ಸೋಮವಾರ, ಸೆಪ್ಟೆಂಬರ್ 20, 2021
27 °C
1002ನೇ ಜಯಂತ್ಯುತ್ಸವದ ಅಂಗವಾಗಿ ಆಯೋಜನೆ

ರಾಮಾನುಜರ ರಥೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೇಲುಕೋಟೆ: ರಾಮಾನುಜಾ ಚಾರ್ಯರ 1002ನೇ ಜಯಂತ್ಯುತ್ಸವದ ಅಂಗವಾಗಿ ಬುಧವಾರ ಮಹಾ ರಥೋತ್ಸವ ವೈಭವದಿಂದ ನೆರವೇರಿತು.

ವಿವಿಧ ಭಾಗಗಳಿಂದ ಬಂದಿದ್ದ ಭಕ್ತರು ರಥೋತ್ಸವದಲ್ಲಿ ಭಾಗವಹಿಸಿ ಯತಿರಾಜ– ರಾಮಾನುಜ ಎಂದು ಜಯಘೋಷ ಮೊಳಗಿಸುತ್ತಾ ರಾಮಾನುಜರ ತೇರನ್ನು ಎಳೆದರು.

ಜಯಂತ್ಯುತ್ಸವದ 9ನೇ ದಿನವಾದ ಬುಧವಾರ ನಡೆದ ಮಹಾರಥೋತ್ಸವದಲ್ಲಿ ರಥ ಚತುರ್ವೀದಿಗಳಲ್ಲಿ ಸಂಚರಿಸಿ ನೆಲೆ ಸೇರಿತು. ಬೆಳಿಗ್ಗೆ 8 ಗಂಟೆಗೆ ರಾಮಾನುಜಾ ಚಾರ್ಯರಿಗೆ ಯಾತ್ರಾದಾನ ರಥಬಲಿಯ ನಂತರ ಚೆಲುವನಾರಾಯಣಸ್ವಾಮಿಯ ಮಾಲೆ ಮರ್ಯಾದೆಯೊಂದಿಗೆ ರಥೋತ್ಸವದ ಪೂರ್ವಭಾವಿ ಉತ್ಸವಕ್ಕೆ ಚಾಲನೆ ನೀಡಲಾಯಿತು. ಆಚಾರ್ಯರ ಉತ್ಸವ ರಥಮಂಟಪಕ್ಕೆ ಪ್ರದಕ್ಷಿಣೆ ಬಂದ ನಂತರ ಮುಹೂರ್ತ ಪಠಣದೊಂದಿಗೆ ರಥಾರೋಹಣ ನೆರವೇರಿಸಲಾಯಿತು.

ವೇದಘೋಷ ದಿವ್ಯಪ್ರಬಂಧ ಪಾರಾಯಣದ ನಂತರ ಬೆಳಿಗ್ಗೆ 11 ಗಂಟೆಗೆ ಆರಂಭವಾದ ಮಹಾರಥೋತ್ಸವ ಮಧ್ಯಾಹ್ನ 1.30ರ ವೇಳೆಗೆ ರಥಮಂಟಪಕ್ಕೆ ಮರಳಿತು. ಸಂಜೆ 4 ಗಂಟೆಗೆ ಯತಿರಾಜ ಮಠದಲ್ಲಿ ರಾಮಾನುಜರಿಗೆ ಅಭಿಷೇಕ ನೆರವೇರಿಸಲಾಯಿತು. ಯತಿರಾಜ ರಾಮಾನುಜ ಜೀಯರ್ ಸೇರಿದಂತೆ ದೇವಾಲಯ ಕೈಂಕರ್ಯಪರರು ಭಾಗವಹಿಸಿದ್ದರು.

ಭಿಕ್ಷಾ ಕೈಂಕರ್ಯ: ತಿರುನಕ್ಷತ್ರ ಮಹೋತ್ಸವದ ಭಿಕ್ಷಾ ಕೈಂಕರ್ಯದ 3ನೇ ದಿನದ ಕಾರ್ಯಕ್ರಮವನ್ನು 4ನೇ ಸ್ಥಾನಿಕ ಶ್ರೀನಿವಾಸ ನರಸಿಂಹನ್ ಗುರೂಜಿ ಕುಟುಂಬವು ಫಲ, ಪುಷ್ಪ, ಸಿಹಿ ಸಮರ್ಪಿಸಿ ಭಿಕ್ಷಾ ಕೈಂಕರ್ಯ ನೆರವೇರಿಸಿತು.

ರಾಮಾನುಜರು ಮೇಲುಕೋಟೆ ಯಲ್ಲಿದ್ದಾಗ ಸ್ಥಾನಿಕರ ಮನೆಯಲ್ಲಿ ಮಾತ್ರ ಭಿಕ್ಷೆ ಸ್ವೀಕರಿಸುತ್ತಿದ್ದರು. ಇದರ ಪ್ರತೀಕವಾಗಿ ನಡೆಯುವ ಈ ಕೈಂಕರ್ಯದಲ್ಲಿ ಪ್ರಥಮ ಸ್ಥಾನಿಕ ಕರಗಂ ನಾರಾಯಣ ಅಯ್ಯಂಗಾರ್, ಮೂರನೇ ಸ್ಥಾನಿಕ ಪ್ರಸನ್ನ ಮುಕುಂದನ್ ಭಿಕ್ಷಾ ಕೈಂಕರ್ಯ ನೆರವೇರಿಸಿದರು.

ರಾಮಾನುಜಾಚಾರ್ಯರ ಜಯಂತ್ಯುತ್ಸವ ಇಂದು
ಭಕ್ತಿ ಪಂಥದ ಮೂಲಕ ಹಿಂದೂ ಸಂಸ್ಕೃತಿ ಉಳಿಸಿ ಸಾಮಾಜಿಕ ಸಾಮರಸ್ಯ ಮೂಡಿಸಿದ ರಾಮಾನುಜರ 1002ನೇ ಜಯಂತ್ಯುತ್ಸವ ಮೇಲುಕೋಟೆ ಚೆಲುವನಾರಾಯಣ ಸ್ವಾಮಿ ಸನ್ನಿಧಿಯಲ್ಲಿ ಮೇ 9ರಂದು ಸಂಭ್ರಮದಿಂದ ನಡೆಯಲಿದೆ.

ಇದಕ್ಕಾಗಿ ಮೇಲುಕೋಟೆ ದೇವಾಲಯ ನಯನ ಮನೋಹರ ವಾಗಿ ಸಜ್ಜುಗೊಂಡಿದೆ. ಬೆಳಿಗ್ಗೆ ಕಲ್ಯಾಣಿಯಿಂದ ತೀರ್ಥ ತಂದು ರಾಮಾನುಜರಿಗೆ ದ್ವಾದಶಾರಾ ಧನೆಯೊಂದಿಗೆ ಮಹಾಭಿಷೇಕ ನೆರವೇರಲಿದೆ.

ಆಚಾರ್ಯರು 12 ವರ್ಷಗಳ ಕಾಲ ನೆಲೆಸಿ, ದೊರೆ ವಿಷ್ಟುವರ್ಧನನ ಮೂಲಕ ಕರ್ನಾಟಕದ ಸಂಸ್ಕೃತಿ ಮತ್ತು ಪರಂಪರೆಗೆ ಅಪಾರ ಕೊಡುಗೆ ನೀಡಲು ಪ್ರೇರಕವಾದ ಪುಣ್ಯಭೂಮಿ ಮೇಲುಕೋಟೆಯಲ್ಲಿ ನಡೆಯುವ ಆಚಾರ್ಯರ ಜಯಂತ್ಯುತ್ಸವಕ್ಕೆ ವಿಶೇಷ ಮಹತ್ವ ವಿದೆ. ಚೆಲುವನಾರಾಯಣ ಸ್ವಾಮಿ ದೇವಾಲಯದಲ್ಲಿ 10 ದಿನಗಳಿಂದ ನಡೆಯುತ್ತಿರುವ ಜಯಂತ್ಯುತ್ಸವದ ಕಾರ್ಯಕ್ರಮಗಳು ಗುರುವಾರ ಸಂಪನ್ನಗೊಳ್ಳಲಿವೆ. ಸಂಜೆ ಆಚಾರ್ಯರಿಗೆ ಚೆಂದನದ ಅಲಂಕಾರ, ರಾತ್ರಿ ಚೆಲುವನಾರಾಯಣಸ್ವಾಮಿಗೆ ದಶಾವತಾರ ಉತ್ಸವ ನಡೆಯಲಿದೆ.

ವಿದ್ವಾನ್ ಆನಂದಾಳ್ವಾರ್ ನೇತೃತ್ವದಲ್ಲಿ ಉತ್ಸವ ನಡೆಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.