ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕನ್ನಂಬಾಡಿ ರಕ್ಷಣೆಗಾಗಿ ಸುಗ್ರೀವಾಜ್ಞೆ ಹೊರಡಿಸಿ: ರೈತರ ಆಗ್ರಹ

Published 6 ಜುಲೈ 2024, 9:52 IST
Last Updated 6 ಜುಲೈ 2024, 9:52 IST
ಅಕ್ಷರ ಗಾತ್ರ

ಮಂಡ್ಯ: ಬಂಗಾರಪ್ಪ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ತಮಿಳುನಾಡಿಗೆ ನೀರು ಬಿಡುವುದಿಲ್ಲ ಎಂದು ಸುಗ್ರೀವಾಜ್ಞೆ ಹೊರಡಿಸಿದ್ದರು. ಅದೇ ರೀತಿ ರಾಜ್ಯ ಸರ್ಕಾರ ‘ಪರೀಕ್ಷಾರ್ಥ ಸ್ಫೋಟ’ (ಟ್ರಯಲ್‌ ಬ್ಲಾಸ್ಟ್‌) ಪ್ರಕ್ರಿಯೆಯನ್ನು ಕೂಡಲೇ ನಿಲ್ಲಿಸಿ, ಕೆ.ಆರ್‌.ಎಸ್‌. ಅಣೆಕಟ್ಟೆಯ 20 ಕಿ.ಮೀ. ಸುತ್ತ ಗಣಿಗಾರಿಕೆ ನಿಷೇಧಿಸಿ ಸುಗ್ರೀವಾಜ್ಞೆ ಹೊರಡಿಸಬೇಕು ಎಂದು ವಿವಿಧ ರೈತ ಸಂಘಟನೆಗಳ ಮುಖಂಡರು ಒಕ್ಕೊರಲಿನಿಂದ ಆಗ್ರಹಿಸಿದರು. 

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಅಧ್ಯಕ್ಷತೆಯಲ್ಲಿ ‘ಟ್ರಯಲ್‌ ಬ್ಲಾಸ್ಟ್’ ಸಂಬಂಧ ನಡೆದ ಸಭೆಯಲ್ಲಿ ಕಲ್ಲು ಗಣಿಗಾರಿಕೆ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದರು. ಸರ್ಕಾರದ ಕ್ರಮವನ್ನು ಖಂಡಿಸಿ, ಜನಪ್ರತಿನಿಧಿ ಮತ್ತು ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು. 

ರೈತಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎ.ಎಲ್‌.ಕೆಂಪೂಗೌಡ ಮಾತನಾಡಿ, ಕಳೆದ 15 ವರ್ಷಗಳಿಂದ ಪಾಂಡವಪುರ ತಾಲ್ಲೂಕಿನ ಬೇಬಿಬೆಟ್ಟದಲ್ಲಿ ನಡೆಯುತ್ತಿರುವ ಕಲ್ಲುಗಣಿಗಾರಿಕೆ ವಿರುದ್ಧ ಹೋರಾಟ ಮಾಡಿಕೊಂಡು ಬಂದಿದ್ದೇವೆ. 2018ರ ಸೆಪ್ಟೆಂಬರ್‌ 25ರಂದು ಮಹಾಸ್ಫೋಟವಾಗಿತ್ತು. ನಂತರ ಕೆ.ಆರ್‌.ಎಸ್‌. ಅಣೆಕಟ್ಟೆಗೆ ಹಾನಿಯಾಗುತ್ತದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದವರು ವರದಿ ನೀಡಿದ್ದರು. ಅಂದಿನ ಜಿಲ್ಲಾಡಳಿತ ಅಣೆಕಟ್ಟೆಯ 20 ಕಿ.ಮೀ. ವ್ಯಾಪ್ತಿಯಲ್ಲಿ ಗಣಿಗಾರಿಕೆ ನಡೆಸದಂತೆ ಆದೇಶ ಹೊರಡಿಸಿತ್ತು ಎಂದರು. 

ಈಗ ಪುನಃ ‘ಟ್ರಯಲ್‌ ಬ್ಲಾಸ್ಟ್‌’ ನಡೆಸಿ, ಇದರ ವರದಿ ಆಧಾರದ ಮೇಲೆ ಕಲ್ಲು ಗಣಿಗಾರಿಕೆಯ ಬಗ್ಗೆ ತೀರ್ಮಾನ ಕೈಗೊಳ್ಳುತ್ತೇವೆ ಎಂಬುದು ಸರ್ಕಾರದ ವಾದವಾಗಿದೆ. ವರದಿಯಲ್ಲಿ ಗಣಿ ಮಾಲೀಕರ ಪರ ತೀರ್ಪು ಬಂದರೆ, ನೀವು ಏನು ಮಾಡುತ್ತೀರಿ? ಈ ಬಗ್ಗೆ ಸ್ಪಷ್ಟನೆ ನೀಡಿ ಎಂದು ಸಚಿವರನ್ನು ಆಗ್ರಹಿಸಿದರು. 

ತಂತ್ರಜ್ಞಾನದಿಂದ ಪರೀಕ್ಷಿಸಿ: 

ರೈತ ಮುಖಂಡ ಪ್ರಸನ್ನಗೌಡ ಎನ್‌. ಮಾತನಾಡಿ, ಸುರಂಗ, ನಾಲೆ, ಅಣೆಕಟ್ಟು ರಕ್ಷಿಸುವ ಉದ್ದೇಶದಿಂದಲೇ 2021ರಲ್ಲಿ ಅಣೆಕಟ್ಟು ಸುರಕ್ಷತಾ ಕಾಯ್ದೆಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ. ಆದರೆ ನಮ್ಮ ರಾಜ್ಯದಲ್ಲಿ ಈ ಕಾಯ್ದೆ ಸಮರ್ಪಕವಾಗಿ ಅನುಷ್ಠಾನಗೊಂಡಿಲ್ಲ. ಗಣಿಗಾರಿಕೆಯಿಂದ ಅಣೆಕಟ್ಟೆಗೆ ಧಕ್ಕೆಯಾಗುತ್ತದೆಯೇ? ಇಲ್ಲವೇ? ಎಂಬುದನ್ನು ಖಚಿತಪಡಿಸಿಕೊಳ್ಳಲು ‘ಟ್ರಯಲ್‌ ಬ್ಲಾಸ್ಟ್‌’ ಮಾಡುವ ಅಗತ್ಯವಿಲ್ಲ. ಸುಧಾರಿತ ತಂತ್ರಜ್ಞಾನದ ಮೂಲಕ ಪರೀಕ್ಷಿಸಿ, ನ್ಯಾಯಾಲಯಕ್ಕೆ ವಾಸ್ತವ ವರದಿ ನೀಡಬಹುದು ಎಂದರು. 

ಅಣೆಕಟ್ಟೆ ರಕ್ಷಣೆ ಸರ್ಕಾರದ ಹೊಣೆ:

ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯ ಸಂಘಟನಾ ಕಾರ್ಯದರ್ಶಿ ಸುನಂದಾ ಜಯರಾಮ್‌ ಮಾತನಾಡಿ, ‘ಹೈಕೋರ್ಟ್‌ ಆದೇಶ, ಕಾನೂನು ತೊಡಕು ಎಲ್ಲವನ್ನೂ ನಿಭಾಯಿಸುವುದು ಸರ್ಕಾರದ ಜವಾಬ್ದಾರಿ. ಕೆ.ಆರ್‌.ಎಸ್‌. ಅಣೆಕಟ್ಟೆಯ ಶತಮಾನೋತ್ಸವ ಆಚರಿಸುವ ಸಂದರ್ಭದಲ್ಲಿ, ‘ಡ್ಯಾಂ ರಕ್ಷಿಸಿ’ ಎಂದು ಹೋರಾಟ ಮಾಡಬೇಕಾದ ಪರಿಸ್ಥಿತಿ ಬಂದಿರುವುದು ನಮ್ಮ ದೌರ್ಭಾಗ್ಯ. ನಾವು ನಿಮಗೆ ಅಧಿಕಾರ ಕೊಟ್ಟಿದ್ದೇವೆ. ನೀವು ಅಣೆಕಟ್ಟೆ ಮತ್ತು ಜನರ ರಕ್ಷಣೆ ಮಾಡಬೇಕಾದದು ನಿಮ್ಮ ಹೊಣೆ’ ಎಂದು ಗುಡುಗಿದರು. 

ಪರಿಸರ ಇಲಾಖೆ ಅನುಮತಿ ಸಿಕ್ಕಿದೆಯಾ?

ಸಾಮಾಜಿಕ ಹೋರಾಟಗಾರ ರವೀಂದ್ರ ಮಾತನಾಡಿ, ಬೇಬಿಬೆಟ್ಟದ ಗಣಿಗಾರಿಕೆ ಪ್ರದೇಶದ ಸುತ್ತ ಮೇಲುಕೋಟೆ ವನ್ಯಜೀವಿ ಧಾಮ ಮತ್ತು ರಂಗನತಿಟ್ಟು ಪಕ್ಷಿಧಾಮ ಸೇರಿದಂತೆ 2016 ಎಕರೆ ಅರಣ್ಯ ಪ್ರದೇಶದ ವ್ಯಾಪ್ತಿಗೆ ಬರುತ್ತದೆ. ಟ್ರಯಲ್‌ ಬ್ಲಾಸ್ಟ್‌ ನಡೆಸಲು ಕೇಂದ್ರ ಪರಿಸರ ಇಲಾಖೆಯಿಂದ ಅನುಮತಿ ಪಡೆದಿದ್ದೀರಾ?, ಗಣಿಗಾರಿಕೆ ಚಟುವಟಿಕೆಗೆ ನೀರಾವರಿ ನಿಗಮ ಏಕೆ ಇಷ್ಟು ಆಸಕ್ತಿ ತೋರುತ್ತಿದೆ. 3 ಶಿಲಾಪದರಗಳ ಮೇಲೆ ಡ್ಯಾಂ ನಿಂತಿದೆ. ಅಣೆಕಟ್ಟೆಗೆ ಧಕ್ಕೆಯಾದರೆ ಹೊಣೆ ಯಾರು? ಎಂದು ಪ್ರಶ್ನಿಸಿದರು. 

ಸಭೆಯಲ್ಲಿ ರೈತಸಂಘ ಮತ್ತು ವಿವಿಧ ಪ್ರಗತಿಪರ ಸಂಘಟನೆಗಳ ಮುಖಂಡರು, ಶಾಸಕ ಪಿ.ರವಿಕುಮಾರ್‌, ರಮೇಶ ಬಂಡಿಸಿದ್ದೇಗೌಡ, ಜಿಲ್ಲಾಧಿಕಾರಿ ಕುಮಾರ, ಜಿಲ್ಲಾ ಪಂಚಾಯಿತಿ ಸಿಇಒ ಶೇಖ್‌ ತನ್ವೀರ್‌ ಆಸಿಫ್‌, ಜಲಸಂಪನ್ಮೂಲ ಇಲಾಖೆಯ ಕಾರ್ಯದರ್ಶಿ ಕುಲಕರ್ಣಿ, ಕಾವೇರಿ ನೀರಾವರಿ ನಿಗಮದ ತಾಂತ್ರಿಕ ಸಲಹೆಗಾರ ಶಿವಪ್ರಸಾದ್‌ ಮುಂತಾದವರು ಭಾಗವಹಿಸಿದ್ದರು. 

ಜುಲೈ 15ರವರೆಗೆ ‘ಟ್ರಯಲ್‌ ಬ್ಲಾಸ್ಟ್‌’ಗೆ ತಡೆ: ಸಚಿವ 

‘ಸರ್ಕಾರ ಆದಾಯ ಮತ್ತು ವೈಯಕ್ತಿಕ ಹಿತಾಸಕ್ತಿಗಾಗಿ ‘ಟ್ರಯಲ್‌ ಬ್ಲಾಸ್ಟ್‌’ ಪ್ರಕ್ರಿಯೆ ನಡೆಸುತ್ತಿಲ್ಲ. ನ್ಯಾಯಾಲಯದ ಆದೇಶದ ಮೇರೆಗೆ ನಡೆಸಲು ಮುಂದಾಗಿದೆ. ಕೆ.ಆರ್‌.ಎಸ್‌. ಅಣೆಕಟ್ಟೆಗೆ ಸಣ್ಣ ಹಾನಿಯಾಗಲೂ ಬಿಡುವುದಿಲ್ಲ. ಹೋರಾಟ ನಡೆಸುತ್ತಿರುವ ರೈತರ ಅಭಿಪ್ರಾಯ ಪರಿಗಣಿಸಿ ಮುಖ್ಯಮಂತ್ರಿ ಜತೆ ಚರ್ಚಿಸುತ್ತೇನೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್‌.ಚಲುವರಾಯಸ್ವಾಮಿ ಹೇಳಿದರು. 

ಜುಲೈ 15ಕ್ಕೆ ಗಣಿಗಾರಿಕೆ ಸಂಬಂಧ ಹೈಕೋರ್ಟ್‌ನಲ್ಲಿ ವಿಚಾರಣೆಯಿದೆ. ಅಲ್ಲಿಯವರೆಗೂ ಟ್ರಯಲ್‌ ಬ್ಲಾಸ್ಟ್‌ ನಡೆಸುವುದಿಲ್ಲ. ಜುಲೈ 12ರಂದು ಅಣೆಕಟ್ಟೆ ಸುರಕ್ಷತಾ ಸಮಿತಿಯ ಸಭೆ ಇದೆ. ಸಮಿತಿಗೆ ರೈತರು ಕೂಡ ಅಭಿಪ್ರಾಯ ಸಲ್ಲಿಸಬಹುದು. ಕಾನೂನು ಪರಿಣತರು ಮತ್ತು ನೀರಾವರಿ ತಜ್ಞರ ಅಭಿಪ್ರಾಯ ಪಡೆದು, ನ್ಯಾಯಾಲಯದ ಮುಂದೆ ಸಮರ್ಥ ವಾದ ಮಂಡಿಸಿದರೆ ಉತ್ತಮ ತೀರ್ಪು ನಿರೀಕ್ಷಿಸಬಹುದು ಎಂದರು.  

ರೈತ ಬಣಗಳ ನಡುವೆ ಮಾತಿನ ಚಕಮಕಿ

ಸಭೆ ಮುಗಿದ ನಂತರ ರೈತ ಬಣದ ಇಂಗಲಗುಪ್ಪೆ ಕೃಷ್ಣೇಗೌಡ ಅವರು ‘ಟ್ರಯಲ್‌ ಬ್ಲಾಸ್ಟ್‌’ ನಡೆಸುವಂತೆ ಸಚಿವರಿಗೆ ಮನವಿ ಕೊಟ್ಟರು. ಈ ವಿಷಯ ತಿಳಿಯುತ್ತಿದ್ದಂತೆ ವಿವಿಧ ರೈತ ಸಂಘಟನೆಗಳ ಮುಖಂಡರು, ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಕೃಷ್ಣೇಗೌಡ ವಿರುದ್ಧ ಮುಗಿಬಿದ್ದರು. ಗಣಿಗಾರಿಕೆ ಪರ ನಿಂತಿರುವ ನಿನಗೆ ನಾಚಿಕೆಯಾಗಬೇಕು ಎಂದು ತರಾಟೆಗೆ ತೆಗೆದುಕೊಂಡರು. 

ಪೊಲೀಸರು ಮಧ್ಯಪ್ರವೇಶಿಸಿ, ರೈತರನ್ನು ಸಮಾಧಾನಪಡಿಸಿ ಹೊರಗೆ ಕಳುಹಿಸಿದರು. ನಂತರ ಕೃಷ್ಣೇಗೌಡನನ್ನು ಮತ್ತೊಂದು ಗೇಟ್‌ ಮೂಲಕ ಹೊರಗೆ ಕಳುಹಿಸಿದರು. 

ಕನ್ನಂಬಾಡಿಗೆ ಧಕ್ಕೆಯಾದರೆ ರೈತರ ಗತಿಯೇನು?

ನಾಲ್ವಡಿ ಕೃಷ್ಣರಾಜ ಒಡೆಯರ್‌ ಕಟ್ಟಿದ ಕನ್ನಂಬಾಡಿ ಅಣೆಕಟ್ಟೆಯನ್ನು ಮತ್ತೆ ನಿರ್ಮಿಸಲು ಸಾಧ್ಯವಿಲ್ಲ. ಶ್ರವಣಬೆಳಗೊಳದ ಬಾಹುಬಲಿ ಮೂರ್ತಿಗೆ ಧಕ್ಕೆಯಾಗಬಾರದು ಎಂದು ಅದರ 8 ಕಿ.ಮೀ. ವ್ಯಾಪ್ತಿಯಲ್ಲಿ ಗಣಿಗಾರಿಕೆ ನಿಷೇಧಿಸಲಾಗಿದೆ. 49.3 ಟಿಎಂಸಿ ನೀರಿನ ಸಾಮರ್ಥ್ಯದ ಕನ್ನಂಬಾಡಿಗೆ ಧಕ್ಕೆಯಾದರೆ, 8 ಜಿಲ್ಲೆಗಳ ಜನರ ಕುಡಿಯುವ ನೀರಿಗೆ ಗತಿಯೇನು? ಇದನ್ನೇ ನಂಬಿರುವ ರೈತರ ಭವಿಷ್ಯವೇನು? ಎಂದು ರೈತಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎ.ಎಲ್‌. ಕೆಂಪೂಗೌಡ ಪ್ರಶ್ನಿಸಿದರು. 

‘ಬೇಬಿಬೆಟ್ಟದಲ್ಲಿ ಗಣಿಗಾರಿಕೆ ನಡೆಸಿದರೆ ಸರ್ಕಾರಕ್ಕೆ ಬರುವ ಆದಾಯ ಎಷ್ಟು? ಕೆ.ಆರ್‌.ಎಸ್‌. ಅಣೆಕಟ್ಟೆಯಿಂದ ಆಗುತ್ತಿರುವ ಪ್ರಯೋಜನಕ್ಕಿಂತ ದೊಡ್ಡದಾ?

– ಸುನೀತಾ ಪುಟ್ಟಣ್ಣಯ್ಯ, ರೈತ ನಾಯಕಿ

ಗಣಿಗಾರಿಕೆ ವೇಳೆ ನಡೆಯುವ ಮಹಾಸ್ಫೋಟಗಳಿಂದ ಅಣೆಕಟ್ಟೆಗೆ ಹೇಗೆ ಧಕ್ಕೆಯಾಗುತ್ತದೆ ಎಂಬುದನ್ನು ಕಂಡುಕೊಳ್ಳಲು ಯಾವ ಮಾಪನವೂ ಇಲ್ಲ. ‘ಪರೀಕ್ಷಾರ್ಥ ಸ್ಫೋಟ’ದಿಂದ ಪತ್ತೆ ಹಚ್ಚಲು ಸಾಧ್ಯವೇ ಇಲ್ಲ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT