ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯ | ಶಾಂತಿಯುತ ಸಾರ್ವತ್ರಿಕ ಚುನಾವಣೆಗೆ ಸಿದ್ಧತೆ: ಜಿಲ್ಲಾಧಿಕಾರಿ

ಜಿಲ್ಲೆಯಾದ್ಯಂತ ಕಟ್ಟುನಿಟ್ಟಿನ ಮಾದರಿ ನೀತಿ ಸಂಹಿತೆ ಜಾರಿ; ಜಿಲ್ಲಾಧಿಕಾರಿ ಡಾ.ಎಚ್‌.ಎನ್‌.ಗೋಪಾಲಕೃಷ್ಣ
Last Updated 21 ಮಾರ್ಚ್ 2023, 14:02 IST
ಅಕ್ಷರ ಗಾತ್ರ

ಮಂಡ್ಯ: ‘ಶಾಂತಿಯುತ, ಪಾರದರ್ಶಕವಾಗಿ ವಿಧಾನಸಭಾ ಚುನಾವಣೆ ನಡೆಸಲು ಜಿಲ್ಲಾಡಳಿತ ಸರ್ವ ಸನ್ನದ್ಧವಾಗಿದೆ. ರಾಜ್ಯ ಚುನಾವಣಾ ಆಯೋಗ ಏಪ್ರಿಲ್‌ ಮೊದಲ ವಾರದಲ್ಲಿ ಚುನಾವಣಾ ವೇಳಾಪಟ್ಟಿ ಘೋಷಣೆ ಮಾಡುವ ಸಾಧ್ಯತೆ ಇದೆ’ ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆದ ಜಿಲ್ಲಾಧಿಕಾರಿ ಡಾ.ಎಚ್‌.ಎನ್‌.ಗೋಪಾಲಕೃಷ್ಣ ಹೇಳಿದರು.

‘ಚುನಾವಣೆ ಘೋಷಣೆಯಾದ ನಂತರ ಜಿಲ್ಲೆಯಾದ್ಯಂತ ಕಟ್ಟುನಿಟ್ಟಾಗಿ ಮಾದರಿ ನೀತಿಸಂಹಿತೆ ಜಾರಿಗೊಳಿಸಲಾಗುವುದು. ಸಾರ್ವಜನಿಕರು, ಮತದಾರರು, ರಾಜಕೀಯ ಪಕ್ಷಗಳ ಮುಖಂಡರು, ಕಾರ್ಯಕರ್ತರು ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಸಹಕಾರ ನೀಡಬೇಕು’ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಜಿಲ್ಲೆಯಲ್ಲಿ 7 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಈಗಾಗಲೇ ಕ್ಷೇತ್ರವಾರು ಏಳು ಮಂದಿ ಚುನಾವಣಾಧಿಕಾರಿಗಳು, ಏಳು ಮಂದಿ ಸಹಾಯಕ ಚುನಾವಣಾಧಿಕಾರಿಗಳು ಸೇರಿ ಒಟ್ಟು 14 ಮಂದಿ ಸಿಬ್ಬಂದಿ ನೇಮಕ ಮಾಡಲಾಗಿದೆ. 16 ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಬ್ಯಾಲೆಟ್, ಅಂಚೆ ಮತದಾನ, ಮಾಧ್ಯಮ ನಿರ್ವಹಣೆ, ಸಂಪರ್ಕ, ಸಹಾಯವಾಣಿ, ವೀಕ್ಷಕರ ತಂಡಗಳನ್ನಾಗಿ ರಚಿಸಿ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ’ ಎಂದರು.

‘ಜಿಲ್ಲೆಯಲ್ಲಿ ಮಾದರಿ ನೀತಿ ಸಂಹಿತೆ ಕಟ್ಟುನಿಟ್ಟಾಗಿ ಜಾರಿಗೊಳಿಸುವ ಸಂಬಂಧ ಜಿಲ್ಲಾ ಮಟ್ಟದಲ್ಲಿ ಜಿ.ಪಂ ಸಿಇಒ ಜಿಲ್ಲಾ ನೋಡಲ್ ಅಧಿಕಾರಿಯಾಗಿದ್ದಾರೆ. ಚುನಾವಣಾ ವೆಚ್ಚಗಳ ಮೇಲೆ ನಿಗಾವಹಿಸಲು ಜಿ.ಪಂ ಮುಖ್ಯ ಲೆಕ್ಕಾಧಿಕಾರಿ ನೇತೃತ್ವದಲ್ಲಿ ತಂಡ ರಚಿಸಲಾಗಿದೆ’ ಎಂದರು.

‘127 ಸೆಕ್ಟರ್ ಅಧಿಕಾರಿಗಳು, 34 ಚೆಕ್ ಪೋಸ್ಟ್, 35 ಫ್ಲೈಯಿಂಗ್ ಸ್ಕ್ವಾಡ್, 21 ವಿಡಿಯೋ ಸರ್ವೇಲೆನ್ಸ್‌, 14 ತೆರಿಗೆ, 21 ಸ್ಥಿರ ಜಾಗೃತಿ ದಳ ಹಾಗೂ 70 ಮಾಸ್ಟರ್ ತರಬೇತಿದಾರರನ್ನು ನಿಯೋಜಿಸಲಾಗಿದೆ’ಎಂದರು.

‘ಮತದಾನ ಮಾಡಲು ಎಲ್ಲ ರೀತಿಯ ವ್ಯವಸ್ಥೆ ಮಾಡಲಾಗಿದೆ. ಅನಿವಾರ್ಯ ಹಾಗೂ ಅನಾರೋಗ್ಯದಿಂದ ಮತ ಕೇಂದ್ರಕ್ಕೆ ತೆರಳಿ ಮತದಾನ ಮಾಡಲು ಸಾಧ್ಯವಾಗದ ಮತದಾರರು ಅಂಚೆ ಮೂಲಕ ಮತದಾನ ಮಾಡಬಹುದಾಗಿದೆ. ಜಿಲ್ಲೆಯಲ್ಲಿ 80 ವರ್ಷ ಮೇಲ್ಪಟ್ಟ 37,411 ಮತದಾರರು, 23 ಸಾವಿರ ಅಂಗವಿಕಲ ಮತದಾರರಿದ್ದಾರೆ’ ಎಂದರು.

‘ನಗರ, ಪಟ್ಟಣ ಹಾಗೂ ಗ್ರಾಮೀಣ ವ್ಯಾಪ್ತಿಯಲ್ಲಿ ಅನುಮತಿ ಪಡೆಯದೆ ಅನಧಿಕೃತವಾಗಿ ಅಳವಡಿಸಿರುವ ಬ್ಯಾನರ್, ಬಟಿಂಗ್ಸ್, ಫ್ಲೆಕ್ಸ್, ಪೋಸ್ಟರ್ ಮತ್ತು ಕಟೌಟ್‌ಗಳನ್ನು ಮಾ.19ಕ್ಕೆ ತೆರವುಗೊಳಿಸಲಾಗಿದೆ. 120 ಗೋಡೆ ಬರಹಗಳು, 491 ಪೋಸ್ಟರ್ಸ್, 834 ಬ್ಯಾನರ್ಸ್ ಹಾಗೂ ಇತರೆ 228 ಒಟ್ಟು 1673 ಫ್ಲೆಕ್ಸ್ ತೆರವುಗೊಳಿಸಲಾಗಿದೆ.

‘ವಿದ್ಯುನ್ಮಾನ ಯಂತ್ರಗಳನ್ನು ಸಂರಕ್ಷಿಸಿಡಲು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಭದ್ರತಾ ಕೊಠಡಿಗಳನ್ನು ಕಾಯ್ದಿರಿಸಲಾಗಿದೆ. ಮಳವಳ್ಳಿಯ ಶಾಂತಿ ಪಿಯು ಕಾಲೇಜು, ಮದ್ದೂರು ಎಚ್.ಕೆ.ವೀರಣ್ಣಗೌಡ ಪಿಯು ಕಾಲೇಜು, ಮೇಲುಕೋಟೆ ಪಿಎಸ್ಎಸ್‌ಕೆ ಪ್ರೌಢಶಾಲೆ, ಮಂಡ್ಯ ವಿಶ್ವವಿದ್ಯಾಲಯ, ಶ್ರೀರಂಗಪಟ್ಟಣ ಸರ್ಕಾರಿ ಪಿಯು ಕಾಲೇಜು, ನಾಗಮಂಗಲ ಜೂನಿಯರ್ ಕಾಲೇಜು ಹಾಗೂ ಕೆ.ಆರ್.ಪೇಟೆಯಲ್ಲಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಮಸ್ಟರಿಂಗ್ ಹಾಗೂ ಡಿ-ಮಸ್ಟರಿಂಗ್ ಪ್ರಕ್ರಿಯೆ ನಡೆಯಲಿದೆ’ ಎಂದರು.

ಗೋಷ್ಠಿಯಲ್ಲಿ ಜಿಪಂ ಸಿಇಒ ಶಾಂತಾ ಎಲ್.ಹುಲ್ಮನಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್‌.ಯತೀಶ್‌, ವಾರ್ತಾಧಿಕಾರಿ ನಿರ್ಮಲಾ ಇದ್ದರು.

***

7 ಕ್ಷೇತ್ರಮ 1,798 ಮತಗಟ್ಟೆ

‘ಒಟ್ಟು 7 ಕ್ಷೇತ್ರಗಳಲ್ಲಿ 1,798 ಮತಗಟ್ಟೆ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಇದರಲ್ಲಿ ಸೂಕ್ಷ್ಮ 24 ಹಾಗೂ ಅತಿ ಸೂಕ್ಷ್ಮ 319 ಮತಗಟ್ಟೆಗಳನ್ನು ಗುರುತಿಸಲಾಗಿದೆ. ಜೊತೆಗೆ ಮಹಿಳಾ ಮತದಾರರಿಗಾಗಿ ನೇರಳೆ ಬಣ್ಣದ ಸಖಿ ಮತಗಟ್ಟೆಯನ್ನು ಪ್ರತೀ ವಿಧಾನಸಭಾ ಕ್ಷೇತ್ರಕ್ಕೆ ತಲಾ 2ರಂತೆ ತೆರೆಯಲಾಗಿದೆ’ ಎಂದು ಜಿಲ್ಲಾಧಿಕಾರಿ ತಿಳಿಸಿದರು.

‘163 ಅಂಗವಿಕಲ ಸಿಬ್ಬಂದಿಗಳಿದ್ದು ಅವರಿಗೆ ಒಂದು ಮತಗಟ್ಟೆ ಇದೆ. ಹೆಚ್ಚು ಯುವ ಮತದಾರರಿರುವ 2 ಯುವ ಮತಗಟ್ಟೆ ತೆರೆಯಲಾಗಿದೆ. ಮಳವಳ್ಳಿ ತಾಲ್ಲೂಕಿನ ಬಸವನಹಳ್ಳಿ ಹಾಗೂ ಮುತ್ತತ್ತಿ ಎರಡು ಶ್ಯಾಡೋ ಮತಗಟ್ಟೆಗಳನ್ನಾಗಿ ಗುರುತಿಸಲಾಗಿದೆ’ ಎಂದರು.

‘ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಗೆ ವಿದ್ಯುನ್ಮಾನ ಮತಯಂತ್ರಗಳನ್ನು ಸರಬರಾಜು ಮಾಡಲಾಗಿದೆ. ಎಲ್ಲ ಮತಯಂತ್ರಗಳನ್ನು ಈಗಾಗಲೇ ಪ್ರಥಮ ಹಂತದ ಪರಿಶೀಲನೆ ನಡೆದಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT