ಸೋಮವಾರ, 24 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಂಡ್ಯ: ಸ್ಟೇಡಿಯಂ ಬಸ್‌ಸ್ಟಾಂಡ್‌, ‘ತಂಗುದಾಣ’ ನಿರ್ಮಿಸಿ

ಪ್ರಯಾಣಿಕರ ಕಷ್ಟ ಪರಿಹರಿಸಲು ಕ್ರಮ ಕೈಗೊಳ್ಳಲು ಜನರ ಮನವಿ
ಮೋಹನ್‌ ರಾಗಿಮುದ್ದನಹಳ್ಳಿ
Published 19 ಮೇ 2024, 6:47 IST
Last Updated 19 ಮೇ 2024, 6:47 IST
ಅಕ್ಷರ ಗಾತ್ರ

ಮಂಡ್ಯ: ಖಾಸಗಿ ಬಸ್‌ಗಳಲ್ಲಿ ನಿತ್ಯ ನೂರಾರು ಪ್ರಯಾಣಿಕರು ಹಲವು ವರ್ಷಗಳಿಂದ ಬೆಸಗರಹಳ್ಳಿ, ನಾಗಮಂಗಲಕ್ಕೆ ನಗರದ ಸ್ಟೇಡಿಯಂ ಖಾಸಗಿ ಬಸ್‌ಸ್ಟಾಂಡ್‌ನಿಂದಲೇ ಪ್ರಯಾಣಿಸುತ್ತಿದ್ದು, ಪ್ರಯಾಣಿಕರಿಗೆ ಅನುಕೂಲವಾಗಲು ತಂಗುದಾಣ ನಿರ್ಮಿಸುವಂತೆ ಜನರಿಂದ ಒತ್ತಾಯ ಕೇಳಿ ಬಂದಿದೆ.

ಹೌದು, ನಗರದ ಹೃದಯ ಭಾಗದಲ್ಲಿರುವ ಸರ್‌ಎಂ.ವಿ. ಕ್ರೀಡಾಂಗಣ ಹಾಗೂ ಹೆದ್ದಾರಿಯ ಕೂಗಳತೆಯ ದೂರದಲ್ಲಿರುವ ಸ್ಟೇಡಿಯಂ ಬಲಭಾಗದ ಖಾಸಗಿ ಬಸ್‌ಸ್ಟಾಂಡ್‌ನಂತೆ ಕಂಗೊಳಿಸುವ ಸ್ಥಳದಲ್ಲಿ ಪ್ರತಿನಿತ್ಯ ಪುರುಷರು, ಮಹಿಳೆಯರು, ವಿದ್ಯಾರ್ಥಿಗಳು ಹಾಗೂ ವೃದ್ಧರು ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಬೆಸಗರಹಳ್ಳಿ ಮಾರ್ಗವಾಗಿ ಮದ್ದೂರು ಹಾಗೂ ನಾಗಮಂಗಲಕ್ಕೆ ಹೋಗಲು ಪ‍್ರಯಾಣಿಕರು ಅವಲಂಬಿತವಾಗಿರುವುದು ಸಾಮಾನ್ಯವಾಗಿದೆ.

ಬೆಸಗರಹಳ್ಳಿ ಕಡೆಗೆ ಹೋಗಲು ನಗರದಿಂದ ಶ್ರೀನಿವಾಸಪುರ, ಉಮ್ಮಡಹಳ್ಳಿ, ಬೆಳ್ಳೂಂಡಗೆರೆ, ಬಸವನಪುರ, ಕೀಲಾರ, ಆಲಕೆರೆ, ಮುದ್ದಂಗೆರೆ, ಡಣಾಯಕನಕಪುರ, ವಿದ್ಯಾಪೀಠ, ಕೆರೆಮೇಗಲದೊಡ್ಡಿ, ಬೆಸಗರಹಳ್ಳಿ ತಲುಪುತ್ತದೆ. ನಂತರ ಇದೇ ಮಾರ್ಗ ಬದಲಾವಣೆಯಲ್ಲಿ ಕೀಲಾರ, ಈಚಗೆರೆ, ಹೊಡಾಘಟ್ಟ, ಬೆಸಗರಹಳ್ಳಿ ಕಡೆ ಖಾಸಗಿ ಬಸ್‌ಗಳು ಸಂಚರಿಸುತ್ತವೆ. ನಂತರ ಬೆಸಗರಹಳ್ಳಿಯಿಂದ ಚುಂಚೇಗೌಡನದೊಡ್ಡಿ, ಬೆಸಗರಹಳ್ಳಿ ಅಡ್ಡರಸ್ತೆ, ಶಂಕರಪುರ, ದೇಶಹಳ್ಳಿ, ಚಾಮನಹಳ್ಳಿ, ಶಿವಪುರ, ಮದ್ದೂರು ಪಟ್ಟಣದಲ್ಲಿ ಕೊನೆ ಸ್ಟಾಪ್‌ ಆಗಿದ್ದು ಸುಮಾರು ಎಂಟಕ್ಕೂ ಅಧಿಕ ಖಾಸಗಿ ಬಸ್‌ಗಳು ಸಂಚರಿಸುತ್ತವೆ.

ನಾಗಮಂಗಲ ಕಡೆಗೆ ಸಂಚರಿಸಲು ನಗರದ ಕಾರೆಮನೆಗೇಟ್‌, ಚಿಕ್ಕಮಂಡ್ಯ, ಗೋಪಾಲಪುರ, ಕೋಡಹಳ್ಳಿ ಗೇಟ್‌, ಹೊಸೂರು ಕಾಲೊನಿ, ಬಿಳಿದೇಗಲು, ದೊಡ್ಡಗರುಡನಹಳ್ಳಿ, ಗುಡಿಗೇನಹಳ್ಳಿ ಗೇಟ್‌, ದ್ಯಾಪಸಂದ್ರ, ಗಂಟಗೌಡನಹಳ್ಳಿ, ಬಸರಾಳು, ಹುಳ್ಳೇನಹಳ್ಳಿ ಗೇಟ್‌, ಕರಡಹಳ್ಳಿಗೇಟ್‌, ಬಿಂಡಿಗನವಿಲೆ ಹ್ಯಾಂಡ್ ಪೋಸ್ಟ್‌ ನಾಗಮಂಗಲದವರೆಗೆ ನಾಲ್ಕಕ್ಕೂ ಹೆಚ್ಚು ಖಾಸಗಿ ಬಸ್‌ಗಳು ನಗರದ ಸ್ಟೇಡಿಯಂ ಬಸ್‌ ನಿಲ್ದಾಣದಿಂದಲೇ ಹೋಗುತ್ತವೆ. 

ಇಲ್ಲಿ ಪ್ರಯಾಣಿಸಲು ಬರುವ ವಿದ್ಯಾರ್ಥಿಗಳು, ಮಹಿಳೆಯರು, ಪುರುಷರು ಸ್ಟೇಡಿಯಂನ ಕಬ್ಬಿಣದ ಬೇಲಿಯ ತಡೆಗೋಡೆಯ ಮೇಲೆ ಕುಳಿತು ಬಸ್‌ಗಾಗಿ ಕಾಯುತ್ತಾರೆ, ಅಲ್ಲಿಯೇ ಇರುವ ವಿವಿಧ ಜಾತಿಯ ಬೃಹದಾಕಾರದ ಮರಗಳು ಸಹ ಬಿಸಿಲಿನ ತಾಪವನ್ನು ಕಡಿಮೆ ಮಾಡಿರುವುದು ಸತ್ಯವಾಗಿದೆ, ಪ್ರಯಾಣಿಕರ ಅನುಕೂಲಕ್ಕಾಗಿ ಒಂದು ತಂಗುದಾಣವನ್ನು ನಿರ್ಮಿಸಬೇಕೆಂದು ಖಾಸಗಿ ಬಸ್‌ ಪ್ರಯಾಣಿಕರಾದ ಜಯಮ್ಮ, ಲಕ್ಷ್ಮಿ, ರಮೇಶ್‌, ನಿಂಗಮ್ಮ, ತಾಯಮ್ಮ, ವರಲಕ್ಷ್ಮಿ ಒತ್ತಾಯಿಸುತ್ತಾರೆ.

ಪ್ರಯಾಣಿಕರಿಗೆ ಅನುಕೂಲವಾಗಿರುವ ನಗರದ ಸ್ಟೇಡಿಯಂನ ಅಂಚಿನಲ್ಲಿಯೇ ಒಂದು ತಂಗುದಾಣ (ಬಸ್‌ಸ್ಟಾಂಡ್) ಕಟ್ಟಿಸಿಕೊಟ್ಟರೆ ಅನುಕೂಲವಾಗುತ್ತದೆ. ಈಗಿರುವ ಸ್ಟೇಡಿಯಂ ತಡೆಗೋಡೆಯ ಪಕ್ಕದಲ್ಲಿಯೇ ಕುಳಿತುಕೊಂಡು ಬಸ್‌ಗಾಗಿ ಕಾಯುತ್ತಾರೆ. ಅಲ್ಲೇ ಇರುವ ಮರಗಳ ನೆರಳಿನಲ್ಲಿಯೂ ಪ್ರಯಾಣಿಕರು ನಿಲ್ಲುತ್ತಾರೆ, ಇಲ್ಲಿತನಕ ಯಾವ ಪ್ರಾಣಹಾನಿಯೂ ಮಳೆ ಅಥವಾ ಗಾಳಿಯ ಸಂದರ್ಭದಲ್ಲಿ ನಡೆದಿಲ್ಲ, ಪ್ರಸ್ತುತದಲ್ಲಿ ಬಿರುಗಾಳಿ ಮತ್ತು ಮಳೆ ಸುರಿಯುವ ಮುನ್ಸೂಚನೆಯೇ ಹೆಚ್ಚಿರುವುದರಿಂದ ಪ್ರಯಾಣಿಕರ ಅಮೂಲ್ಯ ಪ್ರಾಣ ಉಳಿಸಬೇಕೆಂದು ಕಂಡಕ್ಟರ್‌ ಪಂಚಲಿಂಗು, ಏಜೆಂಟ್‌ ಗಿರೀಶ್, ಹೂವಿನ ಅಂಗಡಿ ನಂಜಪ್ಪ, ದಕ್ಷಿ, ಸುರೇಶ್‌ ಮನವಿ ಮಾಡುತ್ತಾರೆ.

‘ಖಾಸಗಿ ಬಸ್‌ಗಳು ಎಂಟರಿಂದ ಹತ್ತು ಗಾಡಿಗಳು ಪ್ರತಿದಿನ ಬೆಸಗರಹಳ್ಳಿ ಮಾರ್ಗವಾಗಿ ಮಂಡ್ಯದಿಂದಲೇ ಈ ಗ್ರಾಮಗಳ ರಸ್ತೆಯಲ್ಲಿ ಸಂಚರಿಸುತ್ತವೆ. ಇದರ ನಡುವೆ ಸರ್ಕಾರಿ ಬಸ್‌ಗಳು ಸಂಚರಿಸಿದರೂ ಸಹ ಖಾಸಗಿ ಬಸ್‌ಗಳ ಮೇಲೆಯೇ ವ್ಯಾಮೋಹ ಜಾಸ್ತಿಯಿದೆ. ಏಕೆಂದರೆ ಕೆಎಸ್‌ಆರ್‌ಟಿಸಿ ಬಸ್‌ಗಳು ಗ್ರಾಮೀಣ ಭಾಗದ ಜನರ ಸಮಯಕ್ಕೆ ಬರುವುದಿಲ್ಲ? ಹಾಗಾಗಿ ಇದರ ಉಪಯೋಗವನ್ನು ಪಡೆಯಲು ಖಾಸಗಿ ಬಸ್‌ಗಳನ್ನು ಅವಲಂಬಿಸಿರುವುದೇ ಹೆಚ್ಚು’ ಎಂದು ಆಲಕೆರೆ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ತರಕಾರಿ ಮಹೇಶ್‌ ಹೇಳುತ್ತಾರೆ.

ಮಂಡ್ದ ಸ್ಟೇಡಿಯಂ ಬಸ್‌ಸ್ಟಾಂಡ್‌ ಎಂದೇ ಹೆಸರಾದ ಸ್ಥಳದಲ್ಲಿ ಪ್ರಯಾಣಿಕರು ಖಾಸಗಿ ಬಸ್‌ಗಾಗಿ ಕಾಯುತ್ತಿರುವುದು
ಮಂಡ್ದ ಸ್ಟೇಡಿಯಂ ಬಸ್‌ಸ್ಟಾಂಡ್‌ ಎಂದೇ ಹೆಸರಾದ ಸ್ಥಳದಲ್ಲಿ ಪ್ರಯಾಣಿಕರು ಖಾಸಗಿ ಬಸ್‌ಗಾಗಿ ಕಾಯುತ್ತಿರುವುದು

ತಂಗುದಾಣ ನಿರ್ಮಿಸಲು ಸ್ಥಳ ಪರಿಶೀಲಿಸುವೆ: ಶಾಸಕ ಶಾಸಕರ ಅನುದಾನದಲ್ಲಿ ನಗರದ ವಿವಿಧೆಡೆ ಪ್ರಯಾಣಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ತಂಗುದಾಣ ನಿರ್ಮಿಸಲು ಕೆಲವು ಸ್ಥಳಗಳನ್ನು ಗುರುತಿಸಲಾಗಿದೆ. ಅದರಲ್ಲಿ ಖಾಸಗಿ ಬಸ್‌ಗಳನ್ನು ಅವಲಂಬಿಸಿರುವ ಕಡೆ ಅಗತ್ಯವಿದ್ದರೆ ತಂಗುದಾಣ ನಿರ್ಮಿಸಲು ಸ್ಥಳ ಪರಿಶೀಲಿಸಿ ಸಮಸ್ಯೆ ಬಗೆಹರಿಸುವೆ’ ಎಂದು ಶಾಸಕ ಪಿ.ರವಿಕುಮಾರ್‌ಗೌಡ ಗಣಿಗ ಭರವಸೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT