ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾದುಕಾ ಕಿರೀಟಿ: ಸಾಮಾನ್ಯರ ಧ್ವನಿಯ ಅನಾವರಣ

ಮತ್ತೆ ಪ್ರೇಕ್ಷಕರ ಮುಂದೆ ಬಂದ ಕೆ.ವಿ.ಶಂಕರಗೌಡರ ನಾಟಕ, ಹೊಸ ದರ್ಶನ ಕೊಟ್ಟ ಪ್ರಮೋದ್ ಶಿಗ್ಗಾಂವ್‌
Last Updated 7 ಆಗಸ್ಟ್ 2021, 13:56 IST
ಅಕ್ಷರ ಗಾತ್ರ

ಮಂಡ್ಯ: ಮಂಥರೆಯ ಮಮತೆಯ ಸುಳಿಗೆ ಸಿಲುಕಿ ಶ್ರೀರಾಮ ರಾಜ್ಯ ತ್ಯಜಿಸಿ ವನವಾಸಕ್ಕೆ ಹೊರಟು ನಿಂತಾಗ ಅಯೋಧ್ಯೆ ಜನರ ಮನಸ್ಸಿನೊಳಗೆ ಏನಿತ್ತು? ಮರ್ಯಾದಾ ಪುರುಷೋತ್ತಮ ಶ್ರೀರಾಮ ಕಾಡಿನಲ್ಲಿ ವನವಾಸ ಮಾಡಬೇಕು ಎಂಬ ನೋವಿತ್ತು ನಿಜ, ಆದರೆ ಮಹಾರಾಜ ಬದಲಾಗುತ್ತಾನೆ, ಇನ್ನು ಮುಂದೆ ಭರತ ರಾಜ್ಯಭಾರ ಮಾಡುತ್ತಾನೆ ಎಂದಾಗ ಜನರು ಪ್ರತಿಕ್ರಿಯೆ ಹೇಗಿತ್ತು?

‘ಪಾದುಕಾ ಕಿರೀಟಿ’ ನಾಟಕ ನೋಡಿದಾಗ ಪ್ರೇಕ್ಷಕರ ಮನಸ್ಸಿನೊಳಗೆ ಈ ಪ್ರಶ್ನೆಗಳು ಕಾಡದೆ ಇರವು. ಪ್ರಸ್ತುತ ಸಾಮಾಜಿಕ, ರಾಜಕೀಯ ಪರಿಸ್ಥಿತಿ ನಾಟಕದಲ್ಲಿ ಧ್ವನಿಸಿದ ಕಾರಣಕ್ಕೆ ರಂಗಪ್ರಯೋಗ ಸಮಕಾಲೀನ ಸತ್ಯವಾಗಿ ನಿಲ್ಲುತ್ತದೆ. ‘ಯಾರೇ ಮುಖ್ಯಮಂತ್ರಿಯಾದರೂ ಜನ ರಾಗಿ ಬೀಸುವುದು ಮಾತ್ರ ತಲ್ಲುವುದಿಲ್ಲ’ ಎಂಬ ಪ್ರಸ್ತುತ ಗಾದೆ ಮಾತು ಅಯೋಧ್ಯೆಯ ಜನರಲ್ಲೂ ಮೂಡಿರಬಹುದು. ಇಂತಹ ಪ್ರಸ್ತುತತೆಯ ಸ್ಪರ್ಶದೊಂದಿಗೆ ನಾಟಕ ಜನರ ಮುಂದೆ ತೆರೆದುಕೊಳ್ಳುತ್ತದೆ.

ಕುವೆಂಪು ‘ಶ್ರೀರಾಮಾಯಣ ದರ್ಶನಂ’ ಕಾವ್ಯದಿಂದ ಪ್ರೇರಣೆಗೊಂಡು ನಿತ್ಯ ಸಚಿವ ಕೆ.ವಿ.ಶಂಕರಗೌಡ ಅವರು ರಚಿಸಿದ್ದ ‘ಪಾದುಕಾ ಕಿರೀಟಿ’ ನಾಟಕವನ್ನು ರಂಗ ನಿರ್ದೇಶಕ ಪ್ರಮೋದ್‌ ಶಿಗ್ಗಾಂವ್‌ ಹೊಸ ದೃಷ್ಟಿಕೋನದಿಂದ ನೋಡಿದ್ದಾರೆ. ಅಯೋಧ್ಯೆಯ ರಾಜಗೃಹದಲ್ಲಿ ನಡೆಯುತ್ತಿದ್ದ ಬೆಳವಣಿಗೆಗಳು ಪುರಜನರಲ್ಲಿ ಎಂತಹ ಬದಲಾವಣೆ ಸೃಷ್ಟಿಸುತ್ತಿದ್ದವು ಎನ್ನುವುದನ್ನು ಹಾಸ್ಯದ ಲೇಪನ ಹಚ್ಚಿ ತೋರಿಸಿದ್ದುದು ಪ್ರೇಕ್ಷಕರ ಮನಸೂರೆಗೊಂಡಿತು.

ರಂಗದ ಮೇಲೆ ನಿರ್ದೇಶಕ ಎರಡು ಧ್ವನಿ ಸೃಷ್ಟಿ ಮಾಡಿದ್ದರು. ದಶರಥ ಮಹಾರಾಜನಿಗೆ ಕೌಸಲ್ಯಾ, ಸುಮಿತ್ರಾ, ಕೈಕೇಯಿ ಎಂಬ ಮೂವರು ಪತ್ನಿಯರು, ರಾಮ, ಲಕ್ಷ್ಮಣ, ಭರತ, ಶತ್ರುಘ್ನರೆಂಬ ನಾಲ್ವರು ಪುತ್ರರು, ಸರಯೂ ನದಿ ತೀರದ ಅಯೋಧ್ಯೆ ಸಾಮ್ರಾಜ್ಯ ಒಂದು ಧ್ವನಿ. ರಾಜರಿಂದ ಆಳಿಸಿಕೊಳ್ಳುವ ಸಾಮಾನ್ಯ ಜನರದ್ದು ಇನ್ನೊಂದು ಧ್ವನಿ.

ಈ ಎರಡೂ ಧ್ವನಿಗಳ ಅನಾವರಣಕ್ಕೆ ನಿರ್ದೇಶಕ ರಂಗದ ನಡುವೆ ಕೌದಿಯ ಪರದೆಯೊಂದನ್ನು ಸೃಷ್ಟಿಸಿದ್ದರು. ಹತ್ತಾರು ಹರಕಲು ಸೀರೆಗಳನ್ನು ಸೇರಿಸಿ ಹೊಲಿದಿದ್ದ ಕೌದಿಯ ಪರದೆ ಎಳೆದಾಗ ರಂಗದ ಮೇಲೆ ಸಾಮಾನ್ಯ ಜನರ ಬದುಕು ತೆರೆದುಕೊಳ್ಳುತ್ತಿತ್ತು. ಕೌದಿಯ ಪರದೆ ಸರಿದಾಗ ಅಯೋಧ್ಯೆ ಸಾಮ್ರಾಜ್ಯದ ದರ್ಶನವಾಗುತ್ತಿತ್ತು. ಈ ಎರಡು ನೋಟಗಳ ಮೂಲಕ ರಂಗಪ್ರಯೋಗದಲ್ಲಿ ಪ್ರಸ್ತತ ಬೆಳವಣಿಗೆಗಳ ಸ್ಪರ್ಶದ ದರ್ಶನವಾಯಿತು. ಪೌರಾಣಿಕ ರಂಗಪ್ರಯೋಗವನ್ನು ಇಂದಿನ ಪ್ರಜಾಪ್ರಭುತ್ವ ವ್ಯವಸ್ಥೆಯ ಜೊತೆ ಬೆಸೆಯುವಲ್ಲಿ ನಿರ್ದೇಶಕರ ಸೃಜನಶೀಲತೆ ಯಶಸ್ವಿಯಾಯಿತು.

ಅಣ್ಣನಿಲ್ಲದೆ ರಾಜ್ಯಭಾರ ಮಾಡಲು ನಿರಾಕರಿಸುವ ಭರತ, ರಾಮನನ್ನು ಅರಸಿ ಕಾಡಿಗೆ ತೆರಳುತ್ತಾನೆ. ಹಿಂದಿರುಗಿ ಅರಮನೆಗೆ ಬರುವಂತೆ ಪರಿಪರಿಯಾಗಿ ಬೇಡಿಕೊಳ್ಳುತ್ತಾನೆ. ವಚನಭ್ರಷ್ಟನಾಗಲಾರೆ ಎನ್ನುವ ರಾಮ ಅಣ್ಣನ ಆಹ್ವಾನವನ್ನು ನಿರಾಕರಿಸುತ್ತಾನೆ. ಕಡೆಗೆ ಶ್ರೀರಾಮನ ಪಾದುಕೆಗಳನ್ನು ಸಿಂಹಾಸನದ ಮೇಲುಟ್ಟು ಭರತ ರಾಜ್ಯಭಾರ ಮುಂದುವರಿಸುತ್ತಾನೆ. ಶ್ರೀರಾಮಾಯಣ ದರ್ಶನಂ ಕಾವ್ಯದ ಈ ಕಥಾ ಭಾಗವನ್ನು ಕೆ.ವಿ.ಶಂಕರಗೌಡರು ರಂಗರೂಪ ಕೊಟ್ಟಿದ್ದಾರೆ.

ದಶರಥನ ಪಾತ್ರದಲ್ಲಿ ಹುಲಿವಾನ ಶ್ರೀಕಂಠೇಗೌಡರು ಪಾತ್ರಕ್ಕೆ ಜೀವ ತುಂಬಿದರು. ಸುರೇಶ್‌ ಕಾರಸವಾಡಿ ಅವರ ಎತ್ತರದ ನಿಲುವು ರಾಮನ ಪಾತ್ರಕ್ಕೆ ಹೇಳಿ ಮಾಡಿಸಿದಂತಿತ್ತು. ಮಂಥರೆಯಾಗಿ ಉಷಾರಾಣಿ ಮೆಚ್ಚುಗೆಗೆ ಪಾತ್ರರಾದರು. ವೈಭವದ ಪರಿಕರಗಳ ರಂಗಸಜ್ಜಿಕೆ, ಸುಂದರ ಬೆಳಕು ವಿನ್ಯಾಸ ಗಮನ ಸೆಳೆಯಿತು. ರವೀಶ್‌ ಸಂಗೀತವನ್ನು ನಿಶ್ಚಯ್‌ ಜೈನ್‌ ನಿರ್ವಹಿಸಿದರು. ರೆಕಾರ್ಡಿಂಗ್‌ ಸಂಗೀತದ ಬದಲು ನೇರ ಮ್ಯೂಸಿಕ್‌ ಪಿಟ್‌ ಇದ್ದಿದ್ದರೆ ನಾಟಕ ಇನ್ನಷ್ಟು ಆಪ್ತವಾಗುತ್ತಿತ್ತು.

ನಾಟಕಕ್ಕೆ ವಜ್ರ ಮಹೋತ್ಸವ

ಶಂಕರಗೌಡರು ರಚಿಸಿ, ನಿರ್ದೇಶಿಸಿ ದಶರಥನಾಗಿ ಅಭಿನಯಿಸಿದ್ದ ಈ ನಾಟಕ ಹೊಸ ನಿರ್ದೇಶಕರಿಂದ ಹೊಸ ನೋಟದೊಂದಿಗೆ ಜನರ ಮುಂದೆ ಬಂದಿದೆ. 1961ರಿಂದ 1985ರವರೆಗೂ ಶಂಕರಗೌಡರು ವಿವಿಧೆಡೆ ನಾಟಕ ಪ್ರದರ್ಶಿಸಿದ್ದರು. ನಂತರ 1977ರಲ್ಲಿ ನಾಗರಾಜಾಚಾರ್‌ ನಿರ್ದೇಶಿಸಿದ್ದರು. 1988ರಲ್ಲಿ ಸಿ.ಬಸವಲಿಂಗಯ್ಯ ನಿರ್ದೇಶನ ಮಾಡಿದ್ದರು.

2015ರಲ್ಲಿ ಗಂಗಾಧರಸ್ವಾಮಿ ನಿರ್ದೇಶನದಲ್ಲಿ ನಾಟಕ ಮೂಡಿ ಬಂದಿತ್ತು. ಈಗ ಪ್ರಮೋದ್‌ ಶಿಗ್ಗಾಂವ್‌ ನಿರ್ದೇಶನ ಮಾಡಿದ್ದು ನಾಟಕ ವಜ್ರ ಮಹೋತ್ಸವ ಆಚರಿಸಿಕೊಳ್ಳುತ್ತಿದೆ. ಶಂಕರಗೌಡರ 106ನೇ ಜನ್ಮದಿನ, ಕರ್ನಾಟಕ ಸಂಘದ ಅಮೃತ ಮಹೋತ್ಸವದ ಅಂಗವಾಗಿ ಆ.1ರಿಂದ 3 ದಿನಗಳ ಕಾಲ ವಿವೇಕಾನಂದ ರಂಗಮಂದಿರಲ್ಲಿ ಪ್ರದರ್ಶನಗೊಂಡು ಜನಮನ್ನಣೆ ಗಳಿಸಿತು.

‘ಶಂಕರಗೌಡರು ನಾಟಕದ ಮೂಲಕ ಶಿಕ್ಷಣ ಸಂಸ್ಥೆ ಹಾಗೂ ಸಹಕಾರ ಸಂಘಗಳನ್ನು ಕಟ್ಟಿದರು ಎನ್ನುವುದು ಒಂದು ಐತಿಹಾಸಿಕ ದಾಖಲೆಯಾಗಿದೆ. ಅವರ ಹಾಕಿಕೊಟ್ಟ ಸಾಂಸ್ಕೃತಿಕ ಮಾರ್ಗ ಮುನ್ನಡೆಯಬೇಕು ಎಂಬ ಉದ್ದೇಶದೊಂದಿಗೆ ಮತ್ತೆ ಪಾದುಕಾ ಕಿರೀಟಿ ನಾಟಕ ನಿರ್ಮಿಸಲಾಗಿದೆ’ ಎಂದು ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಜಯಪ್ರಕಾಶ್‌ಗೌಡ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT