ಮಂಡ್ಯ: ಜಾನುವಾರು, ಕೋಳಿಗೆ ಆಹಾರವಾಗಿ ಪಡಿತರ ಬೇಳೆ

ಮಂಡ್ಯ: ಕೇಂದ್ರ ಸರ್ಕಾರದ ‘ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ’ ಯೋಜನೆ ಅಡಿಯಲ್ಲಿ ಪಡಿತರ ಚೀಟಿದಾರರಿಗೆ ಉಚಿತವಾಗಿ ವಿತರಿಸಿರುವ ಬೇಳೆ ಕಳಪೆ ಗುಣಮಟ್ಟದ್ದಾಗಿದ್ದು, ಜಾನುವಾರು ಹಾಗೂ ಕೋಳಿ ಆಹಾರವಾಗಿ ಬಳಕೆಯಾಗುತ್ತಿದೆ.
ಕಲ್ಲು–ಮಣ್ಣು ಮಿಶ್ರಿತವಾಗಿರುವ ತೊಗರಿಬೇಳೆಯು ಹುಳ ಹಿಡಿದು ಮುಗ್ಗಲುಹಿಡಿದಿದೆ. ಕಳಪೆ ಗುಣಮಟ್ಟದ ಬೇಳೆ ನೀಡಿರುವುದಕ್ಕೆ ಫಲಾನುಭವಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ಬೇಳೆ ಕಳಪೆ ಗುಣಮಟ್ಟದ್ದಾಗಿದೆ. ತೊಳೆದರೆ ವಾಸನೆ ಹೋಗುತ್ತಿಲ್ಲ. ಸಾಂಬಾರು ಮಾಡಿದರೆ ಅದನ್ನು ಊಟ ಮಾಡಲು ಆಗುವುದಿಲ್ಲ. ಹೀಗಾಗಿ, ಅದನ್ನು ಜಾನುವಾರು, ಕೋಳಿಗಳಿಗೆ ನೀಡುತ್ತಿದ್ದೇವೆ. ಉಣ್ಣಲಾಗದ ಬೇಳೆಯನ್ನು ಏಕೆ ನೀಡಬೇಕಿತ್ತು?’ ಎಂದು ಮಂಡ್ಯ ತಾಲ್ಲೂಕಿನ ಮಂಗಲ ಗ್ರಾಮದ ಚೈತ್ರಾ ಅಸಮಾಧಾನ ವ್ಯಕ್ತಪಡಿಸಿದರು.
ಎಪಿಎಲ್ ಕಾರ್ಡ್‌ದಾರರನ್ನು ಹೊರತು ಪಡಿಸಿ ಅಂತ್ಯೋದಯ ಮತ್ತು ಬಿಪಿಎಲ್ ಕಾರ್ಡ್‌ದಾರರು ಈ ಯೋಜನೆ ವ್ಯಾಪ್ತಿಗೆ ಬರುತ್ತಾರೆ. ಹೆಚ್ಚಿನವರು ಬಡವರು, ಕೂಲಿ ಕಾರ್ಮಿಕರು. ಅಂದು ದುಡಿದು ಅಂದೇ ಊಟ ಮಾಡುವಂಥವರು.
‘ಲಾಕ್‌ಡೌನ್‌ನಿಂದಾಗಿ ಮನೆಯಲ್ಲೇ ಉಳಿದಿದ್ದೇವೆ. ಕೆಲಸವಿಲ್ಲ. ಕಷ್ಟ ಕಾಲದಲ್ಲಿ ಅಕ್ಕಿ ಜೊತೆ ಪೌಷ್ಟಿಕ ಬೇಳೆ ಸಿಕ್ಕಿದೆ ಎಂದುಕೊಂಡೆವು. ಆದರೆ, ಇದು ಮೂರುಕಾಸಿಗೂ ಪ್ರಯೋಜನ ಇಲ್ಲವಾಗಿದೆ’ ಎಂದು ಮಳವಳ್ಳಿ ತಾಲ್ಲೂಕಿನ ಮಾದಹಳ್ಳಿಯ ರಮೇಶ್ ಬೇಸರ ವ್ಯಕ್ತಪಡಿಸಿದರು.
'ಮಂಡ್ಯ, ಮಳವಳ್ಳಿ, ನಾಗಮಂಗಲ, ಕೆ.ಆರ್.ಪೇಟೆಯ ವಿವಿಧ ನ್ಯಾಯಬೆಲೆ ಅಂಗಡಿಗಳಲ್ಲಿ ಕಳಪೆ ಗುಣಮಟ್ಟದ ಬೇಳೆ ವಿತರಿಸಿರುವುದು ನಮ್ಮ ಗಮನಕ್ಕೂ ಬಂದಿದೆ. ಅಧಿಕಾರಿಗಳು ಕೂಡಲೇ ಇದನ್ನು ವಾಪಸು ಪಡೆದು, ಗುಣಮಟ್ಟದ ಬೇಳೆ ನೀಡಬೇಕು’ ಎಂದು ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಶಂಭೂನಹಳ್ಳಿ ಸುರೇಶ್ ಆಗ್ರಹಿಸಿದರು.
**
ಕೆಲವೆಡೆ ಬಂದಿರುವ ಬೇಳೆ ಕಳಪೆ ಗುಣಮಟ್ಟದ್ದಾಗಿದೆ ಎಂಬ ದೂರುಗಳಿವೆ. ಅದನ್ನು ವಾಪಸು ಪಡೆದು ಹೊಸ ದಾಸ್ತಾನು ತರಿಸಿ ವಿತರಿಸಲಾಗುತ್ತದೆ.
-ಕುಮುದಾ, ಉಪ ನಿರ್ದೇಶಕಿ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.