ಶುಕ್ರವಾರ, ಮೇ 20, 2022
26 °C
ಶಾಲಾ, ಕಾಲೇಜಿಗೆ ತೆರಳಲು ಕಿ.ಮೀಗಟ್ಟಲೆ ನಡೆಯುವ ವಿದ್ಯಾರ್ಥಿಗಳು, ಆಟೊ, ಖಾಸಗಿ ಬಸ್‌ ಅವಲಂಬನೆ

ಕೆಎಸ್‌ಆರ್‌ಟಿಸಿ ಬಸ್‌ ಸಿಗದೆ ವಿದ್ಯಾರ್ಥಿಗಳ ಪರದಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಡ್ಯ: ಶಾಲಾ–ಕಾಲೇಜುಗಳು ಪ್ರಾರಂಭವಾಗಿ ತಿಂಗಳು ಕಳೆದರೂ, ಗ್ರಾಮಾಂತರ ಪ್ರದೇಶಗಳಿಂದ ನಗರ, ಪಟ್ಟಣ ಪ್ರದೇಶಗಳ ಶಿಕ್ಷಣ ಸಂಸ್ಥೆಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ ನಿಗದಿತ ಸಮಯಕ್ಕೆ ಬಸ್‌ ಸಿಗುತ್ತಿಲ್ಲ. ಶಾಲಾ, ಕಾಲೇಜಿಗೆ ತೆರಳಲು ಪರದಾಡುತ್ತಿರುವ ವಿದ್ಯಾರ್ಥಿಗಳು ಸಾರಿಗೆ ಸಂಸ್ಥೆ ಸಿಬ್ಬಂದಿಗೆ ಹಿಡಿಶಾಪ ಹಾಕುತ್ತಿದ್ದಾರೆ.

ಜ. 1ರಿಂದ ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುಸಿ ತರಗತಿಗಳು ಪ್ರಾರಂಭವಾಗಿದ್ದು, ಶಾಲಾ ಕಾಲೇಜಿಗೆ ಬರಲು ಹರಸಾಹಸ ಪಡಬೇಕಾದ ಅನಿವಾರ್ಯತೆ ಎದುರಾಗಿದೆ. ಇದಕ್ಕೆ ಮುನ್ನವೇ ಪದವಿ, ಸ್ನಾತಕೋತ್ತರ ಪದವಿ ತರಗತಿಗಳು ಆರಂಭವಾಗಿದ್ದು, ಬೆಳಿಗ್ಗೆ ವೇಳೆ ಹಳ್ಳಿಗಳ, ಪಟ್ಟಣದ ಬಸ್‌ ನಿಲ್ದಾಣಕ್ಕೆ ತೆರಳಿದರೆ ಬಸ್‌ಗಾಗಿ ಕಾಯುತ್ತಿರುವ ವಿದ್ಯಾರ್ಥಿಗಳ ತಂಡವೇ ಕಣ್ಣಿಗೆ ಕಟ್ಟುತ್ತದೆ.

ತರಗತಿಗಳು ತಪ್ಪಿಹೋಗುತ್ತವೆ ಎಂಬ ಕಾರಣಕ್ಕೆ ಪ್ರಾಣ ಪಣಕ್ಕಿಟ್ಟು ಬಸ್‌ಗಳ ಫುಟ್‌ಬೋರ್ಡ್‌ನಲ್ಲಿ ನೇತಾಡಿಕೊಂಡು ಹೋಗುವುದು ಸಾಮಾನ್ಯವಾಗಿದೆ. ಇದನ್ನು ಕಂಡೂ ಕಾಣದಂತಿರುವ ಅಧಿಕಾರಿಗಳು ಒಮ್ಮೊಮ್ಮೆ ಹೆಚ್ಚುವರಿ ಬಸ್‌ ಹಾಕಿದರೆ ಉಳಿದ ದಿನಗಳಲ್ಲಿ ದಿನ ಸಾಯುವವರಿಗೆ ಅಳುವವರು ಯಾರು ಎಂಬಂತೆ ಸುಮ್ಮನಿರುತ್ತಾರೆ. ಸಮರ್ಪಕ ಬಸ್‌ ಇಲ್ಲದೆ ವಿದ್ಯಾರ್ಥಿಗಳಿಗೆ, ಪ್ರಯಾಣಿಕರಿಗೆ ನರಕ ಯಾತನೆ ಅನುಭವಿಸುವಂತೆ ಮಾಡುತ್ತಿದ್ದಾರೆ.

ತಾಲ್ಲೂಕು ಕೇಂದ್ರಗಳಿಂದ ಜಿಲ್ಲಾ ಕೇಂದ್ರಕ್ಕೆ ನಿತ್ಯವೂ ಕಚೇರಿಗೆ, ಆಸ್ಪತ್ರೆಗೆ ತೆರಳುವವರು ಬೆಳಿಗ್ಗೆಯೇ ಬಸ್‌ ನಿಲ್ದಾಣದಲ್ಲಿ ಇರುತ್ತಾರೆ. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳು ಬರಲಿದ್ದು, ಇದರಿಂದ ಸಾರ್ವಜನಿಕರಿಗೂ ತೀವ್ರ ಸಮಸ್ಯೆಯಾಗಿದೆ. ವಯಸ್ಸಾದವರು ಕೆಎಸ್‌ಆರ್‌ಟಿಸಿ ಬಸ್‌ಗಳಿಲ್ಲದೆ ಖಾಸಗಿ ಬಸ್‌ ಮೊರೆ ಹೋಗುವುದು ಸಾಮಾನ್ಯವಾಗಿದೆ.

ಲಾಕ್‌ಡೌನ್‌ ನಂತರ ಮಂಡ್ಯ–ಮಳವಳ್ಳಿ, ಮಂಡ್ಯ–ಹಲಗೂರು, ಮಳವಳ್ಳಿ–ಬೆಂಗಳೂರು ಮಾರ್ಗದಲ್ಲಿ ಸಂಚರಿಸುತ್ತಿದ್ದ ಬೆರಳೆಣಿಕೆ ಖಾಸಗಿ ಬಸ್‌ಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ನೀಡುತ್ತಿರುವ ಸೇವೆಗೆ ಹಿಡಿದ ಕೈಗನ್ನಡಿಯಾಗಿದೆ.

ಮಳವಳ್ಳಿ ತಾಲ್ಲೂಕಿನ ಹಲವು ಗ್ರಾಮಗಳಿಂದ ಪಟ್ಟಣದ ಶಾಂತಿ ಕಾಲೇಜು, ಸರ್ಕಾರಿ ಕಾಲೇಜು ಹಾಗೂ ಭಾರತೀನಗರದ ಭಾರತೀ ಕಾಲೇಜಿಗೆ ಪ್ರತಿದಿನ ನೂರಾರು ವಿದ್ಯಾರ್ಥಿಗಳು ಬರುತ್ತಾರೆ. ಮಳವಳ್ಳಿಯಿಂದ ಬಸ್‌ಗಳು ಅಷ್ಟಾಗಿ ಇಲ್ಲವಾಗಿದ್ದು, ಕೊಳ್ಳೇಗಾಲ, ಟಿ.ನರಸೀಪುರ, ನಂಜನಗೂಡಿನಿಂದ ಬರುವ ಬಸ್‌ಗಳನ್ನೇ ಅವಲಂಬಿಸಬೇಕಿದೆ.

‘ಬಸ್‌ ಬಂದಾಗ ಒಮ್ಮೆಲೇ ವಿದ್ಯಾರ್ಥಿಗಳು ಮುಗಿಬೀಳುವ ಕಾರಣ, ಸಾಮಾನ್ಯ ಪ್ರಯಾಣಿಕರು ಬಸ್‌ ಹತ್ತಲಾಗದೆ ಖಾಸಗಿ ಬಸ್‌ನತ್ತ ಮುಖ ಮಾಡುತ್ತಾರೆ. ಕಾಲೇಜಿಗೆ ತೆರಳುವ ಸಮಯದಲ್ಲಿ ಹೆಚ್ಚುವರಿ ಬಸ್‌ಗಳನ್ನು ಹಾಕದೆ ಸಮಸ್ಯೆಯಾಗುತ್ತಿದೆ’ ಎಂದು ನಿತ್ಯ ಮದ್ದೂರಿಗೆ ಕೆಲಸಕ್ಕೆ ತೆರಳುವ ರಮೇಶ್‌ ಆರೋಪಿಸಿದರು.

ಇದಲ್ಲದೆ ತಾಲ್ಲೂಕಿನ ಕಿರುಗಾವಲು ಗ್ರಾಮದಿಂದ ಮೈಸೂರಿನ ಕಾಲೇಜಿಗೆ ತೆರಳು ವಿದ್ಯಾರ್ಥಿಗಳು ಪರದಾಟ ನಡೆಸುತ್ತಾರೆ. ಮಳವಳ್ಳಿಯಿಂದ ಬರುವ ಬಸ್‌ ತುಂಬಿರುವ ಕಾರಣ ಶಾಲಾ–ಕಾಲೇಜಿಗೆ ತೆರಳುವಲ್ಲಿ ತಡವಾಗಿ ಒಂದೆರಡು ತರಗತಿಗಳೇ ಮುಗಿದೇ ಹೋಗಿರುತ್ತದೆ.

ನಾಗಮಂಗಲ ತಾಲ್ಲೂಕಿನ ಬೆಳ್ಳೂರು ಕ್ರಾಸ್‌ ಸೇರಿದಂತೆ ವಿವಿಧೆಡೆ, ಮದ್ದೂರು ತಾಲ್ಲೂಕಿನ ಕೆ. ಹೊನ್ನಾಲಗೆರೆ, ಕೂಳಗೆರೆ. ಕೊಕ್ಕರೆ ಬೆಳ್ಳೂರು, ಕೆಸ್ತೂರು, ಮಲ್ಲನಕುಪ್ಪೆ ಕಡೆಯ ಗ್ರಾಮಾಂತರ ಭಾಗಗಳಿಂದ ಮದ್ದೂರು ಪಟ್ಟಣದ ಕಾಲೇಜುಗಳಿಗೆ ಬರುವ ವಿದ್ಯಾರ್ಥಿಗಳಿಗೆ ಸರಿಯಾದ ಸಮಯಕ್ಕೆ ಬಸ್‌ ಇಲ್ಲದೆ ತೊಂದರೆ ಅನುಭವಿಸುತ್ತಿದ್ದಾರೆ.

ಹಲಗೂರು, ಕಾಡುಕೊತ್ತನಹಳ್ಳಿ, ಕೂಳಗೆರೆ, ತೊರೆಚಾಕನಹಳ್ಳಿ, ಅಂಬರಹಳ್ಳಿ ಸೇರಿದಂತೆ ವಿವಿಧೆಡೆಗಳಿಂದ ನಿತ್ಯವೂ ನೂರಾರು ಮಂದಿ ವಿದ್ಯಾರ್ಥಿಗಳು ಭಾರತೀ ಕಾಲೇಜಿಗೆ ಬರುತ್ತಾರೆ. ಗ್ರಾಮಾಂತ ಪ್ರದೇಶಗಳಲ್ಲಿ ಸಂಪೂರ್ಣವಾಗಿ ಬಸ್‌ಗಳು ಬಾರದ ಕಾರಣ ಆಪೇ ಆಟೋ ಅವಲಂಬಿಸಿದ್ದರೆ ಮತ್ತೆ ಕೆಲವೆಡೆ ವಿದ್ಯಾರ್ಥಿಗಳು ಕಿಲೋಮೀಟರ್‌ಗಟ್ಟಲೆ ನಡೆಯಬೇಕಿದೆ.

******

ವಿವಿಧೆಡೆ ಪ್ರತಿಭಟನೆ
ಮಂಡ್ಯ ತಾಲ್ಲೂಕಿನ ದೊಡ್ಡಕೊತ್ತೇಗೆರೆ ಗ್ರಾಮದಲ್ಲಿ ಸಮಪರ್ಕ ಬಸ್‌ ಇಲ್ಲದೆ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ.

ಗಣಿಗ, ಶಿವಪುರ, ಮಾಚಗೌಡನಹಳ್ಳಿ, ಚಿಕ್ಕಗೊತ್ತೇಗೆರೆ, ಚಾಕನಹಳ್ಳಿಯಿಂದ ಬರುವಾಗಲೇ ಬಸ್‌ ತುಂಬಿ ತುಳುಕುತ್ತಿರುತ್ತದೆ. ಮದ್ದೂರು ತಾಲ್ಲೂಕಿನ ಚಾಮನಹಳ್ಳಿ ಗ್ರಾಮದ ಕೊಪ್ಪ ರಸ್ತೆ ತಡೆದು ಸರಿಯಾದ ಸಮಯಕ್ಕೆ ಬಸ್‌ಗಳನ್ನು ಬಿಡಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದಾರೆ.

ವಿವಿಧ ಮಾರ್ಗಗಳಲ್ಲಿ ಬಸ್‌ಗಳಿಗೆ ಹತ್ತುವ ವಿದ್ಯಾರ್ಥಿಗಳನ್ನು ತಪ್ಪಿಸಲು ದೂರದಲ್ಲೇ ಪ್ರಯಾಣಿಕರನ್ನು ಇಳಿಸಿ ಹೊರಟು ಹೋಗುವುದನ್ನು ನಿರ್ವಾಹಕರು ರೂಢಿಸಿಕೊಂಡಿದ್ದು, ಇದರಿಂದ ವಿದ್ಯಾರ್ಥಿಗಳು ಬಿಸಿಲು ಎನ್ನದೆ ಕಾಯುತ್ತಾ ನಿಲ್ಲಬೇಕಾಗಿದೆ ಎಂದು ವಿದ್ಯಾರ್ಥಿಗಳು ನೋವು ವ್ಯಕ್ತಪಡಿಸುತ್ತಾರೆ.

****
ವಿದ್ಯಾರ್ಥಿಗಳಿಗೆ ಮೊದಲ ಆದ್ಯತೆ

‘ಮಂಡ್ಯ ವಿಭಾಗದಲ್ಲಿ ಕೊರೊನಾ ಮೊದಲು 459 ಮಾರ್ಗಗಳಲ್ಲಿ ಬಸ್‌ಗಳು ಸಂಚರಿಸುತ್ತಿದ್ದವು. ಈಗ 380 ಮಾರ್ಗದಲ್ಲಿ ಸಂಚಾರ ಇದೆ. ಗ್ರಾಮಾಂತರ ಪ್ರದೇಶದಲ್ಲಿ ದಿನಕ್ಕೆ 8 ಟ್ರಿಪ್‌ ಬದಲಾಗಿ 4 ಟ್ರಿಪ್‌ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇದನ್ನು ಸರಿಪಡಿಸಲಾಗುವುದು. ವಿದ್ಯಾರ್ಥಿಗಳಿಗೆ ಬಸ್‌ ವ್ಯವಸ್ಥೆ ಮಾಡುವುದೇ ನಮ್ಮ ಮೊದಲ ಆದ್ಯತೆಯಾಗಿದೆ’  ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಎಸ್‌.ಆರ್‌.ಕಿರಣ್‌ಕುಮಾರ್ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು