ಶನಿವಾರ, 22 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಅಕ್ರಮ ಗಣಿಗಾರಿಕೆಯಿಂದ ಕನ್ನಂಬಾಡಿ ಕಟ್ಟೆಗೆ ಕಂಟಕ: ಸುಮಲತಾ

ಅಭಿವೃದ್ಧಿಗೆ ತಡೆ ಒಡ್ಡಿ ಭ್ರಷ್ಟಾಚಾರ: ಅಸಮಾಧಾನ ವ್ಯಕ್ತಪಡಿಸಿದ ಸಂಸದೆ ಸುಮಲತಾ ಅಂಬರೀಷ್
Last Updated 9 ಜುಲೈ 2021, 10:01 IST
ಅಕ್ಷರ ಗಾತ್ರ

ಭಾರತೀನಗರ: ಜಿಲ್ಲೆಯ ಅಭಿವೃದ್ಧಿ ವಿಚಾರದಲ್ಲಿ ಕೆಲವರು ಅಡ್ಡಗಾಲು ಹಾಕುತ್ತಿದ್ದಾರೆ ಎಂದು ಸಂಸದೆ ಸುಮಲತಾ ಅಂಬರೀಷ್ ಅಸಮಾಧಾನ ವ್ಯಕ್ತಪಡಿಸಿದರು.

ಪಟ್ಟಣದ ಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆಯ ಅತಿಥಿ ಗೃಹದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಪ್ರತಿ ವಿಷಯದಲ್ಲೂ ರಾಜಕಾರಣ ಮಾಡುವ, ಟೀಕೆ ಮಾಡುವ ವರ್ಗ ಜಿಲ್ಲೆಯಲ್ಲಿ ಸೃಷ್ಟಿಯಾಗಿದೆ. ಅಭಿವೃದ್ಧಿ ತಡೆಒಡ್ಡಿ ಭ್ರಷ್ಟಾಚಾರದಲ್ಲಿ ನಿರತರಾಗಿದ್ದಾರೆ. ಮಂಡ್ಯ ಜಿಲ್ಲೆಯಲ್ಲಿ ಉದ್ಯೋಗವಕಾಶಗಳಿಗೆ ವಿಪುಲ ಅವಕಾಶಗಳಿದ್ದು, ಜಿಲ್ಲೆಯಲ್ಲಿ ಉದ್ಯಮ ಸ್ಥಾಪಿಸಲು ಕೈಗಾರಿಕೋದ್ಯಮಿಗಳು ಹೆದರುತ್ತಾರೆ. ಇದರಿಂದ ಜಿಲ್ಲೆಯ ಯುವಕರು ವಲಸೆ ಹೋಗಬೇಕಾದ ಸನ್ನಿವೇಶ ಸೃಷ್ಟಿಯಾಗಿದೆ ಎಂದರು.

ಜಿಲ್ಲೆಯ ರೈತರಿಗೆ ಅನ್ಯಾಯವಾಗುತ್ತಿದ್ದು, ಅಕ್ರಮ ಗಣಿಗಾರಿಕೆಯಿಂದ ಕನ್ನಂಬಾಡಿ ಕಟ್ಟೆಗೆ ಕಂಟಕ ಎದುರಾಗಿದೆ. ಕೆಆರ್‌ಎಸ್ ಅಣೆಕಟ್ಟೆಯ ಬಿರುಕು ಮುಚ್ಚಲು ಕಾಂಗ್ರೆಸ್ ಸರ್ಕಾರ ₹40 ಕೋಟಿ ಬಿಡುಗಡೆ ಮಾಡಿತ್ತು. ಅದು ಏನಾಯಿತು. ಈ ಸಂಬಂಧ ತನಿಖೆಯಾ ಗಬೇಕು ಎಂದು ಆಗ್ರಹಿಸಿದರು.

‘ಮನ್‌ಮುಲ್‌ನಲ್ಲಿ ನಡೆದಿರುವ ಹಾಲು ನೀರು ಪ್ರಕರಣವನ್ನು ಸೂಕ್ತ ರೀತಿಯಲ್ಲಿ ತನಿಖೆ ಮಾಡಿ ತಪ್ಪಿತಸ್ಥರಿಗೆ ಶಿಕ್ಷೆ ನೀಡಬೇಕೆಂದು ಮುಖ್ಯಮಂತ್ರಿಗೆ ಪತ್ರ ಬರೆದಿದ್ದೇನೆ. ಮೈಷುಗರ್ ಕಾರ್ಖಾನೆಯ ಪುನಶ್ಚೇತನಕ್ಕೆ ₹450 ಕೋಟಿ ಬಂದರೂ ಕಾರ್ಖಾನೆ ಪುನಶ್ಚೇತನವಾಗಿಲ್ಲ. ಮೈಷುಗರ್ ಕಾರ್ಖಾನೆಯ ಕಾರ್ಯಾಚರಣೆ ಮತ್ತು ನಿರ್ವಹಣೆ ಮಾಡಲು ಯಾರೂ ಆಸಕ್ತಿ ತೋರುತ್ತಿಲ್ಲ. ಇದರಿಂದ ಜಿಲ್ಲೆಯ ರೈತರು ಪರಿತಪಿಸುವಂತಾಗಿದೆ ಎಂದರು.

ಜಿಲ್ಲೆಗೆ ಬಂದರೆ ಕೆಲವರಿಗೆ ಆತಂಕ: ‘ನಾನು ಜಿಲ್ಲೆಗೆ ಬಂದರೆ ಕೆಲವರಿಗೆ ಆತಂಕ, ನಡುಕ ಶುರುವಾಗುತ್ತದೆ. ಇದರಿಂದ ಅವರು ನನ್ನ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಾರೆ’ ಎಂದು ಸುಮಲತಾ ಅಂಬರೀಷ್ ಹೇಳಿದರು.

‘ಲಾಕ್‌ಡೌನ್‌ ಸಂದರ್ಭ ನಾನು ಜಿಲ್ಲೆಗೆ ಬರದಿದ್ದರೂ ಪ್ರತಿನಿತ್ಯ ಡಿಸಿ, ಡಿಎಚ್‌ಒ ಅವರ ಜೊತೆ ಮಾತನಾಡಿ ಸಮಸ್ಯೆಗಳಿಗೆ ಸ್ಪಂದಿಸಿದ್ದೇನೆ. ನನ್ನ ಕೆಲಸಗಳಿಂದ ಹತಾಶೆಗೊಂಡ ಅವರು ಟೀಕೆ ಮಾಡುತ್ತಿದ್ದಾರೆ. ಲೋಕಸಭಾ ಪ್ರದೇಶಾಭಿವೃದ್ಧಿ ನಿಧಿ ಇಲ್ಲದೆಯೂ ವೈಯಕ್ತಿಕವಾಗಿ ಸ್ಪಂದಿಸಿದ್ದೇನೆ. ಆಮ್ಲಜನಕ ಹಾಗೂ ಐಸಿಯು ಆಂಬುಲೆನ್ಸ್‌ ನೀಡಿದ್ದೇನೆ ಎಂದರು.

ತೊರೆಬೊಮ್ಮನಹಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಾಣವಾಗಿರುವ ರಾಜೀವ್‌ ಗಾಂಧಿ ಸೇವಾ ಕೇಂದ್ರ ಹಾಗೂ ಮೆಣಸಗೆರೆ ಗ್ರಾಮದ ಶಾಲಾ ಆವರಣದಲ್ಲಿ ನಿರ್ಮಾಣಗೊಂಡಿರುವ ರಂಗಮಂದಿರವನ್ನು ಉದ್ಘಾಟಿಸಿದರು.

ಜಿಪಂ ಮಾಜಿ ಸದಸ್ಯ ಎ.ಎಸ್‌.ರಾಜೀವ, ತೊರೆಬೊಮ್ಮನಹಳ್ಳಿ ಗ್ರಾ.ಪಂ.ಅಧ್ಯಕ್ಷೆ ಲಕ್ಷ್ಮಮ್ಮ ತಿಮ್ಮಯ್ಯ, ಉಪಾಧ್ಯಕ್ಷ ಪ್ರಕಾಶ್‌, ಮೆಣಸಗೆರೆ ಗ್ರಾ.ಪಂ ಅಧ್ಯಕ್ಷ ಎಂ.ಕೆ.ಮಹದೇವು, ಉಪಾಧ್ಯಕ್ಷೆ ಶಿಲ್ಪಾ ಶ್ರೀನಿವಾಸ ಮೂರ್ತಿ, ತಾ.ಪಂ. ಮಾಜಿ ಸದಸ್ಯ ಗಿರೀಶ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT