ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆರೆಗಳಿಗೆ ನಾಲೆ ಸಂಪರ್ಕ ಕಲ್ಪಿಸಲು ಯೋಜನೆ

ಕಾವೇರಿ ನೀರಾವರಿ ಸಲಹಾ ಸಮಿತಿ ಸಭೆ; ಸಚಿವ ಪುಟ್ಟರಾಜು ಸೂಚನೆ
Last Updated 11 ಜುಲೈ 2018, 14:08 IST
ಅಕ್ಷರ ಗಾತ್ರ

ಮಂಡ್ಯ: ‘ಕಾವೇರಿ ನೀರಾವರಿ ನಿಗಮ ವ್ಯಾಪ್ತಿಯ ಎಲ್ಲಾ ಕೆರೆಗಳಿಗೆ ನಾಲೆಗಳ ನೇರ ಸಂಪರ್ಕ ಕಲ್ಪಿಸುವ ಯೋಜನೆ ರೂಪಿಸಲಾಗುವುದು. ಈ ಕುರಿರು ವರದಿ ತಯಾರಿಸಿ ಸರ್ಕಾರಕ್ಕೆ ಸಲ್ಲಿಸಬೇಕು’ ಎಂದು ಸಣ್ಣ ನೀರಾವರಿ ಸಚಿವ ಸಿ.ಎಸ್‌.ಪುಟ್ಟರಾಜು ಹೇಳಿದರು.

ಬೆಂಗಳೂರು, ವಿಧಾನಸೌಧದಲ್ಲಿ ಬುಧವಾರ ನಡೆದ ಕಾವೇರಿ ನೀರಾವರಿ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ‘ವ್ಯವಸಾಯಕ್ಕೆ ಸಹಕಾರಿಯಾಗುವಂತಹ ಬಹಳಷ್ಟು ಕೆರೆಗಳು ಕಾವೇರಿ ನೀರಾವರಿ ನಿಗಮದ ವ್ಯಾಪ್ತಿಯಲ್ಲಿವೆ. ಕೆರೆ ಹಾಗೂ ನಾಲೆಗಳ ನೇರ ಸಂಪರ್ಕ ಕಲ್ಪಿಸಿದರೆ ಕೃಷಿ ಚಟುವಟಿಕೆಗೆ ಅನುಕೂಲವಾಗುತ್ತದೆ. ಜೊತೆಗೆ ಅಂತರ್ಜಲದ ಮಟ್ಟವೂ ಹೆಚ್ಚುತ್ತದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ತ್ವರಿತವಾಗಿ ಯೋಜನೆ ರೂಪಿಸಬೇಕು. ನಿಗಮದ ವ್ಯಾಪ್ತಿಯ ಬಹಳಷ್ಟು ಕೆರೆಗಳು ಒತ್ತುವರಿಯಾಗಿವೆ. ಸಂಬಂಧಪಟ್ಟ ಅಧಿಕಾರಿಗಳು ಕರೆ ಒತ್ತುವರಿ ತೆರವುಗೊಳಿಸಲು ಶೀಘ್ರ ಕ್ರಮವಹಿಸಬೇಕು. ಕೆರೆ ಮತ್ತು ನಾಲೆಗಳಲ್ಲಿ ಬೆಳೆದು ನಿಂತ್ತಿರುವ ಗಿಡಗಂಟಿ ಹಾಗೂ ಹೂಳನ್ನು ತೆಗೆಯಲು ಅಗತ್ಯ ಕ್ರಮಕೈಗೊಳ್ಳಬೇಕು’ ಎಂದರು.

‘ಭತ್ತದ ಬಿತ್ತನೆಬೀಜವನ್ನು ರೈತರಿಗೆ ಸಮರ್ಪಕವಾಗಿ ವಿತರಣೆ ಮಾಡಲು ಕೃಷಿ ಇಲಾಖೆ ಮುಂದಾಗಬೇಕು. ವಿತರಣೆಯಾಗುವ ಬಿತ್ತನೆಬೀಜದ ಬಗ್ಗೆ ರೈತರಿಂದ ದೂರು ಕೇಳಿಬರಬಾರದು. ಸರಬರಾಜು ಮಾಡುವ ಬಿತ್ತನೆ ಬೀಜ ಗುಮಟ್ಟದ್ದಾಗಿರಬೇಕು. ರಾಜ್ಯದೆಲ್ಲಡೆ ಉತ್ತಮ ಮಳೆಯಾಗುತ್ತಿದ್ದು, ಎಲ್ಲಾ ಜಲಾಶಯಗಳಿಗೆ ನೀರಿನ ಒಳಹರಿವು ಹೆಚ್ಚುತ್ತಿದೆ. ಕಾವೇರಿ ನೀರಾವರಿ ನಿಗಮ ವ್ಯಾಪ್ತಿ ಪ್ರದೇಶದಲ್ಲಿರುವ ಕೆರೆ ತುಂಬಿಸಲು ಅಧಿಕಾರಿಗಳು ಅಗತ್ಯ ಕ್ರಮವಹಿಸಬೇಕು’ ಎಂದು ಸೂಚನೆ ನೀಡಿದರು.

‘ಕೆಆರ್‌ಎಸ್‌ ಜಲಾಶಯದಿಂದ ಈಗಾಗಲೇ ನಾಲೆಗಳಿಗೆ ನೀರು ಹರಿಯುತ್ತಿದೆ. ಜುಲೈ 20 ರಿಂದ ಮತ್ತೆ ಬೆಳೆಗಳಿಗೆ ನೀರನ್ನು ಬಿಡಲು ಅಧಿಕಾರಿಗಳು ಕ್ರಮವಹಿಸಬೇಕು. ಕಬಿನಿ, ಹಾರಂಗಿ ಹಾಗೂ ಹೇಮಾವತಿ ಜಲಾಶಯಗಳು ಭರ್ತಿಯಾಗಿರುವ ಕಾರಣ ನೀರಿನ ಹೊರಹರಿವು ಹೆಚ್ಚಿಸಲಾಗಿದೆ. ಕೆಆರ್‌ಎಸ್‌ ಜಲಾಶಯ ತುಂಬಲು ಕೇವಲ 8 ಅಡಿ ಬಾಕಿ ಉಳಿದಿದೆ. ಶೀಘ್ರ ತುಂಬಿದರೆ ರೈತರ ಕೃಷಿಗೆ ಯಾವುದೇ ತೊಂದರೆಯಾಗುವುದಿಲ್ಲ’ ಎಂದರು.

ಕಾರ್ಯಕ್ರಮದಲ್ಲಿ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ, ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ, ಶಾಸಕರುಗಳಾದ ಎಂ.ಶ್ರೀನಿವಾಸ್, ಡಾ.ಕೆ.ಅನ್ನದಾನಿ, ರವೀಂದ್ರ ಶ್ರೀಕಂಠಯ್ಯ, ಡಾ. ಯತೀಂದ್ರ, ಅಶ್ವಿನಿ ಕುಮಾರ್, ಅನಿಲ್ ಚಿಕ್ಕಮಾದು, ನಾಗೇಂದ್ರ, ಮಹಾದೆವು ಜಿಲ್ಲಾಧಿಕಾರಿ ಎನ್.ಮಂಜುಶ್ರೀ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT