ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯ | ರಥಯಾತ್ರೆ ಹಿಂದೆ ಕಂದಾಯ ಇಲಾಖೆ ಸಿಬ್ಬಂದಿ; ಆಡಳಿತ ಯಂತ್ರ ಸ್ಥಗಿತ

ಕುಂಭಮೇಳ ಕರ್ತವ್ಯ; ಜಿಲ್ಲಾಡಳಿತ ಸ್ಥಗಿತ, ಜನರ ಅಲೆದಾಟ
Last Updated 10 ಅಕ್ಟೋಬರ್ 2022, 2:25 IST
ಅಕ್ಷರ ಗಾತ್ರ

ಮಂಡ್ಯ: ಕೆ.ಆರ್‌.ಪೇಟೆ ತಾಲ್ಲೂಕು ತ್ರಿವೇಣಿ ಸಂಗಮದಲ್ಲಿ ನಡೆಯಲಿರುವ ಕುಂಭಮೇಳದ ಜ್ಯೋತಿ ರಥಯಾತ್ರೆ ಮೆರವಣಿಗೆಗೆ ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ನೇಮಕ ಮಾಡಿಕೊಂಡಿರುವುದಕ್ಕೆ ಅಸಮಾಧಾನ ವ್ಯಕ್ತವಾಗಿದೆ.

ಕುಂಭಮೇಳದ ಜ್ಯೋತಿ ಯಾತ್ರೆ ಚಾಮರಾಜನಗರ ಜಿಲ್ಲೆ ಮಲೈಮಹದೇಶ್ವರ ಬೆಟ್ಟದಿಂದ ಅ.6ರಿಂದ ಆರಂಭಗೊಂಡಿತು. ಇದು ಚಾಮರಾಜನಗರ, ಮೈಸೂರು ಜಿಲ್ಲೆಯಲ್ಲಿ ಸಾಗಿ ಅ.13ರಂದು ಕೆ.ಆರ್‌.ಪೇಟೆಗೆ ತಲುಪಲಿದೆ. ಒಂದು ವಾರಗಳ ಕಾಲ ನಡೆಯಲಿರುವ ಈ ಯಾತ್ರೆಯ ಸಂಪೂರ್ಣ ಜವಾಬ್ದಾರಿಯನ್ನು ಕಂದಾಯ ಇಲಾಖೆ ಸಿಬ್ಬಂದಿಗೆ ವಹಿಸಲಾಗಿದೆ.

ಕಚೇರಿಯಲ್ಲಿ ಕುಳಿತು ಸಾರ್ವಜನಿಕರ ಕೆಲಸ ಮಾಡಬೇಕಾದ ಅಧಿಕಾರಿಗಳು ಜ್ಯೋತಿಯಾತ್ರೆ ರಥದ ಹಿಂದೆ ಬರಬೇಕಾದ ಪರಿಸ್ಥಿತಿ ಬಂದಿದ್ದು ಹಲವು ಸಿಬ್ಬಂದಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಕುರಿತು ಉಪ ವಿಭಾಗಾಧಿಕಾರಿ, ಜಿಲ್ಲಾಧಿಕಾರಿ ಮುಂದೆ ಮೌಖಿಕವಾಗಿ ದೂರು ಹೇಳಿದ್ದಾರೆ. ಆದರೆ ಇದು ಸಚಿವರ ಸೂಚನೆಯಾಗಿರುವ ಕಾರಣ ಏನನ್ನೂ ಮಾತನಾಡದಿರುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

‘ಕುಂಭಮೇಳ ಕೆ.ಸಿ.ನಾರಾಯಣಗೌಡ ವಿಜಯಯಾತ್ರೆ ರೀತಿಯಲ್ಲಿ ನಡೆಯುತ್ತಿದೆ. ಅವರ ಚುನಾವಣೆ ಯಾತ್ರೆಗೆ ನಮ್ಮನ್ನು ದುರುಪಯೋಗ ಮಾಡಿಕೊಂಡಿದ್ದಾರೆ. ಎಫ್‌ಡಿಸಿ, ಎಸ್‌ಡಿಸಿಗಳು ಜ್ಯೋತಿಯಾತ್ರೆಯ ಹಿಂದೆ ಹುಂಡಿ ಹಿಡಿದು ಹಣ ಸಂಗ್ರಹ ಮಾಡುತ್ತಿದ್ದೇವೆ. ಜಿಲ್ಲಾಧಿಕಾರಿಗಳಿಗೆ ತಿಳಿಸಿದ್ದಾಗಿದೆ, ಆದರೆ ಅವರು ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ’ ಎಂದು ಕಂದಾಯ ಇಲಾಖೆಯ ಎಫ್‌ಡಿಸಿಯೊಬ್ಬರು ಬೇಸರ ವ್ಯಕ್ತಪಡಿಸಿದರು.

ಆಡಳಿತ ಯಂತ್ರ ಸ್ಥಗಿತ: ಕಳೆದೊಂದು ತಿಂಗಳಿಂದ ಜಿಲ್ಲಾಧಿಕಾರಿ, ಉಪ ವಿಭಾಗಾಧಿಕಾರಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಕುಂಭಮೇಳದ ಸಿದ್ಧತೆಯಲ್ಲಿ ತೊಡಗಿದ್ದಾರೆ. ಉತ್ಸವದ ದಿನಾಂಕ ಹತ್ತಿರವಾಗುತ್ತಿದ್ದಂತೆ ಜಿಲ್ಲಾಡಳಿತ ಸಂಪೂರ್ಣವಾಗಿ ಸಿದ್ಧತೆಯಲ್ಲಿ ತೊಡಗಿದ್ದು ಸರ್ಕಾರಿ ಕಚೇರಿಗಳು ಖಾಲಿಯಾಗಿವೆ.

ಹೀಗಾಗಿ ಬಹುತೇಕ ಇಲಾಖೆಗಳಲ್ಲಿ ಜನಸಮಾನ್ಯರ ಕೆಲಸಗಳು ನಡೆಯುತ್ತಿಲ್ಲ, ಜನರು ಕಚೇರಿಗಳಿಗೆ ಅಲೆದಾಡಿ ಹೈರಾಣಾಗುತ್ತಿದ್ಧಾರೆ. ಯಾವುದೇ ಅಧಿಕಾರಿ ಬಗ್ಗೆ ವಿಚಾರಿಸಿದರೂ ಕುಂಭಮೇಳದ ಸಭೆಗೆ ಹೋಗಿದ್ದಾರೆ ಎನ್ನುವ ಉತ್ತರ ಜನರಿಗೆ ಸಿಗುತ್ತಿದೆ.

‘ಕುಂಭಮೇಳಕ್ಕೆ ಎಷ್ಟು ಸಾವಿರ ಜನ ಬಂದರೂ ಅವರಿಗೆ ಊಟೋಪಚಾರದ ಜವಾಬ್ದಾರಿಯನ್ನು ಕಂದಾಯ ಇಲಾಖೆಗೆ ವಹಿಸಲಾಗಿದೆ. ಅದಕ್ಕೆ ಇಲ್ಲಿಯವರೆಗೂ ಒಂದು ರೂಪಾಯಿ ಹಣ ನೀಡಿಲ್ಲ, ಯಾವ ಹಣದಲ್ಲಿ ಆಹಾರ ಸೌಲಭ್ಯ ಒದಗಿಸಬೇಕು ಎಂಬ ಪ್ರಶ್ನೆಗೆ ಉತ್ತರವಿಲ್ಲ. ಕುಂಭಮೇಳ ಹೆಸರಿನಲ್ಲಿ ಭ್ರಷ್ಟಾಚಾರ ನಡೆಸಲಾಗುತ್ತಿದೆ’ ಎಂದು ಹೆಸರು ಹೇಳಲಿಚ್ಛಿಸದ ಕಂದಾಯ ಇಲಾಖೆ ಸಿಬ್ಬಂದಿಯೊಬ್ಬರು ದೂರಿದರು.

ರಜೆ ಘೋಷಣೆ: ಕುಂಭಮೇಳದ ಹಿನ್ನೆಲೆಯಲ್ಲಿ ಶಾಲಾ, ಕಾಲೇಜುಗಳಿಗೆ ರಜೆ ಘೋಷಣೆ ಮಾಡಿರುವುದಕ್ಕೆ ಪೋಷಕರಿಂದ ಆಕ್ಷೇಪ ವ್ಯಕ್ತವಾಗಿದೆ. ಶಿಕ್ಷಕರು ಕಡ್ಡಾಯವಾಗಿ ಮೇಳದಲ್ಲಿ ಪಾಲ್ಗೊಳ್ಳಲು ಸೂಚಿಸಲಾಗಿದೆ. ಪೂರ್ಣಕುಂಭ ಮೆರವಣಿಗೆಯಲ್ಲಿ ಶಿಕ್ಷಕಿಯರು ಪಾಲ್ಗೊಳ್ಳುವಂತೆ ಸೂಚಿಸಿರುವುದು ಆಕ್ರೋಶಕ್ಕೆ ಕಾರಣವಾಗಿದೆ.

‘ಕೋವಿಡ್‌ ವರ್ಷಗಳಲ್ಲಿ ಮಕ್ಕಳು ವಿದ್ಯೆ ಕಳೆದುಕೊಂಡಿದ್ದಾರೆ. ಈಗಲಾದರೂ ಶಾಲೆಗಳು ನಿರಂತರವಾಗಿ ನಡೆಯಬೇಕಿತ್ತು. ಕುಂಭಮೇಳಕ್ಕೆ ರಜೆ ನೀಡಿರುವುದು ಸರಿಯಲ್ಲ’ ಎಂದು ನಿವೃತ್ತ ಶಿಕ್ಷಕ ಕುಮಾರಸ್ವಾಮಿ ಆರೋಪಿಸಿದರು.

******

ಅಕ್ಕಿ ಬೇಡುತ್ತಿರುವ ಅಧಿಕಾರಿಗಳು

‘ಮಂಡ್ಯದ ಪೇಟೆಬೀದಿ ಅಂಗಡಿಗಳಲ್ಲಿ ಅಕ್ಕಿ, ಬೆಲ್ಲ, ಎಣ್ಣೆ, ಬಾದಾಮಿ, ಖರ್ಜೂರ, ಗೋಡಂಬಿ ಸಂಗ್ರಹಕ್ಕೆ ಸೂಚನೆ ನೀಡಿದ್ದಾರೆ. 200 ಟನ್‌ ಅಕ್ಕಿ ಸಂಗ್ರಹಿಸಲು ಗುರಿ ನೀಡಿದ್ದಾರೆ. ನಾವು ಭಿಕ್ಷುಕರ ರೀತಿಯಲ್ಲಿ ಚೀಲ ಹಿಡಿದು ಸಂಗ್ರಹ ಮಾಡುತ್ತಿದ್ದೇವೆ’ ಎಂದು ಯುವ ಅಧಿಕಾರಿಯೊಬ್ಬರು ಬೇಸರ ವ್ಯಕ್ತಪಡಿಸಿದರು.

‘ಕುಂಭಮೇಳಕ್ಕೆ ಕೋಟ್ಯಂತರ ರೂಪಾಯಿ ಹಣ ಬಿಡುಗಡೆಯಾಗಿದೆ, ಆದರೂ ನಾವು ಈ ರೀತಿ ಭಿಕ್ಷೆ ಬೇಡಬೇಕಾ, ಸರ್ಕಾರ ಬಿಡುಗಡೆ ಮಾಡಿರುವ ಹಣ ಎಲ್ಲಿಗೆ ಹೋಗುತ್ತಿದೆ, ಕುಂಭಮೇಳ ಮಾಡಿ ಎಂದು ಸಚಿವರನ್ನು ಯಾರಾದರೂ ಕೇಳಿದ್ದರಾ’ ಎಂದು ರಾಜಸ್ವ ನಿರೀಕ್ಷಕರೊಬ್ಬರು ಪ್ರಶ್ನಿಸಿದರು.

***

ಸರ್ಕಾರದಿಂದ ಇಲ್ಲಿಯವರೆಗೂ ಹಣ ಬಿಡುಗಡೆಯಾಗಿಲ್ಲ. ಮುಜರಾಯಿ, ಕ್ರೀಡೆ ಮತ್ತು ಯುವಜನ ಸೇವೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ₹ 5 ಕೋಟಿ ಬಿಡುಗಡೆಯಾಗುವ ನಿರೀಕ್ಷೆ ಇದೆ

– ಎಸ್‌.ಅಶ್ವತಿ, ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT