ಮಂಗಳವಾರ, ಮೇ 11, 2021
28 °C
ರಾಷ್ಟ್ರೀಯ ಹೆದ್ದಾರಿ ತಡೆದು ಕಾಂಗ್ರೆಸ್‌ ಆಕ್ರೋಶ

ಮಂಡ್ಯ: ಡಿಕೆಶಿ ವಿರುದ್ಧ ಜಾರಕಿಹೊಳಿ ಹೇಳಿಕೆ ಖಂಡಿಸಿ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಡ್ಯ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ವಿರುದ್ಧ ಶಾಸಕ ರಮೇಶ್‌ ಜಾರಕಿಹೊಳಿ ಅಶ್ಲೀಲ ಪದ ಬಳಸಿ ಆರೋಪ ಮಾಡಿರುವುದನ್ನು ವಿರೋಧಿಸಿ ಕಾಂಗ್ರೆಸ್‌ ಕಾರ್ಯಕರ್ತರು ಶನಿವಾರ ರಾತ್ರಿ ಬೆಂಗಳೂರು–ಮೈಸೂರು ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.

ಕಾಂಗ್ರೆಸ್ ಕಚೇರಿಯಿಂದ ಸರ್‌.ಎಂ.ವಿಶ್ವೇಶ್ವರಯ್ಯ ಪ್ರತಿಮೆವರೆಗೆ ಪಂಜು ಹಿಡಿದು ಮೆರವಣಿಗೆ ನಡೆಸಿದರು. ರಮೇಶ್‌ ಜಾರಕಿಹೊಳಿ ಭಾವಚಿತ್ರ ಸುಟ್ಟು ಆಕ್ರೋಶ ಹೊರ ಹಾಕಿದರು. ಎಸ್‌ಐಟಿ ವಿಚಾರಣೆ ನಡೆಸುತ್ತಿರುವ ಸಂದರ್ಭದಲ್ಲಿ ಪ್ರಕರಣ ತಿರುಚುತ್ತಿರುವ ರಮೇಶ್‌ ಜಾರಕಿಹೊಳಿ ಅವರನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು.

ಮುಖಂಡ ಎಂ.ಎಸ್‌.ಚಿದಂಬರ್‌ ಮಾತನಾಡಿ, ‘ರಮೇಶ್‌ ಜಾರಕಿಹೊಳಿ ಅವರು ಕಾಂಗ್ರೆಸ್‌, ಜೆಡಿಎಸ್‌ ಶಾಸಕರನ್ನು ವ್ಯಾಪಾರ ಮಾಡುವ ಮೂಲಕ ಅನೈತಿಕ ಸರ್ಕಾರ ರಚನೆಗೆ ಕಾರಣರಾಗಿದ್ದಾರೆ. ಆಪರೇಷನ್‌ ಕಮಲ ನಡೆಸಲು ರಮೇಶ್‌ ಜಾರಕಿಹೊಳಿ ಪ್ರಮುಖ ಕಾರಣಕರ್ತರಾಗಿದ್ದಾರೆ. ಕೆಲಸ ಕೊಡಿಸುವ ನೆಪದಲ್ಲಿ ಹೆಣ್ಣುಮಗಳ ಅತ್ಯಾಚಾರ ಎಸಗಿದ್ದಾರೆ. ಅವರನ್ನು ಬಂಧಿಸಬೇಕು’ ಎಂದು ಒತ್ತಾಯಿಸಿದರು.

‘ಹೆಣ್ಣು ಮಗಳ ಕುಟುಂಬಕ್ಕೆ ಬೆದರಿಸಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರ ವಿರುದ್ಧ ಹೇಳಿಕೆ ಕೊಡಿಸಿದ್ದಾರೆ. ಯಾರು ತಪ್ಪು ಮಾಡಿದ್ದಾರೆ ಎಂಬುದು ರಾಜ್ಯದ ಜನತೆಗೆ ಗೊತ್ತು. ರಾಜ್ಯದ ಪೊಲೀಸ್‌ ಅಧಿಕಾರಿಗಳು ರಮೇಶ್‌ ಜಾರಕಿಹೊಳಿ ಅವರನ್ನು ರಕ್ಷಣೆ ಮಾಡುತ್ತಿದ್ದಾರೆ. ಡಿ.ಕೆ.ಶಿವಕುಮಾರ್‌ ಅವರ ವರ್ಚಸ್ಸು ತಡೆಯಲಾಗದೆ ಅವರ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ. ಇದರ ವಿರುದ್ಧ ಉಗ್ರ ಹೋರಾಟ ಮಾಡುತ್ತೇವೆ’ ಎಂದರು.

‘ಹತಾಶರಾಗಿರುವ ರಮೇಶ್‌ ಜಾರಕಿಹೊಳಿ ಅವರು ತಮ್ಮ ಮೇಲಿರುವ ಪ್ರಕರಣವನ್ನು ತಿರುಚುತ್ತಿದ್ದಾರೆ. ಅವರ ಹೇಳಿಕೆ ವಿರುದ್ಧ ಇಡೀ ಒಕ್ಕಲಿಗ ಸಮುದಾಯ ಪ್ರತಿಭಟನೆ ನಡೆಸಲಿದೆ. ಸರ್ಕಾರವನ್ನೇ ಬೀಳಿಸಿದ್ದೇನೆ ಎಂಬ ಭ್ರಮೆಯಲ್ಲಿ ಮಾತನಾಡುತ್ತಿದ್ದಾರೆ. ಅವರನ್ನು ಕೂಡಲೇ ಬಂಧಿಸಬೇಕು’ ಎಂದು ಯುವ ಘಟಕದ ಅಧ್ಯಕ್ಷ ವಿಜಯ್‌ಕುಮಾರ್‌ ಒತ್ತಾಯಿಸಿದರು.

ಜಿಲ್ಲಾ ಘಟಕದ ಅಧ್ಯಕ್ಷ ಸಿ.ಡಿ.ಗಂಗಾಧರ್‌, ಮಹಿಳಾ ಘಟಕದ ಅಧ್ಯಕ್ಷೆ ಅಂಜನಾ ಶ್ರೀಕಾಂತ್‌, ಮುಖಂಡರಾದ ಸಿ.ಎಂ.ದ್ಯಾವಪ್ಪ, ಸಿದ್ದರಾಮೇಗೌಡ, ಮಂಜುನಾಥ್‌, ನಹೀಮ್‌, ಡಿ.ಮಂಜುನಾಥ್‌ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು