ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯ | 8 ದಿನ ಪೂರೈಸಿದ ಕಾವೇರಿ ಹೋರಾಟ

Published 8 ಸೆಪ್ಟೆಂಬರ್ 2023, 5:37 IST
Last Updated 8 ಸೆಪ್ಟೆಂಬರ್ 2023, 5:37 IST
ಅಕ್ಷರ ಗಾತ್ರ

ಮಂಡ್ಯ: ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ಖಂಡಿಸಿ ಜಿಲ್ಲೆಯಲ್ಲಿ ವಿವಿಧ ಸಂಘಟನೆಗಳು ನಡೆಸುತ್ತಿರುವ ಹಲವು ಬಗೆಯ ಹೋರಾಟ ಗುರುವಾರಕ್ಕೆ 8 ದಿನ ಪೂರೈಸಿದೆ.

ನಿತ್ಯ 5 ಸಾವಿರ ಕ್ಯುಸೆಕ್‌ ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಆದೇಶ ನೀಡಿದ ನಂತರ ಅನಿರ್ಧಿಷ್ಟಾವಧಿ ಧರಣಿ ಆರಂಭಗೊಂಡವು. ಅದಕ್ಕೂ ಮೊದಲು ಸರ್ಕಾರ ಒಂದು ವಾರಗಳ ಕಾಲ ನಿತ್ಯ 15 ಸಾವಿರ ಕ್ಯುಸೆಕ್‌ ನೀರು ಹರಿಸಿತ್ತು. ಆಗಲೂ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು.

ದಲಿತ ಸಂಘರ್ಷ ಸಮಿತಿ ಸದಸ್ಯರು ಗುರುವಾರ ನಗರದಲ್ಲಿ ಕೇಂದ್ರ, ರಾಜ್ಯ ಸರ್ಕಾರಗಳ ಅಣಕು ಶವ ಯಾತ್ರೆ ನಡೆಸಿದರು.

ಸಮಿತಿಯ ರಾಜ್ಯ ಘಟಕದ ಅಧ್ಯಕ್ಷ ವೆಂಕಟಗಿರಿಯಯ್ಯ ಮಾತನಾಡಿ, ‘ಸಂಕಷ್ಟ ಪರಿಸ್ಥಿತಿಯಲ್ಲಿ ತಮಿಳುನಾಡಿಗೆ ನೀರು ಹರಿಸುತ್ತಿರುವುದು ಖಂಡನೀಯ. ಕೇಂದ್ರ ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ಸಂಕಷ್ಟ ಸೂತ್ರ ರೂಪಿಸಬೇಕು’ ಎಂದು ಒತ್ತಾಯಿಸಿದರು.

ಜೆ.ಸಿ.ವೃತ್ತದಲ್ಲಿ ಶವದ ಪ್ರತಿಕೃತಿ ದಹಿಸಲು ಮುಂದಾದಾಗ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆಯಿತು.

ವಕೀಲರಿಂದ ಬೆಂಬಲ: ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಸದಸ್ಯರು ನಡೆಸುತ್ತಿರುವ ಹೋರಾಟಕ್ಕೆ ಜಿಲ್ಲಾ ವಕೀಲರ ಸಂಘದ ಸದಸ್ಯರು ಬೆಂಬಲ ಸೂಚಿಸಿದರು. ಸಂಘದ ಅಧ್ಯಕ್ಷ ರಾಜೇಂದ್ರ ನೇತೃತ್ವದಲ್ಲಿ ಮೆರವಣಿಗೆ ನಡೆಸಿದರು.

ಪಾಂಡವಪುರ, ಶ್ರೀರಂಗಪಟ್ಟಣ, ಮದ್ದೂರಿನಲ್ಲೂ ವಕೀಲರು ಪ್ರತಿಭಟನೆ ನಡೆಸಿದರು. ಶ್ರೀರಂಗಪಟ್ಟಣದಲ್ಲಿ ಭೂಮಿತಾಯಿ ರೈತ ಹೋರಾಟ ಸಮಿತಿ ಸದಸ್ಯರು ಒಣಗಿದ ಕಬ್ಬು ಹಿಡಿದು ಮೆರವಣಿಗೆ ನಡೆಸಿದರು.

ಶ್ರೀರಂಗಪಟ್ಟಣದ ಕಾವೇರಿ ನದಿ ಸೋಪಾನಕಟ್ಟೆ ಬಳಿ ಭೂಮಿತಾಯಿ ಹೋರಾಟ ಸಮಿತಿಯ ಪ್ರಮುಖರು ಗುರುವಾರ ಒಣಗಿದ ಕಬ್ಬು ಹಿಡಿದು ಪ್ರತಿಭಟನೆ ನಡೆಸಿದರು
ಶ್ರೀರಂಗಪಟ್ಟಣದ ಕಾವೇರಿ ನದಿ ಸೋಪಾನಕಟ್ಟೆ ಬಳಿ ಭೂಮಿತಾಯಿ ಹೋರಾಟ ಸಮಿತಿಯ ಪ್ರಮುಖರು ಗುರುವಾರ ಒಣಗಿದ ಕಬ್ಬು ಹಿಡಿದು ಪ್ರತಿಭಟನೆ ನಡೆಸಿದರು

ಪ್ರಜಾವಾಣಿ ಚಿತ್ರ

11ಕ್ಕೆ ಎಕ್ಸ್‌ಪ್ರೆಸ್‌ವೇ ಬಂದ್‌

ಶಾಸಕ ದರ್ಶನ್‌ ಪುಟ್ಟಣ್ಣಯ್ಯ ನೇತೃತ್ವದಲ್ಲಿ ಕೆಆರ್‌ಎಸ್‌ ಅಣೆಕಟ್ಟೆ ಬಳಿ ನಡೆಯುತ್ತಿದ್ದ ಅಹೋರಾತ್ರಿ ಧರಣಿಯನ್ನು ಬುಧವಾರ ರಾತ್ರಿ ಅಂತ್ಯಗೊಳಿಸಲಾಯಿತು. ‘ಧರಣಿ ಮುಂದುವರಿಯಲಿದ್ದು ಶ್ರೀರಂಗಪಟ್ಟಣದ ಸಾರಿಗೆ ಸಂಸ್ಥೆ ಬಸ್‌ ನಿಲ್ದಾಣದ ಎದುರಿನ ಜಾಗಕ್ಕೆ ಸ್ಥಳಾಂತರಿಸಲಾಗಿದೆ. ಸೆ.11ರಂದು ಬೃಹತ್‌ ಮಟ್ಟದಲ್ಲಿ ಬೆಂಗಳೂರು– ಮೈಸೂರು ಎಕ್ಸ್‌ಪ್ರೆಸ್‌ವೇ ಬಂದ್‌ ನಡೆಸಲು ಕರೆ ನೀಡಲಾಗಿದೆ’ ಎಂದು ರೈತಸಂಘದ ರಾಜ್ಯ ಘಟಕದ ಅಧ್ಯಕ್ಷ ಬಡಗಲಪುರ ನಾಗೇಂದ್ರ ತಿಳಿಸಿದರು.

ಬೊಮ್ಮಾಯಿ ತಂಡ ಕೆಆರ್‌ಎಸ್‌ಗೆ ಭೇಟಿ ಇಂದು

‘ಕೆಆರ್‌ಎಸ್‌ ಅಣೆಕಟ್ಟೆಯಲ್ಲಿ ನೀರಿನ ಸಂಗ್ರಹ ಜಲಾಶಯದ ವಸ್ತುಸ್ಥಿತಿ ಅರಿಯಲು ಶಾಸಕ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಬಿಜೆಪಿ ಮುಖಂಡರ ತಂಡ ಶುಕ್ರವಾರ ಕೆಆರ್‌ಎಸ್‌ಗೆ ಭೇಟಿ ನೀಡಲಿದೆ’ ಎಂದು ಪಕ್ಷದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಅಶ್ವತ್ಥನಾರಾಯಣ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ‘ಮುಖಂಡರಾದ ಗೋವಿಂದ ಕಾರಜೋಳ ಗೋಪಾಲಯ್ಯ ಸಂಸದರಾದ ಸುಮಲತಾ ಪ್ರತಾಪ್‌ ಸಿಂಹ ಹಾಗೂ ಮೈಸೂರು ಭಾಗದ ಬಿಜೆಪಿ ಶಾಸಕರು ತಂಡದಲ್ಲಿರುತ್ತಾರೆ’ ಎಂದರು. ‘ರೈತರ ವಿರೋಧದ ನಡುವೆಯೂ ತಮಿಳುನಾಡಿಗೆ ನೀರು ಹರಿಸಲಾಗುತ್ತಿದೆ. ವಸ್ತುಸ್ಥಿತಿ ಅರಿತು ನಾವೂ ಹೋರಾಟ ರೂಪಿಸುತ್ತೇವೆ. ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ಬಾಕಿ ಇರುವುದರಿಂದ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಲು ಸಾಧ್ಯವಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT