ಶುಕ್ರವಾರ, ಜುಲೈ 1, 2022
28 °C
ಕಾಂಗ್ರೆಸ್‌ ಸೇರಿದ್ದರೆ ಪ್ರಧಾನಿಯಾಗುತ್ತಿರಲಿಲ್ಲ ಎಂದ ಗೌಡರು

ಮೇಕೆದಾಟು ಪಾದಯಾತ್ರೆ ಮಾಡಿದವರು ನನ್ನ ಹೆಸರು ಹೇಳಲಿಲ್ಲ: ದೇವೇಗೌಡ ಬೇಸರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮದ್ದೂರು: ‘ಮೇಕೆದಾಟು ಯೋಜನೆ ಜಾರಿಗಾಗಿ ಇತ್ತೀಚೆಗೆ ಕೆಲ ಸ್ನೇಹಿತರು ಪಾದಯಾತ್ರೆ ಮಾಡಿದ್ದಾರೆ. ರಾಜ್ಯಕ್ಕೆ, ಬೆಂಗ ಳೂರಿಗೆ ನೀರು ತರುತ್ತೇವೆ ಎಂದು ಹೇಳಿದ್ದಾರೆ. ಅವರಾರೂ ನನ್ನ ಹೆಸರು ಹೇಳದಿರುವುದಕ್ಕೆ ನನಗೆ ಬೇಸರ ವಾಗಿದೆ. ಆದರೆ ಅವರಿಗೆ ನಾನು ನಡೆಸಿದ ನೀರಾವರಿ ಹೋರಾಟದ ಅರಿವಿಲ್ಲ’ ಎಂದು ರಾಜ್ಯಸಭಾ ಸದಸ್ಯ, ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ವಿಷಾದಿಸಿದರು.

ಪಟ್ಟಣದ ತಾಲ್ಲೂಕು ಕ್ರೀಡಾಂಗಣ ದಲ್ಲಿ ಸೋಮವಾರ ಎಂ.ಎಚ್.ಚನ್ನೇಗೌಡ ವಿದ್ಯಾಸಂಸ್ಥೆಯ ವತಿಯಿಂದ ಸಂಸ್ಥೆಯ ಗೌರವಾಧ್ಯಕ್ಷ  ಕೆ.ಟಿ.ಚಂದು ಅವರಿಗೆ ಅಭಿನಂದನಾ ಕಾರ್ಯಕ್ರಮ, 'ಅಪರೂಪ' ಅಭಿನಂದನಾ ಗ್ರಂಥ ಲೋಕಾರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ನಾನು ಪ್ರಧಾನಿಯಾಗಿದ್ದಾಗ, ಹಲವು ಪಕ್ಷಗಳ ಜೊತೆಗೂಡಿ ಅಧಿಕಾರ ನಡೆಸುತ್ತಿದ್ದ ಸಂದರ್ಭದಲ್ಲಿಯೂ ರಾಜ್ಯದ ನೀರಾವರಿ ಯೋಜನೆಗಳಿಗಾಗಿ ಹೋರಾಟ ನಡೆಸಿದ್ದೇನೆ. ಅದರಲ್ಲೂ ರಾಜಧಾನಿ ಬೆಂಗಳೂರಿನ ನಿವಾಸಿಗರಿಗೆ ಕುಡಿಯುವ ನೀರಿಗಾಗಿ ಕೆಆರ್‌ಎಸ್‌ ಜಲಾಶಯದಿಂದ ಹೆಚ್ಚುವರಿಯಾಗಿ 14.75 ಟಿ.ಎಂ.ಸಿ ಅಡಿ ನೀರು ಸಿಗುವಂತಾಗಲೂ ನಾನು ನಡೆಸಿರುವ ಹೋರಾಟಗಳೇ ಕಾರಣ. ಕಾವೇರಿ ನೀರಿನ ಹಕ್ಕಿಗಾಗಿ ಸಂಸತ್ತಿನ ಒಳಗೆ, ಹೊರಗೂ ನಿರಂತರವಾಗಿ ಹೋರಾ ಡುತ್ತಲೇ  ಬಂದಿದ್ದೇನೆ’ ಎಂದರು.

‘ಈ ಭಾಗದಲ್ಲಿ ಕೆಆರ್‌ಎಸ್‌ ಜಲಾಶಯ ಕಟ್ಟದಿದ್ದರೆ ನಮ್ಮ ಬದುಕು ಬಂಗಾರ ವಾಗುತ್ತಿರಲಿಲ್ಲ, ಜಿಲ್ಲೆಯ ನಾಗ ಮಂಗಲ ಕೆ.ಆರ್ ಪೇಟೆ, ಪಾಂಡವಪುರ, ಶ್ರೀರಂಗಪಟ್ಟಣ, ಮಂಡ್ಯ, ಮದ್ದೂರು ಸೇರಿದಂತೆ ವಿವಿಧ ವಿಭಾಗದಲ್ಲಿ ಎಷ್ಟು ಪ್ರಮಾಣದ ಭೂಮಿಯಿದೆ ಹಾಗೂ ಎಷ್ಟು ಪ್ರಮಾಣದ ಕಾವೇರಿ ನೀರು ಒದಗಿಸಲಾಗುತ್ತಿದೆ ಎಂಬ ಮಾಹಿತಿ ನನ್ನಲ್ಲಿದೆ. ಒಕ್ಕಲುತನ ಮಾಡುವ ನಮ್ಮ ಸಮುದಾಯದ ಜನರು ಭಿಕ್ಷುಕರಲ್ಲ, ಒಕ್ಕಲಿಗರು ಎಂದಿಗೂ ಕೊಡುಗೈ ದಾನಿಗಳು’ ಎಂದರು.

‘1964 ರಲ್ಲಿ ಖಾಸಗಿ ವಿಧೇಯಕ ಮಂಡನೆ ಮಾಡಿದ ಪರಿಣಾಮ ನಾನು ನ್ಯಾಯಾಂಗ ವಿಚಾರಣೆಯನ್ನು ಸಹ ಎದುರಿಸಬೇಕಾಯಿತು.  ಪ್ರಧಾನಿಯಾಗಿ, ಮುಖ್ಯಮಂತ್ರಿಯಾಗಿ ರಾಜ್ಯಕ್ಕೆ ಸೇವೆ ಸಲ್ಲಿಸಿದ್ದೇನೆ. ನನ್ನ ಹೋರಾಟ ನಿರಂತರವಾಗಿ ಮುಂದುವರಿಯುತ್ತದೆ. ಹಿಂದೆ ಹೋಗುವ ಪ್ರಶ್ನೆಯಿಲ್ಲ. ದೇವೇ ಗೌಡ  ಹಾಗೂ ಕುಮಾರಸ್ವಾಮಿಯನ್ನು ಮುಗಿಸುತ್ತೇವೆ ಎಂದು ತುಂಬಾ ಜನ ಬಂದಿದ್ದಾರೆ. ಆದರೆ ರಾಜ್ಯದ ಜನ, ರೈತರು, ಬಡವರು  ನಮ್ಮನ್ನು ಕೈಬಿಡುವುದಿಲ್ಲ’ ಎಂದರು.

‘ಎಚ್ ಕೆ ವೀರಣ್ಣಗೌಡರಿಗೆ ನಾನು ಅಭಿನಂದನೆ ಸಲ್ಲಿಸಬೇಕು. ನನ್ನ ಪ್ರಾರಂಭದ ರಾಜಕೀಯ ದಿನಗಳಲ್ಲಿ ನನಗೆ ಕಾಂಗ್ರೆಸ್ ಟಿಕೆಟ್  ಕೊಡಿಸಲು ಯತ್ನಿಸಿದ್ದರು.  ನನ್ನ ಪರವಾಗಿ ಹೋರಾಡಿದರು. ಅಂದು ನಾನು ಕಾಂಗ್ರೆಸ್ ಬಿಟ್ಟ ಕಾರಣದಿಂದ ಒಬ್ಬ ಒಕ್ಕಲಿಗ ಪ್ರಧಾನಿಯಾಗಿ, ಸಿ.ಎಂ ಆಗಿ ಸೇವೆ ಸಲ್ಲಿಸಲು ಕಾರಣವಾಯಿತು. ಕೆ.ಟಿ. ಚಂದು ಅವರು ನಡೆದುಬಂದ ದಾರಿ, ಹೋರಾಟದ ಬದುಕು, ವಿದ್ಯಾ ರಂಗದಲ್ಲಿ ಅವರ ಹೋರಾಟ ಅವಸ್ಮರಣೀಯ’ ಎಂದರು.

ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿ ‘ಒಂದು ಪುಟ್ಟ ಹಳ್ಳಿಯಿಂದ ಬಂದು ರಾಜಕೀಯದಲ್ಲಿ ಹಾಗೂ ಜನಮಾನಸದಲ್ಲಿ ಹೆಸರು ಮಾಡಿ ಕನ್ನಡಿಗನಾಗಿ ದಿಲ್ಲಿಯ ಕೆಂಪು ಕೋಟೆಯ ಮೇಲೆ ಪ್ರಧಾನಿಯಾಗಿ ರಾಷ್ಟ್ರದ ಬಾವುಟ ಹಾರಿಸಿದ ಕೀರ್ತಿ ನಮ್ಮ ಎಚ್.ಡಿ.ದೇವೇಗೌಡರದ್ದು. ಅದು ನಮ್ಮ ಪ್ರತಿಯೊಬ್ಬ ಕನ್ನಡಿಗನ ಹೆಮ್ಮೆಯ ಸಂಗತಿ. ಇಳಿವಯಸ್ಸಿನಲ್ಲಿಯೂ ಅವರ ಹೋರಾಟದ ಮನೋಭಾವ, ಜನರಿಗಾಗಿ ದುಡಿಯಬೇಕೆಂಬ ತುಡಿತ ಪ್ರಶಂಸನೀಯ’ ಎಂದರು.

ಶಾಸಕರಾದ ಡಿ.ಸಿ.ತಮ್ಮಣ್ಣ, ಕೆ.ಅನ್ನದಾನಿ, ಕೆ.ಟಿ.ಶ್ರೀಕಂಠೇಗೌಡ, ಎಂ.ಎಚ್.ಚನ್ನೇಗೌಡ ವಿದ್ಯಾಸಂಸ್ಥೆಯ ಗೌರವಾಧ್ಯಕ್ಷ ಕೆ.ಟಿ.ಚಂದು, ಮಾಜಿ ಶಾಸಕಿ ಕಲ್ಪನಾ ಸಿದ್ದರಾಜು, ಪ್ರೊ.ಎಂ.ಕೃಷ್ಣೇಗೌಡ,  ಸ್ವರೂಪ್ ಚಂದ್, ಡಿ.ಪಿ.ಸ್ವಾಮಿ, ಸುನೀಲ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು