ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇತನ ತಾರತಮ್ಯ; ಸ್ಪಂದಿಸದ ಹಣಕಾಸು ಇಲಾಖೆ: ಕೆ.ಟಿ.ಶ್ರೀಕಂಠೇಗೌಡ

ಬಡ್ತಿ ಉಪನ್ಯಾಸಕರ ಕ್ಷೇಮಾಭಿವೃದ್ಧಿ ಸಂಘದ ಸಮಾವೇಶ; ಕೆ.ಟಿ.ಶ್ರೀಕಂಠೇಗೌಡ ಬೇಸರ
Last Updated 8 ಫೆಬ್ರುವರಿ 2021, 3:45 IST
ಅಕ್ಷರ ಗಾತ್ರ

ಮಂಡ್ಯ: ‘ಪಿಯು ಹಂತದ ಬಡ್ತಿ ಉಪನ್ಯಾಸಕರ ವೇತನ ತಾರತಮ್ಯ ಅತ್ಯಂತ ಜ್ವಲಂತ ಸಮಸ್ಯೆಯಾಗಿದ್ದು, ಇದನ್ನು ಬಗೆಹರಿಸಲು ಹಣಕಾಸು ಇಲಾಖೆ ಸಂಪೂರ್ಣವಾಗಿ ಸ್ಪಂದಿಸುತ್ತಿಲ್ಲ’ ಎಂದು ವಿಧಾನಪರಿಷತ್‌ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಬೇಸರ ವ್ಯಕ್ತಪಡಿಸಿದರು.

ರಾಜ್ಯ ಸರ್ಕಾರಿ ಪಿಯು ಕಾಲೇಜುಗಳ ಬಡ್ತಿ ಉಪನ್ಯಾಸಕರ ಕ್ಷೇಮಾಭಿವೃದ್ಧಿ ಸಂಘ ಜಿಲ್ಲಾ ಘಟಕದ ವತಿಯಿಂದ ನಗರದ ಗಾಂಧಿ ಭವನದಲ್ಲಿ ಭಾನುವಾರ ನಡೆದ ರಾಜ್ಯ ಮಟ್ಟದ ಕಾರ್ಯ ಕಾರಿಣಿಯಲ್ಲಿ ಅವರು ಮಾತನಾಡಿದರು.

‘ಹಿರಿಯ ಉಪನ್ಯಾಸಕರು ಪ್ರಾಂಶುಲರಾಗಿ ಬಡ್ತಿ ಹೊಂದುತ್ತಾರೆ. ಆದರೆ ಕಿರಿಯ ಉಪನ್ಯಾಸಕರಿಗಿಂತ ಕಡಿಮೆ ಸಂಬಳ ಪಡೆಯುತ್ತಾರೆ. ರಾಜ್ಯದಲ್ಲಿ ಸರ್ಕಾರಿ ಪದವಿಪೂರ್ವ ಕಾಲೇಜುಗಳಲ್ಲಿ ಬಡ್ತಿ ಉಪನ್ಯಾಸಕರು ಸಾಕಷ್ಟು ಮಂದಿ ಇದ್ದಾರೆ, ಉಪನ್ಯಾಸಕರ ಬೇಡಿಕೆಗಳನ್ನು ಹಂತ ಹಂತವಾಗಿ ಈಡೇರಿಸಲು ವಿಧಾನ ಪರಿಷತ್‌ನಲ್ಲಿ ವಿಷಯ ಮಂಡನೆ ಮಾಡಲಾಗುತ್ತಿದೆ. ವೇತನ ತಾರತಮ್ಯ ನಿವಾರಣೆಯನ್ನು ಬಗೆಹರಿಸುವಂತೆ ಒತ್ತಾಯಿಸಲಾಗಿದೆ ಎಂದರು.

‘ಬಡ್ತಿ ಉಪನ್ಯಾಸಕರ ವೇತನ ಸಮಸ್ಯೆ ಬಗೆಹರಿಸಲು ಆರ್ಥಿಕ ಇಲಾಖೆ ಸಂಪೂರ್ಣವಾಗಿ ಸ್ಪಂದಿಸುತ್ತಿಲ್ಲ, ಮುಖ್ಯಮಂತ್ರಿ ಅವರಿಗೆ ಹತ್ತಾರು ಬಾರಿ ಮನವಿ ಮಾಡಿಲಾಗಿದೆ. ಯಾವುದೇ ಕ್ರಮ ಕೈಗೊಂಡಿಲ್ಲ. ಮುಂದಿನ ದಿನಗಳಲ್ಲಿ ಉಪನ್ಯಾಸಕರ ಬೇಡಿಕೆಗಳು ಈಡೇರುವುದನ್ನು ನಾವು ಕಾಯುತ್ತಿದ್ದೇವೆ’ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ವಿಧಾನ ಪರಿಷತ್‌ ಸದಸ್ಯ ಮರಿತಿಬ್ಬೇಗೌಡ ‘ಸರ್ಕಾರ ಪಿಯು ವ್ಯವಸ್ಥೆಯಲ್ಲಿ ಸಂಘಕ್ಕೆ ಮಾನ್ಯತೆ ನೀಡಿದೆ. ಅದನ್ನು ಗಟ್ಟಿಗೊಳಿಸುವ ಕೆಲಸವನ್ನು ಎಲ್ಲರೂ ಮಾಡಬೇಕು. ಸಂಘಟನೆಯಲ್ಲಿ ಒಡಕು ಮೂಡದಂತೆ ಮುನ್ನಡೆಸಬೇಕು. ಸಂಘಟನೆಯಲ್ಲಿ ಬಡ್ತಿ, ನೇರ ನೇಮಕಾತಿ ಯಾದ ಎಲ್ಲರೂ ಒಂದೇ ಎಂಬ ಭಾವನೆ ಬೆಳೆಸಿಕೊಳ್ಳಬೇಕು. ಇದರಿಂದ ಸಂಘಟನೆ ಗಟ್ಟಿಯಾಗುತ್ತದೆ’ ಎಂದರು.

‘ರೈತರ ಚಳವಳಿ ಹತ್ತಿಕ್ಕಲು ಸರ್ಕಾರ ಇನ್ನಿಲ್ಲದ ಪ್ರಯತ್ನ ಮಾಡುತ್ತಿದೆ. ನಮಗೆ ಸ್ವಾತಂತ್ರ್ಯ ನೀಡಿದ ಬ್ರಿಟಿಷರು ಪ್ರತಿಭಟನೆಯನ್ನು ಹತ್ತಿಕ್ಕುವ ಕೆಲಸವನ್ನು ಈ ಮಟ್ಟಕ್ಕೆ ಮಾಡಿರಲಿಲ್ಲ. ನ್ಯಾಯಕ್ಕಾಗಿ ಗಟ್ಟಿ ಧ್ವನಿ ಎದ್ದಾಗ ಸರ್ಕಾರಗಳು ಸಂಘಟನೆ ಒಡೆಯುವ ಕೆಲಸ ಮಾಡುತ್ತದೆ. ಪಿಯು ಸಂಘಟನೆ ಸೀಮಿತವಾಗಿದ್ದು, ಎಲ್ಲರೂ ಒಟ್ಟಾಗುವ ಮೂಲಕ ದೊಡ್ಡ ಶಕ್ತಿಯಾಗಿ ರೂಪುಗೊಳ್ಳಬೇಕು’ ಎಂದು ಅವರು ಹೇಳಿದರು.

‘ಬಡ್ತಿ ಉಪನ್ಯಾಸಕರ ವೇತನ ತಾರತಮ್ಯ ಸಮಸ್ಯೆಯನ್ನು ಶೀಘ್ರದಲ್ಲೇ ಸರಿಪಡಿಸಲು ಸರ್ಕಾರದೊಂದಿಗೆ ಚರ್ಚಿಲಾಗುತ್ತಿದೆ. ಶಿಕ್ಷಕ ವೃತ್ತಿ ಸೇವೆಯಿಂದ ಕಾಲೇಜುಗಳಿಗೆ ಬಡ್ತಿ ಉಪ ನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವವರ ಸೇವೆ ಮಹತ್ವದ್ದಾಗಿದೆ. ಗುಣಮಟ್ಟದ ಶಿಕ್ಷಣ ನೀಡುವಲ್ಲಿ ನಿಮ್ಮ ಪಾತ್ರವೂ ಅಧಿಕವಾಗಿದೆ, ಸರ್ಕಾರದೊಂದಿಗೆ ನಿಮ್ಮ ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ’ ಎಂದು ನುಡಿದರು.

ಸಂಘದ ರಾಜ್ಯ ಘಟಕದ ಅಧ್ಯಕ್ಷ ಎ.ಎಚ್.ನಿಂಗೇಗೌಡ ‘ಬಡ್ತಿ ಉಪನ್ಯಾಸಕರ 10, 15, 20, 25 ವರ್ಷಗಳ ಕಾಲ ಮಿತಿ ವೇತನ ಬಡ್ತಿಯನ್ನು ಮಂಜೂರು ಮಾಡಬೇಕು, ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿರುವ ಬಡ್ತಿ ಉಪನ್ಯಾಸಕರ ವೇತನ ತಾರತಮ್ಯ ಹೋಗಲಾಡಿಸಬೇಕು. 16 ಗಂಟೆಗಳ ಬೋಧನಾ ಅವಧಿಯನ್ನು ನಿಗದಿಪಡಿಸುವುದು, ಪಿಂಚಣಿ ವ್ಯವಸ್ಥೆಯನ್ನು ಸರಿಪಡಿಸಬೇಕು’ ಎಂದು ಒತ್ತಾಯಿಸಿದರು.

ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕೆ. ಶಿವಲಿಂಗಯ್ಯ, ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಶಂಭೂಗೌಡ, ನಿವೃತ್ತ ಪ್ರಾಂಶುಪಾಲ ಸುರೇಶ್‍ಬಾಬು, ಉಪನ್ಯಾಸಕರ ಸಂಘದ ಅಧ್ಯಕ್ಷ ಜಿ.ಎನ್.ನಾಗೇಶ್, ಕಾರ್ಯದರ್ಶಿ ಕೃಷ್ಣ, ಉಪನ್ಯಾಸಕ ರಾಜು, ಚಂದ್ರುಲಿಂಗು, ಮುದ್ದುವೀರಯ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT