ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಂವಿಧಾನ ಉಳಿಸಿಕೊಳ್ಳದಿದ್ದರೆ ಅರಾಜಕತೆ ಸೃಷ್ಟಿ’

ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್‌.ನಾಗಮೋಹನ್‌ದಾಸ್‌ ಹೇಳಿಕೆ
Last Updated 21 ಮಾರ್ಚ್ 2022, 3:55 IST
ಅಕ್ಷರ ಗಾತ್ರ

ಮಂಡ್ಯ: ‘ಸಮಾಜದಲ್ಲಿ ಸವಾಲುಗಳನ್ನು ಹಿಮ್ಮೆಟಿಸದಿದ್ದರೆ ಸಂವಿಧಾನ ಉಳಿಸಿಕೊಳ್ಳಲು ಸಾಧ್ಯವಿಲ್ಲ. ಪ್ರಜಾ ಪ್ರಭುತ್ವದ ಉಳಿವಿಗೆ ಸಂವಿಧಾನ ಅವಶ್ಯಕವಿದೆ. ಇಲ್ಲದೆ ಇದ್ದರೆ ಅರಾಜಕತೆ, ಕೋಮುವಾದ ರಾರಾಜಿಸುತ್ತದೆ’ ಎಂದು ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್‌.ನಾಗಮೋಹನ್‌ದಾಸ್‌ ಹೇಳಿದರು.

ನಗರದ ಕರ್ನಾಟಕ ಸಂಘದ ಕೆವಿಎಸ್ ಭವನದಲ್ಲಿ ಮಂಡ್ಯ ಜಿಲ್ಲೆಯ ಪ್ರಗತಿಪರ ಸಂಘಟನೆಗಳ ಸಹಯೋಗ ದಲ್ಲಿ ಭಾನುವಾರ ಆಯೋಜಿಸಿದ್ದ ‘ಸಂವಿಧಾನ, ವೈಜ್ಞಾನಿಕ ಮನೋಭಾವ’ ವಿಚಾರ ಸಂಕಿರಣದಲ್ಲಿ ‘ಸಂವಿಧಾನ ಸಾಧನೆಗಳು ಮತ್ತು ಸವಾಲುಗಳು’ ಕುರಿತು ಅವರು ಮಾತನಾಡಿದರು.

‘ನಮ್ಮ ನಡುವೆ ಸಮಸ್ಯೆಗಳು ಮತ್ತು ಸವಾಲುಗಳಿವೆ. ಜತೆಗೆ ಕೆಲವರಿಗೆ ಉದ್ಯೋಗ ಸಿಕ್ಕಿಲ್ಲ. ಬಡತನ, ಅನಾರೋಗ್ಯ ಇದೆ. ಪ್ರತಿ ಹಳ್ಳಿಗಳಲ್ಲೂ ಸರಿಯಾದ ರಸ್ತೆ ಹಾಗೂ ಸಾರಿಗೆ ವ್ಯವಸ್ಥೆ ಸಮರ್ಪಕವಾಗಿ ಸಿಕ್ಕಿಲ್ಲ. ಆದರೆ, ವಿಶ್ವಾಸ ಇಟ್ಟುಕೊಂಡು ಒಗ್ಗಟ್ಟಾಗಿ ಕೆಲಸ ಮಾಡಬೇಕು. ಆ ಮೂಲಕ ಸಮಸ್ಯೆ ಪರಿಹಾರ ಮಾಡಿಕೊಳ್ಳಬಹುದು ಎಂಬ ವಿಶ್ವಾಸವಿದೆ’ ಎಂದರು.

ದೇಶದ ಮುಂದೆ ಇರುವ ಸವಾಲುಗಳನ್ನು ಹಿಮ್ಮೆಟಿಸದಿದ್ದರೆ ದೇಶ, ಸಂವಿಧಾನ, ನಮ್ಮ ಸಾಧನೆಗಳನ್ನು ಉಳಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಪ್ರಜಾಪ್ರಭುತ್ವ ಹೋಗಿ ಸರ್ವಾಧಿಕಾರ ಅಧಿಕಾರಕ್ಕೆ ಬಂದರೆ ಮೊದಲು ಬಂಧನಕ್ಕೊಳಗಾಗುವವರೇ ನ್ಯಾಯಾ ಧೀಶರು. ನಂತರದ ಸ್ಥಾನದಲ್ಲಿ ವಕೀಲರು ಇದ್ದಾರೆ. ಹಾಗಾಗಿ ಪ್ರಜಾಪ್ರಭುತ್ವದ ಉಳಿವಿಗೆ ಸಂವಿಧಾನ ಅವಶ್ಯಕವಾಗಿದ್ದು, ಅದನ್ನು ಕಾಪಾಡಿಕೊಂಡು ಹೋಗಬೇಕಾಗಿರುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಸಲಹೆ ನೀಡಿದರು.

ಭಾರತಕ್ಕೆ ಭಯೋತ್ಪಾದನೆ, ಮೂಲಭೂತವಾದ, ಕೋಮುವಾದ, ಅಪರಾಧೀಕರಣ, ಭ್ರಷ್ಟಾಚಾರ, ಅತಿಯಾದ ವ್ಯಾಪಾರೀಕರಣ, ಸಾಂಸ್ಕೃತಿಕ ದಿವಾಳಿತನ ಸವಾಲು ಗಳಾಗಿವೆ. ದುರಾದೃಷ್ಟವಶಾತ್‌ ಭಾರತ ದೇಶದ ಚುನಾವಣೆಗಳು ಧರ್ಮ, ಜಾತಿ, ಹಣದ ಮೇಲೆ ನಡೆಯುತ್ತಿರುವುದು ದುರಂತ ಎನಿಸಿದೆ. ಚುನಾವಣಾ ಪ್ರಜಾಪ್ರಭುತ್ವದ ಮೇಲೆ ಕೋಮುವಾದ, ಭ್ರಷ್ಟಾಚಾರ, ಅಪರಾಧ ಮತ್ತು ಸರ್ವಾಧಿಕಾರ ಗೆಲ್ಲುತ್ತಿದೆ. ಆದರೂ ನಾವು ಬಾಯಿ ಬಿಡದೆ ನೋಡುತ್ತಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.

ಹಣವಿರುವವರು, ಕ್ರಿಮಿನಲ್‌ ಪ್ರಕ ರಣ ಇರುವವರು, ಕೈಗಾರಿಕೋ ದ್ಯಮಿಗಳು ರಾಜಕಾರಣಕ್ಕೆ ಬರುತ್ತಿ ದ್ದಾರೆ. ಕಾರ್ಮಿಕರು ಬೀದಿಪಾಲಾಗುತ್ತಿದ್ದು, ರೈತರ ಆತ್ಮಹತ್ಯೆ ಹೆಚ್ಚುತ್ತಿದೆ. ಲೈಂಗಿಕ ದೌರ್ಜನ್ಯ ಹೆಚ್ಚುತ್ತಿದ್ದು, ಈ ಬಗ್ಗೆ ಯಾರೂ ಧ್ವನಿ ಎತ್ತುತ್ತಿಲ್ಲ. ಗದ್ದಲದಲ್ಲೇ ಸಮಯ ವ್ಯರ್ಥ ಮಾಡುತ್ತಿದ್ದು, ಚರ್ಚೆ ಇಲ್ಲದೆ ಬಿಲ್‌ಗಳು ಪಾಸಾಗುತ್ತಿವೆ ಎಂದು ಆರೋಪಿಸಿದರು.

ಸಾಹಿತಿ ಹುಲ್ಕೆರೆ ಮಹದೇವ್, ಸಿಐಟಿಯು ಪ್ರಧಾನ ಕಾರ್ಯದರ್ಶಿ ಸಿ.ಕುಮಾರಿ, ಸಹ ಪ್ರಾಧ್ಯಾಪಕ ಡಾ.ಎಚ್‌.ಡಿ.ಉಮಾಶಂಕರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT