ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಾವಯವ ಕೃಷಿ ಮಾಹಿತಿ ಪಡೆದ ಶ್ರೀಲಂಕಾ ರೈತರು

ಸುಂಕಾತೊಣ್ಣೂರು ಗ್ರಾಮದ ಕೃಷಿಕ ದೇವೇಗೌಡ ಜಮೀನಿಗೆ ಭೇಟಿ
Published 23 ಆಗಸ್ಟ್ 2024, 14:05 IST
Last Updated 23 ಆಗಸ್ಟ್ 2024, 14:05 IST
ಅಕ್ಷರ ಗಾತ್ರ

ಪಾಂಡವಪುರ: ತಾಲ್ಲೂಕಿನ ಸುಂಕಾತೊಣ್ಣೂರು ಗ್ರಾಮದ ಸಾವಯವ ಕೃಷಿಕ ದೇವೇಗೌಡ ಅವರ ಆಲೆಮನೆ ಹಾಗೂ ಜಮೀನಿಗೆ ಶ್ರೀಲಂಕಾದ ರೈತರು ಶುಕ್ರವಾರ ಭೇಟಿ ನೀಡಿ ಇಲ್ಲಿನ ಕೃಷಿ ವಿಧಾನ ವೀಕ್ಷಿಸಿದರು.

ಶ್ರೀಲಂಕಾ ರೈತರಾದ ರಾಣಿಯಮ್ಮ ಆನುಕ, ಶ್ರಮಿಕಾ ಸೇರಿದಂತೆ 13 ರೈತರು ದೇವೇಗೌಡ ಅವರ ಆಲೆಮನೆಗೆ ಭೇಟಿ ನೀಡಿ ಕೃಷಿ ಪದ್ಧತಿ ಹಾಗೂ ಬೆಲ್ಲ ತಯಾರಿಕೆಗೆ ಬಳಸುವ ಪದಾರ್ಥಗಳು ಹಾಗೂ ಬೆಲ್ಲಕ್ಕೆ ಇರುವ ಮಾರುಕಟ್ಟೆ ಬಗ್ಗೆ ಸಮಗ್ರ ಮಾಹಿತಿ ಪಡೆದುಕೊಂಡರು.

ಫಸ್ಟ್‌ ಅರ್ಥ್ ಫೌಂಡೇಷನ್ ಕಿರಣ್ ಪ್ರಕಾಶ್ ಹಾಗೂ ಎಂ.ಪಿ.ಗಂಗಾಧರ್ ನೈಸರ್ಗಿಕ ಕೃಷಿ ಬೇಸಾಯ ಪದ್ಧತಿ ಬಗ್ಗೆ ಶ್ರೀಲಂಕಾ ರೈತರಿಗೆ ಮಾಹಿತಿ ನೀಡಿದರು.

ಕೃಷಿಕ ದೇವೇಗೌಡ ಮಾತನಾಡಿ, ‘ಸಾವಯವ ಕೃಷಿ, ಸಾವಯವ ಆಹಾರಕ್ಕೆ ಸಾವಿಲ್ಲ. ನಾವು ಹಣದಾಸೆಗಾಗಿ ರಾಸಾಯನಿಕ ಕೃಷಿ ಮೂಲಕ ಉತ್ಪಾದನೆ ಮಾಡುತ್ತಿರುವ ಆಹಾರ ವಿಷಯುಕ್ತವಾಗಿದೆ. ಬೆಳೆಯುವ ಆಹಾರ ದೇಹಕ್ಕೆ ಔಷಧ ಆಗಬೇಕೇ ಹೊರತು ವಿಷವಾಗಬಾರದು. ರಾಸಾಯನಿಕ ಗೊಬ್ಬರ, ಕ್ರಿಮಿನಾಶಕಗಳ ವಿಪರೀತ ಬಳಕೆಯಿಂದ ಭೂಮಿಗೆ ನಾವು ವಿಷವುಣಿಸುತ್ತಿದ್ದೇವೆ’ ಎಂದರು.

‘ಬಿಳಿ ಆಹಾರ ಪದಾರ್ಥಗಳು ಸಂಪೂರ್ಣ ವಿಷಕಾರಿಯಾಗಿವೆ. ಹಾಗಾಗಿ ಬಿಳಿ ಅಕ್ಕಿ, ಉಪ್ಪು, ಸಕ್ಕರೆ ಸೇರಿದಂತೆ ಬಿಳಿ ಆಹಾರ ಪದಾರ್ಥಗಳ ಸೇವನೆಯನ್ನು ಕಡಿಮೆ ಮಾಡಬೇಕು’ ಎಂದು ಹೇಳಿದರು.

‘ನಾವೆಲ್ಲರೂ ಭೂಮಿ ಸಂರಕ್ಷಣೆ ಮಾಡಬೇಕಿದೆ, ಹೆಚ್ಚಾಗಿ ರಾಸಾಯನಿಕ ಬಳಕೆ ಮಾಡುವುದನ್ನು ನಿಲ್ಲಿಸಬೇಕಿದೆ. ಭೂಮಿ ರಕ್ಷಣೆ ಮಾಡಿದರೆ ಭೂಮಿ ನಮ್ಮನ್ನು ರಕ್ಷಿಸುತ್ತದೆ. ಸಾಧ್ಯವಾದಷ್ಟು ಎಲ್ಲಾ ರೈತರು ಸಾವಯವ ಕೃಷಿಯತ್ತ ಮುಖ ಮಾಡಬೇಕು’ ಎಂದರು.

ಬಳಿಕ ರೈತ ದೇವೇಗೌಡ ಅವರ ಪತ್ನಿ ಕೆಂಪಮ್ಮ ಶ್ರೀಲಂಕಾ ರೈತ ಮಹಿಳೆಯರಿಗೆ ಅರಿಸಿನ, ಕುಂಕುಮ, ಬಳೆ, ಹೂ, ರವಿಕೆ ಹಾಗೂ ತೆಂಗಿನಕಾಯಿ ನೀಡಿ ಗೌರವಿಸಿದರು.

ಶ್ರೀಲಂಕಾ ರೈತರು, ಭತ್ತ ಬೆಳೆಯಲು ಪ್ರಸಿದ್ಧಿಯಾಗಿರುವ ಮಂಡ್ಯ ತಾಲ್ಲೂಕು ಶಿವಳ್ಳಿ ಗ್ರಾಮದ ಬೋರೇಗೌಡ ಅವರ ಜಮೀನಿಗೆ ತೆರಳಿದರು.

ದೇವೇಗೌಡ ಅವರ ಆಲೆಮನೆಯಲ್ಲಿ ಬೆಲ್ಲ ತಯಾರಿಕೆ ವಿಧಾನವನ್ನು ಶ್ರೀಲಂಕಾ ರೈತರು ವೀಕ್ಷಿಸಿದರು
ದೇವೇಗೌಡ ಅವರ ಆಲೆಮನೆಯಲ್ಲಿ ಬೆಲ್ಲ ತಯಾರಿಕೆ ವಿಧಾನವನ್ನು ಶ್ರೀಲಂಕಾ ರೈತರು ವೀಕ್ಷಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT