಲ್ಲ. ಮೈಷುಗರ್‌ ಕಾರ್ಖಾನೆಯಲ್ಲಿ ಸರ್ಕಾರ ಶೇ 60ಕ್ಕಿಂತ ಹೆಚ್ಚು ಷೇರು ಹೊಂದಿದ್ದು ಖಾಸಗೀಕರಣ ಮಾಡುವುದು ಸಂವಿಧಾನ ವಿರೋಧಿಯಾಗುತ್ತದೆ’ ಎಂದು ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ವಿ.ಗೋಪಾಲಗೌಡ ಹೇಳಿದರು.

ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಮಂಗಳವಾರ ನಗರದ ಪತ್ರಿಕಾ ಭವನದಲ್ಲಿ ಆಯೋಜಿಸಿದ್ದ ‘ಮೈಷುಗರ್‌ ಕಾರ್ಖಾನೆ ಖಾಸಗೀಕರಣ ಹಿನ್ನೆಲೆ; ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣ ಮತ್ತು ಪರಿಣಾಮಗಳು’ ವಿಚಾರ ಸಂಕಿರಣವನ್ನು ಆನ್‌ಲೈನ್‌ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

 ‘ಮೈಷುಗರ್‌ ಕಾರ್ಖಾನೆ ರೈತರ ಜೀವನಾಡಿಯಾಗಿದ್ದು ಅದನ್ನು ಯಾವುದೇ ಕಾರಣಕ್ಕೂ ಖಾಸಗೀಕರಣ ಅಥವಾ ಒ ಅಂಡ್‌ ಎಂ (ಕಾರ್ಯಾಚರಣೆ ಮತ್ತು ನಿರ್ವಹಣೆ) ಮಾಡಬಾರದು. ಸರ್ಕಾರ ಮತ್ತೊಮ್ಮೆ ಕೂಲಂಕಷವಾಗಿ ಆಲೋಚಿಸಿ ಸೂಕ್ತ ನಿರ್ಧಾರ ಮಾಡಬೇಕು. ಸರ್ಕಾರ ರೈತರು, ಸಾರ್ವಜನಿಕರ ಸ್ವತ್ತಾಗಿದೆ. ಇದನ್ನು ಯಾವ ಕಾರಣಕ್ಕೆ ಖಾಸಗೀಕರಣ ಮಾಡಲಾಗುತ್ತಿದೆ ಎಂಬುದನ್ನು ಸಾರ್ವಜನಿಕರ ಮುಂದಿಟ್ಟು, ಸಮಂಜಸ ಉತ್ತರ ನೀಡಿ ಅವರ ಅಭಿಪ್ರಾಯ ಪಡೆಯಬೇಕು. ಇದು ಯಾವುದನ್ನೂ ಮಾಡದೇ ಖಾಸಗಿ ನಿರ್ವಹಣೆಗೆ ಕಾ ರ್ಖಾನೆ ನೀಡುವುದು ಸರಿಯಲ್ಲ’ ಎಂದರು.

‘ನಿತ್ಯ ಐದು ಸಾವಿರ ಟನ್‌ ಕಬ್ಬು ಅರೆಯುವ ಸಾಮರ್ಥ್ಯ ಇದೆ ಎಂದು ಅಧಿಕಾರಿಗಳೇ ವಾರ್ಷಿಕ ವರದಿ ನೀಡುತ್ತಾರೆ. ಆದರೆ ನಷ್ಟವಾಗಿದೆ ಎಂದು ಕಾರ್ಖಾನೆಯನ್ನು ಖಾಸಗಿಯವರಿಗೆ ನೀಡುವ ಹಿಂದಿನ ಉದ್ದೇಶ ಏನೆಂಬುದೇ ತಿಳಿಯುತ್ತಿಲ್ಲ. ಮೈಷುಗರ್‌, ಪಿಎಸ್‌ಎಸ್‌ಕೆ ಪುನಶ್ಚೇತನ ಮಾಡುತ್ತೇವೆಂದು ಅಧಿಕಾರಕ್ಕೆ ಬಂದು ಖಾಸಗಿ ಮಾಡುವತ್ತ ಆಸಕ್ತಿ ವಹಿಸುತ್ತಿರುವುದು ನಿಜಕ್ಕೂ ದುರದೃಷ್ಟಕರ. ಕಾರ್ಖಾನೆಯು ಸಾವಿರಾರು ಕೋಟಿ ಆಸ್ತಿಯನ್ನು ಹೊಂದಿದ್ದು, ಅದನ್ನು ಸಂರಕ್ಷಣೆ ಮಾಡುವಲ್ಲಿ ಜನಪ್ರತಿನಿಧಿಗಳು ವಿಫಲರಾಗಿದ್ದಾರೆ’ ಎಂದು ಆರೋಪಿಸಿದರು.

‘ಕಾರ್ಖಾನೆಗಳನ್ನು ಖಾಸಗೀಕರಣ ಮಾಡುವ ಮೂಲಕ ಸರ್ಕಾರ ಸಾರ್ವಭೌಮ, ಸಮಾನತೆ, ಸಮಾಜವಾದ ಪದಗಳ ಅರ್ಥವನ್ನು ಹಾಳು ಮಾಡುತ್ತಿದೆ. ನ್ಯಾಯಯುತವಾಗಿ ಕೆಲಸ ಮಾಡುವುದಕ್ಕಾಗಿಯೇ ಜನಪ್ರತಿನಿಧಿಗಳಿಗೆ ಮತ ನೀಡಿ ಆಯ್ಕೆ ಮಾಡಲಾಗುತ್ತದೆ. ಖಾಸಗಿ ವ್ಯಕ್ತಿಯ ಹಿತಾಸಕ್ತಿ ಕಾಯ್ದು, ಆತನಿಗೆ ಲಾಭ ಮಾಡಿಕೊಡಲು ಆಯ್ಕೆ ಮಾಡುವುದಿಲ್ಲ. ಸರ್ಕಾರ ಹಾಗೂ ಜನಪ್ರತಿನಿಧಿಗಳು ರೈತರಿಗೆ, ಜನಸಾಮಾನ್ಯರ ಜೀವನ ಮಟ್ಟ ಸುಧಾರಿಸುವ ಕುರಿತು ಚಿಂತನೆ ಮಾಡಬೇಕು’ ಎಂದರು.

ಸಿಐಟಿಯು ರಾಜ್ಯ ಘಟಕದ ಕಾರ್ಯದರ್ಶಿ ಕೆ.ಎನ್‌.ಉಮೇಶ್‌ ಮಾತನಾಡಿ ‘ಒ ಅಂಡ್ ಎಂ ಎನ್ನುವುದು ಖಾಸಗೀಕರಣದ ಮತ್ತೊಂದು ಪದವೇ ಹೊರತು ಬೇರೆ ಅಲ್ಲ. ಸರ್ಕಾರವೇ ಬಂಡವಾಳ ಹಾಕಿ ನಡೆಸುತ್ತದೆ, ಆದರೆ ಖಾಸಗಿ ವ್ಯಕ್ತಿ ನಿರ್ವಹಣೆ ಮಾಡುತ್ತಾನೆ ಎಂಬುದರಲ್ಲಿ ಅರ್ಥವಿಲ್ಲ. ಇದರಲ್ಲಿ ಖಾಸಗಿ ವ್ಯಕ್ತಿಯ ಹಿತ ಕಾಯುವ ಉದ್ದೇಶವಿದೆ’ ಎಂದು ಹೇಳಿದರು.

ಸಮಿತಿಯ ಅಧ್ಯಕ್ಷ ಜಿ.ಮಾದೇಗೌಡ ‘ಸರ್ಕಾರಿ ಸ್ವಾಮ್ಯದಲ್ಲೇ ಮೈಷುಗರ್‌’ ಕಿರು ಹೊತ್ತಿಗೆ ಬಿಡುಗಡೆ ಮಾಡಿದರು. ಸಮಿತಿ ಸಂಘಟನಾ ಕಾರ್ಯದರ್ಶಿ ಸುನಂದಾ ಜಯರಾಂ ಅಧ್ಯಕ್ಷತೆ ವಹಿಸಿದದ್ದರು. ಸಿಐಟಿಯು ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಸಿ.ಕುಮಾರಿ, ಮುಖಂಡರಾದ ಕೆ.ಬೋರಯ್ಯ, ಎಂ.ಬಿ.ಶ್ರೀನಿವಾಸ್‌, ಎಚ್‌.ಸಿ.ಮಂಜುನಾಥ್‌, ಕೆ.ಎಸ್‌.ಸುಧೀರ್‌ ಕುಮಾರ್‌, ಚಂದ್ರಶೇಖರ್‌, ಯಶವಂತ್‌, ಕೃಷ್ಣೇಗೌಡ ಇದ್ದರು.

ರೈತರ ಬೆನ್ನು ಮುರಿಯದಿರಿ...
‘ರೈತರು ದೇಶದ ಬೆನ್ನೆಲುಬು ಎನ್ನುತ್ತಾರೆ. ರೈತರ ಹೆಸರಿನ್ನಲಿಯೇ ಅಧಿಕಾರಕ್ಕೆ ಬಂದ ಜನಪ್ರತಿನಿಧಿಗಳು ಅವರ ಬೆನ್ನು ಮೂಳೆ ಮುರಿಯುವ ಕೆಲಸ ಮಾಡುತ್ತಿದ್ದಾರೆ’ ಎಂದು ನ್ಯಾ. ಗೋಪಾಲಗೌಡ ಅಸಮಾಧಾನ ವ್ಯಕ್ತಪಡಿಸಿದರು.

‘ಸಮಾಜ ಕಲ್ಯಾಣ ಮಾಡುವ ಬದಲು, ರೈತ, ಕೂಲಿ ಕಾರ್ಮಿಕ, ಸಾರ್ವಜನಿಕ ವಿರೋಧಿ ನೀತಿ ಮಾಡಲು ನಿಂತಿದ್ದಾರೆ. ಜನರಿಂದ ಅಧಿಕಾರ ಪಡೆದು ಜನರಿಗೇ ವಂಚಿಸುವವರಿಗೆ ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕು. ಸರ್ಕಾರದ ಆಸ್ತಿಯನ್ನು ಖಾಸಗಿಯವರಿಗೆ ನೀಡುವುದು ನ್ಯಾಯವೇ’ ಎಂದು ಪ್ರಶ್ನಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು