ಶುಕ್ರವಾರ, ಜನವರಿ 27, 2023
25 °C
ನೂತನ ಶಿಕ್ಷಣ ನೀತಿ – 2020 ಪರಾಮರ್ಶೆ, ಸಂವಾದ; ಪ್ರಾಧ್ಯಾಪಕ ಡಾ.ಲಕ್ಷ್ಮೀಶ್‌ ಅಭಿಮತ

ಮಂಡ್ಯ: ಸತ್ವ ಕಳೆದುಕೊಂಡಿದ್ದ ಶಿಕ್ಷಣ ವ್ಯವಸ್ಥೆಗೆ ಶಕ್ತಿ; ಚಿಂತಕ ಡಾ.ಲಕ್ಷ್ಮೀಶ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಡ್ಯ: ‘ಶಿಕ್ಷಣವೆಂದರೆ ಕೇವಲ ಪಾಠ ಬೋಧನೆ ಮಾಡುವುದಷ್ಟೇ ಅಲ್ಲ, ಮೌಲ್ಯ, ಸಂಸ್ಕೃತಿ ಅರಳಿಸುವ ಕಾರ್ಯವಾಗಿದೆ. ಮೆಕಾಲೆ ಪ್ರೇಣಿತ ನೀತಿಗಳಿಂದಾಗಿ ಸತ್ವ ಕಳೆದುಕೊಂಡಿದ್ದ ಶೈಕ್ಷಣಿಕ ವ್ಯವಸ್ಥೆಗೆ ಹೊಸ ಶಿಕ್ಷಣ ನೀತಿ–2020 ಶಕ್ತಿ ತುಂಬುವ ಕೆಲಸ ಮಾಡಲಿದೆ’ ಎಂದು ಪ್ರಾಧ್ಯಾಪಕ, ಚಿಂತಕ ಡಾ.ಲಕ್ಷ್ಮೀಶ್‌ ಹೇಳಿದರು.

ರಾಜ್ಯ ಶೈಕ್ಷಣಿಕ ದಿಕ್ಸೂಚಿ ಮತ್ತು ಸುಧಾರಣಾ ಸಮಿತಿ, ಅನನ್ಯ ಹಾರ್ಟ್‌ ಸಂಸ್ಥೆ ವತಿಯಿಂದ ಸಾತನೂರು ಅಚೀವರ್ಸ್‌ ಶಾಲೆ ಸಭಾಂಗಣದಲ್ಲಿ ಶನಿವಾರ ನಡೆದ ನೂತನ ಶಿಕ್ಷಣ ನೀತಿ– ಪರಾಮರ್ಶೆ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.

‘ಜ್ಞಾನ ಯಾವಾಗಲೂ ಹಂಚಿಕೆಯಾಗಬೇಕು, ನಮ್ಮ ಹಿಂದಿನವರು ಗುರುಕುಲದಲ್ಲಿ ಜ್ಞಾನಾರ್ಜನೆ ಜೊತೆಗೆ ಮೌಲ್ಯಗಳನ್ನು ಕಲಿಯುತ್ತಿದ್ದರು. ವೃತ್ತಿ ಆಧಾರಿತವಾದ ಶಿಕ್ಷಣದಿಂದಾಗಿ ಕೌಶಲ ರೂಢಿಸಿಕೊಳ್ಳುತ್ತಿದ್ದರು. ಆದರೆ ಇಂದಿನ ಮಕ್ಕಳಿಗೆ ಮಣ್ಣಿನ ಬಗ್ಗೆ ಯಾವ ಜ್ಞಾನವೂ ಇಲ್ಲ, ಗರಿಕೆ ಎಂದರೆ ಅದನ್ನು ಗೂಗಲ್‌ ಮಾಡಿ ಹುಡುಕುತ್ತಾರೆ. ಆದರೆ ಮೋದಿ ಸರ್ಕಾರ ರೂಪಿಸಿರುವ ಹೊಸ ಶಿಕ್ಷಣ ನೀತಿಯಿಂದ ಮುಂದಿನ ಪೀಳಿಗೆಯ ಮಕ್ಕಳಿಗೆ ನಮ್ಮ ನೆಲ ಸಂಸ್ಕೃತಿಯ ಶಿಕ್ಷಣ ದೊರೆಯಲಿದೆ’ ಎಂದು ಹೇಳಿದರು.

‘ಮುಂದೆ 3ರಿಂದ 8 ವರ್ಷ ವಯಸ್ಸಿನ ಮಕ್ಕಳು ಆಟ ಮತ್ತು ಚಟುವಟಿಕೆಯ ಮೂಲ ಪಾಠ ಕಲಿಯಲಿದ್ದಾರೆ. 8–11 ವರ್ಷದ ಮಕ್ಕಳು ಸರಳ ಗಣಿತ, ಪರಿಸರ ಪಾಠ ಕಲಿಯಲಿದ್ದಾರೆ. ನಂತರ ಪ್ರೌಢಶಿಕ್ಷಣ ಹಂತದಲ್ಲಿ 11–14 ವರ್ಷ ವಯಸ್ಸಿನ ಮಕ್ಕಳು ವೃತ್ತಿ ಆಧಾರಿತವಾದ ಶಿಕ್ಷಣದತ್ತ ಕಲಿಕೆ ಮುಂದುವರಿಸಲಿದ್ಧಾರೆ. ಈ ಹಂತದಲ್ಲಿ ಮಕ್ಕಳು ತಮಗೆ ಆಸಕ್ತಿ ಇರುವ ವಿಷಯಗಳ ಆಯ್ಕೆಗೆ ಮುಕ್ತ ಅವಕಾಶ ಕಲ್ಪಿಸಲಾಗಿದೆ. ನಂತರ ಹಂತದ ವಿದ್ಯಾರ್ಥಿಗಳು ವಿಶ್ಲೇಷಣೆ, ಚಿಂತನೆ ಆಧಾರಿತವಾಗಿ ಕಲಿಯಲಿದ್ದಾರೆ’ ಎಂದರು.

‘ಲಾರ್ಡ್‌ ಮೆಕಾಲೆ ಋಗ್ವೇದ ಓದಿಕೊಂಡಿದ್ದ, ನಮ್ಮ ಸಂಸ್ಕೃತಿ ಆಧರಿಸಿದ ಶಿಕ್ಷಣದ ಮಹಿಮೆ ಅವನಿಗೆ ತಿಳಿದಿತ್ತು. ಹೀಗಾಗಿ ನಮ್ಮ ಸಂಸ್ಕೃತಿಯ ಭಾಗವಾಗಿದ್ದ ವೃತ್ತಿ ಆಧಾರಿತ ಶಿಕ್ಷಣವನ್ನು ಒಡೆದುಹಾಕಲಾಯಿತು. ಈಗ ಮತ್ತೊಮ್ಮೆ ವ್ಯಕ್ತಿತ್ವ, ಭಾವನೆ ಹಾಗೂ ಸಾಂಸ್ಕೃತಿಯ ಪ್ರತೀಕವಾದ ಶಿಕ್ಷಣಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಅಡಿಪಾಯ ಹಾಕಿದ್ದಾರೆ’ ಎಂದರು.

ಬಿಜೆಪಿ ಜಿಲ್ಲಾ ಪ್ರಭಾರಿ ಎ.ಮಂಜು ಮಾತನಾಡಿ ‘ವಿದ್ಯೆಯಿಂದ ಮಾತ್ರ ಸಮಾಜದ ಪರಿವರ್ತನೆ ಸಾಧ್ಯ. ಸ್ವಾತಂತ್ರ್ಯ ನಂತರ ಹಲವು ಶಿಕ್ಷಣ ನೀತಿ ಬಂದಿವೆ. ಆದರೆ ಉನ್ನತ ಶಿಕ್ಷಣ ಎಂಬುದು ಕೇವಲ ಕೆಲವರಿಗಷ್ಟೇ ಸೀಮಿತವಾಗಿತ್ತು. ಭಾರತದಲ್ಲಿ ಯುವಕರು ಹೆಚ್ಚಿನ ಸಂಖ್ಯೆಯಲ್ಲಿದ್ದು ಅವರ ಪ್ರತಿಭೆ, ಜ್ಞಾನವು ವಿದೇಶಗಳಿಗೆ ದೊರೆಯುತ್ತಿದೆ. ನಮ್ಮ ಯುವಕರಿಂದ ಹಲವು ದೇಶಗಳು ಅಭಿವೃದ್ಧಿ ಹೊಂದಿವೆ. ಹೊಸ ಶಿಕ್ಷಣ ನೀತಿಯಿಂದ ನಮ್ಮ ಯುವಪ್ರತಿಭೆಯ ಸೇವೆ ನಮ್ಮ ದೇಶಕ್ಕೇ ದೊರೆಯುವಂತಾಗಲಿದೆ’ ಎಂದು ಹೇಳಿದರು.

ಸಮಾರಂಭದಲ್ಲಿ ಬಿಜೆಪಿ ಮುಖಂಡ ಡಾ.ಸಿದ್ದರಾಮಯ್ಯ, ಅನನ್ಯ ಹಾರ್ಟ್‌ ಸಂಸ್ಥೆ ಅಧ್ಯಕ್ಷೆ ಬಿ.ಎಸ್‌.ಅನುಪಮಾ ಹಾಜರಿದ್ದರು.

‘ಧ್ರುವ’ನ ದತ್ತು ಸ್ವೀಕರಿಸಿದ ಸುಧಾಕರ!

ಇದೇ ಸಂದರ್ಭದಲ್ಲಿ ಜನ್ಮದಿನ ಆಚರಿಸಿಕೊಂಡ ಶೈಕ್ಷಣಿಕ ದಿಕ್ಸೂಚಿ ಮತ್ತು ಸುಧಾರಣಾ ಸಮಿತಿ ರಾಜ್ಯ ಘಟಕದ ಅಧ್ಯಕ್ಷ ಡಾ.ಸುಧಾಕರ ಹೊಸಳ್ಳಿ, ಸರ್ಕಾರಿ ಶಾಲೆಯ ವಿದ್ಯಾರ್ಥಿಯೊಬ್ಬನನ್ನು ಶೈಕ್ಷಣಿಕವಾಗಿ ದತ್ತು ಸ್ವೀಕಾರ ಮಾಡಿದರು.

ಪಂಪಿನಹೊಸಳ್ಳಿಯ ಸರ್ಕಾರಿ ಶಾಲೆಯಲ್ಲಿ 2ನೇ ತರಗತಿ ಓದುತ್ತಿರುವ ಧ್ರುವನಿಗೆ ಹೂಗುಚ್ಛ ನೀಡಿ ಆತನ ಸಂಪೂರ್ಣ ಶಿಕ್ಷಣ ಜವಾಬ್ದಾರಿಯಲ್ಲಿ ವಹಿಸಿಕೊಂಡರು.

ಈ ಸಂದರ್ಭದಲ್ಲಿ ಮಾತನಾಡಿದ ಸುಧಾಕರ ‘ಭಾರತ ಪ್ರಾಕೃತಿಕವಾಗಿ ಅಖಂಡವಾದುದು. ಭಾರತವನ್ನು ಬೇರ್ಪಡಿಸುವ ಯತ್ನ ಭಾರತವನ್ನು ಕತ್ತರಿಸಿದಂತೆ ಎಂದು ಡಾ.ಬಿ.ಆರ್‌.ಅಂಬೇಡ್ಕರ್‌ ಹೇಳಿದ್ದಾರೆ. ವಿಶ್ವದೆಲ್ಲೆಡೆ ನಾಗರಿಕತೆಯನ್ನು ಪ್ರಚಾರ ಮಾಡಿದ್ದ ನಮ್ಮ ದೇಶದಲ್ಲಿ ಶಿಕ್ಷಣ ಸರ್ವವ್ಯಾಪಿಯಾಗಬೇಕು. ಈ ಉದ್ದೇಶ ಹೊಸ ಶಿಕ್ಷಣ ನೀತಿಯಲ್ಲಿದೆ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು