ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾರ್ವತ್ರಿಕ ಆರೋಗ್ಯ ವ್ಯವಸ್ಥೆ ಜಾರಿಗೆ ಒತ್ತಾಯ

Last Updated 23 ಜುಲೈ 2020, 11:47 IST
ಅಕ್ಷರ ಗಾತ್ರ

ಮಂಡ್ಯ: ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಖಾಸಗೀಕರಣ ನಿಲ್ಲಿಸಬೇಕು, ಸಾರ್ವತ್ರಿಕ ಆರೋಗ್ಯ ವ್ಯವಸ್ಥೆ ಜಾರಿಗೊಳಿಸಿ ಕೊರೊನಾ ಸೋಂಕಿತರಿಗೆ ಉಚಿತ ಚಿಕಿತ್ಸೆ ನೀಡಬೇಕು ಎಂದು ಆಗ್ರಹಿಸಿ ಸಿಐಟಿಯು, ಪ್ರಾಂತ ರೈತ ಸಂಘ, ಪ್ರಾಂತ ಕೃಷಿ ಕೂಲಿಕಾರರ ಸಂಘದ ಸದಸ್ಯರು ಗುರುವಾರ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಿದರು.

ದೇಶದಲ್ಲಿ ಆರ್ಥಿಕ ಬಿಕ್ಕಟ್ಟು ಮತ್ತು ಕೋವಿಡ್-19 ಸಂಕಷ್ಟವನ್ನು ಅತ್ಯಂತ ಗಂಭೀರವಾಗಿ ಎದುರಿಸುತ್ತಿರುವಾಗ ಸರ್ಕಾರ ಜನರ ಜೊತೆ ನಿಲ್ಲಬೇಕು. ಅವರ ಆರ್ಥಿಕ ಸಂಕಷ್ಟ ಹಾಗೂ ಆರೋಗ್ಯ ರಕ್ಷಣೆಯಲ್ಲಿ ತೊಡಗಬೇಕು. ಆದರೆ ಕಾರ್ಪೊರೇಟ್‌ ಕಂಪನಿಗಳ ಲೂಟಿಗೆ ಅವಕಾಶ ನೀಡಲಾಗುತ್ತಿದೆ. ಕೋವಿಡ್-19 ಸೋಂಕನ್ನು ಪರಿಣಾಮಕಾರಿಯಾಗಿ ಎದುರಿಸಲು ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಆದಾಯ ತೆರಿಗೆ ವ್ಯಾಪ್ತಿಗೆ ಬಾರದ ದೇಶದ ಎಲ್ಲ ಕುಟುಂಬಗಳಿಗೆ ಕನಿಷ್ಠ ಕೋವಿಡ್-19 ಸಮಸ್ಯೆ ಬಗೆಹರಿಯುವವರೆಗೂ ಮಾಸಿಕ ₹ 7,500 ನೆರವು ಘೋಷಿಸಬೇಕು. ಎಲ್ಲಾ ಕುಟುಂಬಗಳ ಸದಸ್ಯರಿಗೆ ಮಾಸಿಕ ತಲಾ 10 ಕೆ.ಜಿ ಸಮಗ್ರ ಆಹಾರ ಸಾಮಗ್ರಿಗಳನ್ನು ಒದಗಿಸಬೇಕು. ಆರೋಗ್ಯ ಸುರಕ್ಷತಾ ಸಾಮಗ್ರಿಗಳ ಕಿಟ್‍ಗಳನ್ನು ಒದಗಿಸಬೇಕು. ನಗರ ಹಾಗೂ ಗ್ರಾಮೀಣ ಪರದೇಶದ ಉದ್ಯೋಗ ಕೇಳುವ ಎಲ್ಲ ಜನತೆಗೆ ಉದ್ಯೋಗ ಖಾತ್ರಿ ಯೋಜನೆಯಡಿ ಕುಟುಂಬಕ್ಕೆ ತಲಾ ಕನಿಷ್ಠ 200 ದಿನಗಳ ಉದ್ಯೋಗ ನೀಡಬೇಕು. ಕೂಲಿ ಹಣವನ್ನು ಕನಿಷ್ಠ ₹600ಗೆ ಹೆಚ್ಚಿಸಬೇಕು.

ವ್ಯವಸಾಯವನ್ನು ಕಾರ್ಪೊರೇಟ್‌ ಕಂಪನಿಗಳಿಗೆ ವಹಿಸುವ ಎಲ್ಲ ಭೂ ಹಾಗೂ ವ್ಯವಸಾಯ ಸಂಬಂಧಿ ತಿದ್ದುಪಡಿ ಕಾಯ್ದೆಗಳನ್ನು ಹಿಂಪಡೆಯಬೇಕು. ಸಾರ್ವಜನಿಕರನ್ನು ಕಾಳಸಂತೆಯ ಲೂಟಿಕೋರತನಕ್ಕೆ ಒಳಪಡುವ ಅಗತ್ಯ ವಸ್ತುಗಳ ತಿದ್ದುಪಡಿ ಕಾಯ್ದೆಯನ್ನು ವಾಪಸ್ ಪಡೆಯಬೇಕು. ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣ ನಿಲ್ಲಿಸಿ, ಮೈಷುಗರ್ ಕಾರ್ಖಾನೆಯನ್ನು ಸರ್ಕಾರಿ ಸ್ವಾಮ್ಯದಲ್ಲಿಯೇ ನಿರ್ವಹಿಸಬೇಕು ಎಂದು ಆಗ್ರಹಿಸಿದರು.

ಎಐಎಡಬ್ಲ್ಯುಯು ಅಧ್ಯಕ್ಷ ಎಂ.ಪುಟ್ಟಮಾದು, ಸಿಐಟಿಯು ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಸಿ.ಕುಮಾರಿ, ಎಂ.ಎಂ.ಶಿವಕುಮಾರ್, ಶ್ರೀನಿವಾಸ್, ಎಲ್. ಕೃಷ್ಣೇಗೌಡ, ಟಿ. ಯಶವಂತ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT