ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪದ್ಮಶ್ರೀ ಸಿಕ್ಕಿರುವುದಕ್ಕೆ ಮಂಡ್ಯ ಮಣ್ಣಿಗೆ ಋಣಿ: ಕೆ.ಎಸ್‌.ರಾಜಣ್ಣ

ಕೆ.ಎಸ್.ರಾಜಣ್ಣ ಮತ್ತು ಮೀರಾ ಶಿವಲಿಂಗಯ್ಯ ಅವರಿಗೆ ಅಭಿನಂದನಾ ಸಮಾರಂಭ
Published 22 ಜೂನ್ 2024, 15:50 IST
Last Updated 22 ಜೂನ್ 2024, 15:50 IST
ಅಕ್ಷರ ಗಾತ್ರ

ಮಂಡ್ಯ: ‘ಮಂಡ್ಯ ಜಿಲ್ಲೆಯ ಸಿಹಿಯನ್ನು ಮತ್ಯಾರೂ ಕೊಡಲು ಸಾಧ್ಯವಿಲ್ಲ. ನನ್ನ ಸೇವೆಯನ್ನು ಗುರುತಿಸಿ ಪದ್ಮಶ್ರೀ ನೀಡಿರುವುದಕ್ಕೆ ಈ ಮಣ್ಣಿಗೆ ಋಣಿಯಾಗಿರುತ್ತೇನೆ. ಸಾಮಾನ್ಯನ ಸೇವೆಗೂ ಪ್ರಶಸ್ತಿ ಸಿಗುತ್ತದೆ ಎಂಬುದು ನಿಜವಾಗಿದೆ’ ಎಂದು ಕೆ.ಎಸ್‌.ರಾಜಣ್ಣ ಸ್ಮರಿಸಿದರು.

ನಗರದ ಅಂಬೇಡ್ಕರ್‌ ಭವನದಲ್ಲಿ ಜಿಲ್ಲಾ ನಾಗರಿಕ ಅಭಿನಂದನಾ ಸಮಿತಿ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಕೆ.ಎಸ್.ರಾಜಣ್ಣ ಮತ್ತು ಕರ್ನಾಟಕ ರಾಜ್ಯ ಮುಕ್ತ ವಿ.ವಿ.ಯಿಂದ ಗೌರ ಡಾಕ್ಟರೇಟ್‌ ಪಡೆದಿರುವ ಮೀರಾ ಶಿವಲಿಂಗಯ್ಯ ಅವರಿಗೆ ನಾಗರಿಕ ಅಭಿನಂದನಾ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.

ಸೇವೆ ಎಂಬುದು ದೊಡ್ಡವರ ಆಸ್ತಿಯಲ್ಲ, ಅದರಲ್ಲಿ ತೊಡಗಿಕೊಂಡವರಿಗೂ ಪ್ರಶಸ್ತಿ ಸಿಗುತ್ತದೆ ಎಂಬುದಕ್ಕೆ ನಾನೇ ಸಾಕ್ಷಿಯಾಗಿದ್ದೇನೆ. ಆದರೆ ಈ ಮೌಲ್ಯಯುತವಾದ ಪ್ರಶಸ್ತಿ ಸಿಕ್ಕಿರುವುದು ನಿಮ್ಮ ಅಭಿಮಾನ ಮತ್ತು ಆಶೀರ್ವಾದದಿಂದ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಜಿಲ್ಲಾಧಿಕಾರಿ ಕುಮಾರ ಮಾತನಾಡಿ, ‘ವ್ಯಕ್ತಿತ್ವದಿಂದ ಒಳಿತಾಗುತ್ತದೆ ಎಂಬುದಕ್ಕೆ ಪದ್ಮಶ್ರೀ ಪ್ರಶಸ್ತಿ ವಿಜೇತ ಕೆ.ಎಸ್‌.ರಾಜಣ್ಣ ಹಾಗೂ ತಾವು ಕಲಿತ ವಿ.ವಿ.ಯಲ್ಲಿಯೇ ಡಾಕ್ಟರೇಟ್‌ ‍ಪಡೆದ ಮೀರಾ ಶಿವಲಿಂಗಯ್ಯ ಅವರು ಸಾಕ್ಷಿಯಾಗಿ ನಿಲ್ಲುತ್ತಾರೆ. ಸಾಧನೆಯನ್ನು ಮಾಡಿರುವುದನ್ನು ಗುರುತಿಸಬೇಕಾದರೆ ಅದು ಒಳ್ಳೆಯ ಮನಸಿನಿಂದ ಸಾಧ್ಯವಾಗುತ್ತದೆ. ಅದನ್ನು ದ್ರೋಣಾಚಾರ್ಯರು ಮಹಾಭಾರತದಲ್ಲಿಯೂ ಹೇಳಿದ್ದಾರೆ, ನೀವಿಬ್ಬರೂ ಸಹ ಉತ್ತಮ ಕೆಲಸವನ್ನು ಮಾಡಿಕೊಂಡು ಬರುತ್ತಿದ್ದೀರಾ ಹಾಗಾಗಿ ನಿಮಗೆ ಗೌರವ ಸಿಕ್ಕಿದೆ ಎಂದು ಶ್ಲಾಘಿಸಿದರು.

ಶಾಸಕ ಪಿ.ರವಿಕುಮಾರ್‌ಗೌಡ ಮಾತನಾಡಿ, ‘ರಾಜಣ್ಣ ಅವರು ತಮಗಿರುವ ಅಂಗವಿಕಲತೆಯನ್ನು ಸಾಧನೆಯ ಮೆಟ್ಟಿಲಾಗಿ ಮಾಡಿಕೊಂಡು ದೇಶವನ್ನು ಪ್ರತಿನಿಧಿಸಿ ಪ್ಯಾರಾ ಒಲಂಪಿಕ್‌ನಲ್ಲಿ ಪದಕ ಗೆದ್ದು ವಿಶ್ವದಲ್ಲೇ ಮಂಡ್ಯದ ಹೆಸರನ್ನು ಪ್ರಚುರ ಪಡಿಸಿ ಪದ್ಮಶ್ರೀ ಪ್ರಶಸ್ತಿ ಪಡೆದಿರುವುದು ಹೆಮ್ಮೆಯ ವಿಷಯವಾಗಿದೆ. ಯಾರ ಸಾಧನೆ ಮನುಕುಲಕ್ಕೆ ಹಾಗೂ ಸಮುದಾಯಕ್ಕೆ ಪ್ರೇರೇಪಣೆ ಆಗುವಂತಿದ್ದರೆ ಮಾತ್ರ ಪ್ರಶಸ್ತಿ ದೊರಕುತ್ತದೆ’ ಎಂದು ಅಭಿಪ್ರಾಯಪಟ್ಟರು.

ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ವೂಡೇ ಪಿ.ಕೃಷ್ಣ ಮಾತನಾಡಿ, ರಾಜಣ್ಣ ಮತ್ತು ಮೀರಾ ಶಿವಲಿಂಗಯ್ಯ ಅವರ ಸಾಧನೆ ಎಲ್ಲರ ಮನ ಗೆದ್ದಿದೆ. ರಾಜಣ್ಣ ಅವರನ್ನು ದೇಶದ 806 ಜಿಲ್ಲೆಗಳಲ್ಲಿ ಹಾಗೂ 132 ಪದ್ಮಶ್ರೀ ವಿಜೇತರ ಪಟ್ಟಿಯಲ್ಲಿ ಮಂಡ್ಯ ಮುಕುಟಕ್ಕೆ ಪ್ರಶಸ್ತಿ ಒಲಿದಿದೆ ಎಂದರೆ ಇದು ಅಸಾಮಾನ್ಯವಾದುದಲ್ಲ ಎಂದರು. 

ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಕೆ.ಎಸ್.ರಾಜಣ್ಣ ಮತ್ತು ಕರ್ನಾಟಕ ರಾಜ್ಯ ಮುಕ್ತ ವಿವಿಯಿಂದ ಗೌರವ ಡಾಕ್ಟರೇಟ್‌ ಪಡೆದಿರುವ ಮೀರಾ ಶಿವಲಿಂಗಯ್ಯ ಅವರನ್ನು ದಂಪತಿ ಸಮೇತ ಅಭಿನಂದಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಎಚ್‌.ಎಲ್‌.ನಾಗರಾಜು, ಚಿಕ್ಕಮಗಳೂರು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಪನಿರ್ದೇಶಕಿ ಎಚ್‌.ಪಿ.ಮಂಜುಳಾ, ರಾಜ್ಯ ಅಂಗವಿಲಕರ ಒಕ್ಕೂಟದ ರಾಜ್ಯ ಘಟಕದ ಅಧ್ಯಕ್ಷ ಎಂ.ಎಸ್‌.ಚಲುವರಾಜು, ಸಮಿತಿಯ ಅಧ್ಯಕ್ಷ ಕೆ.ಟಿ.ಹನುಮಂತು, ಉಪಾಧ್ಯಕ್ಷ ಎಂ.ಎನ್‌.ಶ್ರೀಧರ್, ಕಾರ್ಯದರ್ಶಿಗಳಾದ ಕಾರಸವಾಡಿ ಮಹದೇವು, ಕಿಲಾರ ಕೃಷ್ಣೇಗೌಡ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT