ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

200 ದಿನ ಕೆಲಸ ಕೊಡಿ, ₹ 600 ಕೂಲಿ ನೀಡಿ

ಉದ್ಯೋಗ ಖಾತ್ರಿ: ಜಿ.ಪಂ ಕಚೇರಿ ಮುಂದೆ ಜನವಾದಿ ಮಹಿಳಾ ಸಂಘಟನೆ ಪ್ರತಿಭಟನೆ
Last Updated 7 ಅಕ್ಟೋಬರ್ 2020, 11:08 IST
ಅಕ್ಷರ ಗಾತ್ರ

ಮಂಡ್ಯ: ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ 200 ದಿನ ಕೆಲಸ ನೀಡಬೇಕು, ದಿನ ಕೂಲಿ ಹಣವನ್ನು ₹600ಕ್ಕೆ ಹೆಚ್ಚಿಸಬೇಕು ಎಂದು ಆಗ್ರಹಿಸಿ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಜಿಲ್ಲಾ ಘಟಕದ ಸದಸ್ಯರು ನಗರದ ಜಿಲ್ಲಾ ಪಂಚಾಯಿತಿ ಕಚೇರಿ ಮುಂದೆ ಬುಧವಾರ ಪ್ರತಿಭಟನೆ ನಡೆಸಿದರು.

ಕಚೇರಿ ಮುಂದೆ ಜಮಾಯಿಸಿದ ಸಂಘಟನೆ ಸದಸ್ಯರು ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಕೊರೊನಾ ಕಾರಣದಿಂದ ಲಕ್ಷಾಂತರ ಜನರು ಉದ್ಯೋಗ ಕಳೆದುಕೊಂಡು ನಗರಗಳಿಂದ ಹಳ್ಳಿಗಳತ್ತ ವಾಪಸ್‌ ಆಗಿದ್ದಾರೆ. ದುಡಿಯುವ ಕೈಗಳಿಗೆ ಕೆಲಸವಿಲ್ಲದೆ ಜನರಲ್ಲಿ ಕೊಂಡುಕೊಳ್ಳುವ ಶಕ್ತಿ ಕಡಿಮೆಯಾಗಿದೆ. ಹಸಿವು, ಬಡತನ, ನಿರುದ್ಯೋಗ ಸಮಸ್ಯೆಯಿಂದಾಗಿ ಬಡ ಕೂಲಿಕಾರರ ಬದುಕು ಬಾಣಲಿಯಿಂದ ಬೆಂಕಿಗೆ ಬಿದ್ದಂತಾಗಿದೆ. ಇಂತಹ ಸಂದರ್ಭದಲ್ಲಿ ಉದ್ಯೋಗ ಖಾತ್ರಿ ಯೋಜನೆಯನ್ನು ಸಮರ್ಪಕವಾಗಿ ಜಾರಿ ಮಾಡುವಲ್ಲಿ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಕೆಲಸ ಕೇಳಿ ಅರ್ಜಿ ಸಲ್ಲಿಸಿ 3–4 ತಿಂಗಳಾದರೂ ಗ್ರಾಮ ಪಂಚಾಯಿತಿ ಪಿಡಿಒಗಳು ಕೆಲಸ ನೀಡುತ್ತಿಲ್ಲ. ನೀವೆ ಕೆಲಸ ಹುಡುಕಿಕೊಡಿ ಎಂದು ಹೇಳುತ್ತಾರೆ. ಕಾಮಗಾರಿ ಛಾಯಾಚಿತ್ರ, ನಾಮಫಲಕ, ಟ್ರಾಕ್ಟರ್‌ ವ್ಯವಸ್ಥೆಯನ್ನು ಕಾಯಕ ಬಂಧುಗಳೇ ಮಾಡಿಕೊಳ್ಳಬೇಕು ಎಂದು ಒತ್ತಡ ಹೇರುವುದನ್ನು ನಿಲ್ಲಿಸಬೇಕು. ನಿಜವಾದ ಕಾಯಕ ಬಂಧುಗಳನ್ನು ಕೈ ಬಿಟ್ಟು ತಮಗೆ ಬೇಕಾದವರನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಈಗಾಗಲೇ ಅರ್ಜಿ ಸಲ್ಲಿಸಿರುವ ಕೂಲಿಕಾರ್ಮಿಕರಿಗೆ ನಿರುದ್ಯೋಗ ಭತ್ಯೆ ನೀಡಬೇಕು.

ಕಾಯಕ ಬಂಧುಗಳಿಗೆ ಗುರುತಿನ ಚೀಟಿ ನೀಡಬೇಕು. ತರಬೇತಿ ಮತ್ತು ಪ್ರೋತ್ಸಾಹ ಧನ ನೀಡಬೇಕು ಎಂದು ಒತ್ತಾಯಿಸಿದರು.
ಜಾಬ್‌ಕಾರ್ಡ್‌ದಾರರಿಗೆ ಹೊಸ ಕಾರ್ಡ್‌ ವಿತರಿಸಬೇಕು ಹಾಗೂ ಜಾಬ್‌ಕಾರ್ಡ್‌ ವಿತರಿಸುವಾಗ ಗ್ರಾಪಂಗಳಲ್ಲಿ ಹಣ ವಸೂಲಿ ಮಾಡುವುದನ್ನು ನಿಲ್ಲಿಸಬೇಕು. ಜಿಲ್ಲೆಯ ಮಳವಳ್ಳಿ, ಮದ್ದೂರು, ನಾಗಮಂಗಲ, ಶ್ರೀರಂಗಪಟ್ಟಣ ತಾಲ್ಲೂಕಿನ ಹಲವಾರು ಹಳ್ಳಿಗಳಲ್ಲಿ ಕೆಲಸ ನೀಡದೆ ಸತಾಯಿಸುತ್ತಿದ್ದು, ಅರ್ಜಿ ಸಲ್ಲಿಸಿದ ಕೂಡಲೇ ಕೆಲಸ ನೀಡಬೇಕು. ಸಾಮಗ್ರಿ ವೆಚ್ಚದ ₹10 ಹಣವನ್ನು ಕೂಲಿ ಹಣದ ಜೊತೆಗೆ ಕೂಲಿಕಾರರ ಖಾತೆಗೆ ಪಾವತಿ ಮಾಡಬೇಕು ಎಂದು ಆಗ್ರಹಿಸಿದರು.

ರಾಜ್ಯ ಘಟಕದ ಅಧ್ಯಕ್ಷೆ ದೇವಿ, ಜಿಲ್ಲಾ ಘಟಕದ ಅಧ್ಯಕ್ಷೆ ಶೋಭಾ, ಖಜಾಂಚಿ ಮಂಜುಳಾ, ಕಾರ್ಯದರ್ಶಿ ಸುಶೀಲಾ, ಸಹ ಕಾರ್ಯದರ್ಶಿಗಳಾದ ಪ್ರೇಮಾ, ಚಂದ್ರಮ್ಮ, ರಾಣಿ, ಸುನೀತಾ, ಉಪಾಧ್ಯಕ್ಷರಾದ ಡಿ.ಕೆ.ಲತಾ, ಕೆ.ಎಸ್‌.ಸುನೀತಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT